ಗುರುವಾರ , ಜನವರಿ 30, 2020
20 °C
29 ಸುತ್ತು ಗುಂಡು ಹಾರಿಸಿದ ಅರಣ್ಯ ಸಿಬ್ಬಂದಿ , ಇಂದಿನಿಂದ ಆನೆಗಳ ಬಳಕೆ

ಇನ್ನೂ ಸಿಗದ ನರಭಕ್ಷಕ ಹುಲಿ

ಪ್ರಜಾವಾಣಿ ವಾರ್ತೆ/ ಬಿ.ಜೆ. ಧನ್ಯಪ್ರಸಾದ್ Updated:

ಅಕ್ಷರ ಗಾತ್ರ : | |

ಮೈಸೂರು (ಚಿಕ್ಕಬರಗಿ): ಎಚ್‌.ಡಿ. ಕೋಟೆ ತಾಲ್ಲೂಕಿನ ಕಾಡಂಚಿನ ಗ್ರಾಮ ಚಿಕ್ಕಬರಗಿ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯು ಜಿಲ್ಲೆಯಲ್ಲಿ ಒಂಬತ್ತು ದಿನಗಳಲ್ಲಿ ನಾಲ್ವರನ್ನು ಬಲಿ ತೆಗೆದುಕೊಂಡಿರುವ ನರಭಕ್ಷಕ ಹುಲಿಯ ಸೆರೆಗೆ ಡಿ. 5ರಿಂದ ಆನೆಗಳಿಂದ ವಿಶೇಷ ಕಾರ್ಯಾಚರಣೆ ನಡೆಸಲು ಮುಂದಾಗಿದೆ.ಹುಲಿಯ ಅಟ್ಟಹಾಸಕ್ಕೆ ಮಂಗಳ­ವಾರ ಬಲಿ­ಯಾದ ಚಿಕ್ಕಬರಗಿ ಗ್ರಾಮದ ಬಸಪ್ಪ (65) ಅವರ ರಕ್ತಸಿಕ್ತ ರುಂಡ–ಮುಂಡಗಳು ಬುಧ­ವಾರ ಅರಣ್ಯದಲ್ಲಿ ಪತ್ತೆಯಾಗಿವೆ. ಅರಣ್ಯ ಸಿಬ್ಬಂದಿ ಮತ್ತು ಪೊಲೀಸರು ಬುಧವಾರ ಬೆಳಿಗ್ಗೆ 6 ಗಂಟೆ ವೇಳೆಗೆ ‘ಕೂಂಬಿಂಗ್‌’ ಆರಂಭಿಸಿದರು. ಹುಲಿಯು ಶಿವಪ್ಪ ಅವರನ್ನು ಹೊಲದಿಂದ ಹೊತ್ತೊಯ್ದ ಜಾಡು ಹಿಡಿದು ಸಾಗಿದಾಗ ಒಂದು ಪೊದೆ ಬಳಿ ರುಂಡ, ಅನತಿ ದೂರ­ದಲ್ಲಿನ ಮತ್ತೊಂದು ಪೊದೆಯಲ್ಲಿ ಮುಂಡ ಪತ್ತೆ­ಯಾ­ಗಿದೆ. ಜಮೀನನ ಅಂಚಿನ ದಂಡೆಯಲ್ಲಿ ಚಪ್ಪಲಿ ಸಿಕ್ಕಿದೆ. ಬುಧವಾರ ಬೆಳಿಗ್ಗೆ 7.30ರ ವೇಳೆಗೆ ಸನಿಹ­ದಲ್ಲಿ ಹುಲಿಯು ಗರ್ಜಿಸಿದ ಶಬ್ದ ಕೇಳಿದ ತಕ್ಷಣವೇ ಕಾರ್ಯಾಚರಣೆ ಸಿಬ್ಬಂದಿ 29 ಸುತ್ತು ಗುಂಡುಗಳನ್ನು ಹಾರಿಸಿತು.ವ್ಯಕ್ತಿಯನ್ನು ಗುರುತಿಸಲು ಸಾಧ್ಯವಿಲ್ಲ­ದಂತೆ ದೇಹ­ವನ್ನು ವಿಕಾರಗೊಳಿಸಿರುವ ಹುಲಿಯು ರುಂಡವನ್ನು ಬೇರ್ಪಡಿಸಿ ಮಾಂಸವನ್ನು ಕಬಳಿಸಿದೆ. ಬಲ ತೊಡೆಯ ಮಾಂಸವನ್ನು ಭಕ್ಷಿಸಿ ಆ ಕಾಲನ್ನು ಪ್ರತ್ಯೇಕ­ಗೊಳಿಸಿದೆ. ಶರೀರದ ಮೇಲಿನ ಬಟ್ಟೆ ಕಾಲಿನ ಬೆರಳು ಆಧರಿಸಿ ವ್ಯಕ್ತಿಯನ್ನು ಗುರುತಿಸಲಾಗಿದೆ. ರುಂಡ­ವನ್ನು ಮತ್ತೊಂದು ಕಡೆಗೆ ಒಯ್ದು ಮುಖವನ್ನು ಪೂರ್ಣ­ವಾಗಿ ತಿಂದು, ತಲೆಬುರುಡೆ ಮಾತ್ರ ಉಳಿಸಿದೆ. ಹುಲಿಯ ದೇಹವನ್ನು ಎಳೆದಾಡಿದ ಜಾಗದಲ್ಲಿ ರಕ್ತದ ಕಲೆಗಳು ಅಂಟಿಕೊಂಡಿವೆ.

‘ಮೂವರು ಬಲಿಯಾಗಿರುವುದು ಗೊತ್ತಿದ್ದರೂ ಅರಣ್ಯ ಇಲಾಖೆ ಡಿ. 2 ರಂದು ಹುಲಿ ಬೇಟೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ ಮತ್ತೊಬ್ಬ ಬಲಿ­ಯಾಗ­ಬೇಕಾಯಿತು. ಇದು ಇಲಾಖೆಯ ವೈಫಲ್ಯ­ವಾಗಿದೆ’  ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಖರೆ, ದಕ್ಷಿಣ ವಲಯ ಐಜಿ ಡಾ.ರಾಮ­ಚಂದ್ರರಾವ್‌, ಬಂಡೀಪುರ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಎಚ್‌.ಸಿ. ಕಾಂತರಾಜು, ಅರಣ್ಯ ಅಧಿಕಾರಿ ರವಿಕುಮಾರ್‌, ರೇಂಜರ್‌ ಗಿರೀಶ್‌ ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಭೆಗಳನ್ನು ನಡೆಸಿ, ಕೆರಳಿದ ಗ್ರಾಮಸ್ಥರನ್ನು ಮನವೊಲಿಸುವ ಕಾರ್ಯದಲ್ಲಿ ಸಂಜೆ ವೇಳೆಗೆ ಸಫಲರಾದರು.ಮೃತನ ಕುಟುಂಬದವರಿಗೆ ಪರಿಹಾರ ನೀಡು­ವುದಷ್ಟೇ ಅಲ್ಲ, ಮುಂದೆಂದೂ ಇಂಥ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು  ಕೈಗೊಳ್ಳ­ಲೇಬೇಕು. ಪುನಃ ಇಂಥ ಘಟನೆ ನಡೆದರೆ ಅಧಿಕಾ­ರಿ­ಗಳಿಗೆ ಬಿಸಿ ಮುಟ್ಟಿಸಬೇಕಾ­ಗುತ್ತದೆ ಎಂದೂ ಗ್ರಾಮ­ಸ್ಥರು ಎಚ್ಚರಿಸಿದರು.ಎರಡು ಕಡೆ ಬೋನು: ಪರಿಸ್ಥಿತಿ ತಹಬದಿಗೆ ಬಂದ ನಂತರ ನಿರೀಕ್ಷಣಾ ಮಂದಿರದ ಬಳಿ ಮುಖಂಡರು ಮತ್ತು ಗ್ರಾಮಸ್ಥರ ಸಭೆ ನಡೆಸಲಾಯಿತು. ಅರಣ್ಯ ಸಂರಕ್ಷಣಾ­ಧಿಕಾರಿ ಎಚ್‌.ಸಿ. ಕಾಂತರಾಜು ಮಾತ­ನಾಡಿ, ಹುಲಿ ಸೆರೆಗೆ ಅರಣ್ಯದಲ್ಲಿ 10 ಕಡೆ ಕ್ಯಾಮೆ­ರಾಗಳನ್ನು ಅಳವಡಿಸ­ಲಾಗಿದೆ. ಈ ಹುಲಿಗೆ ವಯಸ್ಸಾ­ಗಿದ್ದು, ಇದಕ್ಕೆ ಕಾಡು ಪ್ರಾಣಿಗಳನ್ನು ಬೇಟೆ­ಯಾ­ಡುವುದು ಕಷ್ಟವಾಗಿದೆ.ಅಲ್ಲದೇ, ಈಚೆಗೆ ಅರಣ್ಯ­ದೊಳಕ್ಕೆ ಗ್ರಾಮಗಳಿಂದ ರಾಸುಗಳು ಬರು­ವುದು ಕ್ಷೀಣಿಸಿದ್ದು, ಈ ಹುಲಿ ಮನುಷ್ಯರನ್ನು ತಿನ್ನಲು ಆರಂಭಿ­ಸಿದೆ. ಈ ಹುಲಿ ಕಾಡಿನ ಅಂಚಿನಲ್ಲಿ ಸಂಚರಿಸುತ್ತಿರುವ ಸಾಧ್ಯತೆ ಇರುವುದ­ರಿಂದ ಕ್ಯಾಮೆರಾ ಕಣ್ಣಿಗೆ ಬಿದ್ದಿಲ್ಲ. ಎರಡು ಕಡೆ ಬೋನುಗಳನ್ನೂ ಇಡಲಾಗಿದೆ ಎಂದು ಹೇಳಿದರು.ಮೃತನ ಕುಟುಂಬಕ್ಕೆ ₨ 5 ಲಕ್ಷ ಪರಿಹಾರ, ಕುಟುಂಬದ ಸದಸ್ಯರೊಬ್ಬರಿಗೆ ಅರಣ್ಯ ಇಲಾಖೆಯಲ್ಲಿ ಹಂಗಾಮಿ ನೌಕರಿ ನೀಡಲಾಗುವುದು ಎಂದ ಅವರು, ಸ್ಥಳದಲ್ಲೇ ಒಂದು ಲಕ್ಷ ರೂಪಾಯಿ ಚೆಕ್‌ ವಿತರಿಸಿದರು.ನ. 26ರಂದು ಎಚ್‌.ಡಿ. ಕೋಟೆ ತಾಲ್ಲೂಕಿನ ಬಂಡೀಪುರ ಕಾಡಿನಂಚಿನ ನಡಹಾಡಿಯಲ್ಲಿ ಬಸವ­ರಾಜು, 29­ರಂದು ಸೀಗೆವಾಡಿ ಹಾಡಿಯಲ್ಲಿ ಚೆಲುವ, 30ರಂದು ನಾಗರಹೊಳೆಯ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಅರಣ್ಯ ರಕ್ಷಕ ಸುರೇಶ್‌ ಅವರು ಹುಲಿಗೆ ಆಹಾರವಾಗಿದ್ದರು.ನರಭಕ್ಷಕ ಹುಲಿ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಮೀನ–ಮೇಷ ಎಣಿಸುತ್ತಿದೆ ಎಂದು ಆಕ್ರೋಶಗೊಂಡಿದ್ದ ಗ್ರಾಮಸ್ಥರು ಮಂಗಳವಾರ ಸಂಜೆಯೇ ಗ್ರಾಮದಲ್ಲಿನ ಅರಣ್ಯ ಇಲಾಖೆಯ ವಾಹನಗಳು, ನಿರೀಕ್ಷಣಾ ಗೃಹಗಳನ್ನು ಧ್ವಂಸಗೊಳಿಸಿದ್ದರು.ಗುಂಡೇಟಿಗೆ ಕಾಡಾನೆ ಬಲಿ

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ತಿತಿಮತಿ ಬಾಳುಮನೆ ಎಸ್ಟೇಟ್‌ನಲ್ಲಿ ಮಂಗಳವಾರ ದುಷ್ಕರ್ಮಿಗಳಿಂದ ಗುಂಡೇಟು ತಿಂದು ನರಳುತ್ತಿದ್ದ 65 ವರ್ಷದ ಗಂಡು ಕಾಡಾನೆ ಬುಧವಾರ ಸಾವನ್ನಪ್ಪಿದೆ.   

ಅದನ್ನುಬದುಕಿಸಲು ಅರಣ್ಯಾಧಿಕಾರಿಗಳು ಮಂಗಳವಾರ ಇಡೀ ದಿನ ನಡೆಸಿದ ಪ್ರಯತ್ನ ವ್ಯರ್ಥವಾಯಿತು.

ಪ್ರತಿಕ್ರಿಯಿಸಿ (+)