ಬುಧವಾರ, ಜೂಲೈ 8, 2020
21 °C

ಇಂದಿನಿಂದ ಆಸ್ಟ್ರೇಲಿಯಾ ಓಪನ್ ಟೆನಿಸ್; ಪ್ರಧಾನ ಹಂತಕ್ಕೆ ಸಾನಿಯಾ ಮಿರ್ಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಟೂರ್ನಿ ಎನಿಸಿರುವ ಆಸ್ಟ್ರೇಲಿಯಾ ಓಪನ್‌ಗೆ ಸೋಮವಾರ ಚಾಲನೆ ಲಭಿಸಲಿದ್ದು, ಸೋಮ್‌ದೇವ್ ದೇವ್‌ವರ್ಮನ್ ಮತ್ತು ಸಾನಿಯಾ ಮಿರ್ಜಾ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆಯನ್ನು ಮುನ್ನಡೆಸಲಿದ್ದಾರೆ.

ಆದರೆ ಇಬ್ಬರಿಗೂ ಮೊದಲ ಸುತ್ತಿನಲ್ಲಿ ಕಠಿಣ ಎದುರಾಳಿಗಳು ಲಭಿಸಿದ್ದಾರೆ. ಸೋಮ್‌ದೇವ್ ಅವರು ಸ್ಪೇನ್‌ನ ಟಾಮಿ ರಾಬ್ರೆಡೊ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ರಾಬ್ರೆಡೊ ವಿಶ್ವ ರ್ಯಾಂಕಿಂಗ್‌ನಲ್ಲಿ 51ನೇ ಸ್ಥಾನದಲ್ಲಿದ್ದಾರೆ.

ಸಾನಿಯಾ ಮಿರ್ಜಾ ಭಾನುವಾರ ನಡೆದ ಅರ್ಹತಾ ಹಂತದ ಕೊನೆಯ ಸುತ್ತಿನ ಪಂದ್ಯದಲ್ಲಿ 6-2, 6-3 ರಲ್ಲಿ ಕೆನಡಾದ ಸ್ಟೆಫಾನಿ ಡುಬಾಯ್ಸೆ ಅವರನ್ನು ಮಣಿಸಿ ಪ್ರಧಾನ ಹಂತ ಪ್ರವೇಶಿಸಲು ಯಶಸ್ವಿಯಾದರು. ಮೊದಲ ಸುತ್ತಿನಲ್ಲಿ ಅವರು ಮಾಜಿ ಚಾಂಪಿಯನ್ ಮತ್ತು ವಿಶ್ವದ 11ನೇ ರ್ಯಾಂಕಿಂಗ್‌ನ ಆಟಗಾರ್ತಿ ಜಸ್ಟಿನ್ ಹೆನಿನ್ ಅವರನ್ನು ಎದುರಿಸುವರು. 

ಮೋಡಿ ಮಾಡುವುದೇ ಪೇಸ್- ಭೂಪತಿ ಜೋಡಿ: ಪುರುಷರ ಡಬಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೊತೆಯಾಗಿ ಆಡಲಿರುವ ಕಾರಣ ಭಾರತದ ಟೆನಿಸ್ ಪ್ರೇಮಿಗಳು ಈ ಟೂರ್ನಿಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

‘ಇಂಡಿಯನ್ ಎಕ್ಸ್‌ಪ್ರೆಸ್’ ಖ್ಯಾತಿಯ ಇವರಿಗೆ ಮೂರನೇ ಶ್ರೇಯಾಂಕ ನೀಡಲಾಗಿದೆ. ಪೇಸ್- ಭೂಪತಿ ಸುದೀರ್ಘ ಅವಧಿಯ ಬಳಿಕ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಲ್ಲಿ ಜೊತೆಯಾಗಿ ಆಡಲು ಸಜ್ಜಾಗಿದ್ದಾರೆ. 2001ರ ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಲ್ಲಿ ಜೊತೆಯಾಗಿ ಆಡಿದ್ದ ಇವರು ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಬಳಿಕ ಒಟ್ಟಾಗಿ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಜಯಿಸಿಲ್ಲ.

ರೋಹನ್ ಬೋಪಣ್ಣ ಮತ್ತು ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಜೋಡಿಗೆ ಇಲ್ಲಿ 10ನೇ ಶ್ರೇಯಾಂಕ ಲಭಿಸಿದೆ. ಸಾನಿಯಾ ಮಿರ್ಜಾ ಅವರು ಡಬಲ್ಸ್‌ನಲ್ಲಿ ಜೆಕ್ ಗಣರಾಜ್ಯದ ರೆನಾಟಾ ವೊರಕೋವಾ ಜೊತೆ ಆಡುವರು.

ಫೆಡರರ್, ನಡಾಲ್ ಫೇವರಿಟ್: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಮತ್ತು ಸ್ಪೇನ್‌ನ ರಫೆಲ್ ನಡಾಲ್ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯವುದು ಖಚಿತ. ಫೆಡರರ್ ಕಳೆದ ಬಾರಿ ಇಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ನಡಾಲ್ 2009 ರಲ್ಲಿ ಚಾಂಪಿಯನ್ ಆಗಿದ್ದರು.

ನಡಾಲ್ ಮತ್ತು ಫೆಡರರ್‌ಗೆ ಸ್ಪರ್ಧೆಯೊಡ್ಡಲು ಮತ್ತೆ ಕೆಲವರು ಇದ್ದಾರೆ. ನೊವಾಕ್ ಜೊಕೊವಿಕ್, ಆ್ಯಂಡಿ ಮರ್ರೆ ಮತ್ತು ಆ್ಯಂಡಿ ರಾಡಿಕ್ ಅವರು ಅಚ್ಚರಿಯ ಫಲಿತಾಂಶ ನೀಡುವ ತಾಕತ್ತು ಹೊಂದಿದ್ದಾರೆ. ಮಹಿಳೆಯರ ವಿಭಾಗದಲ್ಲಿ  ಕಳೆದ ಬಾರಿಯ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಗಾಯದ ಸಮಸ್ಯೆಯಿಂದ ಆಡುತ್ತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.