ಉಗ್ರರ ನಂಟಿಲ್ಲ: ಡಿ.ಸಿ ಗೆ ಮನವಿ

ವಿಜಯಪುರ: ನಗರದಲ್ಲಿನ ಅಬ್ದುಲ್ ಖುದ್ದುಸ್ ತುರ್ಕಿ ಕುಟುಂಬ ಸಿರಿಯಾದ ಯಾವ ಉಗ್ರ ಸಂಘಟನೆಗಳ ಜತೆಗೂ ನಂಟು ಹೊಂದಿಲ್ಲ ಎಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಿರಿಯಾದಲ್ಲಿ ಐಸಿಸ್ ಉಗ್ರ ಸಂಘಟನೆ ಸೇರಿರುವ ರಾಜ್ಯದ ಮೂವರು ಉಗ್ರರು ಹತ್ಯೆಯಾಗಿದ್ದು, ಇವರಲ್ಲಿ ನಗರದ ಅಬ್ದುಲ್ ಖುದ್ದುಸ್ ತುರ್ಕಿ (33) ಸಹ ಒಬ್ಬ ಎಂದು ಕೇಂದ್ರ ಗುಪ್ತಚರ ಇಲಾಖೆ ಪತ್ರಿಕೆಗಳಿಗೆ ನೀಡಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಸಂಘಟನೆಗಳ ಮುಖಂಡರು ಈ ಸಂದರ್ಭ ತಿಳಿಸಿದರು.
ನಗರದ ನಿವಾಸಿ ಅಬ್ದುಲ್ ಖುದ್ದುಸ್ ತುರ್ಕಿ ಜೀವಂತವಾಗಿದ್ದಾನೆ. ನಗರದ ಪೊಲೀಸರು ವಿಡಿಯೋ ಕಾಲಿಂಗ್ ಮೂಲಕ ಆತನನ್ನು ಸಂಪರ್ಕಿಸಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಬಿ.ಎಚ್.ಮಹಾಬರಿ, ಟಪಾಲ್ ಇಂಜಿನಿಯರ್ ಮಾತನಾಡಿ, ನಗರದ ತುರ್ಕಿ ಕುಟುಂಬ ಹಾಗೂ ಹೊರ ದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರ ಜಿಲ್ಲೆಯ ಕುಟುಂಬಗಳು ಭಯದ ವಾತಾವರಣದಲ್ಲಿದ್ದಾರೆ. ಜನ ತುರ್ಕಿ ಕುಟುಂಬದವರನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ತುರ್ಕಿ ಕುಟುಂಬ ಇದರಿಂದ ಮಾನಸಿಕವಾಗಿ ನೊಂದು ಜರ್ಝರಿತವಾಗಿದೆ ಎಂದರು.
ಕೇಂದ್ರ ಗುಪ್ತಚರ ಇಲಾಖೆಯಿಂದ ಬಂದ ತಪ್ಪು ಮಾಹಿತಿ ಸರಿಪಡಿಸಿ, ಮಾಧ್ಯಮಗಳ ಮೂಲಕ ಜನರ ಮುಂದಿಡಬೇಕು. ಅಮಾಯಕರ ಮೇಲೆ ನಡೆಯುತ್ತಿರುವ ಅನ್ಯಾಯ ಸರಿಪಡಿಸಿ ನ್ಯಾಯ ಒದಗಿಸಬೇಕು. ಅಲ್ಪಸಂಖ್ಯಾತರು ನಿರ್ಭಯದಿಂದ ಬದುಕುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸುಧಾಕರ ಕನಮಡಿ, ಎಂ.ಸಿ.ಮುಲ್ಲಾ, ವಿ.ಎಂ.ಹತ್ತರಕಿಹಾಳ, ಇಸ್ಮಾಯಿಲ್ ಸೌದಾಗರ, ಆಬೀದ ಶೇಖ, ಎಸ್.ಎಸ್.ರಾಣಿಬೆನ್ನೂರ, ಕೆ.ಎ.ಬೇಪಾರಿ, ಎ.ಎಂ.ತುರ್ಕಿ, ಎಸ್.ಇ.ಮುನ್ಸಿ, ಅಬ್ದುಲ ಅಜೀಜ ಸೌದಾಗರ ಇನ್ನಿತರರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.