ಬುಧವಾರ, ಮೇ 18, 2022
28 °C

ಇದು ಓಟದ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು ಓಟದ ಕಥೆ

ನಾನು ಸಾಯುವವರೆಗೆ ಎರಡು ಸಂಗತಿಗಳನ್ನು ಮರೆಯುವ ಹಾಗೇ ಇಲ್ಲ. ಒಂದು ನನ್ನ ತಂದೆ, ತಾಯಿ, ಅಣ್ಣಂದಿರು, ಅಕ್ಕಂದಿರ ದಾರುಣ ಹತ್ಯೆ. ನನ್ನ ಅರಿವಿಗೆ ಬರುವ ಮೊದಲೇ   ನನ್ನ ಕಣ್ಣ ಮುಂದೆಯೇ ನನ್ನ ಮನೆಯವರ ರಕ್ತದೋಕುಳಿ ನಡೆದುಹೋಯಿತು; ಎರಡನೆಯದು ರೋಮ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕಿದ್ದ ನಾನು ನಾಲ್ಕನೇ ಸ್ಥಾನಕ್ಕೆ ಕುಸಿಯಬೇಕಾಯಿತು. ಇದು ಬೇರೆಯವರಿಂದ ನಡೆದುದಲ್ಲ.ನನ್ನಿಂದಲೇ ಆದ ಪ್ರಮಾದ. ಸಾಯುವವರೆಗೆ ಇವೆರಡು ದುಃಸ್ವಪ್ನಗಳು ನನ್ನನ್ನು ಎಡೆಬಿಡದೆ ಕಾಡುತ್ತಲೇ ಇರುತ್ತವೆ... ಇದು ಓಟದ ದಂತಕಥೆ ಮಿಲ್ಖಾಸಿಂಗ್ ಅನಿಸಿಕೆ. 78 ವರ್ಷದ ಮಿಲ್ಖಾಸಿಂಗ್ ಅವರನ್ನು ಸದಾ ಕಾಡುವ ಈ ಎರಡು ಘಟನೆಗಳಲ್ಲಿ ಮೊದಲನೆಯದಕ್ಕೆ ಕಾರಣ ಭಾರತ - ಪಾಕ್ ವಿಭಜನೆಯ ದಾರುಣ ರಾಜಕೀಯ ಇತಿಹಾಸ. ಎರಡನೆಯದು ಕ್ಷಣ ಮಾತ್ರದಲ್ಲಿ ನಡೆದ ಆಘಾತ.

1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ ಓಟದ ಫೈನಲ್‌ನಲ್ಲಿ ಗಮನಾರ್ಹ ಸ್ಪರ್ಧಿಯಾಗಿದ್ದವರು ಮಿಲ್ಖಾ ಸಿಂಗ್. ಅತ್ಯುತ್ತಮವಾಗಿ ಓಟದ ಆರಂಭ ತೆಗೆದುಕೊಂಡ ಅವರು ವೇಗವನ್ನು ಹಿಗ್ಗಿಸಿಕೊಂಡು  ಮುಂಚೂಣಿಗೆ ನುಗ್ಗಿದ್ದರು. ಇಡೀ ಕ್ರೀಡಾಂಗಣದಲ್ಲಿ  ಮಿಲ್ಖಾ ಮಿಲ್ಖಾ   ಅನ್ನುವ ಕೂಗು. ಸುಮಾರು ಅರವತ್ತು ಭಾಗ ಓಡಿದ ಮೇಲೆ ಅದೇಕೋ ಅವರಲ್ಲೇ ತಾನು ಗುರಿ ಮುಟ್ಟಬಲ್ಲೆನೇ? ಎಂಬ ಆತಂಕ ಶುರುವಾಗಿ ತನ್ನ ಜತೆಗಿರುವವರು ಎಷ್ಟು ಹಿಂದಿದ್ದಾರೆ ಎಂಬ ಅಂದಾಜಿಗಾಗಿ ಕ್ಷಣ ತಿರುಗುತ್ತಲೇ ಅವರ ವೇಗ ಕಡಿಮೆಯಾಗಿ, ಉಳಿದವರು ಅವರನ್ನು ಮೀರಿಸಿ ರಭಸದಿಂದ ಮುನ್ನುಗ್ಗುತ್ತಾರೆ.

ಈ ಸಣ್ಣ ಪ್ರಮಾದದ ಫಲವಾಗಿ ಮಿಲ್ಖಾ ಮೂಲಕ ಭಾರತಕ್ಕೆ ದಕ್ಕಬೇಕಿದ್ದ ಪದಕ ಕಣ್ಣು ಮಿಟುಕಿಸುವುದರೊಳಗೆ ತಪ್ಪಿಹೋಗುತ್ತದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ  ಮಿಲ್ಖಾ ಅವರ ನಂತರ ಗುರಿಮುಟ್ಟಿದ್ದ ದಕ್ಷಿಣ ಆಫ್ರಿಕಾದ ಮಾಲ್ಕಂ ಸ್ಪೆನ್ಸ್ ಮೂರನೇ ಸ್ಥಾನ ಗಿಟ್ಟಿಸುತ್ತಾರೆ. ಭಾರತದ ಬಂಗಾರದ ಓಟಗಾರ ಕಂಚನ್ನೂ ಕಳೆದುಕೊಂಡ ದಾರುಣ ಕತೆ ಒಲಿಂಪಿಕ್ ಇತಿಹಾಸದಲ್ಲಿ ದಾಖಲಾಗುತ್ತದೆ.ಮಿಲ್ಖಾ ಸಿಂಗ್ ಕುರಿತಾದ  `ಭಾಗ್ ಮಿಲ್ಖಾ ಭಾಗ್'  ಚಿತ್ರ ಆರಂಭವಾಗುವುದೂ ರೋಮ್ ಒಲಿಂಪಿಕ್ಸ್‌ನ ವಿಷಾದದ ಛಾಯೆಯಲ್ಲೇ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಅದರಲ್ಲೂ ಭಾರತೀಯ ಚಿತ್ರರಂಗದಲ್ಲಿ ವ್ಯಕ್ತಿಚಿತ್ರಣವೊಂದು ಇಷ್ಟೊಂದು ಅದ್ಭುತವಾಗಿ ಮೂಡಿ ಬಂದಿರುವುದು ಇದೇ ಮೊದಲು ಎಂದೆನಿಸುತ್ತದೆ. ಅದರಲ್ಲೂ ಕ್ರೀಡಾಪಟುವೊಬ್ಬರ ಜೀವನವನ್ನು ಮರುಸೃಷ್ಟಿ ಮಾಡುವುದು ಖಂಡಿತಾ ಸುಲಭದ ಕೆಲಸವಲ್ಲ.

ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಬಹುದೊಡ್ಡ ಸಾಹಸಗಾಥೆಯೊಂದನ್ನು ಅದರ ಎಲ್ಲ ಇತಿಮಿತಿಗಳೊಂದಿಗೆ ಅತ್ಯದ್ಭುತವಾಗಿ ಜನರ ಮುಂದಿಟ್ಟಿದ್ದಾರೆ. ಕಾರ್ಲ್ ಲೂಯಿಸ್ ಬಗ್ಗೆ ಅಮೆರಿಕದಲ್ಲಿ ತಯಾರಾದ ಚಿತ್ರಕ್ಕಿಂತಲೂ ಅತ್ಯುತ್ತಮವಾಗಿ  `ಭಾಗ್ ಮಿಲ್ಖಾ ಭಾಗ್'  ಚಿತ್ರಿತಗೊಂಡಿದ್ದರೆ ಅದಕ್ಕೆ ಕಾರಣ ಕಚ್ಚಾ ಹಳ್ಳಿಗ, ಬಡ ಪಂಜಾಬಿ ಕುಟುಂಬದ, ತನ್ನ 78 ವರ್ಷಗಳುದ್ದಕ್ಕೂ ಒಂದಿಲ್ಲಾ ಒಂದು ಕಾರಣಕ್ಕೆ ಓಡುತ್ತಲೇ ಇರುವ, ಈ ದೇಶದ  ಯುವಶಕ್ತಿಗೆ ಸ್ಫೂರ್ತಿಯಾಗಿರುವ ಮಿಲ್ಖಾಸಿಂಗ್ ಎಂಬ ಅಪ್ಪಟ ಕ್ರೀಡಾ ಚೇತನ.ಮಿಲ್ಖಾ ಸಿಂಗ್ ಅಂದಕೂಡಲೇ ಎಲ್ಲರಿಗೆ ನೆನಪಾಗುವುದು  `ಆರ್ ಯು ರಿಲ್ಯಾಕ್ಸಿಂಗ್?' ಅಂತ ಯಾರೋ ಕೇಳಿದಾಗ `ಐ ಆ್ಯಮ್ ಮಿಲ್ಖಾಸಿಂಗ್'  ಎಂದು ಉತ್ತರಿಸಿದ ಹಳ್ಳಿಹೈದನ ಹಳೇ ಜೋಕು.  ಬ್ರಿಟಿಷರ ಕಾಲದಲ್ಲಿ ಪಂಜಾಬ್ ಪ್ರಾಂತ್ಯದಲ್ಲಿದ್ದ ಈಗ ಪಾಕಿಸ್ತಾನಕ್ಕೆ ಸೇರಿರುವ ಮುಜಾಫರ್‌ಘಡದ ಗೋವಿಂದಪುರ ಹಳ್ಳಿ ಮಿಲ್ಖಾ ಅವರ ಹುಟ್ಟೂರು. ಸಿನಿಮಾದಲ್ಲಿ ಮಿಲ್ಖಾ ಅವರ ಬಾಲ್ಯ ಆರಂಭವಾಗುವುದೇ ಅವರ ತಂದೆ ತಮ್ಮ ಮಗ ಕಲಿತಿದ್ದ ಇಂಗ್ಲಿಷ್ ಭಾಷೆಯಿಂದಾಗಿ ಹೆಮ್ಮೆ ಪಡುವುದರ ಮೂಲಕ.

ಆದರೆ ಅವೆಲ್ಲ ಖುಷಿಯ ಸಂಗತಿಗಳನ್ನು ಭಾರತ ವಿಭಜನೆ ಅನ್ನುವ ಹೆಮ್ಮೋರಿ ಬಲಿ ತೆಗೆದು ಕೊಳ್ಳುತ್ತದೆ.  ಮಿಲ್ಖಾ ಮನೆಯವರೆಲ್ಲ ವಿಭಜನೆಯ ದಳ್ಳುರಿಯಿಂದ ಹುಟ್ಟಿಕೊಂಡ ಕೊಲೆಗಡುಕತನಕ್ಕೆ ಬಲಿಯಾಗುತ್ತಾರೆ. ತಮ್ಮ ದೇಶದಲ್ಲಿರುವ `ಭಾರತೀಯ'ರನ್ನು ಓಡಿಸಲು ಯತ್ನಿಸಿದ ಪಾಕಿಸ್ತಾನಿಯರು ಒಲ್ಲದವರ ಮಾರಣಹೋಮ ನಡೆಸುತ್ತಾರೆ. ಮಿಲ್ಖಾ ಮನೆಯವರ ಕಗ್ಗೊಲೆ ನಡೆಯುತ್ತಿದ್ದಾಗ ಅಪ್ಪ ಮಾತ್ರ 14 ವರ್ಷದ ಮಗನನ್ನು  ಭಾಗ್ ಮಿಲ್ಖಾ ಭಾಗ್  ಎಂದು ಅಲ್ಲಿಂದ ಓಡಿಸುತ್ತಾನೆ. ಅಲ್ಲಿಂದ ಆರಂಭವಾಗುವ ಓಟ ಒಲಿಂಪಿಕ್ ಕ್ರೀಡಾಂಗಣದವರೆಗೂ ಮಿಲ್ಖಾರನ್ನು ತಲುಪಿಸಿತು. ಅದೆಂಥಾ ಓಟವಿರಬಹುದು!ಅಲ್ಲಿಂದ ಭಾರತಕ್ಕೆ ಬರುವ ಮಿಲ್ಖಾ ಒಂದಷ್ಟು ದಿನ ನಿರಾಶ್ರಿತನಾಗಿದ್ದು, ನಂತರ ದಿಲ್ಲಿಯ ಸಮೀಪವಿರುವ ತನ್ನ ಅಕ್ಕನ ಮನೆಯನ್ನು ಸೇರುತ್ತಾನೆ. ಅಲ್ಲೂ ಸರಿಬರುವುದಿಲ್ಲ. ಮನದ ತುಂಬೆಲ್ಲಾ ಗಾಯಗಳೇ. ಕಣ್ಣ ಮುಂದೆಯೇ  ನಡೆದ ಕುಟುಂಬದವರ ರಕ್ತದೋಕುಳಿಯ ದೃಶ್ಯವನ್ನು  ಮನದಲ್ಲಿ ತುಂಬಿಕೊಂಡ ಮನಸ್ಸು ಅದೆಷ್ಟು ಗಾಯಗೊಂಡಿರಬಹುದು? ಪುಟ್ಟ ಮಿಲ್ಖಾ ಜೊತೆ ಕೆಲವು ಹುಡುಗರು ಸೇರಿಕೊಂಡು ಎಲ್ಲರೂ ರೈಲಿನಲ್ಲಿ ಕಲ್ಲಿದ್ದಲು ಕದಿಯುವ ಕೆಲಸದಲ್ಲಿ ತೊಡಗುತ್ತಾರೆ.

ಅದಾದ ನಂತರ ಒಂದು ಹುಡುಗಿಯ ಜೊತೆ ಪ್ರೇಮ ಪ್ರಕರಣ ಶುರುವಾಗುತ್ತದೆ. ಅದೂ ಕೂಡಾ ಇನ್ನೂ ಶೈಶವಾವಸ್ಥೆಯಲ್ಲಿರುವಾಗಲೆ. ಆ ದಿನಗಳಲ್ಲಿಯೇ ಮಿಲ್ಖಾಗೆ ಮಿಲಿಟರಿಯಲ್ಲಿ ಕೆಲಸ ಸಿಕ್ಕುತ್ತದೆ. ಬಹುಶಃ ಆ ಕೆಲಸ ಸಿಕ್ಕಿರದಿದ್ದರೆ ಮಿಲ್ಖಾ ತನ್ನ ಗ್ಯಾಂಗ್ ಜೊತೆ ಸೇರಿ ಕಳ್ಳತನದ ಚಟುವಟಿಕೆಗಳಲ್ಲಿ ಕಳೆದು ಹೋಗುತ್ತಿದ್ದರೇನೊ. ಮಲ್ಕಾನ್ ಸಿಂಗ್ ಅನ್ನುವ ಸೋದರ ಸಂಬಂಧಿ ಸಾಕಷ್ಟು ಶ್ರಮಪಟ್ಟ ನಂತರ ಕೆಲಸ ಸಿಕ್ಕುತ್ತದೆ.

ಆರಾಮವಾಗಿ ಊಟ, ವ್ಯಾಯಾಮ, ತಮಾಷೆ, ನಿದ್ದೆ ಅಂದುಕೊಂಡಿದ್ದ ಮಿಲ್ಖಾಗೆ ಮಿಲಿಟರಿಯಲ್ಲಿದ್ದಾಗ ಓಟದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂಬ ಆದೇಶ ಬರುತ್ತದೆ.

ಆ ಆಜ್ಞೆಗಿಂತ 10 ಜನರಲ್ಲಿ ಒಬ್ಬನಾಗಿ ಆಯ್ಕೆಯಾದರೆ ಹಾಲು ಮೊಟ್ಟೆ ಸಿಗುವುದೆಂಬ ಆಮಿಷ ಹೆಚ್ಚು ಅಪ್ಯಾಯವಾಗಿ ಕಾಣುತ್ತದೆ. 10 ಕಿ.ಮೀ. ಓಟದ ಮಧ್ಯೆಯೇ ಕೊಂಚ ವಿಶ್ರಾಂತಿ ಕೂಡ ತೆಗೆದುಕೊಂಡು ಕಡೆಗೂ ಹತ್ತರಲ್ಲಿ ಒಬ್ಬನಾಗುತ್ತಾನೆ. ಇದು ಮಿಲ್ಖಾ ಅವರ ಮೊದಲ ಓಟ. ನಂತರ ಇವರು 400 ಮೀಟರ್ಸ್ ಓಟದ ಅಭ್ಯಾಸದಲ್ಲಿ ತೊಡಗುತ್ತಾರೆ. ಇವರ ಸಾಮರ್ಥ್ಯ ಕಂಡ ಹವಾಲ್ದಾರ್ ಗುರುದೇವ್ ಸಿಂಗ್ ಮಿಲ್ಖಾ ಅವರನ್ನು ರಾಷ್ಟ್ರೀಯ ಕ್ರೀಡಾಸ್ಪರ್ಧೆಗೆ ಕಳುಹಿಸುತ್ತಾರೆ. ಅಲ್ಲಿ ಗೆದ್ದು ರಾಷ್ಟ್ರೀಯ ತರಬೇತಿ ಶಿಬಿರಕ್ಕೂ ಆಯ್ಕೆಯಾಗುತ್ತಾರೆ. ಅಲ್ಲಿ ರಣಬೀರ್ ಸಿಂಗ್ ಅವರ ತರಬೇತಿಯಿಂದಾಗಿ 1956ರ ಮೆಲ್ಬರ್ನ್ ಒಲಿಂಪಿಕ್ಸ್‌ಗೆ ಆಯ್ಕೆಯಾಗುತ್ತಾರೆ.ಆದರೆ ಆ ಕ್ರೀಡಾಕೂಟದ ಹೀಟ್ಸ್‌ನಲ್ಲಿಯೇ ಮಿಲ್ಖಾ ಸೋಲುತ್ತಾರೆ. ಕೋಚ್ ರಣಬೀರ್ ಅವರಿಂದ ವಿಶ್ವದಾಖಲೆಯ ವಿವರ ತಿಳಿದುಕೊಂಡು ಮುಂದಿನ ಗುರಿಯಾಗಿ ಆ ದಾಖಲೆ ಮುರಿಯುವ ನಿರ್ಧಾರ ಮಾಡುತ್ತಾರೆ. ಆದರೆ ರೋಮ್ ಒಲಿಂಪಿಕ್ಸ್ ಸಣ್ಣ ತಪ್ಪು  ಮಿಲ್ಖಾ ಅವರ ಒಲಿಂಪಿಕ್ಸ್ ಪದಕದ ಕನಸನ್ನು ನುಚ್ಚು ನೂರಾಗಿಸುತ್ತದೆ. ರಾಷ್ಟ್ರೀಯ ದಾಖಲೆ, ಏಷ್ಯನ್ ಕೂಟದ ದಾಖಲೆ, ಕಾಮನ್‌ವೆಲ್ತ್ ಕ್ರೀಡಾಕೂಟದ ದಾಖಲೆ ಮಾಡಿದ ಮಿಲ್ಖಾ ಅವರಿಗೆ ಒಲಿಂಪಿಕ್ಸ್ ದುಸ್ವಪ್ನವಾಗಿಯೇ ಕಾಡುತ್ತದೆ.ಆದರೆ ಒಲಿಂಪಿಕ್ಸ್ ಗೆಲ್ಲದಿದ್ದರೂ ಮಿಲ್ಖಾ ಏಷ್ಯಾದ ಕಣ್ಮಣಿಯಾಗುತ್ತಾರೆ. ಅವರ ಸಾಧನೆ ಕಂಡ ನೆಹರೂ ಪಾಕಿಸ್ತಾನದಲ್ಲಿ ನಡೆಯಲಿದ್ದ ಎರಡು ದೇಶಗಳ ನಡುವಣ ಕ್ರೀಡಾಕೂಟಕ್ಕೆ ಮಿಲ್ಖಾ ನೇತೃತ್ವದಲ್ಲಿ ಕ್ರೀಡಾತಂಡವನ್ನು ಕಳಿಸುವ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ಮಿಲ್ಖಾ `ನಾನು ಪಾಕಿಸ್ತಾನಕ್ಕೆ ಹೋಗಲಾರೆ' ಎನ್ನುತ್ತಾರೆ. ಕಡೆಗೂ ನೆಹರೂ ಮಾತಿಗೆ ಕಟ್ಟುಬಿದ್ದು ಅವರು ಪಾಕಿಸ್ತಾನಕ್ಕೆ ಹೋದರೆ ಅಲ್ಲಿನ ಜನ, ಪತ್ರಿಕೆಗಳು  ಇದು `ಕಾಲಿಕ್-ಮಿಲ್ಖಾ ಹೋರಾಟ'  ಎಂದು ರಂಜನೀಯವಾಗಿ ಬಣ್ಣಿಸುತ್ತಾರೆ. ಅಲ್ಲಿಯ ಹೀರೋ ಕಾಲಿಕ್‌ರನ್ನು ಮಣಿಸಿ ಮೂರನೇ ಸ್ಥಾನಕ್ಕೆ ತಳ್ಳುವುದರೊಂದಿಗೆ  `ಭಾಗ್ ಮಿಲ್ಕಾ ಭಾಗ್'  ಚಿತ್ರ ಕೊನೆಗೊಳ್ಳುತ್ತದೆ.ಮೂರು ಗಂಟೆಯ ದೀರ್ಘ ಚಿತ್ರ ಒಂದೇ ಒಂದು ಗಳಿಗೆಯೂ ಬೋರು ಹೊಡೆಸದಿರುವುದಕ್ಕೆ ಕಾರಣ ಪ್ರಸೂನ್ ಜೋಶಿಯವರ ಗಟ್ಟಿಯಾದ ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳು. ಸಾಕಷ್ಟು ಪಂಜಾಬಿ ಜಾನಪದ ಸೊಗಡನ್ನು ಅವಲಂಬಿಸಿರುವ ಸಂಗೀತ ನಿರ್ದೇಶಕರಾದ ಶಂಕರ್ ಎಹಸಾನ್ ಇಡೀ ಚಿತ್ರವನ್ನು ಪ್ರೇಕ್ಷಕರ ಎದೆಬಡಿತದ ಲಯಕ್ಕೆ ಒಗ್ಗಿಸಿದ್ದಾರೆ. ಅಲ್ಲಲ್ಲಿ ಬಳಸಿರುವ ಮೌನವಂತೂ ಕಣಿವೆಯೊಳಗಿನ ಪ್ರತಿಧ್ವನಿಯಂತೆ ರಿಂಗಣಿಸುತ್ತದೆ. ಹಾಗೆಯೇ ಛಾಯಾಗ್ರಹಣದ ಸೊಗಸಂತೂ ಅತ್ಯದ್ಭುತ.ಇದೆಲ್ಲದರ ನಡುವೆ ಮಿಲ್ಖಾ  ಪಾತ್ರದಲ್ಲಿರುವ ಫರಾನ್ ಅಕ್ತರ್ ಮಿಲ್ಖಾ ಅವರನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಅದೆಷ್ಟು ತಯಾರಿ ನಡೆಸಿದ್ದರೆಂದರೆ ಫರಾನ್ ಓಡುವಾಗ ಅವರ ತನು, ಮನದ ಜೊತೆ ಅವರ ದೇಹದಲ್ಲಿ ಉಬ್ಬಿಕೊಂಡ ನರನಾಡಿಗಳ ತುಡಿತವೂ ನಮಗೆ ಆ ಉದ್ವಿಗ್ನತೆಯ ಕತೆ ಹೇಳುತ್ತವೆ. ಮಿಲ್ಖಾ ಅವರೇ ಹೇಳುವಂತೆ  `ಆ ಹುಡುಗ ಅಲ್ಲಿ ನಟಿಸಿದ್ದಾನಷ್ಟೇ ಅಲ್ಲ, ನನ್ನ ಯಥಾವತ್ ನಕಲು ಆಗಿ ನನ್ನ ಕೆಲಸವನ್ನು ಮಾಡಿ ತೋರಿಸಿದ್ದಾನೆ. ನನ್ನ ಶಿಸ್ತು, ನನ್ನ ತನ್ಮಯತೆಯನ್ನು ಇಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದನ್ನು ಚಿತ್ರದಲ್ಲಿ ನಾನು,  ನನ್ನ ಹೆಂಡತಿ ನೋಡಿ ಅಚ್ಚರಿ ಪಟ್ಟಿದ್ದೇವೆ'.ಹೌದು. ಫರಾನ್ ಅದೆಷ್ಟು ಓಟದ ತರಬೇತಿ ಪಡೆದಿದ್ದರೆಂದರೆ 100 ಮೀಟರ್ ಓಟವನ್ನು 11.4 ಸೆಕೆಂಡುಗಳಲ್ಲಿ ಮುಗಿಸುವಷ್ಟು ಕಠಿಣ ಶ್ರಮ ಹಾಕಿದ್ದರಂತೆ. ಮಿಲ್ಖಾ    ತಮ್ಮ ಬದುಕಿನಲ್ಲಿ  ನಿರಂತರ ಶ್ರಮ ವಹಿಸಲು ಒಂದು ಕಾರಣವನ್ನು ಸ್ವತಃ ಮಿಲ್ಖಾ ಹೇಳುತ್ತಾರೆ.  ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರನ್ನು ಒಂದು ಸಾರಿ ನಾನು ಕೇಳಿದೆ, ದಾದಾ ನಿಮ್ಮನ್ನು ಹಾಕಿ ಮಾಂತ್ರಿಕ ಅಂತ ಕರೆಯುತ್ತಾರಲ್ಲ.ಈ ಕಲಿಕೆ ಹೇಗೆ ಸಾಧ್ಯವಾಯಿತು? ಅದಕ್ಕೆ  ದಾದಾ `ನಾನು ಪ್ರತಿದಿನ ಮೈದಾನಕ್ಕೆ ಬಂದಾಗ ಗೋಲ್ ಪೋಸ್ಟ್‌ಗೆ ಒಂದು ಸೈಕಲ್ ಟೈರ್ ಕಟ್ಟಿ ಅದರೊಳಗೆ 500 ಸಾರಿ ಚೆಂಡು ಕಳಿಸಲು ಪ್ರಯತ್ನಿಸುತ್ತೇನೆ'  ಅಂದರಂತೆ.ಈ ಚಿತ್ರದ ಹಕ್ಕಿಗಾಗಿ ಮಿಲ್ಖಾ ತೆಗೆದುಕೊಂಡಿದ್ದು ಕೇವಲ ಒಂದು ರೂಪಾಯಿಯ ಸಂಭಾವನೆ. ಚಿತ್ರ ಲಾಭ ಗಳಿಸಿದರೆ ಅದರಲ್ಲಿ 15ರಿಂದ 20 ಭಾಗವನ್ನು ಮಿಲ್ಖಾ ಟ್ರಸ್ಟ್‌ಗೆ ಕೊಡುವಂತೆ ನಿರ್ಮಾಪಕರ ಜೊತೆ ಒಂದು ಚಿಕ್ಕ ಕರಾರು ಮಾಡಿಕೊಂಡಿದ್ದಾರಂತೆ. ಇದು ಕ್ರೀಡಾಪಟುಗಳ ಕ್ಷೇಮನಿಧಿಗೆ ಹೋಗುತ್ತದೆ. ಇಂಥದೊಂದು ಅದ್ಭುತ ಚಿತ್ರ ನೀಡಿರುವಾಗ ಯಾರಿಗೆ ಧನ್ಯವಾದ ಹೇಳುವುದು? ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾಗೊ? ಫರ‌್ಹಾನ್ ಅಖ್ತರ್‌ಗೋ? ಎಲ್ಲವೂ ಸೇರಿ ಮಿಲ್ಖಾ ಸಿಂಗ್‌ಗೆ ನಾವೆಲ್ಲರೂ ಆಬಾರಿಯಾಗೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.