ಗುರುವಾರ , ಮೇ 26, 2022
23 °C

ಇಲ್ಲೂ ಒಂದು ಜರ್ಮನಿ!

ಅನುಪಮಾ ಫಾಸಿ Updated:

ಅಕ್ಷರ ಗಾತ್ರ : | |

ನಗರದ ಮಧ್ಯ ಭಾಗದಲ್ಲಿಯೇ ವಿಶಿಷ್ಟವಾದ ನಗರವೊಂದು ಸೃಷ್ಟಿಯಾಗಲಿದೆ. ರಂಜನೆ ಮತ್ತು ಸವಾಲಿನ ಜತೆಗೆ ವೈವಿಧ್ಯಮಯ ಆಟಗಳು, ಮಳಿಗೆಗಳು, ಮಾದರಿ ಪ್ರದರ್ಶನ, ದೃಶ್ಯ ಕಲೆಗಳು, ವಿಜ್ಞಾನ ಶಿಕ್ಷಣ, ತಂತ್ರಜ್ಞಾನ ಮತ್ತು ವಹಿವಾಟಿನ ಬಗ್ಗೆ ರಸದೌತಣವನ್ನು ಉಣ್ಣುವ ಸವಿ ಸಮಯ ಬೆಂಗಳೂರಿಗರಿಗೆ ಒದಗಲಿದೆ.ನಗರದ ಅರಮನೆ ಮೈದಾನದಲ್ಲಿ ಇದೇ 22ರಿಂದ 10 ದಿನಗಳ ಕಾಲ `ಭಾರತ-ಜರ್ಮನ್ ನಗರ ಮೇಳ~ ವು ನಡೆಯಲಿದ್ದು, ನಗರಿಗರಿಗೆ ಸವಿ-ಸವಿಯಾದ ಮನರಂಜನೆ ಜತೆಗೆ ಮಾಹಿತಿ ನೀಡಲಿದೆ.ಜರ್ಮನ್ ಮತ್ತು ಭಾರತ 2011-12 ಅಗಣಿತ ಅವಕಾಶಗಳ ಸಂಭ್ರಮಾಚರಣೆ ಅಂಗವಾಗಿ ತಂತ್ರಜ್ಞಾನ, ವಿಜ್ಞಾನ, ಸಂಸ್ಕೃತಿ ಮತ್ತು ಮನರಂಜನೆ ಒಳಗೊಂಡಂತೆ ಆಡಂಬರದ ಉತ್ಸವ ನಡೆಯಲಿದೆ. ಭಾರತ-ಜರ್ಮನ್ ರಾಜತಾಂತ್ರಿಕ ಸಂಬಂಧಗಳಿಗೆ 60 ವರ್ಷ ತುಂಬಿದ ಸ್ಮರಣಾರ್ಥದ ಸಂಭ್ರಮಾಚರಣೆ ಇದು.ಭಾರತ-ಜರ್ಮನ್ ಮೇಳವು ಆಧುನಿಕ, ಬಹು ಉದ್ದೇಶದ ಮಳಿಗೆಗಳನ್ನು ಒಳಗೊಂಡಿರಲಿದೆ. ವ್ಯಾಪಕ ಸ್ವರೂಪದ ನಗರಿಕರಣ ಮತ್ತು ಎರಡೂ ದೇಶಗಳ ಮಹಾನಗರಗಳಲ್ಲಿನ ಬದಲಾವಣೆಗಳು ತಂದೊಡ್ಡಿರುವ ಸವಾಲುಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಲಿದೆ.ಪ್ರಯಾಣ, ಇಂಧನ, ಸುಸ್ಥಿರ ನಗರಾಭಿವೃದ್ಧಿ, ವಾಸ್ತುಶಿಲ್ಪ, ಸಾಂಸ್ಕೃತಿಕ ಬದಲಾವಣೆ, ಶಿಕ್ಷಣ ಮತ್ತು ನಗರದ ಕಲೆಗಳ ವಿಸ್ತೃತ ಪ್ರದರ್ಶನವು ಇಲ್ಲಿ ನಡೆಯಲಿದೆ.

ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಜತೆ ಕಾಲ ಕಳೆಯಲು ಮೇಳಕ್ಕೆ ಆಗಮಿಸಿದವರು `ಬಿಯರ್ ಗಾರ್ಡನ್~ನಲ್ಲಿ ಜರ್ಮನಿಯ ಜನಪ್ರಿಯ ಸ್ವಾದಿಷ್ಟ ಖಾದ್ಯ ಮತ್ತು ಪಾನೀಯಗಳ ರುಚಿ ಸವಿಯಬಹುದು. ಜನಪ್ರಿಯ ಹೋಟೆಲ್‌ಗಳಾದ ತಾಜ್ ವಿವಾಂತಾ ಮತ್ತು ಬಿಯರ್ ಗಾರ್ಡನ್‌ಗಳು ಸ್ಥಳೀಯ ರುಚಿಗಳ ಮೂಲಕ ಜಿಹ್ವಾ ಚಾಪಲ್ಯ ತಣಿಸಲಿವೆ.ರುಚಿ-ರುಚಿಯಾದ ಆಹಾರದ ಜತೆಗೆ ಇನ್ನು ಆಕರ್ಷಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಪ್ರಮುಖ ಆಕರ್ಷಣೆಯಾಗಿ ಭಾರಿ ಲೋಹಗಳ ಪ್ರದರ್ಶನ, ನೀಲ್ ಸ್ಟಾರ್ಮ್ ಅವರಿಂದ ಬ್ರೇಕ್ ಡ್ಯಾನ್ಸ್ ಕಾರ್ಯಾಗಾರ, ಸಮೀರ್ ಅಕಿಕಾ ಅವರಿಂದ ನೃತ್ಯ ನಾಟಕ ಮತ್ತು ಅಟ್ಟಕ್ಕಲ್ಲರಿ ಪ್ರದರ್ಶನಗಳು ಯುವ ಜನರ ಮನಸ್ಸನ್ನು ಸೂರೆಗೊಳ್ಳಲಿವೆ.ಯುವ ವಿಶ್ವವಿದ್ಯಾಲಯದ ಯುವ ಸಂಶೋಧಕರು, ವಿಜ್ಞಾನಿಗಳು, ಬೃಹತ್ ಉದ್ದಿಮೆ ಸಂಸ್ಥೆಗಳ  ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಸಂವಾದ, ವಿಜ್ಞಾನ ಸ್ಪರ್ಧೆ, ವಿಶ್ವದಾದ್ಯಂತ ಯುವ ಜನರಲ್ಲಿ ಜನಪ್ರಿಯವಾಗಿರುವ ಸ್ವಯಂ ಅಭಿವ್ಯಕ್ತಿಯ ಸ್ಪರ್ಧಾತ್ಮಕ ಆಧುನಿಕ ಕವನಗಳನ್ನು ವಾಚಿಸುವ ಸ್ಪರ್ಧೆಗಳು, ಗೌರವ್ ಜ್ಯುಯೆಲ್ ಅವರಿಂದ ಕಲಾ ಕಾರ್ಯಾಗಾರ ಸೇರಿದಂತೆ ಇನ್ನು ಆಕರ್ಷಕವಾದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.ಚಿಂತಕರ ಜತೆ ಸಂವಾದ, ಬ್ರೇಕ್ ಡ್ಯಾನ್ಸ್, ಚಿಣ್ಣರಿಂದ ಹಿಡಿದು ಭಾರಿ ಲೋಹಗಳ ಪ್ರೇಮಿಗಳು, ಯುವ ವಿಜ್ಞಾನಿಗಳಿಂದ ಉದಯೋನ್ಮುಖ ಕವಿಗಳಿಗಾಗಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನವೂ ಹೊಸ ಲೋಕವೊಂದು ಸೃಷ್ಟಿಯಾಗಲಿದೆ.ವಿನ್ಯಾಸಕಾರ ಮಾರ್ಕಸ್ ಹೇನ್ಸ್‌ಡ್ರಾಪ್ ಅವರಿಂದ ಕಿರು ಚಿತ್ರಗಳ ಪ್ರದರ್ಶನ, ಗೊಂಬೆ ನಾಟಕಗಳ ಕಾರ್ಯಾಗಾರ ಸೇರಿದಂತೆ ಸಂಗೀತ ಮತ್ತು ಇನ್ನು ಹಲವು ಕಲೆಗಳಿಗೆ ಸಂಬಂಧಿಸಿದಂತೆ ಮಕ್ಕಳಿಗಾಗಿಯೇ ವಿಶೇಷ ಕಾರ್ಯಾಗಾರಗಳು ನಡೆಯಲಿವೆ.ಮಳಿಗೆಗಳ ವಿವರ

ಉತ್ಸವದಲ್ಲಿ ವಿವಿಧ ಸಂಸ್ಥೆಗಳು ಮತ್ತು ಜರ್ಮನಿಯ ಸಚಿವಾಲಯಗಳ ಮಳಿಗೆಗಳು, ಮೇಳಕ್ಕೆ ಭೇಟಿ ನೀಡುವವರಿಗೆ ಹಲವಾರು ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಿವೆ. ಬಜಾಜ್ ಅಲೈಯನ್ಸ್, ಬಿಎಎಸ್‌ಎಫ್, ಬಾಷ್, ಡಾಯಿಷ್ ಬ್ಯಾಂಕ್, ಸೀಮೆನ್ಸ್, ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಸಚಿವಾಲಯ, ಗೋಥೆ ಲಾಂಜ್, ಏರ್‌ಬಸ್, ಜರ್ಮನಿಯ ಸಾರಿಗೆ, ನಿರ್ಮಾಣ ಮತ್ತು ನಗರಾಭಿವೃದ್ಧಿ ಸಚಿವಾಲಯ, ಭಾರತ ಜರ್ಮನಿ ವಾಣಿಜ್ಯೋದ್ಯಮ ಮಹಾಸಂಘ (ಐಜಿಸಿಸಿ), ಲ್ಯಾಪ್ ಇಂಡಿಯಾ, ಮೆಟ್ರೊ ಮತ್ತು ಸ್ಯಾಪ್ ಮಳಿಗೆಗಳಿಂದ ಹತ್ತಾರು ವಿಷಯಗಳನ್ನು ಮತ್ತು ಸಂಗತಿಗಳನ್ನು ತಿಳಿದುಕೊಳ್ಳಬಹುದು.ಕಲಾಕೃತಿಗಳೂ..

ಜರ್ಮನ್ ಮತ್ತು ಭಾರತ ಮೇಳದಲ್ಲಿ ಭಾರತಕ್ಕೆ ಆಗಮಿಸಿರುವ ಜರ್ಮಿನಿಯ ಕಲಾವಿದ ಮತ್ತು ವಿನ್ಯಾಸಕಾರ ಹೇನ್ಸ್‌ಡ್ರಾಪ್ ಅವರು ಭಾರತದ ನಯ ನಾಜೂಕಿನ ಸೂಕ್ಷ್ಮ ಕಲಾಕೃತಿಗಳು ಮತ್ತು ಗಟ್ಟಿ ಉಕ್ಕಿನ ಹದವಾದ ಮಿಶ್ರಣದಿಂದ ಮೇಳದ ಮಳಿಗೆಗಳನ್ನು ರೂಪಿಸಿದ್ದಾರೆ.`ನನ್ನ ಕಲಾಕೃತಿಗಳಲ್ಲಿ ನಗರ ಪರಿಸರಕ್ಕೆ ಹೆಚ್ಚು ಆದ್ಯತೆ ನೀಡಿರುವೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿರುವೆ. ಈ ಪ್ರವಾಸವು ಸಂಚಾರಿ ವಾಸ್ತುಶಿಲ್ಪದಿಂದ ಕೂಡಿರುವುದರಿಂದ ಆಸಕ್ತಿದಾಯಕವಾಗಿದೆ. ಮೇಳದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮಳಿಗೆಗಳು ಭಾರತದ ಸಾಂಪ್ರದಾಯಿಕತೆಯನ್ನು ಪ್ರತಿನಿಧಿಸುತ್ತವೆ.ಶಿಲ್ಪ ಕಲಾಕೃತಿಗಳಲ್ಲಿ ಉಕ್ಕನ್ನು ಹೆಚ್ಚು ಬಳಸಲಾಗಿದೆ. ಭಾರತದ ಕಲೆ ಮತ್ತು ವಾಸ್ತುಶಿಲ್ಪದ ಇತಿಹಾಸವು ವರ್ಣಗಳ ಬಳಕೆ ಮತ್ತು ಅಮೂಲ್ಯ ಹರಳುಗಳ ಬಳಕೆಯಿಂದ ತುಂಬ ಶ್ರೀಮಂತವಾಗಿದೆ~ ಎಂದರು.`ಮೇಳದ ಸಂದರ್ಭದಲ್ಲಿ ಸಾಂಪ್ರದಾಯಿಕ ವಸ್ತ್ರ ಸೇರಿದಂತೆ, ಎರಡೂ ಸಂಸ್ಕೃತಿಗಳ ಅನೇಕ ಸಂಗತಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಉಭಯ ದೇಶಗಳ ಬಾಂಧವ್ಯವನ್ನು ಇನ್ನಷ್ಟು ಬೆಸೆಯುವ ದೃಷ್ಟಿಯಿಂದ ವಿನ್ಯಾಸ ಮತ್ತು ಕಲಾಕೃತಿಗಳನ್ನು ರಚಿಸಲಾಗಿದೆ. ಮೇಳಕ್ಕೆ ಭೇಟಿ ನೀಡುವವರಿಗೆ ತಮ್ಮ ಸಂಸ್ಕೃತಿಯ ಹಿರಿಯ ನೆನಪು ಮಾಡಿಕೊಳ್ಳುವ ಬಗೆಯಲ್ಲಿ ಮಳಿಗೆಗಳನ್ನು ನಿರ್ಮಿಸಲಾಗಿದೆ~ ಎಂದು ವಿವರಿಸಿದರು.ಯುವ ವಿಶ್ವವಿದ್ಯಾನಿಲಯ

ಜರ್ಮನಿಯ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳ ಪ್ರಾಧ್ಯಾಪಕರು, ಉದ್ದಿಮೆ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲು ಅವಕಾಶವಾಗುವಂತೆ ನಗರದ ಗೋಥೆ ಇನ್ಸ್‌ಟಿಟ್ಯೂಟ್ ಮತ್ತು ಮ್ಯಾಕ್ಸ್ ಮುಲ್ಲರ್ ಭವನ್ ಅವಕಾಶ ಕಲ್ಪಿಸಲಾಗಿದೆ.ಮೇಳದ ಸಾಂಸ್ಕೃತಿಕ ವಿಭಾಗದಲ್ಲಿ `ವಿಜ್ಞಾನ ಮತ್ತು ಆರ್ಥಿಕ ಆವಿಷ್ಕಾರ~ ಉದ್ದೇಶದಡಿ ಈ ಚಟುವಟಿಕೆಯನ್ನು ನಡೆಸಲಾಗುವುದು. ತಾಂತ್ರಿಕ, ವೈದ್ಯಕೀಯ, ಮ್ಯಾನೇಜಮೆಂಟ್ ಮತ್ತು ಉದ್ದಿಮೆ ವಹಿವಾಟಿನ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳು ಪ್ರಯೋಜನ ಪಡೆಯಬಹುದು. ಜೂನ್ 25 ರಿಂದ 29ರವರೆಗೆ ಪ್ರತಿ ದಿನ ಮೂರು ಬಾರಿ ಬೆಳಿಗ್ಗೆ 11, ಮಧ್ಯಾಹ್ನ 1.30 ಮತ್ತು ಸಂಜೆ 5 ಕ್ಕೆ ಸಂವಾದ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.