ಸೋಮವಾರ, ಮಾರ್ಚ್ 8, 2021
19 °C

ಇಷ್ಟದೈವದ ಧ್ಯಾನದಲ್ಲಿ...

ಎನ್ವಿ Updated:

ಅಕ್ಷರ ಗಾತ್ರ : | |

ಇಷ್ಟದೈವದ ಧ್ಯಾನದಲ್ಲಿ...

`ಕುಮಾರರಾಮ~ ಸಿನಿಮಾ ಮಾಡಿದ ನಂತರ, ಚಿತ್ರ ಬೋರಲಾಯಿತು ಎಂಬುದನ್ನು ಸ್ಪಷ್ಟಪಡಿಸಲು ಸುದ್ದಿಗೋಷ್ಠಿ ಕರೆದಿದ್ದವರು ಎಂ.ಆರ್.ಪಟ್ಟಾಭಿರಾಮ್. ವಿದ್ಯಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಸಿನಿಮಾ ಆಗಿನ್ನೂ ತೀರಾ ಹೊಸದು. ನಟನಾವರ್ಗ, ತಂತ್ರಜ್ಞರನ್ನು ನಂಬಿ ಅವರು ದೊಡ್ಡ ಮೊತ್ತವನ್ನೇ ಪಣಕ್ಕೆ ಒಡ್ಡಿದ್ದರು. ಚಿತ್ರ ಬಿಡುಗಡೆಯಾಗಿ ವಾರವಾಗುವಷ್ಟರಲ್ಲೇ ಅವರಿಗೆ ತಾವು ಸೋತು ಸುಣ್ಣವಾಗಿರುವುದು ಖಾತರಿಯಾಗಿತ್ತು. `ಬಹುಶಃ ಒಂದು ರೂಪಾಯಿ ಲಾಭವನ್ನೂ ಮಾಡದ ನಿರ್ಮಾಪಕ ನಾನೊಬ್ಬನೇ ಇರಬೇಕು~ ಎಂದು ಅವರು ಮುಗ್ಧತೆಯಿಂದ ಹೇಳಿಕೊಂಡಿದ್ದರು. ಆಗ ಪೇಚಾಡಿಕೊಂಡಿದ್ದ ಇದೇ ಪಟ್ಟಾಭಿರಾಮ್ ಮುಖದ ಮೇಲೀಗ ಸಂತಸದ ಗೆರೆ. ಅದಕ್ಕೆ ಕಾರಣ ಅವರ ಇಷ್ಟದೈವ ರಾಘವೇಂದ್ರ ಸ್ವಾಮಿ ಕೈಬಿಡದೇ ಇರುವುದು.ಚಿತ್ರರಂಗದಲ್ಲಿ `ಪ್ರಥಮ ಚುಂಬನೇ ದಂತ ಭಗ್ನಂ~ ಎಂಬಂಥ ಅನುಭವ ಪಡೆದ ಅವರು ಧಾರಾವಾಹಿ ಲೋಕ ಪ್ರವೇಶಿಸಿದ್ದೂ ಅಕಸ್ಮಾತ್ತಾಗಿಯೇ. ರಾಘವೇಂದ್ರ ಸ್ವಾಮಿಗಳು ಕನಸಲ್ಲಿ ಬಂದು ಎರಡು ಮೂರು ದಿನಗಳಾಗಿತ್ತಷ್ಟೆ; ಸುವರ್ಣ ವಾಹಿನಿಯ ಇಬ್ಬರು ಅಧಿಕಾರಿಗಳು ಬಂದು ಅದೇ ರಾಘವೇಂದ್ರರ ಬಗ್ಗೆ ಧಾರಾವಾಹಿಯನ್ನು ಯಾಕೆ ನಿರ್ಮಿಸಬಾರದು ಎಂಬ ಗುಂಗುಹುಳವನ್ನು ಕಿವಿಯೊಳಗೆ ಬಿಟ್ಟು ಹೋದರು.ಇಷ್ಟದೇವರ ವಿಷಯ ಅಂದಮೇಲೆ ತಾತ್ಸಾರ ಮಾಡಲಾದೀತೆ? ಪಟ್ಟಾಭಿರಾಮ್ ಮನಸ್ಸು ಮಾಡಿಬಿಟ್ಟರು. ಬ.ಲ.ಸುರೇಶ್ ಅವರನ್ನು ನಿರ್ದೇಶಕರ ಸೀಟಿನ ಮೇಲೆ ಕೂರಿಸಿದರು.ರಾಘವೇಂದ್ರರ ಬದುಕನ್ನು ಕಟ್ಟಿಕೊಡುವುದು ಹೇಗೆಂಬ ಹೋವರ್ಕ್ ದೊಡ್ಡಮಟ್ಟದಲ್ಲೇ ಶುರುವಾಯಿತು. ತಮ್ಮ ಸಹೋದರರು ನವೀಕರಿಸಲು ಹೊರಟಿದ್ದ ಮೂರು ಕಲ್ಯಾಣಮಂಟಪಗಳಿದ್ದವು. ಕೆಲವು ತಿಂಗಳ ಮಟ್ಟಿಗೆ ಶೂಟಿಂಗ್‌ಗೆಂದು ಅವನ್ನೇ ಬಿಡಿಸಿಕೊಂಡರು. ದೇವರ ಕೆಲಸಕ್ಕೆ ಸಹೋದರರು ಕೂಡ ಅಡ್ಡಿಬರಲಿಲ್ಲ.ಕಲ್ಯಾಣಮಂಟಪಗಳಲ್ಲಿ ಸೆಟ್ಟುಗಳೆದ್ದವು. ಅದೇ ಕಾಲಕ್ಕೆ ಸ್ಕ್ರಿಪ್ಟ್ ತಯಾರಾಯಿತು. `ಶ್ರೀ ರಾಘವೇಂದ್ರ ವೈಭವ~ ಧಾರಾವಾಹಿ ಮೂಡಿದ್ದು ಹೀಗೆ. ನೋಡನೋಡುತ್ತಲೇ 250 ಕಂತುಗಳನ್ನು ದಾಟಿ ಅದು ಮುನ್ನಡೆದಿದೆ. ಜನಮನ ಗೆದ್ದಿದೆ. ರಾಘವೇಂದ್ರರ ಭಕ್ತರು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಹತ್ತಕ್ಕೆ ಟೀವಿ ಸೆಟ್ಟುಗಳ ಮುಂದೆ ಪ್ರತಿಷ್ಠಾಪಿಸುವುದು ಮುಂದುವರಿದಿದೆ.`ಮೊದಲು ಒಂದು ವರ್ಷ ಧಾರಾವಾಹಿ ಮಾಡೋಣ ಎಂದುಕೊಂಡೆ. ಆದರೆ, ಈಗಿನ್ನೂ ರಾಘವೇಂದ್ರರಿಗೆ ಸನ್ಯಾಸ ದೀಕ್ಷೆ ಸಿಕ್ಕಿದೆ. ಜನ ಇಷ್ಟಪಟ್ಟಿದ್ದಾರೆ. ಬಾಯಿಮಾತಿನಲ್ಲೇ ಧಾರಾವಾಹಿಯ ಪ್ರಚಾರವನ್ನು ಭಕ್ತರೇ ಮಾಡಿದ್ದಾರೆ. ಅದಕ್ಕೇ 400 ಕಂತುಗಳವರೆಗೆ ಮುಂದುವರಿಸುವ ನಿರ್ಧಾರ ಮಾಡಿದ್ದೇನೆ. ಅಷ್ಟು ಕಂತುಗಳಾದ ನಂತರ ಮುಗಿಸುವುದು ಉದ್ದೇಶ. ಇಷ್ಟು ಬೇಗ ಮುಗಿದ್ಹೋಯ್ತಲ್ಲ ಅಂತ ಜನರಿಗೆ ಅನ್ನಿಸಬೇಕು; ಹಾಗೆ ಧಾರಾವಾಹಿ ಮುಗಿಯಲೆಂಬುದು ನನ್ನ ಬಯಕೆ~ ಅಂತಾರೆ ಪಟ್ಟಾಭಿರಾಮ್.ಪೌರಾಣಿಕ, ಧಾರ್ಮಿಕ ಧಾರಾವಾಹಿ ಮಾಡುವುದು ಸುಲಭವಲ್ಲ. ಪಟ್ಟಾಭಿಯವರಿಗೆ ಅದರ ಅರಿವು ಚೆನ್ನಾಗಿಯೇ ಆಗಿದೆ. ಒಂದು ನಿರ್ದಿಷ್ಟ ಪಂಥಕ್ಕೆ ರಾಘವೇಂದ್ರ ಸ್ವಾಮಿಗಳ ಕುರಿತ ಧಾರಾವಾಹಿಯನ್ನು ಸೀಮಿತಗೊಳಿಸುವುದು ಅವರ ಉದ್ದೇಶವಲ್ಲ. ಇದು ಕೆಲವರಿಗೆ ರುಚಿಸಲಿಲ್ಲ. `ಮುದ್ರೆ ಹಾಕಿರುವುದು ಸರಿಯಿಲ್ಲ~ ಎಂಬುದರಿಂದ ಹಿಡಿದು ಅವಾಚ್ಯ ಶಬ್ದಗಳವರೆಗೆ ಟೀಕೆಗಳನ್ನು ಅವರು ಎದುರಿಸಿದ್ದಿದೆ. ಆದರೆ, ಅವುಗಳಿಂದ ಕುಗ್ಗದೆ ತಮಗೆ ಅನ್ನಿಸಿದಂತೆಯೇ ಮಾಡಿದ್ದಾರೆ.

 

ದಾಸರಪದಗಳನ್ನು ಧಾರಾವಾಹಿಯಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಲಹೆ ಕೊಟ್ಟಿದ್ದೇ ಪಟ್ಟಾಭಿರಾಮ್.`ದೇವರು ನನಗೆ ಆರ್ಥಿಕ ಶಕ್ತಿ ಕೊಟ್ಟಿದ್ದಾನೆ. ಚಿಕ್ಕಂದಿನಿಂದಲೇ ನಾನು ನಂಬಿದ ರಾಘವೇಂದ್ರ ಸ್ವಾಮಿಗಳನ್ನು ತೋರಿಸುವ ಭಾಗ್ಯ ನನ್ನದಾಗಿದೆ. ನಾನು ಏನೇ ಮಾಡಿದರೂ ಸಾಂಸ್ಕೃತಿಕವಾಗಿ ಮುಖ್ಯವಾದುದನ್ನೇ ಮಾಡುತ್ತೇನೆ. ಇನ್ನಷ್ಟು ಪೌರಾಣಿಕ, ಐತಿಹಾಸಿಕ ಧಾರಾವಾಹಿಗಳನ್ನು ನಿರ್ಮಿಸುವ ಉತ್ಸಾಹ ಬಂದಿದೆ.ಕೆಲವರು ಮಾತುಕತೆಯನ್ನೂ ನಡೆಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಕಥೆ, ಕಿತ್ತೂರು ಚೆನ್ನಮ್ಮ-ಬೆಳವಡಿ ಮಲ್ಲಮ್ಮರ ಕಥೆ, ಹೊಯ್ಸಳ-ಕದಂಬ-ರಾಷ್ಟ್ರಕೂಟರ ಕಥೆ, ಶಾಂತಲೆಯ ಕಥೆ ಯಾವುದನ್ನು ಬೇಕಾದರೂ ಧಾರಾವಾಹಿ ಮಾಡಬಹುದು. ಅದಕ್ಕೆ ಸೂಕ್ತ ತಂಡದ ಅಗತ್ಯವಿದೆಯಷ್ಟೆ. ಇನ್ನು ಈ ವಿಷಯದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು ಎಂದುಕೊಂಡಿದ್ದೇನೆ. ಸದ್ಯಕ್ಕಂತೂ ಸಿನಿಮಾ ಸಹವಾಸ ಇಲ್ಲ. ಸಾಮಾಜಿಕ ಧಾರಾವಾಹಿಗಳ ಉಸಾಬರಿಯೂ ನನಗೆ ಬೇಡ~ ಎಂಬುದು ಪಟ್ಟಾಭಿರಾಮ್ ನಿಲುವು.ಇದುವರೆಗೆ ಸೆಟ್‌ಗಳಲ್ಲೇ ಹೆಚ್ಚು ಚಿತ್ರೀಕರಣಗೊಂಡ `ರಾಘವೇಂದ್ರ ವೈಭವ~ ಈಗ ಔಟ್‌ಡೋರ್ ಶೂಟಿಂಗ್ ಮೆರುಗು ಪಡೆಯುತ್ತಿದೆ. ಹಂಪಿ, ಮೇಲುಕೋಟೆ, ನಂಜನಗೂಡು ಹೀಗೆ ವಿವಿಧ ಸ್ಥಳಗಳು ರಾಘವೇಂದ್ರ ವೈಭವಕ್ಕೆ ಸಾಕ್ಷಿಯಾಗುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.