ಶನಿವಾರ, ಫೆಬ್ರವರಿ 27, 2021
31 °C
ಪರಮಾಣು ಒಪ್ಪಂದದ ಜಾರಿಯಲ್ಲಿ ಬದ್ಧತೆ

ಇರಾನ್‌ ಮೇಲಿನ ನಿರ್ಬಂಧ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇರಾನ್‌ ಮೇಲಿನ ನಿರ್ಬಂಧ ತೆರವು

ವಾಷಿಂಗ್ಟನ್/ವಿಯೆನ್ನಾ (ಪಿಟಿಐ): ಅಣ್ವಸ್ತ್ರಗಳ ಅಭಿವೃದ್ಧಿಯನ್ನು ತಡೆಯುವ ಮಹತ್ವದ ಒಪ್ಪಂದಕ್ಕೆ ಇರಾನ್‌ ಬದ್ಧವಾಗಿದೆ ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಮಿತಿ ದೃಢಪಡಿಸಿರುವುದರಿಂದ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಇರಾನ್‌ ಮೇಲಿನ ನಿರ್ಬಂಧಗಳನ್ನು ಭಾನುವಾರ ತೆಗೆದುಹಾಕಿವೆ.ಇರಾನ್‌, ತನ್ನ ಎಲ್ಲಾ ಭರವಸೆಗಳನ್ನೂ ಸಂಪೂರ್ಣವಾಗಿ ಈಡೇರಿಸಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಇಂಧನ ಸಮಿತಿ (ಐಎಇಎ) ಪ್ರಮಾಣೀಕರಿಸಿದೆ.ಇರಾನ್‌ ಮೇಲಿನ ಕೆಲವು ಆರ್ಥಿಕ ದಿಗ್ಬಂಧನೆಗಳನ್ನು ತೆಗೆದುಹಾಕುವ ಆದೇಶಕ್ಕೆ ಅಧ್ಯಕ್ಷ ಬರಾಕ್ ಒಬಾಮ ಅವರು ಸಹಿ ಹಾಕಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.‘ಸಹಿ ಹಾಕಿದ ಒಪ್ಪಂದಗಳಿಗೆ ಬದ್ಧವಾಗಿರಲು ಇರಾನ್‌ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು ವಿಯೆನ್ನಾದಲ್ಲಿ ಹೇಳಿದ್ದಾರೆ.ಹೀಗಾಗಿ ಅಮೆರಿಕದ ನಿರ್ಬಂಧ ಸಂಬಂಧಿತ ಒಪ್ಪಂದಗಳು ಜಾರಿಗೆ ಬರಲಿವೆ ಎಂದ ಕೆರಿ, ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುತ್ತಿರುವುದಾಗಿ ಪ್ರಕಟಿಸಿದರು.ಇನ್ನು ಮುಂದೆ ಅಣ್ವಸ್ತ್ರ ಹೊಂದಿರುವ ಇರಾನ್‌ನ ಬೆದರಿಕೆ ಇಲ್ಲದೆಯೇ ಅಂತರರಾಷ್ಟ್ರೀಯ ಸಮುದಾಯವು ಆ ದೇಶದೊಂದಿಗೆ ವ್ಯವಹರಿಸಬಹುದು ಎಂದು ಕೆರಿ ಹೇಳಿದ್ದಾರೆ.‘ಇರಾನ್‌ನ ಪರಮಾಣು ಯೋಜನೆಗಳನ್ನು ವಿರೋಧಿಸಿ ಅದರ ಮೇಲೆ ಹೇರಲಾಗಿದ್ದ ಬಹುಪಕ್ಷೀಯ ಮತ್ತು ಆರ್ಥಿಕ ಹಾಗೂ ಹಣಕಾಸು ದಿಗ್ಬಂಧನಗಳನ್ನು ತೆಗೆದುಹಾಕಲಾಗಿದೆ’ ಎಂದು ಇರಾನ್‌ ವಿದೇಶಾಂಗ ಸಚಿವ ಜಾವಾದ್‌ ಜರೀಫ್‌ ಮತ್ತು ಆರು ಶಕ್ತಿ ದೇಶಗಳ ಪ್ರತಿನಿಧಿ, ಯುರೋಪ್ ವಿದೇಶಾಂಗ ನೀತಿ ಮುಖ್ಯಸ್ಥೆ ಫೆಡರಿಕಾ ಮೊಘೆರಿನಿ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.‘ಈ ಸಾಧನೆಯು, ರಾಜಕೀಯ ಇಚ್ಛಾಶಕ್ತಿ, ದೃಢನಿರ್ಧಾರ ಮತ್ತು ಬಹುರಾಷ್ಟ್ರೀಯ ರಾಜತಾಂತ್ರಿಕತೆಗಳ ಮೂಲಕ ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದನ್ನು ಸಾಬೀತುಪಡಿಸಿದೆ’ ಎಂದು ಫೆಡರಿಕಾ ಹೇಳಿದರು.ನಿರ್ಬಂಧ ಸಡಿಲಿಕೆಯು ಕೋಟ್ಯಂತರ ರೂಪಾಯಿ ಮೌಲ್ಯದ ಸಂಪನ್ಮೂಲಗಳ ಹರಿವಿಗೆ ಅವಕಾಶ ನೀಡಲಿದೆ. ಈ ಮೂಲಕ ಇರಾನ್‌, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮಾರಾಟಕ್ಕೆ ಅನುಮತಿ ಪಡೆದುಕೊಂಡಿದೆ. ಜಾಗತಿಕ ವ್ಯವಸ್ಥೆಯೊಳಗೆ ಇರಾನ್‌ ಬ್ಯಾಂಕ್‌ ಜಾಲ ಮರುಸಂಪರ್ಕ ಪಡೆದುಕೊಳ್ಳಲಿದೆ.ಕೈದಿಗಳ ವಿನಿಮಯ: ಇದರ ಬೆನ್ನಲ್ಲೇ ಇರಾನ್‌ ಮತ್ತು ಅಮೆರಿಕಗಳ ನಡುವೆ ಕೈದಿಗಳ ವಿನಿಮಯವೂ ನಡೆದಿದೆ. ತನ್ನ ಬಂಧನದಲ್ಲಿದ್ದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ವರದಿಗಾರ ಸೇರಿದಂತೆ ನಾಲ್ವರನ್ನು ಇರಾನ್‌ ಬಿಡುಗಡೆ ಮಾಡಿದೆ. ಪ್ರತಿಯಾಗಿ, ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಉಳಿದಿದ್ದ ಏಳು ಇರಾನಿ ಕೈದಿಗಳನ್ನು ಅಮೆರಿಕ ಬಂಧಮುಕ್ತಗೊಳಿಸಿದೆ. ಜತೆಗೆ 14 ಇರಾನಿ ಪ್ರಜೆಗಳ ವಿರುದ್ಧ ಹೊರಡಿಸಿದ್ದ ಇಂಟರ್‌ಪೋಲ್ ರೆಡ್‌ ನೋಟಿಸ್‌ಗಳನ್ನೂ ಅಮೆರಿಕ ರದ್ದುಗೊಳಿಸಿದೆ.ವಿಶ್ವಸಂಸ್ಥೆ ಸ್ವಾಗತ: ಇರಾನ್‌ ಮೇಲಿನ ದಿಗ್ಬಂಧನಗಳನ್ನು ತೆರವುಗೊಳಿಸಿದ ಬೆಳವಣಿಗೆಯನ್ನು ವಿಶ್ವಸಂಸ್ಥೆ ಸ್ವಾಗತಿಸಿದೆ.

ನಿರ್ಬಂಧ ತೆರವು ಮತ್ತು ಕೈದಿಗಳ ವಿನಿಮಯದ ಚಟುವಟಿಕೆಗಳು ಅಮೆರಿಕ ಮತ್ತು ಇರಾನ್‌ ದೇಶಗಳ ನಡುವಣ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರ ವಕ್ತಾರರು ಹೇಳಿಕೆಯಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.ಮೈಲಿಗಲ್ಲು; ಬಣ್ಣನೆ: ಇರಾನ್‌ ಪರಮಾಣು ಒಪ್ಪಂದ ಅನುಷ್ಠಾನಗೊಳಿಸಿರುವುದನ್ನು ‘ಮೈಲಿಗಲ್ಲು’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್ ಅವರು ಬಣ್ಣಿಸಿದ್ದಾರೆ.‘ಇರಾನ್‌ನ ಅಣು ಒಪ್ಪಂದದ ಅನುಷ್ಠಾನ ಆ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಸದೃಢಗೊಳಿಸ ಲಿದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಐಎಇಎ ವರದಿ

ಇರಾನ್‌, ಶೇ 98ರಷ್ಟು ಇಂಧನವನ್ನು ರಷ್ಯಾಕ್ಕೆ ರವಾನಿಸಿದೆ. ಇನ್ನು ಮುಂದೆ ಯುರೇನಿಯಂ ಬಳಕೆ ಮಾಡುವ ಅವಕಾಶ ಇಲ್ಲದಿರುವುದರಿಂದ ಸುಮಾರು 12 ಸಾವಿರ ಯಂತ್ರಗಳನ್ನು ನಾಶಪಡಿಸಿದೆ.  ಅಲ್ಲದೆ, ಪ್ಲುಟೋನಿಯಂ ಉತ್ಪಾದನೆಗಾಗಿ ನಿರ್ಮಿಸಲಾಗಿದ್ದ ಅಪಾರ ಪ್ರಮಾಣದ ರಿಯಾಕ್ಟರ್‌ಗಳಿಗೆ ಸಿಮೆಂಟ್‌ ಸುರಿದು ಮುಚ್ಚಿದೆ ಎಂದು ಐಎಇಎ ತನ್ನ ವರದಿಯಲ್ಲಿ ತಿಳಿಸಿದೆ.ಬಾಂಧವ್ಯದ ಹೊಸ ಶಕೆ

ಟೆಹರಾನ್ (ಎಎಫ್‌ಪಿ)
: ಜಾಗತಿಕ ದೇಶಗಳೊಂದಿಗಿನ ಇರಾನ್‌ನ ಸಂಬಂಧದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಎಂದು ಇರಾನ್‌ನ ಅಧ್ಯಕ್ಷ ಹಸನ್‌ ರೌಹಾನಿ ಭಾನುವಾರ ಹೇಳಿದ್ದಾರೆ.

‘ನಾವು ಇರಾನಿಯನ್ನರು ಹಗೆತನ, ಸಂಶಯ ಮತ್ತು ಸಂಚಿನ ಉದ್ದೇಶಗಳನ್ನು ಹಿಂದಕ್ಕೆ ತಳ್ಳಿ ಸ್ನೇಹದ ಹೊಸ ಸಂಕೇತದೊಂದಿಗೆ ಜಗತ್ತಿಗೆ ಮುಂದಡಿಯಿಡುತ್ತಿದ್ದೇವೆ. ಜಗತ್ತಿನೊಂದಿಗಿನ ಇರಾನ್‌ನ ಬಾಂಧವ್ಯದ ನೂತನ ಅಧ್ಯಾಯವನ್ನು ತೆರೆದಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.