ಶನಿವಾರ, ಸೆಪ್ಟೆಂಬರ್ 26, 2020
21 °C

ಇಲಾಖಾ ವರದಿ ಸಲ್ಲಿಸುವಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಲಾಖಾ ವರದಿ ಸಲ್ಲಿಸುವಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ

ಬೆಂಗಳೂರು: ವಾರ್ಷಿಕ ಆಡಳಿತ ವರದಿ ಸಲ್ಲಿಸದ ಮೂರು ಇಲಾಖೆಗಳು ಮತ್ತು ಬಜೆಟ್ ಅನುಷ್ಠಾನ ವರದಿ ಸಲ್ಲಿಸದ ಎಂಟು ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ವಿಧಾನಸಭೆಯ ಅಧ್ಯಕ್ಷ ಕೆ.ಜಿ.ಬೋಪಯ್ಯ ಶುಕ್ರವಾರ ಸರ್ಕಾರಕ್ಕೆ ಸೂಚನೆ ನೀಡಿದರು.ಬಜೆಟ್ ಮೇಲಿನ ಚರ್ಚೆಯನ್ನು ಶುಕ್ರವಾರ ಸಂಜೆಯೊಳಗೆ ಪೂರ್ಣಗೊಳಿಸಿ, ಧನವಿನಿಯೋಗ ಮಸೂದೆಗೆ ಒಪ್ಪಿಗೆ ಪಡೆಯಲು ಸರ್ಕಾರ ಮುಂದಾಗಿತ್ತು. ಈ ಕಾರ್ಯಸೂಚಿಯನ್ನು ವಿರೋಧಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇಡೀ ದಿನ ಚರ್ಚೆಗೆ ಅವಕಾಶ ನೀಡಿ ಸೋಮವಾರ ಬಜೆಟ್‌ಗೆ ಒಪ್ಪಿಗೆ ಪಡೆಯುವಂತೆ ಒತ್ತಾಯಿಸಿದರು.`ಹಿಂದೆ ಕಡಿಮೆ ಮೊತ್ತದ ಬಜೆಟ್ ಇರುವಾಗಲೇ 15 ದಿನಗಳ ಕಾಲ ಚರ್ಚೆ ನಡೆಸಲಾಗುತ್ತಿತ್ತು. ಬಜೆಟ್ ಕುರಿತು ಕನಿಷ್ಠ 15 ದಿನಕ್ಕೆ ಕಡಿಮೆ ಆಗದಂತೆ ಚರ್ಚೆಗೆ ಅವಕಾಶ ನೀಡಬೇಕು ಎಂಬುದು ಸದನದ ನಿಯಮಾವಳಿಗಳಲ್ಲೇ ಇದೆ. ಕೆಲ ವರ್ಷಗಳ ಹಿಂದೆ ವಿಷಯ ಸಮಿತಿಗಳಲ್ಲಿ ದೀರ್ಘ ಚರ್ಚೆ ನಡೆಯುತ್ತಿತ್ತು. ಈಗ ಆ ವ್ಯವಸ್ಥೆ ಇಲ್ಲ. ಬೇಡಿಕೆಗಳ ಮೇಲೆ ಮಾತ್ರ ಚರ್ಚೆಗೆ ಅವಕಾಶ ಇದೆ. 1.03 ಲಕ್ಷ ಕೋಟಿ ರೂಪಾಯಿ ಬಜೆಟ್ ಬಗ್ಗೆ ಚರ್ಚೆಗೆ ಅವಕಾಶವನ್ನೇ ನೀಡದಿದ್ದರೆ ಹೇಗೆ~ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಆದರೆ, ಪ್ರತಿಪಕ್ಷ ನಾಯಕರ ಬೇಡಿಕೆಯನ್ನು ಒಪ್ಪದ ಆಡಳಿತ ಪಕ್ಷದ ಸದಸ್ಯರು, ಶುಕ್ರವಾರವೇ ಚರ್ಚೆ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಆಗ, `ಹೇಗೆ ಚರ್ಚೆ ಮಾಡುವುದು. ಎಂಟು ಇಲಾಖೆಗಳ ವಾರ್ಷಿಕ ನಿರ್ವಹಣಾ ವರದಿ ಮತ್ತು 13 ಇಲಾಖೆಗಳ ಬಜೆಟ್ ಅನುಷ್ಠಾನ ವರದಿಯನ್ನು ಈವರೆಗೂ ಸದನದಲ್ಲಿ ಮಂಡಿಸಿಲ್ಲ. ನಾವು ಅವುಗಳ ಆಧಾರದಲ್ಲೇ ಚರ್ಚೆ ನಡೆಸಬೇಕಲ್ಲವೇ?~ ಎಂದು ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದರು.`ಎರಡು ದಿನಗಳ ಕಾಲ ವರದಿಗಳಿಲ್ಲದೇ ಚರ್ಚೆ ನಡೆದಿದೆ. ಈಗ ವರದಿಯನ್ನೇ ಕಾಯುವುದು ಬೇಡ. ಚರ್ಚೆ ಮುಂದುವರಿಸಿ~ ಎಂದು ಉಪ ಮುಖ್ಯಮಂತ್ರಿ ಆರ್.ಅಶೋಕ ಮತ್ತು ಸಚಿವ ಬಸವರಾಜ ಬೊಮ್ಮಾಯಿ ಮಡಿಕೊಂಡ ಮನವಿಯನ್ನು ಸಿದ್ದರಾಮಯ್ಯ, ಜೆಡಿಎಸ್‌ನ ಎಚ್.ಕೆ.ಕುಮಾರಸ್ವಾಮಿ ತಳ್ಳಿ ಹಾಕಿದರು. ಸರ್ಕಾರದ ನಿಲುವನ್ನು ವಿರೋಧಿಸಿ ಸ್ಪೀಕರ್ ಪೀಠದ ಎದುರು ಧರಣಿ ಆರಂಭಿಸಿದರು.ಪಟ್ಟು ಸಡಿಲಿಸದ ಸಿದ್ದರಾಮಯ್ಯ, `ಸಚಿವರು ಮತ್ತು ಅಧಿಕಾರಿಗಳು ಸದನಕ್ಕೆ ಗೌರವ ನೀಡುತ್ತಿಲ್ಲ. ವಾರ್ಷಿಕ ವರದಿಗಳನ್ನು ಸದನದಲ್ಲಿ ಮಂಡಿಸದೇ ಇರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಇಂತಹ ಸಚಿವರು, ಇಲಾಖೆಗಳ ಮುಖ್ಯಸ್ಥರ ಸ್ಥಾನದಲ್ಲಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ~ ಎಂದರು.ಬಿಎಸ್‌ವೈ ಬೆಂಬಲ:
ಪ್ರತಿಪಕ್ಷ ನಾಯಕರ ಬೆಂಬಲಕ್ಕೆ ನಿಂತ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, `ಸಿದ್ದರಾಮಯ್ಯ ಅವರ ಅಭಿಪ್ರಾಯ ಸರಿಯಾಗಿಯೇ ಇದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಈ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೂ, ನೀವು (ಸಿದ್ದರಾಮಯ್ಯ) ಅನುಭವಿಗಳು. ಕಡಿಮೆ ಅವಧಿಯಲ್ಲಿ ಹೆಚ್ಚು ವಿಷಯಗಳ ಮೇಲೆ ಬೆಳಕು ಚೆಲ್ಲುವ ಸಾಮರ್ಥ್ಯ ನಿಮಗಿದೆ. ಈಗ ಚರ್ಚೆ ಮಾಡಿ~ ಎಂದರು.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು, ವಿರೋಧ ಪಕ್ಷಗಳ ಸದಸ್ಯರ ಮನವೊಲಿಕೆಗೆ ಪ್ರಯತ್ನಿಸಿದರು. ಒಂದು ಗಂಟೆಯೊಳಗೆ ವರದಿ ಮಂಡಿಸುವ ಭರವಸೆ ನೀಡಿದರು. 11 ಇಲಾಖೆಗಳ ವರದಿ ಮಾತ್ರ ಮಂಡನೆಗೆ ಬಾಕಿ ಇದೆ ಎಂಬ ಮಾಹಿತಿಯನ್ನೂ ಒದಗಿಸಿದರು. ಆದರೂ ವಿರೋಧ ಪಕ್ಷಗಳ ಸದಸ್ಯರು ಧರಣಿ ಕೈಬಿಡಲಿಲ್ಲ.ನಂತರ ಮಧ್ಯ ಪ್ರವೇಶಿಸಿದ ಸ್ಪೀಕರ್, `ವರದಿ ಮಂಡಿಸದೇ ಇರುವ ಇಲಾಖಾ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿ, ವಿವರಣೆ ಕೇಳಿ. ಉದ್ದೇಶಪೂರ್ವಕವಾಗಿ ಕರ್ತವ್ಯನಿರ್ಲಕ್ಷ್ಯ ಪತ್ತೆಯಾದರೆ, ಅಂತಹವರ ವಿರುದ್ಧ ಕ್ರಮ ಜರುಗಿಸಿ~ ಎಂದು ಸರ್ಕಾರಕ್ಕೆ ಸೂಚನೆ ನೀಡಿದರು. ಸರ್ಕಾರ ಸ್ಪೀಕರ್ ಸೂಚನೆಯಂತೆ ಕ್ರಮ ಜರುಗಿಸುವ ಭರವಸೆ ನೀಡಿತು. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಧರಣಿ ಹಿಂದಕ್ಕೆ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.