ಸೋಮವಾರ, ಮೇ 17, 2021
30 °C

ಈಶ್ವರಗೌಡನಹಳ್ಳಿಯ `ಗಂಗೆ' ಬರಿದು

ಎಂ. ಮಹದೇವ್ Updated:

ಅಕ್ಷರ ಗಾತ್ರ : | |

ಈಶ್ವರಗೌಡನಹಳ್ಳಿಯ `ಗಂಗೆ' ಬರಿದು

ತಿ.ನರಸೀಪುರ: ಜನ ಹಾಗೂ ಜಾನುವಾರುಗಳಿಗೆ ಬಹಳ ಉಪಯುಕ್ತವಾಗಿದ್ದ ವರುಣಾ ಕ್ಷೇತ್ರ ವ್ಯಾಪ್ತಿಯ ಈಶ್ವರಗೌಡನಹಳ್ಳಿಯ ಕೆರೆಯ ಒಡಲು ಈಗ ಬರಿದಾಗಿದೆ.ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಕೊನೆಯ ಗ್ರಾಮ ಈಶ್ವರಗೌಡನ ಹಳ್ಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ ಸೇರಿದೆ. ತಿ.ನರಸೀಪುರ- ತಾಯೂರು ಮುಖ್ಯ ರಸ್ತೆ ಸಮೀಪದ ವಿಶಾಲವಾದ ಕೆರೆ 6ರಿಂದ 7 ಎಕರೆ ವಿಸ್ತೀರ್ಣದಲ್ಲಿ ಹರಡಿದೆ.ಅನೇಕ ವರ್ಷಗಳ ಹಿಂದೆ ಕೆರೆಯ ನೀರನ್ನು ಗ್ರಾಮದ ಜನ ಕುಡಿಯಲು ಬಳಸುತ್ತಿದ್ದರು. ಜಾನುವಾರು ಹಾಗೂ ಕೃಷಿ ಚಟುವಟಿಕೆಗಳಿಗೆ ಇದು ಪ್ರಮುಖ ಜಲಮೂಲವಾಗಿತ್ತು. ಸುತ್ತಲೂ ಒಣಭೂಮಿ ಇರುವುದರಿಂದ ಈ ಕೆರೆಯ ನೀರಿವಾರಿ ಸೌಕರ್ಯ ಒದಗಿಸಿತ್ತು. ಆದರೆ, ಗ್ರಾಮದಲ್ಲಿ ಕಿರುನೀರು ಸರಬರಾಜು ಯೋಜನೆಗಳು, ಕೊಳವೆಬಾವಿ ಕೊರೆಸಿದ ನಂತರ ಕೆರೆಯ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಈಗ ಇದು ನಿರುಪಯುಕ್ತವಾಗಿದೆ.ಇಟ್ಟಿಗೆ ಭಟ್ಟಿಗೆ ಆಸರೆ

ಕೆರೆ ನಿಷ್ಪ್ರಯೋಜಕ ಆಗುವುದನ್ನು ತಡೆಯಲು ಗ್ರಾಮದ ಕೆಲವರು ಕೆರೆ ಆಸುಪಾಸು ಇಟ್ಟಿಗೆ ಗೂಡುಗಳನ್ನು ಹಾಕಿಕೊಂಡು ಇಟ್ಟಿಗೆ ತಯಾರಿಯಲ್ಲಿ ತೊಡಗಿದ್ದಾರೆ. ಒಂದು ಗೂಡು ಇಟ್ಟಿಗೆಗೆ ಮಾಲೀಕರು 2 ಸಾವಿರ ರೂಪಾಯಿ ಯನ್ನು ಗ್ರಾಮದ ಅಭಿವೃದ್ಧಿಗೆ ನೀಡುತ್ತಿದ್ದಾರೆ. ಮೊದಲು ಆರು ಮಂದಿ ಇಟ್ಟಿಗೆ ತಯಾರಿಸು ತ್ತಿದ್ದರು. ಬೇಡಿಕೆ ಕುಸಿತ ಹಾಗೂ ಲಾಭವಿಲ್ಲ ಎಂಬ ಕಾರಣಕ್ಕೆ ಕೆಲವರು ಇಟ್ಟಿಗೆ ತಯಾರಿಕೆ ನಿಲ್ಲಿಸಿದರು. ಪ್ರಸ್ತುತ ಒಬ್ಬರು ಮಾತ್ರ ಇಟ್ಟಿಗೆ ತಯಾರಿಕೆಯ ಗೂಡುಗಳನ್ನು ನಿರ್ಮಿಸಿದ್ದಾರೆ. ಅದರಿಂದ ಬಂದ ಹಣವನ್ನು ಗ್ರಾಮದ ದೇವಾಲಯದ ಅಭಿವೃದ್ಧಿಗೆ ಬಳಸಲಾಗುತ್ತಿದೆ.ಅಭಿವೃದ್ಧಿಯ ಕನಸು: ಈಶ್ವರಗೌಡನಹಳ್ಳಿ ಕೆರೆ ಅಭಿವೃದ್ಧಿಯಾದರೆ ಗ್ರಾಮಕ್ಕೆ ಬಹಳಷ್ಟು ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಹಿಂದೆ ಕೆರೆಯ ನೀರು ಕೃಷಿಗೆ ಹೆಚ್ಚು ಬಳಕೆಯಾಗುತ್ತಿರಲಿಲ್ಲ. ಈಗ ಗ್ರಾಮಕ್ಕೆ ನಾಲೆಗಳ ಸಂಪರ್ಕ ಒದಗಿದೆ. ಈ ಕೆರೆಯನ್ನು ಅಭಿವೃದ್ಧಿಗೊಳಿಸಿ ನೀರು ತುಂಬಿಸಿದರೆ ಕೃಷಿಗೆ ಅನುಕೂಲವಾಗುತ್ತದೆ. ಗ್ರಾಮದ ಜಾನುವಾರು ಗಳಿಗೆ ಕುಡಿಯಲು ವರ್ಷಪೂರ್ತಿ ನೀರು ಲಭಿಸುತ್ತದೆ. ಆದ್ದರಿಂದ ಈ ಕೆರೆಗೆ ಕಾಯಕಲ್ಪ ನೀಡಬೇಕು ಎಂಬುದು ಗ್ರಾಮಸ್ಥರ ಮನವಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.