ಗುರುವಾರ , ಮೇ 26, 2022
31 °C

ಇಲಾಖೆ ಸ್ಥಳಾಂತರಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಪಟ್ಟಣದ ಎಂ.ಜಿ.ರಸ್ತೆ ವಿಸ್ತರಣೆ ಸಮಯದಲ್ಲಿ ಜಾಗ ಕಳೆದುಕೊಂಡ ಸಂತ್ರಸ್ತರಿಗೆ ನಿವೇಶನ ನೀಡುವ ನೆಪದಲ್ಲಿ ಹತ್ತಾರು ವರ್ಷಗಳಿಂದ ಪೇಟೆ ಕೆರೆಯಲ್ಲಿರುವ ಎಪಿಎಂಸಿ ಹಾಗೂ ತೋಟಗಾರಿಕೆ ಇಲಾಖೆಯನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬೂದಿಗುಪ್ಪೆ ಸಂಪತ್ ಆರೋಪಿಸಿದರು.ಈ ಕುರಿತು ಸೋಮವಾರ  ಪೇಟೆಕೆರೆಯಲ್ಲಿ ಕರೆಯಲಾಗಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿ, ರಸ್ತೆ ವಿಸ್ತರಣೆಯಲ್ಲಿ  ಸ್ಥಳ ಕಳೆದುಕೊಂಡ ಸಂತ್ರಸ್ಥರಿಗೆ ಪರ್ಯಾಯ ಸ್ಥಳ ನೀಡುವ ಕುರಿತು ರೈತ ಸಂಘ ವಿರೋಧಿಸಿಲ್ಲ. ಆದರೆ ತಾಲ್ಲೂಕಿನ ರೈತರಿಗೆ ಉಪಯೋಗವಾಗುವ ಹಾಗೂ ಸೂಕ್ತ ಸ್ಥಳದಲ್ಲಿರುವ ಈ ಇಲಾಖೆಗಳ ಜಾಗವನ್ನು ಬದಲಾಯಿಸಬಾರದು. ಒಂದು ಪಕ್ಷ ಸ್ಥಳಾಂತರಿಸಿದರೆ, ಈ ಪೇಟೆಕೆರೆಯ ವ್ಯಾಪ್ತಿಯಲ್ಲಿ ಜಾಗ ನೀಡಬೇಕೆಂದು ಒತ್ತಾಯಿಸಿದರು. ತಾಲ್ಲೂಕಿನಲ್ಲಿ ಶಾಸಕರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇಡೀ ವ್ಯವಸ್ಥೆಯನ್ನೇ ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಅಧಿಕಾರಿವರ್ಗದವರಿಂದ ಏಕಪಕ್ಷೀಯವಾಗಿ ಕೆಲಸ ಮಾಡಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನ ಬೆಂಬಲಿಗರಿಗೆ ಹೊರತು ಪಡಿಸಿ ಉಳಿದಂತ ಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ~ ಎಂದು ಅವರು ಕಿಡಿ ಕಾರಿದರು.  ವರ್ತಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಈ ಹಿಂದೆ ಶಾಸಕರಾಗಿದ್ದ ಪಿ.ಜಿ.ಆರ್.ಸಿಂಧ್ಯಾ ಅವರು ದೂರದೃಷ್ಟಿಯ ಫಲವಾಗಿ ರೈತರಿಗೆ ಹಾಗೂ ಜನರ ಅನುಕೂಲಕ್ಕಾಗಿ  36 ಎಕರೆ ಜಾಗದಲ್ಲಿ ತೋಟಗಾರಿಕೆಗೆ 13 ಎಕರೆ, ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೀೆ ಪಟ್ಟಣ ಅಭಿವೃದ್ಧಿಗೆ ಬಳಸುವಂತೆ ವಿವಿಧ ಸ್ಥಳಗಳನ್ನು ಸೂಚಿಸಿದ್ದರು. ಅದರಂತೆ ಆಗಿನ ತಹಸೀಲ್ದಾರ್‌ರವರು  ಪೇಟೆಕೆರೆಯನ್ನು 13 ಭಾಗಗಳಾಗಿ ಮಾಡಿ ಅದಕ್ಕೆ ನಕ್ಷೆ ತಯಾರಿಸಿ ಸರ್ಕಾರಿ ಆದೇಶ ಹೊರಡಿಸಿದ್ದರು. ಆದರೆ ಶಾಸಕರು ಎಂ.ಜಿ.ರಸ್ತೆ ನಿರಾಶ್ರತರಿಗೆ ಜಾಗ ಕೊಡುವ ನೆಪದಲ್ಲಿ ತೋಟಗಾರಿಕಾ ಇಲಾಖೆಯಲ್ಲಿ 40 ವರ್ಷಗಳಿಂದ ಬೆಳೆಸಿದ್ದ 504 ಮರಗಳನ್ನು ಕಡಿದು, ಕೃಷಿ ಮಾರುಕಟ್ಟೆಯನ್ನು ಸ್ಥಳಾಂತರಿಸವ ಕುತಂತ್ರ ನಡೆಸಿದ್ದಾರೆ. ಇದನ್ನು ಅರಿತ ರೈತರು, ವರ್ತಕರು, ಸಂಘಟನೆಯ ಮುಖಂಡರು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗಮನಕ್ಕೆ ತಂದಾಗ ಅಧ್ಯಯನ ಮಾಡಿ ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡುವವರ  ವಿರುದ್ದ ಕ್ರಮ ಜರುಗಿಸಿ ಸಂರಕ್ಷಣೆ ಮಾಡಿದ್ದರು. ಈ ನಿರ್ಧಾರಕ್ಕೆ ಹೆದರಿದ ಶಾಸಕರ ಹಿಂಬಾಲಕರು ತಣ್ಣಗಾಗಿದ್ದರು. ಸದಾನಂದಗೌಡರು ಮುಖ್ಯಮಂತ್ರಿಯಾಗುತ್ತಿದ್ದಂತೆ  ಸಚಿವ ವಿ.ಸೋಮಣ್ಣನವರ ಮೂಲಕ  ಹಳೆಯ ಆದೇಶಗಳನ್ನು ತಿರುಚಿ ಸದರಿ ನಕ್ಷೆಯನ್ನು ಬದಲಿಸಿ, ಇರುವ ಇಲಾಖೆಗಳನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ ಎಂದು ಎಚ್ಚರಿಸಿದರು. ಇದೇ ರೀತಿ ಬೂದುಗುಪ್ಪೆ ಬಳಿ ಇರುವ ದೊಡ್ಡಯ್ಯನ ಕೆರೆ 64 ಎಕರೆ ಕೆರೆ ಅಂಗಳವನ್ನು ತಮ್ಮ ಸಹಚರರನ್ನು ಬಿಟ್ಟು ಅತಿಕ್ರಮಿಸಲು ಹೋಗಿ ಅಲ್ಲಿನ ರೈತರು ತಿರುಗಿ ಬಿದ್ದ ಕಾರಣ ತಕ್ಷಣಕ್ಕೆ ಸುಮ್ಮನಾಗಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಜಿಲ್ಲಾಧಿಕಾರಿಗಳು ಶಾಸಕರ ಒತ್ತಡಕ್ಕೆ ಮಣಿದು ಕರ್ತವ್ಯ ಲೋಪ ಎಸಗಿದ್ದಾರೆ.ಮುಖ್ಯಮಂತ್ರಿಗಳ ಹಾಗೂ ನ್ಯಾಯಾಂಗ ನಿಂದನೆ ಮಾಡಿರುವುದರಿಂದ ಸರ್ಕಾರ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರು ದಂಗೆ ಏಳಬೇಕಾಗುತ್ತದಂತೆ ಅವರು ಎಚ್ಚರಿಸಿದರು.  ತಾಲ್ಲೂಕು ಅಧ್ಯಕ್ಷ ಪುರದಯ್ಯ, ಕಾರ್ಯದರ್ಶಿ ನಾರಾಯಣಸ್ವಾಮಿ, ರಾಮನಗರ ತಾಲ್ಲೂಕು ಅಧ್ಯಕ್ಷ ಪುಟ್ಟಸ್ವಾಮಿ, ತೋಟಗಾರಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಆನಮಾನಹಳ್ಳಿ ನಾಗರಾಜ್, ಜಯಕರ್ನಾಟಕ ತಾಲ್ಲೂಕು ಅಧ್ಯಕ್ಷ ರಾಮಚಂದ್ರು, ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಗೋವಿಂದಯ್ಯ, ಕಾರ್ಯದರ್ಶಿ ವೆಂಕಟೇಶ್ ಸೇರಿದಂತೆ ನೂರಾರು ರೈತ ಸಂಘದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.