ಬುಧವಾರ, ಜುಲೈ 15, 2020
25 °C

ಇತಿಹಾಸವನ್ನು ನೋಡಿ ತೂಗಬೇಡಿ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸವನ್ನು ನೋಡಿ ತೂಗಬೇಡಿ...!

ಕೊಲಂಬೊ: ಇತಿಹಾಸವನ್ನು ನೋಡಿ ಶ್ರೀಲಂಕಾ ಜೊತೆಗೆ ತಮ್ಮ ಈಗಿನ ಪಡೆಯನ್ನು ತೂಗಿ ನೋಡಬೇಡಿ ಎಂದು ನ್ಯೂಜಿಲೆಂಡ್ ತಂಡದ ನಾಯಕ ಡೇನಿಯಲ್ ವೆಟೋರಿ ಹೇಳಿದರು.ಸಿಂಹಳೀಯರ ವಿರುದ್ಧ ಮಂಗಳವಾರ ಇಲ್ಲಿನ ಆರ್.ಪ್ರೇಮದಾಸಾ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯದ ಮುನ್ನಾದಿನವಾದ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೆಟೋರಿಗೆ ಎದುರಾಗಿದ್ದೇ ಹಿಂದಿನ ಅಂಕಿ-ಅಂಶಗಳು ಹೇಳುವ ಇತಿಹಾಸದ ಕುರಿತು. ಆದರೆ ಈ ಸವಾಲಿಗೆ ಅಷ್ಟೇ ನಾಜೂಕಿನಿಂದ ಪ್ರತಿಕ್ರಿಯಿಸಿದ ಅವರು ‘ಅಂಕಿ-ಅಂಶವೇ ನಿರ್ಣಾಯಕವಲ್ಲ; ಅದಕ್ಕೆ ಈ ವಿಶ್ವಕಪ್‌ನಲ್ಲಿ ನಡೆದ ಅನೇಕ ಪಂದ್ಯಗಳು ಸಾಕ್ಷಿ’ ಎಂದರು.1986ರ ನಂತರ ನ್ಯೂಜಿಲೆಂಡ್ ತಂಡವು ಈ ಅಂಗಳದಲ್ಲಿ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಪಡೆದಿಲ್ಲ ಎನ್ನುವತ್ತ ಗಮನ ಸೆಳೆದಾಗ ‘ನಾನಂತೂ ಅಂಕಿ-ಅಂಶಗಳ ಕಡೆಗೆ ಗಮನ ಕೊಡುವುದಿಲ್ಲ. ಈಗ ಲಭ್ಯವಿರುವ ಆಟಗಾರರ ಮೇಲೆ ವಿಶ್ವಾಸವಿಟ್ಟು ಆಟಕ್ಕೆ ಇಳಿಯುತ್ತೇನೆ. ವಿಶ್ಲೇಷಣೆ ಮಾಡುವವರಿಗೆ ಹಿಂದಿನ ಫಲಿತಾಂಶಗಳ ಲೆಕ್ಕಾಚಾರ ಮಹತ್ವದ್ದಾಗಬಹುದು. ಆದರೆ ಕ್ಷೇತ್ರದಲ್ಲಿ ಆಡುವವರು ಎದುರಿಗಿರುವ ಸವಾಲಿನ ಕಡೆಗೆ ಮಾತ್ರ ಗಮನ ನೀಡುವುದು’ ಎಂದು ಸ್ಪಷ್ಟಪಡಿಸಿದರು.ಶ್ರೀಲಂಕಾದ ಪ್ರಮುಖ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಗಾಯಗೊಂಡಿದ್ದು ಆಡುವುದು ಅನುಮಾನವೆಂದು ತಿಳಿಸಿದಾಗ ‘ನಮಗೆ ಒಳ್ಳೆಯದು’ ಎಂದು ಹೇಳಿ ನಕ್ಕ ವೆಟೋರಿ ‘ಬೇರೆಯವರ ತಂಡದಲ್ಲಿ ಯಾರು ಆಡುವುದಿಲ್ಲ ಎನ್ನುವುದಕ್ಕಿಂತ ಯಾರು ಪಂದ್ಯದ ದಿನ ಕ್ಷೇತ್ರಕ್ಕೆ ಇಳಿಯುತ್ತಾರೆ ಎನ್ನುವ ಕಡೆಗೆ ಗಮನ ನೀಡಬೇಕು. ಸ್ವಂತ ನೆಲದಲ್ಲಿ ಆಡುವ ಶ್ರೀಲಂಕಾ ಪರ ಯಾರೇ ಆಡಿದರೂ ಅವರು ಅಪಾಯಕಾರಿ ಆಗಬಹುದು. ನಮ್ಮ ಪಂದ್ಯ ಇರುವುದು ಶ್ರೀಲಂಕಾ ಎದುರು ಹೊರತು ಮುರಳೀಧನರ್ ವಿರುದ್ಧ ಅಲ್ಲ’ ಎಂದು ಅವರು ಹೇಳಿದರು.ಪಿಚ್ ಕುರಿತು ಕೇಳಿದಾಗ ‘ಉಪಖಂಡದಲ್ಲಿ ವೇಗದ ಅಂಗಳವನ್ನು ನಿರೀಕ್ಷೆ ಮಾಡುವುದು ಸಾಧ್ಯವೇ ಇಲ್ಲ. ಆದರೆ ಒಂದಂತೂ ಸ್ಪಷ್ಟ; ಮುಂಬೈನಲ್ಲಿ ಆಡಿದ್ದ ಪಿಚ್‌ಗೆ ಹೋಲಿಸಿದರೆ ಇದು ಸ್ವಲ್ಪ ವೇಗದ್ದು ಎನಿಸುತ್ತದೆ. ಆದರೂ ಬೇಗ ಪುಡಿಯಾಗಿ ದೂಳು ಏಳುವುದು ಈ ಮಣ್ಣಿನ ಸಹಜ ಗುಣ. ಆದ್ದರಿಂದ ಇಂಥ ಮಂದಗತಿಯ ಅಂಗಳದಲ್ಲಿ ಹೇಗೆ ಆಡಬೇಕು ಎನ್ನುವುದೇ ನಮ್ಮ ಪಂದ್ಯದ ಯೋಜನೆಎಂದರು.‘ಗುರಿಯನ್ನು ಬೆನ್ನಟ್ಟುವುದು ಸುಲಭವೆಂದು ಇಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್‌ನ ಕೆಲವು ಪಂದ್ಯಗಳ ಆಧಾರದಲ್ಲಿ ನಿರ್ಧರಿಸಬಹುದು. ಆದರೂ ಆತಿಥೇಯರಿಗೆ ಮೊದಲು ಬ್ಯಾಟಿಂಗ್ ಮಾಡುವುದು ಹಾಗೂ ಗುರಿಯನ್ನು ಬೆನ್ನಟ್ಟುವುದು ಎರಡೂ ಸುಲಭ ಎನಿಸಬಹುದು. ಕಷ್ಟ ಇರುವುದು ನಾವು ಪರಿಸ್ಥಿತಿಗೆ ಹೊಂದಿಕೊಂಡು ಆಡುವ ವಿಷಯದಲ್ಲಿ’ ಎಂದ ಡೇನಿಯಲ್ ‘ಮುಂಬೈ ಹಾಗೂ ಇಲ್ಲಿನ ವಾತಾವರಣ ಒಂದೇ ಆಗಿದೆ. ನಾವು ದಕ್ಷಿಣ ಆಫ್ರಿಕಾ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ಆಡಿದ ಢಾಕಾದಲ್ಲಿಯೂ ಇದೇ ವಾತಾವರಣ. ಆದ್ದರಿಂದ ಇಲ್ಲಿಗೆ ಬಂದ ನಂತರ ನಮ್ಮ ಕ್ರಿಕೆಟಿಗರಿಗೆ ಹೆಚ್ಚಿನ ವ್ಯತ್ಯಾಸವೇನು ಅನಿಸಿಲ್ಲ’ ಎಂದು ನುಡಿದರು.ನಾಲ್ಕರ ಘಟ್ಟದ ಹೋರಾಟಕ್ಕೆ ತಂಡದ ಸಂಯೋಜನೆ ಏನಾಗಿರುತ್ತದೆಂದು ಎಂದು ಕೇಳಿದ್ದಕ್ಕೆ ‘ಸ್ಪಿನ್ ಬೌಲಿಂಗ್ ನಿರ್ಣಾಯಕವಾಗುತ್ತದೆ ಎಂದು ಮೇಲು ನೋಟಕ್ಕೆ ಸ್ಪಷ್ಟವಾಗಿ ಹೇಳಬಹುದು. ಆದ್ದರಿಂದ ಮೂವರು ಸ್ಪಿನ್ನರ್‌ಗಳನ್ನು ಪ್ರಯೋಜಿಸುವುದು ತಪ್ಪೆನಿಸದು’ ಎಂದ ವೆಟೋರಿ ‘ಕ್ವಾರ್ಟರ್ ಫೈನಲ್‌ನಲ್ಲಿ ಆಡಿದ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವುದಿಲ್ಲ. ಸ್ಪಿನ್ ಬೌಲಿಂಗ್‌ಗೆ ಒತ್ತು ನೀಡಲೇಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.