ಶುಕ್ರವಾರ, ಏಪ್ರಿಲ್ 23, 2021
24 °C

ಇದು ಚಿಗುರೊಡೆಯುವ ಕಾಲ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಹೊತ್ತು ಏರಿದಂತೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದರೂ, ಗಿಡ ಗಳೆಲ್ಲವೂ ಪೊರೆ ಕಳಚಿ ಚಿಗುರಿದ ಹೊಸ ಎಲೆಗಳಿಂದ ಅಲಂಕೃತವಾಗಿ ನಿಂತಿವೆ. ಮೈತುಂಬ ಹೂವುಗಳನ್ನು ಹೊತ್ತು, ಭೃಂಗಗಳನ್ನು ಆಹ್ವಾನಿಸುತ್ತಿ ರುವ ಗಿಡ, ಮರಗಳು ವಸಂತ ಋತುವಿನ ಸಂಭ್ರಮದಲ್ಲಿ ಇದ್ದಂತಿವೆ.ನಗರದ ಎಲ್ಲೆಡೆಯೂ ಈಗ ಚಿಗುರಿದ ಗಿಡಗಳನ್ನು ನೋಡುವುದೇ ಒಂದು ಸಂತಸದ ಅನುಭವ. ಅದರಲ್ಲಿಯೂ ಹೂವುಗಳನ್ನು ಹೊತ್ತು ನಿಂತಿರುವ ಬೇವು, ಮಾವಿನ ಮರಗಳು ಇನ್ನಷ್ಟು ಸುಂದರವಾಗಿ ಕಾಣುತ್ತಿವೆ. ನಳನಳಿಸುವ ಚಿಗುರಿನ ಮಧ್ಯೆ, ಅರಳಿರುವ ಹೂವುಗಳು ನೋಡು ಗರನ್ನು ಸೆಳೆಯುತ್ತಿವೆ. ರಸ್ತೆ ಬದಿಯ ಮರಗಳಲ್ಲಿಯೂ ಚಿಗುರು ಎಲೆಗಳ ಮೇಲೆ ಬೀಳುವ ಸೂರ್ಯನ ಕಿರಣಗಳ ಪ್ರಕಾಶ ಸ್ಪಷ್ಟವಾಗಿ ಕಾಣುತ್ತಿವೆ. ಹೊಳೆಯುವ ವಜ್ರದಂತೆ ಭಾಸವಾ ಗುವ ಈ ದೃಶ್ಯ ನಿಜಕ್ಕೂ ಅದ್ಭುತವೇ ಸರಿ.ಯುಗಾದಿಯ ಹಬ್ಬದ ಸಂಭ್ರಮ ವನ್ನು ಇಮ್ಮಡಿಸುವ ಸಂದರ್ಭವೂ ಇದು. ಯುಗ ಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತಿದೆ, ಹೊಸ ವರುಷಕೆ, ಹೊಸ ವರುಷಕೆ ಹೊಸತು, ಹೊಸತು ತರುತಿದೆ ಎಂಬ ಕವಿವಾಣಿ ಯಂತೆ ಗಿಡಮರಗಳೆಲ್ಲವೂ ಹಳೆಯ ಎಲೆಗಳನ್ನು ಕಳಚಿ, ನಳನಳಿಸುವ ಹೊಸ ಎಲೆಗಳಿಂದ ಕಂಗೊಳಿಸುತ್ತಿವೆ.ಬೇವು, ಮಾವು, ಆಲ, ಹೊಂಗೆ, ಅರಳಿ ಹೀಗೆ ಯಾವುದೇ ಗಿಡಗಳನ್ನು ನೋಡಿದರೂ ಚಿಗುರು ಎಲೆಗಳದ್ದೇ ಸಂಭ್ರಮ. ಚಳಿಗಾಲದಲ್ಲಿ ಎಲೆಗಳೆಲ್ಲ ವನ್ನು ಕಳಚಿ ನಿಂತಿದ್ದ ಮರಗಳು, ಮತ್ತೆ ಹೊಸ ಎಲೆಗಳನ್ನು ಹೊತ್ತು ನಿಂತಿದ್ದು, ಬಿಸಿಲು ಹೆಚ್ಚಿದಂತೆ ನೆರಳು ನೀಡುವು ದನ್ನು ಹೆಚ್ಚಿಸಿವೆ.ರಸ್ತೆಯ ಇಕ್ಕೆಲಗಳಲ್ಲಿ ಚಿಗುರಿದ ಈ ಗಿಡ, ಮರಗಳು ದಾರಿಹೋಕರಲ್ಲಿಯೂ ಪರಿಸರದ ಸೌಂದರ್ಯವನ್ನು ಮೂಡಿ ಸುತ್ತಿವೆ. ಎಷ್ಟು ವರ್ಣಿಸಿದರೂ ಮುಗಿ ಯದ ಪ್ರಕೃತಿ ಸೌಂದರ್ಯವನ್ನು ಕಣ್ಣಾರೆ ಕಾಣುವ ಸಂದರ್ಭವೂ ಇದಾ ಗಿದ್ದು, ಪ್ರತಿಯೊಬ್ಬರು ಈ ಸೌಂದರ್ಯ ವನ್ನು ಸವಿಯಲೇ ಬೇಕು ಎನಿಸುತ್ತದೆ.ಅದರಲ್ಲಿಯೂ ಬಿರು ಬೇಸಿಗೆಯ ನಾಡಾದ ಯಾದಗಿರಿಯಲ್ಲಿ ಇದೀಗ ಬಿಸಿಲಿನ ಪ್ರಖರತೆಯೂ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರು ಗಿಡ ಮರಗಳನ್ನು ಅವಲಂಬಿ ಸುತ್ತಿದ್ದಾರೆ.ಹೀಗಾಗಿ ರೆಂಬೆ ಕೊಂಬೆ ಗಳಲ್ಲಿ ಎಲೆಗಳನ್ನು ಹೊತ್ತು ನಿಂತಿರುವ ಮರಗಳು, ಜನರಿಗೆ ತಂಪನ್ನು ನೀಡು ತ್ತಿವೆ. ಇನ್ನೊಂದೆಡೆ ಮಾವಿನ ಗಿಡಗಳಲ್ಲಿ ಹೂವುಗಳು ಅರಳಿ ನಿಂತಿರುವುದು ನಿಸರ್ಗದ ಸಂಭ್ರಮವನ್ನು ಇಮ್ಮಡಿಸಿ ದಂತೆ ತೋರುತ್ತದೆ. ಎಲೆಗಳಿಗಿಂತ ಹೆಚ್ಚು ಹೂವುಗಳೇ ಕಾಣುತ್ತಿದ್ದು, ಇವೆಲ್ಲವೂ ಕಾಯಿಗಳಾದರೆ ಎಷ್ಟು ಒಳ್ಳೆಯದು ಎಂಬ ಉದ್ಘಾರಗಳು ಬಾರದೇ ಇರದು.“ಬೆಳಿಗ್ಗೆ ನೋಡಬೇಕ್ರಿ. ಸೂರ್ಯನ ಕೆಂಪು ಕಿರಣ ಈ ಎಲಿಗೋಳ ಮ್ಯಾಲ ಬಿದ್ದಾಗ ಎಷ್ಟ ಛಂದ ಕಾಣತೈತಿ ಅಂದ್ರ, ಅದನ್ನ ಹೇಳೋದ ಸಾಧ್ಯ ಇಲ್ರಿ. ಏನ ಇದ್ರು ನೋಡೇ ತಿಳಿಬೇಕ್ರಿ. ಇಂಥಾ ಸುಂದರ ವಾತಾವರಣ ಸಿಗಬೇಕು ಅಂದ್ರ, ಬ್ಯಾಸಿಗಿ ತನಕಾ ಕಾಯಬೇಕ ನೋಡ್ರಿ. ಪ್ರಕೃತಿ ವಿಚಿತ್ರ ಎಷ್ಟ ನೋಡ್ರಿ. ಚಳಿ ಇದ್ದಾಗ ಎಲಿ ಕಳಚಿ ಬೀಳತಾವ. ಬಿಸಿಲು ಹೆಚ್ಚಾದಂಗ, ಎಲಿಗೋಳು ಹೆಚ್ಚಾಗತಾವ. ಇದರಿಂದ ನೆರಳು ಸಾಕಷ್ಟ ಸಿಗತೈತಿ” ಎಂದು ನಗರದ ಯುವಕ ನಾಗರಾಜ ತಮಗಾದ ಸಂತಸವನ್ನು ಹಂಚಿಕೊಳ್ಳುತ್ತಾರೆ.

ಒಟ್ಟಾರೆ ಪ್ರಕೃತಿ ಸೌಂದರ್ಯದ ಜೊತೆಗೆ, ಅದರಿಂದ ಜನರಿಗೆ ಆಗುವ ಅನುಕೂಲಗಳು ಸಾಕಷ್ಟು.ಗಿಡ ಮರ ಗಳು ಕಂಗೊಳಿಸುವ ರೀತಿ, ಹೂವುಗಳ ಘಮಘಮಿಸುವ ಪರಿ ಎಲ್ಲವೂ ಒಂದು ಅನುಪಮವಾದ ಅನುಭವವೇ ಸರಿ. ಇಂತಹ ಸವಿಯನ್ನು ಸವಿಯುವ ಅಪೂರ್ವ ಕಾಲ ಇದೀಗ ಬಂದಿದ್ದು, ಚಿಗುರೊಡೆಯುವ ಕಾಲದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ ಎನ್ನುತ್ತಿದೆ ನಿಸರ್ಗ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.