ಶನಿವಾರ, ಜನವರಿ 18, 2020
26 °C

ಇದೂ ಮಾನವ ಹಕ್ಕು ಉಲ್ಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರೇ ಇಲ್ಲದೆ ಮತ್ತೊಂದು ಮಾನವ ಹಕ್ಕುಗಳ ದಿನಾಚರಣೆ ನಡೆದಿದೆ. ಹಿಂದಿನ ಅಧ್ಯಕ್ಷರ ಅವಧಿ ಮುಗಿದು ಒಂದೂವರೆ ವರ್ಷ ಉರುಳಿದರೂ ಹೊಸ ಅಧ್ಯಕ್ಷರ ನೇಮಕ ಆಗಲಿಲ್ಲ. ಆಯೋಗಕ್ಕೆ ಸಲ್ಲಿಸಲಾದ ಹದಿನೈದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಕೇಳುವವರಿಲ್ಲದೆ ಬಿದ್ದಿವೆ.ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಧಾರ್ಮಿಕ ಅಸಹನೆ, ಮಹಿಳೆಯರ ಮೇಲೆ ದೌರ್ಜನ್ಯ, ದಲಿತರ ಮೇಲೆ ಆಕ್ರಮಣ, ಬಡವರಿಗೆ ಸೇವೆಗಳ ನಿರಾಕರಣೆ, ಮಕ್ಕಳ ಹಕ್ಕುಗಳ ಬಗ್ಗೆ ಅನಾದರ ಸೇರಿ ಮಾನವ ಹಕ್ಕುಗಳ ಉಲ್ಲಂಘನೆಯ ಸ್ವರೂಪ ಮತ್ತು ಪ್ರಮಾಣ ಹೆಚ್ಚುತ್ತಿದೆ. ಈ ದುಷ್ಕೃತ್ಯಗಳ ಅಪರಾಧಿಗಳನ್ನು ಗುರುತಿಸಲು ಮತ್ತು ನಿಯಂತ್ರಣಕ್ಕೆ ತರಲು ಸತತ ಸಕ್ರಿಯವಾಗಿರಬೇಕಾದ ಆಯೋಗಕ್ಕೆ ಅಧ್ಯಕ್ಷರು ಬೇಡವೇ? ಹಿಂದಿನ ಅಧ್ಯಕ್ಷರ ಅವಧಿ ಎಂದು ಮುಗಿಯುತ್ತದೆ ಎನ್ನುವುದು ಸರ್ಕಾರಕ್ಕೆ ಗೊತ್ತೇ ಇರುತ್ತದೆ.ಆದರೂ ಹೈಕೋರ್ಟ್ ನಿರ್ದೇಶನ ನೀಡುವವರೆಗೆ, ಮಾನವ ಹಕ್ಕುಗಳ ಕಾರ್ಯಕರ್ತರು ಒತ್ತಾಯ ತರುವವರೆಗೆ ಅದರ ಬಗ್ಗೆ ತೀರ್ಮಾನ ಮಾಡದಿರುವುದು ಆಳುವ ಸರ್ಕಾರಗಳ ಕಳಕಳಿಯ ಕೊರತೆಯನ್ನು ತೋರಿಸುತ್ತದೆ. ಬೇರೆಯವರಿಂದ ಆಗುವ ಉಲ್ಲಂಘನೆ ಇರಲಿ, ಸರ್ಕಾರದ ಈ ನಿರ್ಲಕ್ಷ್ಯವೇ ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ?ಮಾನವ ಹಕ್ಕುಗಳ ರಕ್ಷಣೆ ಮತ್ತು ಉಲ್ಲಂಘನೆ ತಡೆ ಕುರಿತು ಯುವಜನಾಂಗದಲ್ಲಿ ಜಾಗೃತಿ ಮೂಡಿಸಬೇಕಾದ ಹೊಣೆಗಾರಿಕೆ ನಿರ್ವಹಿಸಬೇಕಾದ ಆಯೋಗಕ್ಕೆ ಅಧ್ಯಕ್ಷರ ನೇಮಕ ಮಾಡುವುದನ್ನೇ ಮರೆತರೆ, ನಿಸ್ಸಂಶಯವಾಗಿ ಅದೊಂದು ಅಮಾನವೀಯ ಸಂದೇಶ ಆಗುತ್ತದೆ. ನ್ಯಾಯಾಲಯ ನಿಂದನೆಯನ್ನು ತಪ್ಪಿಸಿಕೊಳ್ಳಲು ಇನ್ನಾದರೂ ಸರ್ಕಾರ ಸೂಕ್ತ ವ್ಯಕ್ತಿಯನ್ನು ಕೂಡಲೇ ನೇಮಕ ಮಾಡಲಿ.ಆಯೋಗ, ನಿಗಮ, ಮಂಡಲಿ, ಅಕಾಡೆಮಿ ಹೀಗೆ ಎಲ್ಲದರ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳ ನೇಮಕಗಳಿಗೆ ರಾಜಕೀಯದ ಮತ್ತು ಭ್ರಷ್ಟಾಚಾರದ ಸೋಂಕು ಬಡಿದು ಬಹುಕಾಲವಾಯಿತು. ಇದರ ಪರಿಣಾಮವಾಗಿ ಅವುಗಳು ಕೆಲಸ ಮಾಡಲಾಗದೆ ಬಹುಕಾಲ ನಿಷ್ಕ್ರಿಯವಾಗಿರುವುದೂ ಅನಿವಾರ್ಯ­ವಾಯಿತು. ಆ ಸಂಸ್ಥೆಗಳೆಲ್ಲ ತಮ್ಮ ಉದ್ದೇಶವನ್ನು ಮರೆತು ಅರ್ಥ ಕಳೆದುಕೊಂಡಿವೆ. ರಾಜ್ಯ ಮಹಿಳಾ ಆಯೋಗಕ್ಕೆ ಒಬ್ಬ ಅಧ್ಯಕ್ಷರು ಇರುವ ‘ನಿರ್ಭಯ’ ಪರಿಸರ ಯಾವಾಗ ಒದಗುತ್ತದೋ ಗೊತ್ತಿಲ್ಲ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಎಂಬೊಂದು ಪ್ರಮುಖ ಸಾಂಸ್ಕೃತಿಕ ಸಂಸ್ಥೆಗೆ ಅಧ್ಯಕ್ಷರು, ಸದಸ್ಯರಿಲ್ಲದ ‘ಶೂನ್ಯ ಸ್ಥಿತಿ’ಗೆ ಮೊನ್ನೆ ನ. 26 ಕ್ಕೆ ಎರಡನೇ ವಾರ್ಷಿಕೋತ್ಸವ ಆಯಿತು. ಅಂದಹಾಗೆ, ಈ ಎರಡು ವರ್ಷಗಳ ಅವಧಿಯಲ್ಲಿ ನಮ್ಮ ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಗಳ ಆಡಳಿತ ಇತ್ತಲ್ಲವೇ? ಆದರೆ ಯಾರಿಗೂ ಇದು ನೆನಪಿಗೆ ಬರಲಿಲ್ಲ.ಏನನ್ನೂ ಮಾಡದಿರುವುದೇ ಸರ್ಕಾರ ಅನುಸರಿಸುತ್ತಿರುವ ಸಾಂಸ್ಕೃತಿಕ ನೀತಿ ಎಂಬ ಭಾವನೆ ಜನರಲ್ಲಿ  ಮೂಡುವುದು ಬೇಡ. ಈ ಸರ್ಕಾರ ಕೆಲವು ಒಳ್ಳೆಯ ಯೋಜನೆಗಳನ್ನು ರೂಪಿಸಿದೆ. ಈಗ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವ ಒಂದು ಪುರೋಗಾಮಿ ‘ನೇಮಕ ಭಾಗ್ಯ’ ಯೋಜನೆಯನ್ನು ಪ್ರಕಟಿಸಬಾರದೇಕೆ?

ಪ್ರತಿಕ್ರಿಯಿಸಿ (+)