ಶನಿವಾರ, ಜನವರಿ 18, 2020
23 °C

ಇನ್ನೂ ಒಬ್ಬ ಮೇಕಪ್ ರಾಮಕೃಷ್ಣ

–ಹೇಮಾ ವೆಂಕಟ್ Updated:

ಅಕ್ಷರ ಗಾತ್ರ : | |

ರಂಗಭೂಮಿಯ ಕಲಾವಿದರಲ್ಲಿ ಮುಂಚೂಣಿಯಲ್ಲಿರುವವರು ಹಿರಿಯ ಮೇಕಪ್ ಕಲಾವಿದ ರಾಮಕೃಷ್ಣ ಕನ್ನರಪಾಡಿ. ಇವರು ಕೇವಲ ಮೇಕಪ್‌ ಕಲಾವಿದರಷ್ಟೇ ಅಲ್ಲ ಒಳ್ಳೆಯ ನಟ. 1978ರಲ್ಲಿ ಬೆಂಗಳೂರು ವಿವಿಯಲ್ಲಿ ನಾಟಕದಲ್ಲಿ ಡಿಪ್ಲೊಮಾ ಮಾಡಿ ರಂಗಭೂಮಿಗೆ ಪದಾರ್ಪಣೆ ಮಾಡಿದ ಇವರನ್ನು ಮೇಕಪ್ ಕ್ಷೇತ್ರಕ್ಕೆ ಕರೆತಂದವರು ಮೇಕಪ್‌ ನಾಣಿ. ಕಳೆದ 35 ವರ್ಷಗಳಿಂದ ರಂಗಭೂಮಿಯ ಮೇಕಪ್‌ ಕಲಾವಿದರಾಗಿ ಗಮನಸೆಳೆದವರು. ಸಿನಿಮಾ, ಕಿರುತೆರೆಗೆ ಒಲ್ಲೆ ಎಂದವರು, ಸಂಪೂರ್ಣವಾಗಿ ರಂಗಭೂಮಿಯನ್ನೇ ಕಾರ್ಯಕ್ಷೇತ್ರ ಮಾಡಿಕೊಂಡವರು.ಒಂದೆಡೆ ನಟನೆ, ಮೇಕಪ್‌ ಹೀಗೆ ದ್ವಿಪಾತ್ರ ನಿರ್ವಹಿಸುತ್ತಿರುವ ರಾಮಕೃಷ್ಣ ಅವರು ‘ಸ್ಪಂದನ’, ‘ಕಲಾಗಂಗೋತ್ರಿ’, ‘ಬೆನಕ’, ‘ನಟರಂಗ’ ಮುಂತಾದ ನಾಟಕ ತಂಡಗಳಿಗೆ ಖಾಯಂ ಕಲಾವಿದ. ಲಕ್ಷ್ಮೀ ಚಂದ್ರಶೇಖರ್‌ ಅವರ ‘ರತ್ನನ್‌ ಪರ್‌ಪಂಚ’, ‘ಸಾಹೇಬರ ಸರ್ಕೀಟು’, ಬಿ.ಜಯಶ್ರೀ ಅವರ ‘ಹ್ಯಾಮ್ಲೆಟ್‌’, ‘ಜೋಕುಮಾರಸ್ವಾಮಿ’, ‘ಸತ್ತವರ ನೆರಳು’ ನಾಟಕಗಳಲ್ಲಿ ನಟಿಸಿದ್ದಾರೆ. ‘ತುಘಲಕ್‌’, ‘ದಂಗೆಯ ಮುಂಚಿನ ದಿನಗಳು’ ಮುಂತಾದ ಹಳೆಯ ನಾಟಕಗಳಲ್ಲಿಯೂ ನಟಿಸಿದ್ದಾರೆ. ಈ ನಾಟಕಗಳಲ್ಲಿ ಕಲಾವಿದರಿಗೆ ಮೇಕಪ್‌ ಕೂಡ ಮಾಡಿದ್ದಾರೆ.ಹಳೆಯ ನಾಟಕಗಳ ಪಾತ್ರಗಳಿಗೆ ಹೊಸ ರೀತಿಯ ಮೇಕಪ್‌ ಮಾಡುವುದು ಇವರ ವೈಶಿಷ್ಟ್ಯ. ತಾವೇ ಮಾಡಿದ ನಾಟಕದ ಪಾತ್ರಗಳಿಗೆ ಅವರು  ಮತ್ತೊಂದು ಪ್ರದರ್ಶನದಲ್ಲಿ ಬೇರೆಯದೇ ರೀತಿಯಲ್ಲಿ ಮೇಕಪ್‌ ಮಾಡುತ್ತಾರಂತೆ. ಇದು ಇವರ ಕ್ರಿಯಾಶೀಲತೆ ತೋರಿಸುತ್ತದೆ. ಮೇಕಪ್‌ನಲ್ಲಿ ತಮ್ಮದೇ ಆದ ಪ್ರಯೋಗಗಳನ್ನು ಮಾಡುತ್ತಾ ಹತ್ತಾರು ಯುವಕರನ್ನು ಅವರು ಈ ಕ್ಷೇತ್ರಕ್ಕೆ ಕರೆತಂದಿದ್ದಾರೆ.

 

ರಂಗಭೂಮಿ ಮತ್ತು ಸಿನಿಮಾದಲ್ಲಿ ಹೆಸರು ಮಾಡಿದ ಮುಖ್ಯಮಂತ್ರಿ ಚಂದ್ರು, ಅವಿನಾಶ್‌, ನಾಗಾಭರಣ,

ಲಕ್ಷ್ಮಿ ಚಂದ್ರಶೇಖರ್, ದತ್ತಣ್ಣ, ಜಿ.ಸೋಮಶೇಖರ್, ಬಿ.ಜಯಶ್ರೀ, ದೇವರಾಜ್‌ ಅವರ ಜೊತೆಗೆ ಕೆಲಸ ಮಾಡಿದವರು.ಮೇಕಪ್‌ಗಾಗಿಯೇ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ, ದೆಹಲಿಯ ಚಮ್ಮನ್‌ಲಾಲ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೃತಕ ಅಂಗಾಂಗ ಜೋಡಣೆ, ಕಾಟನ್‌, ನೈಲಾನ್‌ ಬಟ್ಟೆ, ಬಣ್ಣಗಳನ್ನು ಬಳಸಿ ಮಾಡುವ ಮೇಕಪ್‌ ಇವರ ಹೊಸ ಪ್ರಯೋಗಗಳಿಗೆ ಸಾಕ್ಷಿ. ಇಂಗ್ಲಿಷ್‌ ನಾಟಕವೊಂದಕ್ಕೆ ರಬ್ಬರ್‌ ಹಾಲಿನ ಪದರ ಬಳಸಿ ಮುಖವಾಡ ತಯಾರಿಸಿದ್ದರು. ಹೀಗೆ ಪ್ರತಿ ನಾಟಕದಲ್ಲೂ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ರಾಮಕೃಷ್ಣ ಅವರು ಬೆಮೆಲ್‌ನ ಉದ್ಯೋಗಿ.

ನಾಣಿ ಹಾದಿಯಲ್ಲಿ...

ಮೇಕಪ್‌ ಮಾಡುವವರನ್ನು ಕಲಾವಿದರು ಎಂದು ಕರೆಯುವಂತೆ ಮಾಡಿದವರು ಮೇಕಪ್‌ ನಾಣಿ. ಅವರ ಹಾದಿಯಲ್ಲಿ ಸಾಗಿದ ನಾನು 35 ವರ್ಷಗಳಿಂದ ರಂಗಭೂಮಿಯಲ್ಲಿ ದುಡಿಯುತ್ತಿದ್ದೇನೆ. ನಟನೆಗೆಂದು ತರಬೇತಿ ಪಡೆದು, ನಂತರ ಮೇಕಪ್‌ ಮಾಡುವುದನ್ನೂ ಹವ್ಯಾಸವಾಗಿ ತೆಗೆದುಕೊಂಡಿದ್ದೇನೆ. ಈಗಲೂ ಇಲ್ಲಿ ಹೆಚ್ಚು ಅವಕಾಶವಿದೆ. ಆದರೆ ಸ್ವಲ್ಪ ಕ್ರಿಯೇಟಿವಿಟಿ ಇರಬೇಕು. ಇಲ್ಲಿ ಫಲಿತಾಂಶ ಬೇಗ ಬರುವುದಿಲ್ಲ. ಪ್ರತಿದಿನ ಕಲಿಯಬೇಕು. ಹಾಗಾಗಿ ಯುವಕರು ಮುಂದೆ ಬರುವುದಿಲ್ಲ. ಆದರೂ ನನ್ನ ಬಳಿ ಎಂಟು ಮಂದಿ ತರಬೇತಿ ಪಡೆದ ಯುವಕರಿದ್ದಾರೆ.

ಕಿರುತೆರೆ ಮತ್ತು ಸಿನಿಮಾಗಳು ಕ್ಯಾಮೆರಾದಿಂದ ಮೂಡುವಂಥವು. ಹಾಗಾಗಿ ಅಲ್ಲಿಯ ಮೇಕಪ್‌ ಬೇರೆಯದೇ ರೀತಿ ಇರುತ್ತದೆ. ರಿಯಲಿಸ್ಟಿಕ್‌ ಮೇಕಪ್‌ಗೆ ಅಲ್ಲಿ ಅವಕಾಶ. ರಂಗಭೂಮಿಯ ಮೇಕಪ್‌ ಕೊಡುವ ಖುಷಿ ಅಲ್ಲಿ ಸಿಗುವುದಿಲ್ಲ. ರಂಗಭೂಮಿಯಲ್ಲಿ ನಮ್ಮದೇ ಕಲ್ಪನೆಗೆ ಅವಕಾಶವಿದೆ. ಹಾಗಾಗಿ ನಾನು ರಂಗಭೂಮಿಯಲ್ಲಿ ಮಾತ್ರ ಕೆಲಸ ಮಾಡುತ್ತೇನೆ.

– ರಾಮಕೃಷ್ಣ ಕನ್ನರಪಾಡಿ

ಪ್ರತಿಕ್ರಿಯಿಸಿ (+)