ಭಾನುವಾರ, ಜೂನ್ 13, 2021
21 °C
ಸಚಿವ ಎಚ್.ಆಂಜನೇಯ ಹೇಳಿಕೆ

ಇಂದು ನಾಮಪತ್ರ, 28ರಂದು ನಗರಕ್ಕೆ ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಿ.ಎನ್.ಚಂದ್ರಪ್ಪ ಅವರು ಇಬ್ಬರು ಸಚಿವರು ಹಾಗೂ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಸೋಮವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಪ್ರಕಟಿಸಿದರು.ನಗರದ ಹೊಳಲ್ಕೆರೆ ರಸ್ತೆಯ ಕನಕವೃತ್ತದಿಂದ ಸೋಮವಾರ ಮಧ್ಯಾಹ್ನ 12ಕ್ಕೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮೆರವಣಿಗೆ ಆರಂಭವಾಗಲಿದೆ. ಸಚಿವ ಜಯಚಂದ್ರ ಸೇರಿದಂತೆ ಎಲ್ಲ ಶಾಸಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲಾ ಬ್ಲಾಕ್ ಅಧ್ಯಕ್ಷರು, ಪದಾಕಾರಿಗಳು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡರು. ಕನಕವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಎಲ್ಲ ಕಾಂಗ್ರೆಸ್ ಮುಖಂಡರು, ಶಾಸಕರು, ಹಿಂದೆ ಚುನಾವಣೆಗಳಲ್ಲಿ ಸೋತ ಅಭ್ಯರ್ಥಿಗಳು ಒಗ್ಗಟ್ಟಾಗಿದ್ದೇವೆ. ಹೈಕಮಾಂಡ್ ಸೂಚನೆಯಂತೆ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಗೆಲುವಿಗೆ ಶ್ರಮಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.ಪಕ್ಷದ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿದ ನಂತರ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹಾಗೂ ಶಾಸಕರಾದ ಟಿ.ರಘುಮೂರ್ತಿ, ಡಿ.ಸುಧಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎ.ಸೇತೂರಾಂ ಹಾಗೂ ಕಾಂಗ್ರೆಸ್ ಮುಖಂಡ ಭೀಮಸಮುದ್ರದ ಜಿ.ಎಸ್.ಮಂಜುನಾಥ್ ಅವರೊಂದಿಗೆ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಸಚಿವರು, ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲ ಒಗ್ಗಟ್ಟಾಗಿದ್ದೇವೆ ಎಂದು ಪುನರುಚ್ಚರಿಸಿದರು.‘ಪಕ್ಷದ ಚುನಾವಣಾ ಪ್ರಚಾರ ಜೋರಾಗಿದೆ.  ಪಾವಗಡ, ಸಿರಾ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗದಲ್ಲಿ ಮೊದಲ ಹಂತದ ಪ್ರಚಾರ ಪೂರ್ಣಗೊಂಡಿದೆ. ಪಕ್ಷದ ಅಭ್ಯರ್ಥಿ ಚಂದ್ರಪ್ಪ ಅವರು ಮೊದಲ ಹಂತದಲ್ಲಿ ಕ್ಷೇತ್ರದ ಜನರನ್ನು  ಪರಿಚಯ ಮಾಡಿ ಕೊಂಡಿದ್ದಾರೆ.  ನಾಳೆಯಿಂದ  ಮೊಳಕಾಲ್ಮುರು,  ಚಳ್ಳಕೆರೆಯಲ್ಲಿ ಪ್ರಚಾರ ಕೈಗೊಳ್ಳಲಾಗುವುದು’ ಎಂದರು.28ಕ್ಕೆ ನಗರಕ್ಕೆ ಮುಖ್ಯಮಂತ್ರಿ: ಇದೇ ೨೮ರಂದು ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹಾಗೂ ರಾಷ್ಟ್ರೀಯ ನಾಯಕರು ನಗರಕ್ಕೆ ಆಗಮಿಸಲಿದ್ದಾರೆ. ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಎಲ್ಲರೂ ಭಾಗವಹಿಸಲಿದ್ದಾರೆ ಎಂದರು.ಚುನಾವಣೆ ಪ್ರಚಾರದ ಸಂಬಂಧ ತಳಮಟ್ಟದಿಂದಲೂ ಕಾರ್ಯಕರ್ತರ ಪಡೆ ರಚನೆಯಾಗಿದೆ. ಈ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ ಮತಯಾಚನೆ ಮಾಡಲಿದ್ದಾರೆ ಎಂದರು. 

ಪಕ್ಷದ ಅಭ್ಯರ್ಥಿ ಚಂದ್ರಪ್ಪ ಮೂರು ದಶಕಗಳಿಂದ ಪಕ್ಷದ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಎಲ್ಲ ಜಾತಿಯ ಜನರೊಂದಿಗೆ ಉತ್ತಮ ಸಂಬಂಧವನ್ನಿರಿಸಿ ಕೊಂಡಿದ್ದಾರೆ’ ಎಂದರು.ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ‘ಕೆ.ಎಚ್.ಮುನಿಯಪ್ಪ ಅವರು ರೈಲ್ವೆ ಸಚಿವರಾಗಿದ್ದಾಗ ಚಿತ್ರದುರ್ಗ – ತುಮಕೂರು ರೈಲ್ವೆ ಯೋಜನೆಯ ಚಟುವಟಿಕೆಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ಈ ಮೂಲಕ ಚಿತ್ರದುರ್ಗದ ಪ್ರಗತಿಯಲ್ಲಿ ನನ್ನ ಪಾಲು ಇದೆ. ನನಗೊಂದು ಅವಕಾಶ ಕೊಡಿ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ’ ಎಂದರು.ಚಿತ್ರದುರ್ಗ ಲೋಕಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸಗಳಾಗಬೇಕು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಯಬೇಕು. ರೈಲ್ವೆ ಕಾಮಗಾರಿ ಪೂರ್ಣಗೊಳ್ಳಬೇಕು. ಅಭಿವೃದ್ಧಿ ವಿಚಾರದಲ್ಲಿ ಹಿಂದಿನವರು ಕೆಲಸವನ್ನು  ನಾನು ಟೀಕಿಸುವುದಿಲ್ಲ. ನನ್ನನ್ನು ಗೆಲ್ಲಿಸಿ, ಆಗಬೇಕಾದ ಅಭಿವೃದ್ದಿ ಕೆಲಸಗಳ ಕುರಿತು ಸಲಹೆ, ಸೂಚನೆ ನೀಡಿ’ ಎಂದು ಮನವಿ ಮಾಡಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.