ಸೋಮವಾರ, ಮೇ 16, 2022
28 °C

ಇದ್ದರೂ ಬಳಕೆಯಾಗದ ಹಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲೆಯಲ್ಲಿ ಅಂಗವಿಕಲರ ಪುನರ್ವಸತಿ ಉದ್ದೇಶಗಳಿಗಾಗಿ ಬಳಸಲು 2006-07ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದ್ದ 10 ಲಕ್ಷ ರೂಪಾಯಿ ಇನ್ನೂ ಬಳಕೆಯಾಗದೇ ಉಳಿದಿದೆ. ನಿಯಮಾನುಸಾರ ಯೋಜನೆಯನ್ನು ಕಾರ್ಯಗತ ಗೊಳಿಸಬೇಕಾದ ಸಮಿತಿ ರಚನೆ ಆಗದೇ ಇರುವುದು ಇದಕ್ಕೆ ಕಾರಣ.ಇನ್ನೊಂದೆಡೆ, ಪ್ರಸ್ತುತ 2013-14ನೇ ಹಣಕಾಸು ವರ್ಷದಲ್ಲಿ ಮೂರು ತಿಂಗಳ ಕಾಲಾವಧಿಯು ಈಗಾಗಲೇ ಕಳೆದು ಹೋಗಿದ್ದರೂ, ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಬೇಕಾಗಿರುವ ರೂಪುರೇಷೆ ಇನ್ನು ಸಿದ್ಧವಾಗಿಲ್ಲ.ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರದ (ಡಿಡಿಆರ್‌ಸಿ) ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಅಂಶಗಳೂ ಪ್ರಮುಖವಾಗಿ ಚರ್ಚೆಯಾಯಿತು. ಅಲ್ಲದೆ, ಅಂಗವಿಕಲರಿಗಾಗಿ ಇರುವ ಪುನರ್ವಸತಿ ಕುರಿತ ಕಾರ್ಯಕ್ರಮಗಳ ಜಾರಿ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ರೆಡ್‌ಕ್ರಾಸ್ ಸಂಸ್ಥೆಗೆ ವಹಿಸಲು ಸಭೆಯು ತೀರ್ಮಾನಿಸಿದೆ.ಅಂಗವಿಕಲರಿಗಾಗಿ ಇರುವ ವಿವಿಧ ಸೌಲಭ್ಯ ಒದಗಿಸಲು ನೆರವಾಗುವುದು; ಅರ್ಹ ಫಲಾನುಭವಿಗಳನ್ನು ಗುರುತಿಸಿ ಕೃತಕ ಕೈ, ಕಾಲು ಅಳವಡಿಸಲು ಸಹಕಾರಿ ಆಗುವುದು, ಅಂಗವಿಕಲ ಅಭ್ಯರ್ಥಿಗಳ ಆರೋಗ್ಯ ತಪಾಸಣೆಗಾಗಿ ಶಿಬಿರಗಳನ್ನು ಸಂಘಟಿಸುವುದು ಮತ್ತಿತರ ಕಾರ್ಯಗಳನ್ನು ಈ ಮೇಲ್ವಿಚಾರಣಾ ತಂಡ ನಿರ್ವಹಿಸಬೇಕಾಗಿದೆ.ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಉಳಿದಂತೆ, ಡಿಡಿಪಿಐ, ರೆಡ್‌ಕ್ರಾಸ್ ಪ್ರತಿನಿಧಿ ಸೇರಿ ಏಳು ಮಂದಿ ಸದಸ್ಯರಿರುತ್ತಾರೆ.

ರೆಡ್‌ಕ್ರಾಸ್‌ನಿಂದ ಅಗತ್ಯ ದಾಖಲಾತಿಗಳನ್ನು ಮೇಲ್ವಿಚಾರಣಾ ತಂಡವಾಗಿ ರೆಡ್‌ಕ್ರಾಸ್ ಕಾರ್ಯ ನಿರ್ವಹಣೆಗೆ ಸರ್ಕಾರದ ಅನುಮೋದನೆಯನ್ನು ಪಡೆದ ಬಳಿಕ ಅಧಿಕೃತವಾಗಿ ಅಂಗವಿಕಲ ಪುನರ್ವಸತಿ ಕಾರ್ಯಕ್ರಮಗಳ ಜಾರಿ ಪ್ರಕ್ರಿಯೆಯು ಆರಂಭವಾಗಬೇಕಾಗಿದೆ. ಅಧಿಕಾರಿ ಮೂಲಗಳ ಪ್ರಕಾರ, ಜಿಲ್ಲೆಯಲ್ಲಿ ಸುಮಾರು 35 ಸಾವಿರ ಮಂದಿ ಅಂಗವಿಕಲರು ಇದ್ದಾರೆ ಎಂಬುದು ಅಂದಾಜು. ಈ ಪೈಕಿ ಅಂಗವಿಕಲತೆಯ ಪ್ರಮಾಣಗಳನ್ನು ಆಧರಿಸಿ ಮಾಸಾಶನವನ್ನು ಪಡೆಯುತ್ತಿದ್ದಾರೆ.ಈ ನಡುವೆ, ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯ ವಿವಿಧ ಅಂಗವಿಕಲ ಕಲ್ಯಾಣ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಅಂಗವಿಕಲರ ಸಮಸ್ಯೆಗಳ ಬಗೆಗೆ ಗಮನ ಸೆಳೆದರು ಎಂದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.