ಬುಧವಾರ, ಮಾರ್ಚ್ 3, 2021
31 °C
ದೇಗುಲ ಪ್ರವೇಶ ನಿರ್ಬಂಧ

ಇದು ಸ್ತ್ರೀ ಅಸ್ಮಿತೆಯ ಹೋರಾಟ

ಡಾ. ಎಚ್‌.ಎಲ್‌.ಪುಷ್ಪಾ,ಕವಯತ್ರಿ Updated:

ಅಕ್ಷರ ಗಾತ್ರ : | |

ಇದು ಸ್ತ್ರೀ ಅಸ್ಮಿತೆಯ ಹೋರಾಟ

12ನೇ ಶತಮಾನದಲ್ಲಿ ಆತ್ಮಕ್ಕೆ ಲಿಂಗಭೇದವಿಲ್ಲ ಎಂದು ಸಾರಿದ ಶಿವಶರಣರು, ದೈಹಿಕ ವ್ಯತ್ಯಾಸಗಳಿಂದಾಗಿ ಹೆಣ್ಣು  ಗಂಡೆಂಬ ಭೇದವಿದೆಯೇ ಹೊರತು ಒಳಗಿನ ಆತ್ಮಕ್ಕಲ್ಲ ಎಂದರು. ತೀರಾ ಸಾಧಾರಣವೆಂಬಂತೆ ‘ಮೊಲೆ ಮೂಡಿ ಬಂದಡೆ ಹೆಣ್ಣೆಂಬರು, ಮೀಸೆಕಾಸೆ ಬಂದಡೆ ಗಂಡೆಂಬರು, ಈ ಉಭಯದ ಜ್ಞಾನ ಹೆಣ್ಣೊ ಗಂಡೊ ನಾಸ್ತಿನಾಥ’ ಎಂದು ಗೊಗ್ಗವ್ವೆ ಜ್ಞಾನಕ್ಕೆ ಲಿಂಗಭೇದವಿಲ್ಲವೆನ್ನುತ್ತಾಳೆ. ಹದಿಬದೆಯ ಧರ್ಮವನ್ನು ಬೋಧಿಸಿದ ಹೊನ್ನಮ್ಮನೇ ‘ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು’ ಎಂದು ಪ್ರಶ್ನಿಸುತ್ತಾಳೆ.ಜನವರಿ 26, ಮಂಗಳವಾರ ಮಹಾರಾಷ್ಟ್ರದ ಅಹಮದ್‌ ನಗರ ಜಿಲ್ಲೆಯ ಶಿಂಗ್ಣಾಪುರದ ಶನಿದೇವರು ಭಕ್ತಾದಿಗಳ ಬಗೆಗಿನ ಲಿಂಗಭೇದ ನೀತಿಯಿಂದಾಗಿಯೇ ಚರ್ಚೆಗೆ ಗ್ರಾಸವಾಗಿದ್ದಾನೆ. ದೇವರು, ಧರ್ಮ, ಜಾತಿ ವ್ಯವಸ್ಥೆಗಳು ಎಲ್ಲಾ ಕಾಲದಲ್ಲೂ ಭಾರತದಂತಹ ಬಹುಭಾಷೆ, ಬಹುದೈವ, ಬಹುಸಂಸ್ಕೃತಿಗಳನ್ನುಳ್ಳ ರಾಷ್ಟ್ರದಲ್ಲಿ ರಾರಾಜಿಸುತ್ತಲೇ ಇರುತ್ತವೆ. ಇದಕ್ಕೆ ಕಾರಣ ಈ ನೆಲದ ಹಲವು ಗಂಡುದೇವತೆಗಳು ಒಳಗೊಳಗೇ ಸ್ತ್ರೀಯರನ್ನು ಕುರಿತು ಇಟ್ಟುಕೊಂಡಿರುವ ದ್ವೇಷಪೂರಿತ ಅಸಮಾನತೆಯ ಭಾವಗಳು. ಶಬರಿಮಲೆ ಅಯ್ಯಪ್ಪನಂತೂ ಸ್ತ್ರೀ ಸಂಗ ಪರಿತ್ಯಾಗಿಯಾದ್ದರಿಂದ ಹೆಣ್ಣಿನ ನೆಳಲೂ ಬೀಳುವಂತಿಲ್ಲ.ಕನ್ನಡದ ಪ್ರತಿಭಾವಂತ ಹಿರಿಯ ನಟಿ ಜಯಮಾಲ ಈ ಅಯ್ಯಪ್ಪನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಕೋರ್ಟ್‌ಗೆ ಅಲೆದ ಕತೆ ಮಾಸುವ ಮೊದಲೇ ಈಗ ಶನಿ ಮಹಾದೇವ ಮಹಿಳೆಯರ ಹೆಗಲೇರಿದ್ದಾನೆ. ಶಿಂಗ್ಣಾಪುರದ ಶನಿದೇವರು ಕಪ್ಪು ಶಿಲಾ ರೂಪಿಯಾಗಿದ್ದು ಅದಕ್ಕೆ ನಿರ್ದಿಷ್ಟವಾದ ಆಕಾರವಿಲ್ಲ. ಸುಮಾರು 400 ವರ್ಷಗಳಿಂದಾಚೆಯಿಂದಲೂ ಮಹಿಳೆಯರು ಇಲ್ಲಿ ಪ್ರವೇಶ ಪಡೆದಿಲ್ಲ. ಈ ದೈವವನ್ನು ಜನರು ಎಷ್ಟು ನೆಚ್ಚಿಕೊಂಡಿದ್ದಾರೆಂದರೆ ಈ ಗ್ರಾಮದಲ್ಲಿ ಮನೆಗಾಗಲೀ, ಅಲಮಾರುಗಳಿಗಾಗಲೀ ಬೀಗವನ್ನೇ ಹಾಕುವುದಿಲ್ಲ. ಇಲ್ಲಿ ಕಳ್ಳತನವೆಂಬುದು ಇಲ್ಲವೇ ಇಲ್ಲ ಎಂಬುದು ಪ್ರತೀತಿ. ಆದರೆ ಅಷ್ಟೇ ಕಠಿಣವಾಗಿ ಮುಟ್ಟು, ಸೂತಕಗಳಿಂದ ಕೂಡಿದ ಹೆಣ್ಣನ್ನು ಮಾತ್ರ ಹೊರಗಿರಿಸಲಾಗಿದೆ.ಈ ವ್ಯವಸ್ಥೆ ಕುರಿತಾದ ಹೋರಾಟ, ಪ್ರತಿಭಟನೆಗಳು ಬಹಳ ಹಿಂದೆಯೇ ಆರಂಭವಾಗಿದ್ದು ಇದರ ನೇತೃತ್ವವನ್ನು ಇತ್ತೀಚೆಗೆ ತಾನೆ ಹತ್ಯೆಗೆ ಒಳಗಾದ ಖ್ಯಾತ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ವಹಿಸಿದ್ದರು. ಖ್ಯಾತ ನಟ ಶ್ರೀರಾಮ್‌ ಲಾಗು, ರಾಜಕಾರಣಿ  ಎನ್‌.ಡಿ. ಪಾಟೀಲ್‌ ಇವರ ಜೊತೆಗಿದ್ದ ವಿಚಾರವಾದಿಗಳು. 2000ದಲ್ಲಿ ನಡೆದ ಈ ಪ್ರತಿಭಟನಾ ರ್‍ಯಾಲಿಯ ಫಲ ಫಲಿತವಾಗಿದ್ದು 2011ರಲ್ಲಿ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನದ ಪ್ರವೇಶವನ್ನು ಮಹಿಳೆಯರು ಪಡೆಯುವಲ್ಲಿ. ಈ ಹೋರಾಟದ ಹಿಂದೆ ಇದ್ದವರು ರಾಜ್‌ ಠಾಕ್ರೆ, ಬಿ.ಜೆ.ಪಿ. ಹಾಗೂ ಮಹಾರಾಷ್ಟ್ರದ ನವ ನಿರ್ಮಾಣ ಸೇನೆ. ಪರಸ್ಪರ ವೈಚಾರಿಕ ಹಾಗೂ ರಾಜಕೀಯ ಸಿದ್ಧಾಂತಗಳ ಭೇದವಿದ್ದರೂ 2000 ವರ್ಷಗಳ ಹಳೆಯ ಪಿತೃಪ್ರಧಾನ ವಿಚಾರಧಾರೆ ಬಹುಬೇಗ ಕುಸಿದು ಬಿದ್ದಿತ್ತು.ನಮ್ಮ ಪೂರ್ವದ ಪಿತೃಪ್ರಧಾನ ಹಾಗೂ ಪುರೋಹಿತಶಾಹಿ ವ್ಯವಸ್ಥೆ ಮಹಿಳೆಯರನ್ನು, ದಲಿತರನ್ನು ದೇವಾಲಯದಿಂದ ದೂರವೇ ಇರಿಸಿತ್ತು. ಮುಟ್ಟು, ಸೂತಕಗಳೇ ಕಾರಣವಾಗಿ ದೇವಸ್ಥಾನ, ದರ್ಗಾ, ಯಾವುದೇ ಪ್ರಾರ್ಥನಾ ಸ್ಥಳಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ಹೆಣ್ಣು ಯಾವಾಗ ಬೇಕಾದರೂ ಮುಟ್ಟಿನ ಸೂತಕಕ್ಕೆ ಒಳಗಾಗುವುದರಿಂದ, ಸ್ವಚ್ಛತೆ ಅಸಾಧ್ಯವಾದ್ದರಿಂದ ಈ ಮಿತಿಗಳು ಎಂದು ಹೇಳಿದರೂ ಇದರ ಹಿಂದೆ ಸ್ಪಷ್ಟವಾಗಿ ಇರುವುದು ಅಸಮಾನತೆಯ ಧೋರಣೆಯೇ. ವಿಚಿತ್ರವೆಂದರೆ ಈ ದೇವಾಲಯಕ್ಕೆ 11 ಜನ ಟ್ರಸ್ಟಿಗಳಿದ್ದು ಒಬ್ಬ ಟ್ರಸ್ಟಿಯ ಹೆಸರು ಶಾಲಿನಿ ಲಾಂಡೆ. ಇನ್ನೂ ವಿಚಿತ್ರವೆಂದರೆ ಈ ಟ್ರಸ್ಟ್‌ನ ಅಧ್ಯಕ್ಷ ಸ್ಥಾನದಲ್ಲಿ ಅನಿತ್‌ ಶೇಟಿ ಎಂಬ ಗೃಹಿಣಿಯಿರುವುದು.ಪಾನ್ಸರೆ, ದಾಭೋಲ್ಕರ್‌, ಕರ್ನಾಟಕದ ಕಲಬುರ್ಗಿಯವರು ಅಸಹಿಷ್ಣುತೆಯ ಫಲವಾಗಿ ಜೀವತೆತ್ತವರು. ವೈಚಾರಿಕ ಹಾಗೂ ಧಾರ್ಮಿಕ ಅಸಹಿಷ್ಣುತೆಗಳ ಜೊತೆಗೆ ವರ್ಣವ್ಯವಸ್ಥೆಯೂ ನಮ್ಮನ್ನು ನಿರಂತರವಾಗಿ ಬೇಟೆಯಾಡುತ್ತಿದೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್‌ನ ರೋಹಿತ್‌ ವೇಮುಲನನ್ನೂ ಒಳಗೊಂಡಂತೆ ಈ ಪ್ರಕರಣವೂ ಸೇರಿ ಸಾಬೀತುಪಡಿಸುತ್ತಿರುವುದು ಸಂವಿಧಾನದಲ್ಲಿನ ಹಕ್ಕುಗಳನ್ನು ಪಡೆಯುವಲ್ಲಿ ನಾವು ಪ್ರತಿಕ್ಷಣ ವಿಫಲವಾಗುತ್ತಿರುವುದನ್ನು ಮಾತ್ರ. ಸಂವಿಧಾನದಲ್ಲಿ ಸಮಾನ ಹಕ್ಕು ಪಡೆದಿರುವ ಮಹಿಳೆಗೆ ಲಿಂಗವೇ ಕಾರಣವಾಗಿ ದೇವಸ್ಥಾನಕ್ಕೆ ಏಕೆ ಪ್ರವೇಶ ಸಿಗುತ್ತಿಲ್ಲ? ಈಗ ಈ ಪ್ರಶ್ನೆಯನ್ನು ಕೈಗೆತ್ತಿಕೊಂಡಿರುವುದು ದಾಭೋಲ್ಕರ್‌ ಅವರ ಮಗ ಹಮೀದ್‌ ದಾಭೋಲ್ಕರ್‌ ಹಾಗೂ ರಣರಾಗಿಣಿ ಭೂಮಾತಾ ಬ್ರಿಗೇಡ್‌ ಸಂಘಟನೆಯ ತೃಪ್ತಿ ದೇಸಾಯಿ.ಸುಮಾರು 400 ವರ್ಷಗಳಿಂದ ಮಹಿಳೆಯರನ್ನು ದೂರವಿಟ್ಟಿದ್ದ  ಶನಿದೇವರ ದೇವಸ್ಥಾನದ ಪ್ರವೇಶಕ್ಕೆ ಯತ್ನಿಸಲಾಯಿತು. ಜನವರಿ 26ರಂದು ಈ ಪ್ರಯತ್ನ ಮಾಡಿದ ತೃಪ್ತಿ ಹೇಳುವುದು ಹೆಲಿಕಾಪ್ಟರ್‌ನಿಂದ ಇಳಿದಾದರೂ ಪ್ರವೇಶ ಮಾಡುತ್ತೇವೆ, ಶನಿದೇವರ ಕಟ್ಟೆಯನ್ನು ಹತ್ತುತ್ತೇವೆ ಎಂಬುದಾಗಿ. ಇಲ್ಲಿ ಪ್ರವೇಶವೆಂಬುದು ನಂಬಿಕೆಗಿಂತ ಪ್ರತಿಭಟನೆಯ ಸಂಕೇತವೆಂಬಂತೆ ತೋರುತ್ತದೆ.ಈ ದೇಶದ ರಾಜಕಾರಣದ ಅತಿ ದೊಡ್ಡ ವ್ಯಂಗ್ಯವೆಂದರೆ ತಾನು ಸ್ಥಾನ ಪಡೆಯಲಾರದ ಕಡೆ ತನ್ನ ಹೆಂಡತಿಯನ್ನಾದರೂ ನಿಲ್ಲಿಸಿ ಗೆಲ್ಲುವ ದುರಾಸೆ. ಅಧಿಕಾರ ಅವಳದಾದರೂ ಬಹುತೇಕ ಸಂದರ್ಭಗಳಲ್ಲಿ ಆಕೆ ಗಂಡನ ಕೈಯಲ್ಲಿನ ತೊಗಲು ಬೊಂಬೆಯಾಗಿರುತ್ತಾಳೆ. ಈ ಪ್ರಕರಣದ ಟ್ರಸ್ಟ್‌ನ ಅಧ್ಯಕ್ಷೆ ಮಹಿಳೆಯಾದರೂ ಸ್ವತಃ ಅವಳೇ ಶನಿದೇವನನ್ನು ಕಂಡಿಲ್ಲ. ಆಕೆಯಾದರೂ ಪುರುಷ ರಾಜಕಾರಣದ ಒಂದು ಅಲಂಕೃತ ಬೊಂಬೆಯಷ್ಟೇ. ಈ ಕ್ಷೇತ್ರದ ಸುತ್ತ ಹಬ್ಬಿಸಲಾದ ಪವಾಡಗಳೆಲ್ಲವೂ ಸ್ತ್ರೀ ದ್ವೇಷದಿಂದ ಕೂಡಿದ್ದರೂ ಸ್ತ್ರೀಯರು ಒಪ್ಪಿಕೊಂಡಂತವೇ ಆಗಿರುತ್ತವೆ. ಇವರು ಇದನ್ನು ಹೆಮ್ಮೆಯಿಂದ ಹೇಳುವವರೂ, ಪ್ರವೇಶ ನಿರಾಕರಣೆಯನ್ನು ಒಪ್ಪಿಕೊಂಡವರೂ ಆಗಿದ್ದಾರೆ. ಟ್ರಸ್ಟ್‌ನ ಅಧ್ಯಕ್ಷೆ ಅನಿತ್‌ ಶೇಟಿ ಎಂದೂ ಈ ಪುರೋಹಿತ ಶಾಹಿಗಳ ವಿರುದ್ಧ ಮಾತನಾಡಲಾರದವಳಾಗಿದ್ದಾಳೆ.ಹೆಣ್ಣಿನ ಉಡುಗೆ– ತೊಡುಗೆ, ಅವಳ ನಡವಳಿಕೆ, ಅವಳ ವ್ಯಕ್ತಿತ್ವ ಇವೆಲ್ಲವನ್ನೂ  ಪುರೋಹಿತಶಾಹಿಗಳು ತಾವೇ ರೂಪಿಸಬೇಕು ಎಂಬ ಹಠಕ್ಕೆ ಬಿದ್ದಿರುವುದು ಇಂದಿನ ಎಲ್ಲ ದ್ವಂದ್ವ, ದುರಂತಗಳಿಗೆ ಕಾರಣವಾಗಿದೆ. ಎಲ್ಲ ಕಾಲಕ್ಕೂ ಯಾವುದೇ ಬದಲಾವಣೆ ಬಯಸದ ಯಥಾಸ್ಥಿತಿವಾದಿಗಳು ಇವರಾದ್ದರಿಂದಲೇ ದಾಭೋಲ್ಕರ್‌ ತಮ್ಮ ಜೀವವನ್ನು ತೆರಬೇಕಾಯಿತು. ಈಗ ತೃಪ್ತಿ ದೇಸಾಯಿ ಈ ಸ್ತ್ರೀ ಅಸ್ಮಿತೆಯ ಹೋರಾಟಕ್ಕೆ ನಿಂತಿರುವುದು, ಆಕೆಗೆ ಶಿವಸೇನಾದ ನೀಲಂ ಗೋರೆಯನ್ನು ಒಳಗೊಂಡಂತೆ ಹಲವು ಪ್ರಗತಿಪರ ಸಂಘಟನೆಗಳ ಬೆಂಬಲವಿರುವುದು ಆಶಾದಾಯಕ ಸಂಗತಿಯಾಗಿದೆ.ಎಲ್ಲಿಯವರೆಗೆ ನಂಬುವ, ನಿವೇದಿಸುವ, ನೋಯುವ ಭಕ್ತನಿರುತ್ತಾನೋ ಅಲ್ಲಿಯವರೆಗೆ ಕೃಪಾಕಟಾಕ್ಷ ಬೀರುವ ಶಿಷ್ಟ ದೈವಗಳು ಹಲವು ರೂಪದಲ್ಲಿ, ಆಕಾರದಲ್ಲಿ ಮೈತಳೆಯುತ್ತಲೇ ಇರುತ್ತವೆ. ಗ್ರಾಮವನ್ನು, ಗ್ರಾಮೀಣರನ್ನು ಪೊರೆಯುವ ನಮ್ಮ ಊರಮ್ಮನಂಥ ತಾಯ್ತನದ ಗ್ರಾಮ ದೇವತೆಗಳು ಪಾಪ ಕಕ್ಕಾಬಿಕ್ಕಿಯಾಗಿ ಮೂಲೆ ಸೇರುತ್ತವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.