ಶನಿವಾರ, ಮೇ 8, 2021
18 °C

ಇಟಗಿಯಲ್ಲಿ ರಾಷ್ಟ್ರಮಟ್ಟದ ಕುಸ್ತಿ ಕಾಳಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ:  ಗ್ರಾಮೀಣ ಭಾಗದ ಜನರ ಶೌರ್ಯ, ಸಾಹಸ ಹಾಗೂ ಸೆಣೆಸಾಟಕ್ಕೆ ಸಾಕ್ಷಿಯಾದ ಕುಸ್ತಿ ಸ್ಪರ್ಧೆಗಳು ಕಣ್ಮರೆಯಾಗುತ್ತಿರುವ  ಪ್ರಸ್ತುತ ದಿನಮಾನದಲ್ಲಿ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಶಿವ ಮತ್ತು ಬಸವ ಜಯಂತಿ ಅಂಗವಾಗಿ ಸ್ಥಳೀಯ ಕುಸ್ತಿ ಸಂಘಟನಾ ಸಂಸ್ಥೆ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸಾವಿರಾರು ಜನರ ಮನ  ಸೂರೆ ಗೊಳಿಸಿತು.



ಇಟಗಿ ಗ್ರಾಮದ ಹೊರವಲಯ ದಲ್ಲಿರುವ ಜೈ ಹನುಮಾನ ಕುಸ್ತಿ ಮೈದಾನದಲ್ಲಿ ಬೈಲು ಕಣದ ಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿ ವೀಕ್ಷಣೆಗೆ ನೆರೆದಿದ್ದ ಸಹಸ್ರಾರು ಕುಸ್ತಿಪ್ರಿಯರ ಚೀರಾಟ, ಸಿಳ್ಳೆ, ಚಪ್ಪಾಳೆಗಳ ನಡುವೆ ಕುಸ್ತಿ ಸಂಪನ್ನಗೊಂಡಿತು.



ಜನರ ಕೇಕೇ ಕಾದಾಡುತ್ತಿದ್ದ ಕುಸ್ತಿ ಪೈಲ್ವಾನರ ಉತ್ಸಾಹವನ್ನು ಇಮ್ಮಡಿ ಗೊಳಿಸುತ್ತಿತ್ತು.



ಒಂದನೇ ನಂಬರಿನ ಕುಸ್ತಿಯಲ್ಲಿ ಬೆಳಗಾವಿಯ ಪೈಲ್ವಾನ ಸಂದೀಪ ಪಾಟೀಲ ಹಾಗೂ ಪಂಜಾಬದ ಪೈಲ್ವಾನ್ ಗೋಲ್ಡನ್ ಸಿಂಗ್ ಅವರ ನಡುವೆ ಸುಮಾರು ಒಂದು ಗಂಟೆ ಹತ್ತು ನಿಮಿಷಗಳ ಕಾಲ ನಡೆಯಿತು. ದೀರ್ಘ ಕಾಲದ ಸೆಣೆಸಾಟದ ನಂತರ ನಿರ್ಣಾಯಕರು ಪಾಯಿಂಟ್‌ಗಳ ಆಧಾರದ ಮೇಲೆ ಪಂಜಾಬದ ಪೈಲ್ವಾನ್ ಗೋಲ್ಡನ್ ಸಿಂಗ್ ಅವರನ್ನು ವಿಜಯಿ  ಎಂದು ಘೋಷಿಸಿದರು.



ಎರಡನೇ ನಂಬರ್ ಕುಸ್ತಿಯಲ್ಲಿ ಕರ್ನಾಟಕ ಕೇಸರಿ ಪ್ರಶಸ್ತಿ ವಿಜೇತ ಆನಂದ ಮಾದನಬಾವಿ ಹಾಗೂ ಕೊಲ್ಹಾಪುರದ ಶಿವಾಜಿ ಪಾಟೀಲ ಅವರ ನಡುವೆ ಒಂದು ಗಂಟೆ ಇಪ್ಪತ್ತು ನಿಮಿಷಗಳ ಕಾಲ ಭಾರಿ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು.



ಕೊನೆಗೆ ತೀರ್ಪುಗಾರರು ಪಾಯಿಂಟಗಳ ಆಧಾರದ ಮೇಲೆ ಕರ್ನಾಟಕ ಕೇಸರಿ ಪ್ರಶಸ್ತಿ ವಿಜೇತ ಆನಂದ ಮಾದನಬಾವಿ ಒಂದು ಪಾಯಿಂಟ್ ಗಳಿಸಿ ವಿಜಯಿಯಾದರು. ಮೂರನೇ ನಂಬರಿನ ಕುಸ್ತಿಯಲ್ಲಿ ಕೊಲ್ಹಾಪುರದ ಸಲ್ಲಾವುದ್ದಿನ ವಿಜಾಪುರ ಹಾಗೂ ದಿಲ್ಲಿಯ ಅನಿಲಕುಮಾರ ಅವರ ನಡುವೆ ತೀವ್ರ ಕುತೂಹಲ ಮೂಡಿಸಿತ್ತು. ಇದರಲ್ಲಿ ಕೊಲ್ಹಾಪುರದ ಸಲ್ಲಾವುದ್ದಿನ ವಿಜಾಪುರ ಅವರಿಗೆ ವಿಜಯಲಕ್ಷ್ಮಿ ಒಲಿದಳು.



ನಾಲ್ಕು, ಆರು, ಎಂಟು ಹಾಗೂ ಹತ್ತನೇ ನಂಬರುಗಳ ಕುಸ್ತಿಗಳು ಸಮಗೊಳಿಸಲಾಯಿತು. ಏಳನೇ ನಂಬರಿನ ಕುಸ್ತಿಯ ಚಿಕ್ಕಮಲ್ಲಿಗ ವಾಡದ ಅಶೋಕ ಎಣಗಿ ಅವರ ಪ್ರತಿಸ್ಪರ್ಧಿ ಉತ್ತರ ಪ್ರದೇಶದ ಪೈಲ್ವಾನ್ ಬಾಲಗೋವಿಂದ ಬರದ ಕಾರಣ ಅಶೋಕ ಎಣಗಿ ಅವರು ವಿಜಯಿ ಎಂದು ಘೋಷಿಸಲಾಯಿತು. ಈ ಸ್ಪರ್ಧೆಯಲ್ಲಿ ಸುಮಾರು 40 ಜೋಡಿ ಕುಸ್ತಿಪಟುಗಳು ತಮ್ಮ ಸಾಹಸವನ್ನು ಪ್ರದರ್ಶಿಸಿದರು.



ಕುಸ್ತಿ ಕೋಚ್ ಜೀವಪ್ಪ ಧರೆನ್ನವರ, ಸಂಗಪ್ಪ ಶೀಲಿ, ಮೀರಾಸಾಬ ಕಿತ್ತೂರ, ಬಸಪ್ಪ ಕಡೆಮನಿ, ಯಲ್ಲಪ್ಪ ಹಟ್ಟಿಹೊಳಿ ಹಾಗೂ ಕಲಗೌಡಾ ನಾವಲಗಟ್ಟಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.



ಸಂಜೆ 4ಕ್ಕೆ ಶುರುವಾದ ಕುಸ್ತಿಕಾಳಗ ರಾತ್ರಿ  9 ರ ವರೆಗೆ ನಡೆಯಿತು. ಜಗದೀಶಗೌಡಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಇರ್ಫಾನ್ ತಾಳಿಕೋಟಿ ಸ್ಪರ್ಧೆಯನ್ನು ಉದ್ಘಾಟಿಸಿದರು.



ಕುಸ್ತಿ ಸಂಯೋಜಕ ಅಂತರ ರಾಷ್ಟ್ರೀಯ ಜ್ಯೂಡು ಪ್ರಶಸ್ತಿ ವಿಜೇತ ಜೀವಪ್ಪ ಧರೆನ್ನವರ, ನಾಗರಾಜ ಶೀಲವಂತರ, ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ, ಜಿಪಂ.ಸದಸ್ಯ ಜ್ಯೋತಿಬಾ ರೇಮಾಣಿ, ಶ್ರೀಕಾಂತ ಹಿರೇಮಠ  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.