ಬುಧವಾರ, ಏಪ್ರಿಲ್ 14, 2021
23 °C

ಇಂದು ಉಪರಾಷ್ಟ್ರಪತಿ ಚುನಾವಣೆ: ಒಗ್ಗಟ್ಟು ಪ್ರದರ್ಶನಕ್ಕೆ ಔತಣಕೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ತಂತಮ್ಮ ಅಭ್ಯರ್ಥಿಗಳು ಜಯ ಸಾಧಿಸುವ ವಿಶ್ವಾಸ ಹೊಂದಿರುವ ಯುಪಿಎ ಮತ್ತು ಎನ್‌ಡಿಎ ಮೈತ್ರಿಕೂಟಗಳು, ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ರಾಜಧಾನಿಯಲ್ಲಿ ಪ್ರತ್ಯೇಕವಾಗಿ ಔತಣಕೂಟಗಳನ್ನು ಸೋಮವಾರ ಏರ್ಪಡಿಸಿದ್ದವು.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೋಟೆಲ್ ಅಶೋಕದಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಯುಪಿಎ ಮೈತ್ರಿಕೂಟದ ಎಲ್ಲಾ ಅಂಗಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಬದ್ಧ ದ್ವೇಷಿಗಳಾದ ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಪಾಲ್ಗೊಂಡಿದ್ದರು. ಅನೇಕ ವರ್ಷಗಳ ನಂತರ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡರು. ಪ್ರತ್ಯೇಕವಾಗಿ ಆಸೀನರಾಗಿದ್ದರು.ಎನ್‌ಸಿಪಿ ಮುಖಂಡರಾದ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಗೈರು ಹಾಜರಾಗಿದ್ದರು. ಆದರೆ ಪವಾರ್ ಅವರ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಮತ್ತು ರಾಜ್ಯಸಭಾ ಸದಸ್ಯ ಡಿ.ಪಿ. ತ್ರಿಪಾಠಿ ಭಾಗವಹಿಸಿದ್ದರು.ಕೇಂದ್ರದಲ್ಲಿ ಸಚಿವರಾಗಿರುವ ಟಿಎಂಸಿ ಪಕ್ಷದ ಸುದೀಪ್ ಬಂದೋಪಾಧ್ಯಾಯ, ಸಿ.ಎಂ. ಜತುವಾ ಮತ್ತು ಪಕ್ಷದ ಬಹುತೇಕ ಸಂಸದರು ಪಾಲ್ಗೊಂಡಿದ್ದರು.ಯುಪಿಎ ಅಭ್ಯರ್ಥಿ ಹಮೀದ್ ಅನ್ಸಾರಿ ಮತ್ತು ಎನ್‌ಡಿಎ ಅಭ್ಯರ್ಥಿ ಜಸ್ವಂತ್ ಸಿಂಗ್ ನಡುವೆ ನೇರ ಸ್ಪರ್ಧೆ ಇದೆ. ಅನ್ಸಾರಿ ಅವರಿಗೆ 520 ಮತಗಳು ದೊರಕುತ್ತವೆ ಎಂದು ಯುಪಿಎ ವಿಶ್ವಾಸಹೊಂದಿದೆ. ಸಂಸತ್ತಿನ ಉಭಯ ಸದನಗಳ ಸದಸ್ಯರು (ಒಟ್ಟು 790) ಈ ಚುನಾವಣೆಗೆ ಮತದಾರರು.ಎನ್‌ಡಿಎ ಸಹ ಔತಣಕೂಟ ಏರ್ಪಡಿಸಿತ್ತು. ಎನ್‌ಡಿಎ ಅಭ್ಯರ್ಥಿ ಜಸ್ವಂತ್ ಸಿಂಗ್ ಅವರನ್ನು ಎಐಎಡಿಎಂಕೆ ಬೆಂಬಲಿಸಿದ್ದರೆ, ಬಿಜೆಡಿ ಈ ಚುನಾವಣೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.