ಭಾನುವಾರ, ಫೆಬ್ರವರಿ 28, 2021
23 °C

ಉಗ್ರವಾದಿ ಚಟುವಟಿಕೆಗೆ ಚೀನಾದ ಕೊಡುಗೆ ಕಡಿಮೆಯಲ್ಲ!

ಪುಷ್ಪ ಸುರೇಂದ್ರ Updated:

ಅಕ್ಷರ ಗಾತ್ರ : | |

ಉಗ್ರವಾದಿ ಚಟುವಟಿಕೆಗೆ ಚೀನಾದ ಕೊಡುಗೆ ಕಡಿಮೆಯಲ್ಲ!

ಚೀನಾದ ಕುನ್ಮಿಂಗ್ ನಗರದ ರೈಲ್ವೆ ನಿಲ್ದಾಣ­ದಲ್ಲಿ ಶಿನ್ ಜಿಯಾಂಗ್ ಮೂಲದ ಉಯ್ಘುರ್ ಮುಸ್ಲಿಂ ಉಗ್ರವಾದಿ­ಗಳು ಇತ್ತೀಚೆಗೆ ನಡೆಸಿದ ಹತ್ಯಾಕಾಂಡದಲ್ಲಿ 29 ಮಂದಿ ಪ್ರಾಣ ಕಳೆದುಕೊಂಡರು. ಉಗ್ರವಾದಿ­ಗಳು ಜನರನ್ನು ಹತ್ಯೆ ಮಾಡಿದ ರೀತಿ ಭಯಾನಕ­ವಾಗಿತ್ತು. ಶಿನ್ ಜಿಯಾಂಗ್ ಚೀನಾದ ಪ್ರಾಂತ­ಗಳಲ್ಲೇ ಅತಿ ದೊಡ್ಡದಾಗಿದ್ದು ದೇಶದ ಆರನೇ ಒಂದು ಭಾಗದಷ್ಟಿದೆ.

ಈ ಪ್ರಾಂತದ ಒಂದು ಭಾಗ, ಹಳೆಯ ಸೋವಿಯತ್‌ ಒಕ್ಕೂಟದಿಂದ ಸ್ವತಂತ್ರಗೊಂಡ ಕಜಕಿಸ್ತಾನ, ಕಿರ್ಗಿಸ್ತಾನ ಮತ್ತು ತಜಕಿಸ್ತಾನಗಳಿಗೆ ಹೊಂದಿಕೊಂಡಂತೆ ಇದೆ. ಒಂದು ಕಡೆ ಪಾಕಿಸ್ತಾನ, ಭಾರತದ ಲೇಹ್ ಭೂ­ಭಾಗಕ್ಕೆ ಹತ್ತಿರವಾಗಿದೆ. ಶಿನ್ ಜಿಯಾಂಗ್‌ನ ಮುಕ್ಕಾಲು ಭಾಗ ಮರಳುಗಾಡು. ಆದರೆ ಅಲ್ಲಿ ತೈಲ ಮತ್ತು ಇತರ ಖನಿಜ ಸಂಪತ್ತು ಹೇರಳವಾಗಿ ಇದೆ.ಜನಸಾಂದ್ರತೆ ಹೆಚ್ಚಿಗಿರುವ ಪ್ರದೇಶಗಳಿಂದ ಜನರನ್ನು ಜನದಟ್ಟಣೆ ಕಡಿಮೆ ಇರುವ ಕಡೆಗೆ ಸ್ಥಳಾಂತರಿಸುವುದು ಚೀನಾದ ನೀತಿ. ಬಹು­ಪಾಲು ಮುಸ್ಲಿಂ ಜನರೇ ಇದ್ದ ಶಿನ್ ಜಿಯಾಂಗ್‌ನಲ್ಲಿ ಮುಸ್ಲಿಮೇತರರು  ವಲಸೆ ಬಂದು ನೆಲೆ ನಿಂತಿ­ರುವುದರಿಂದ ಇದನ್ನು ಇಷ್ಟಪಡದ ಸ್ಥಳೀ­ಯ­ರಿಗೂ ಹೊರಗಿನಿಂದ ಬಂದವರಿಗೂ  ಆಗಾಗ್ಗೆ ತಿಕ್ಕಾಟಗಳು ಆಗುತ್ತವೆ. ಹೊರಗಿನಿಂದ ಬಂದವರಿಗೂ ಸ್ಥಳೀಯರ  ಬಗ್ಗೆ ಒಳಗೊಳಗೇ ಅಸಮಾಧಾನ ಇದೆ. ಅಲ್ಪಸಂಖ್ಯಾತರಿಗೆ ಕೆಲ­ವೊಂದು ರಿಯಾಯಿತಿಗಳನ್ನು ಸರ್ಕಾರ ಕೊಟ್ಟಿದೆ. ಸಂತಾನ ನಿಯಂತ್ರಣ ಕಾಯ್ದೆಯ ಪ್ರಕಾರ ಒಂದೇ ಮಗು ಇರಬೇಕು ಎನ್ನುವ ನೀತಿ ಅಲ್ಪಸಂಖ್ಯಾತರಿಗೆ ಕಡ್ಡಾಯ ಇಲ್ಲ. ಜನಸಂಖ್ಯೆ ಕಡಿಮೆ ಇರುವುದರಿಂದ ಅಲ್ಪಸಂಖ್ಯಾತರು ಎರಡು ಮಕ್ಕಳನ್ನು ಪಡೆಯಬಹುದು.ಚೀನಿ ಆಡಳಿತ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತೇ ಬಂದಿವೆ. ಆದರೆ, ಅವು ವರದಿಯಾಗದಂತೆ ಚೀನಾ ನೋಡಿಕೊಳ್ಳುತ್ತಿದೆ. ದೇಶಭ್ರಷ್ಟವಾಗಿ ಬೇರೆ ದೇಶಗಳಲ್ಲಿರುವ ಕೆಲವು ಉಯ್ಘುರ್ ಸಂಘಟನೆಗಳು, ಮುಖ್ಯವಾಗಿ ವಿಶ್ವ ಉಯ್ಘುರ್ ಕಾಂಗ್ರೆಸ್‌, ಚೀನಾದ ಒಗ್ಗಟ್ಟನ್ನು ಹಾಳು ಮಾಡಲು ಇಂತಹ ಕೃತ್ಯಗಳನ್ನು ಮಾಡಿಸುತ್ತಿದೆ ಎಂದು ಚೀನಾ ಹೇಳುತ್ತದೆ.ಚೀನಾದಲ್ಲಿ ಹಾನ್‌‌ ಜನಾಂಗಕ್ಕೆ ಸೇರಿದವರು ಬಹುಸಂಖ್ಯಾತರು. ಅವರ ಪ್ರಮಾಣ ಶೇಕಡಾ 92 ರಷ್ಟು. ಬಾಕಿ ಶೇ 8 ರಷ್ಟು ಜನ 55 ಬುಡಕಟ್ಟು, ಅಲ್ಪಸಂಖ್ಯಾತ ಪಂಗಡಗಳಿಗೆ ಸೇರಿದವರಾಗಿದ್ದು ಅವರಲ್ಲಿ ಉಯ್ಘುರ್ ಸಮುದಾಯವೂ ಒಂದು.  ಬಹುತೇಕ ಬುಡಕಟ್ಟುಗಳೇ ಇದ್ದ ದೇಶದ ಗಡಿಭಾಗಗಳಿಗೆ, ಇತರ ಭಾಗಗಳಿಂದ ಜನರನ್ನು ಸ್ಥಳಾಂತರ ಮಾಡುತ್ತಲೇ ಬಂದಿದೆ ಸರ್ಕಾರ.

ಈ ನೀತಿಯನ್ನು ಚೀನಾ ಟಿಬೆಟ್‌ನಲ್ಲಿಯೂ ಅನುಸರಿಸಿದ್ದು, ಸ್ಥಳೀಯ ಜನರಿಗಿಂತ ವಲಸೆ ಬಂದ ಚೀನಿಯರೇ ಹೆಚ್ಚಾಗಿದ್ದಾರೆ. ದೇಶದ ಎಲ್ಲಾ ಭಾಗಗಳೂ ತಾಯ್ನಾಡಿಗೆ ಸೇರಿವೆ. ಯಾವುದೇ  ಭಾಗ ಒಂದು ಜನಾಂಗಕ್ಕೆ ಸೇರಿದ್ದಲ್ಲ. ಜನದಟ್ಟಣೆ ಇರುವ ಪ್ರದೇಶದಿಂದ ಜನದಟ್ಟಣೆ ಇಲ್ಲದಿರುವ ಪ್ರದೇಶಗಳಿಗೆ ಜನರನ್ನು ಕಳುಹಿಸುವುದು ಸರಿ ಎಂದು ಚೀನಾ ಸಮರ್ಥನೆ ಮಾಡಿಕೊಳ್ಳುತ್ತದೆ.ಶಿನ್ ಜಿಯಾಂಗ್‌ನಲ್ಲಿ ಅಶಾಂತಿಗೆ ಸಾಕಷ್ಟು ಕಾರಣಗಳಿದ್ದರೂ ಮುಖ್ಯ ಕಾರಣ ಮಾತ್ರ ಚೀನಾದ ನೆರೆಕರೆಯಲ್ಲಿ ಮುಸ್ಲಿಂ ಜನರಿರುವ ಐದು ಸ್ವತಂತ್ರ ದೇಶಗಳು ಹುಟ್ಟಿಕೊಂಡಿದ್ದು. ಅದರಲ್ಲಿ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಹಳೆಯವು. ಮೂರು ಹೊಸ ದೇಶಗಳು ಕಜಕಿಸ್ತಾನ, ತಜಕಿಸ್ತಾನ ಮತ್ತು ಕಿರ್ಗಿಸ್ತಾನವು ತೊಂಬತ್ತರ ದಶಕದಲ್ಲಿ ಸ್ವತಂತ್ರ ದೇಶಗಳಾಗುವ ಮೊದಲು ಕಮ್ಯುನಿಸ್ಟ್‌ ಆಡಳಿತದ ಸೋವಿಯತ್‌  ಒಕ್ಕೂಟಕ್ಕೆ ಸೇರಿದ ರಾಜ್ಯಗಳಾಗಿದ್ದವು. ಈಗ ಶಿನ್ ಜಿಯಾಂಗ್ ಪ್ರದೇಶ ಒಂದನ್ನು ಬಿಟ್ಟರೆ ಈ ಭಾಗದಲ್ಲಿ ಯಾವ ಮುಸ್ಲಿಂ ಪ್ರದೇಶವೂ ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಟ್ಟಿಲ್ಲ.ಶಿನ್ ಜಿಯಾಂಗ್ ಪ್ರಾಂತದಲ್ಲಿ ಉಯ್ಘುರ್, ತಜಿಕ್, ಕಿರ್ಗಿಜ್, ಕಜ್ಹಾಕ್ ಅಲ್ಲದೆ ಹುಯ್ ಸಮುದಾಯಗಳಿಗೆ ಸೇರಿದ  ಮುಸ್ಲಿಮರೂ ಇದ್ದಾರೆ. ಚೀನಾದ ಎರಡು ಕೋಟಿ  ಮುಸ್ಲಿಂ ಜನಸಂಖ್ಯೆಯಲ್ಲಿ ಹುಯ್ ಮುಸ್ಲಿಮರು ಅರ್ಧ­ದಷ್ಟು ಇದ್ದು ದೇಶದಾದ್ಯಂತ ಎಲ್ಲಾ ಪ್ರಾಂತ್ಯ­ಗಳಲ್ಲೂ ಇದ್ದಾರೆ.ಹುಯ್‌ ಮುಸ್ಲಿಮರು ನೋಡಲು ಚೀನಿಯರ ತರಹವೇ ಇದ್ದು ಅವರು ಹಾಕಿಕೊಳ್ಳುವ ಟೋಪಿಯಿಂದ ಬಹು ಸುಲಭ­ವಾಗಿ ಗುರುತಿಸಬಹುದು. ಕಮ್ಯುನಿಸ್ಟ್ ದೇಶದ­ಲ್ಲಿ­ದ್ದರೂ ಹಲಾಲ್ ಮತ್ತು ಇತರ ಸಂಪ್ರದಾಯ­ಗಳನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಇವರ ಮಸೀದಿಗಳ ವಾಸ್ತುಶಿಲ್ಪ, ಚೀನಿ ದೇವಸ್ಥಾನಗಳ ಹಾಗೆಯೇ ಇದ್ದು ಮಸೀದಿಯಲ್ಲಿ ಹೆಂಗಸರಿಗೂ ಪ್ರವೇಶ ಇದೆ. ಹುಯ್ ಮುಸ್ಲಿಮರಿಗೂ ಚೀನಿಯರಿಗೂ ಯಾವ ವ್ಯತ್ಯಾಸ ಇಲ್ಲ ಎಂಬಂತೆ ಸರ್ಕಾರ ಬಿಂಬಿಸಿದರೂ ಸಲ್ಮಾನ್ ರಶ್ದಿಯ ‘ಸಟಾನಿಕ್‌ ವರ್ಸಸ್’ ಪುಸ್ತಕಕ್ಕೆ ಬಲವಾದ ವಿರೋಧ ವ್ಯಕ್ತವಾದಾಗಷ್ಟೇ ಅವರಿಗೆ ತಮ್ಮ ಧರ್ಮದ ಬಗ್ಗೆ ಇರುವ ನಿಲುವು ಬೆಳಕಿಗೆ ಬಂತು. ಚೀನಾದ ಮಧ್ಯಭಾಗ ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ಹಿಂದುಳಿದ ಪ್ರದೇಶ ಎಂದು ಹೇಳಬಹುದು. ನಿಂಗ್ ಶ್ಯಾ ಮತ್ತು ಗಾನ್ಸು ಎಂಬ ಪ್ರಾಂತಗಳಲ್ಲೂ ಹುಯ್ ಮುಸ್ಲಿಮರ ಸಂಖ್ಯೆ ಜಾಸ್ತಿ ಇದೆ. ಇಲ್ಲಿ ಕೆಲವೊಂದು ಗ್ರಾಮಗಳನ್ನು, ಹೋಬಳಿಗಳನ್ನು ‘ಅಟಾನಮಸ್’ ಕೌಂಟಿ ಎಂದು ಗುರುತಿಸಿ  ವಿಶೇಷ ಸ್ಥಾನಮಾನ ನೀಡಲಾಗಿದೆ.  ಟಿಬೆಟ್, ಮಂಗೋಲಿಯಾ, ಶಿನ್ ಜಿಯಾಂಗ್ ಎಲ್ಲವೂ ಸ್ವಾಯತ್ತತೆ ಇರುವ ಪ್ರದೇಶಗಳು.ಶಿನ್ ಜಿಯಾಂಗ್ ಪ್ರದೇಶ ಇತಿಹಾಸ­ದು­ದ್ದಕ್ಕೂ ಚೀನಾಕ್ಕೇ ಸೇರಿರಲಿಲ್ಲ. ಅಲ್ಲಿ ಸ್ಥಳೀಯ ರಾಜರು, ಪಾಳೆಗಾರರು ರಾಜ್ಯಭಾರ ಮಾಡು­ತಿದ್ದ ಕಾಲವೂ ಇತ್ತು.  ಚೀನಾದ ಚರಿತ್ರೆ, ಅವರ ರಾಜ್ಯಭಾರದ ಬಗ್ಗೆ ಮಾತ್ರ ಹೇಳುತ್ತದೆ. ಇದು ಒಂದು ವಿಧದಲ್ಲಿ ಸ್ಥಳೀಯ ಸಂಸ್ಕೃತಿಯನ್ನು, ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಕಡೆಗಣಿ­ಸುವ ಪ್ರಯತ್ನವೂ ಹೌದು. ಉಯ್ಘುರ್ ಅಲ್ಪ­ಸಂಖ್ಯಾತರ ಅಸಮಾಧಾನಕ್ಕೆ ಇದೂ ಒಂದು ದೊಡ್ಡ ಕಾರಣ.ಶಿನ್ ಜಿಯಾಂಗ್ ಪ್ರದೇಶದಲ್ಲಿ ರಷ್ಯಾದ ಪ್ರಭಾವವೂ ಇದ್ದು ಕೆಲವೊಮ್ಮೆ ಇಲ್ಲಿಯ ಸ್ಥಳೀಯ ರಾಜರು, ಜಮೀನ್ದಾರರು ಮತ್ತು ಪಾಳೆಗಾರರು ಅವರಿಗೆ ನಿಷ್ಠರಾಗಿರು­ತ್ತಿದ್ದರು. 1949ರ ಕ್ರಾಂತಿಯ ವೇಳೆ ಇಲ್ಲಿ ಚೀನಾ ಮತ್ತು ರಷ್ಯಾ ಮೇಲುಗೈ ಸಾಧಿಸಲು ಹೆಣಗಾಡಿದವು. 1955 ರಲ್ಲಿ ಚೀನಾ ತನ್ನ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ಅಲ್ಲಿಗೆ ಕಳುಹಿಸಿ ಈ ಪ್ರದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದರಲ್ಲಿ ಯಶಸ್ವಿಯಾಯಿತು. ಅದನ್ನೇ ಚೀನಾ peaceful liberation of Xinjiang ಎಂದೂ, 1949 ರ ಟಿಬೆಟ್ ಮೇಲಿನ ಆಕ್ರಮಣವನ್ನು peaceful liberation of Tibet ಎಂದೂ ಕರೆಯುತ್ತದೆ!ಸ್ಥಳೀಯರಿಗೆ ಸರ್ಕಾರದ ಬಗ್ಗೆ ಅಸಮಾಧಾನ ಇದ್ದರೂ ಚೀನಾ ಈ ಪ್ರದೇಶದ ಆರ್ಥಿಕ ಪ್ರಗತಿಗೆ ಕಾರಣವಾಗಿದ್ದು ಮಾತ್ರ ಸತ್ಯ. ಇಂದು ಶಿಕ್ಷಣದಲ್ಲಿ, ಆರ್ಥಿಕ ಅಭಿವೃದ್ಧಿಯಲ್ಲಿ ಶಿನ್ ಜಿಯಾಂಗ್ ಚೀನಾದ ಬೇರೆ ಪ್ರದೇಶಗಳ ಹಾಗೆಯೇ ಪ್ರಗತಿ ಸಾಧಿಸಿದೆ. ಚೀನಾ ಕ್ರಾಂತಿಯ ನಂತರ ಈ ಭಾಗದಲ್ಲಿಯೂ ಸಾಕಷ್ಟು ಬಂಡ­ವಾಳ ಹೂಡಿದ್ದು ಇಲ್ಲಿಯ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಿದೆ. ಹಾಗೆಯೇ ಅಣು ಬಾಂಬ್ ಸ್ಫೋಟ ಇತ್ಯಾದಿಗಳನ್ನು ಇಲ್ಲಿಯ ಮರಳುಗಾಡಿನಲ್ಲಿ ನಡೆಸಿದ್ದು ಅದೂ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ಎಂಬತ್ತರ ದಶಕದವರೆಗೆ ಸ್ಥಳೀಯ ಜನರಿಗೆ ಅವರ ಭಾಷೆಗಳನ್ನು ಬಳಸುವ ಸ್ವಾತಂತ್ರ್ಯ ಇರಲಿಲ್ಲ. ಅಷ್ಟೇ ಅಲ್ಲ, ಸಾಂಸ್ಕೃತಿಕ ಕ್ರಾಂತಿಯ ಕಾಲದಲ್ಲಿ ಉಯ್ಘುರ್ ಮತ್ತಿತರ ಭಾಷೆಗಳನ್ನು ನಿಷೇಧ ಮಾಡಿ ಚೀನಿ ಭಾಷೆಯನ್ನು ಹೇರಿತ್ತು ಮತ್ತು ಮಸೀದಿಗಳನ್ನು ಮುಚ್ಚಲಾಗಿತ್ತು.ಐವತ್ತರ ದಶಕದಲ್ಲಿ ಚೀನಾ– ಸೋವಿಯತ್‌ ಸಂಬಂಧ ಮುರಿದು ಬಿದ್ದಾಗ ಗಡಿ ಭಾಗ­ದಲ್ಲಿರುವ ಶಿನ್ ಜಿಯಾಂಗ್ ಅಲ್ಪಸಂಖ್ಯಾತರನ್ನು ಚೀನಾ ಸಂಶಯದಿಂದ ನೋಡುತ್ತಿತ್ತು. 1959–-62ರಲ್ಲಿ ಆಹಾರದ ಕೊರತೆ ಎದುರಾಯಿತು. ಹೊಟ್ಟೆಗಿಲ್ಲದ ಸಮಯದಲ್ಲಿ ನೂರಾರು ಜನ ಶಿನ್ ಜಿಯಾಂಗ್ ಬಿಟ್ಟು ಸೊವಿಯತ್‌ ಒಕ್ಕೂಟಕ್ಕೆ ವಲಸೆ ಹೋಗಿದ್ದು ಚೀನಾದ ಅಸಮಾಧಾನಕ್ಕೆ ಕಾರಣವಾಯಿತು. ವಲಸೆ ಹೋಗಲು ಸೋವಿಯತ್ ಒಕ್ಕೂಟದ ಕುಮ್ಮಕ್ಕೂ ಇತ್ತು.ಈ ವೈರತ್ವದಿಂದಾಗಿ  ಆಕ್ರಮಣಕ್ಕೆ ಹೆದರಿ ಚೀನಾ ತನ್ನ ಗಡಿಭಾಗಗಳಲ್ಲಿ ಸೇನಾಬಲವನ್ನು ಹೆಚ್ಚಿಸಿತ್ತು. ಎಪ್ಪತ್ತರ ದಶಕದಲ್ಲಿ ಸೋವಿಯತ್ ರಷ್ಯಾಕ್ಕೂ ಆಫ್ಘಾನಿಸ್ತಾನಕ್ಕೂ ಯುದ್ಧವಾದಾಗ ಚೀನಾ, ಮುಸ್ಲಿಂ ಮುಜಾಹಿದ್ದೀನ್‌ಗೆ ನೆರವು ನೀಡಿತ್ತು. ಅಲ್ಲದೇ ಈ ಸಮಯದಲ್ಲಿ ಮುಜಾಹಿದ್ದೀನ್, ಪಾಕಿಸ್ತಾನದಲ್ಲಿ ಭದ್ರವಾಗಿ ನೆಲೆಯೂರಿತು. ಅದಕ್ಕೆ ಅಮೆರಿಕದಿಂದ ನೆರವು ಇದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಚೀನಾವೂ ಇಸ್ಲಾಂ ಮುಜಾಹಿದ್ದೀನ್‌ಗೆ ಬೆಂಬಲ ಕೊಟ್ಟಿದ್ದು ಗೊತ್ತಿರಲಿಕ್ಕಿಲ್ಲ. ಇಂಥ ಉಗ್ರವಾದಿ ಚಟುವಟಿಕೆಗಳಿಗೆ ಚೀನಾದ ಕಾಣಿಕೆಯೂ ಬಹಳಷ್ಟಿದೆ. ಸಂದರ್ಭ ಬಂದಾಗ ಚೀನಾ ಅವಕಾಶವಾದಿ ನೀತಿಗಳನ್ನು ಅನುಸರಿಸಿದೆ. ಅಲ್ಲದೇ ಇಂದು ಚೀನಾ ಶಸ್ತ್ರಾಸ್ತ್ರಗಳನ್ನು ತಯಾರು ಮಾಡುವ ದೊಡ್ಡ ದೇಶ. ಮಧ್ಯ ಏಷ್ಯಾದ ಎಲ್ಲಾ ರಾಷ್ಟ್ರಗಳಿಗೆ  ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶ.ಪಾಕಿಸ್ತಾನದ ಉಗ್ರವಾದಿ ಮುಸ್ಲಿಮರ ಪ್ರಭಾವ ಚೀನಾದ ಶಿನ್ ಜಿಯಾಂಗ್‌ನಲ್ಲಿ ಎಂಬತ್ತರ ದಶಕದಿಂದಲೇ ಇತ್ತು. ಅರಬ್ ದೇಶಗಳು ಪಾಕಿಸ್ತಾನದ ಜಮಾತ್–ಎ–ಇಸ್ಲಾಮಿ ಮೂಲಕ ಚೀನಾದ ಮುಸ್ಲಿಮರಲ್ಲಿ ಮೂಲಭೂತವಾದಿ ಇಸ್ಲಾಂ ಹರಡಲು ಶತ ಪ್ರಯತ್ನ ಮಾಡುತ್ತಿದ್ದು 2013ರ ತನಕ ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿಯಾಗಿದ್ದ ಹುಸ್ಸೈನ್ ಹಕ್ಕಾನಿ ಅವರು ಜಮಾತ್ ಕಾರ್ಯಕರ್ತರಾಗಿದ್ದರು.ಹಾಂಕಾಂಗ್‌ನಲ್ಲಿ ಅರಬ್ ಪತ್ರಿಕೆಯೊಂದಕ್ಕೆ 1982-–83ರಲ್ಲಿ ಕೆಲಸ ಮಾಡುತ್ತಿದ್ದ ಅವರು ಚೀನಾದಲ್ಲಿ ಇಸ್ಲಾಂ ಉಗ್ರವಾದ ಹರಡುವುದರಲ್ಲಿ ತೊಡಗಿಸಿ­ಕೊಂಡಿದ್ದವರು. ಅವರ ಮತ್ತು ನನ್ನ ಮನೆ ಒಂದೇ ಕಡೆ ಇದ್ದದ್ದರಿಂದ ನನಗೆ ಆಗಾಗ  ಮಾತನಾಡಲು ಸಿಕ್ಕುತ್ತಿದ್ದರು. ಬುದ್ಧಿವಂತರಾದ ಹಕ್ಕಾನಿ ಅವರು ಈಗ ಉಗ್ರವಾದದ ವಿರೋಧಿ. ಅದರ ವಿರುದ್ಧ ಪುಸ್ತಕ ಬರೆದು ಖ್ಯಾತಿ ಗಳಿಸಿದ್ದಾರೆ. ಶಿನ್ ಜಿಯಾಂಗ್ ಮುಸ್ಲಿಮರಿಗೆ ತೊಂಬತ್ತರ ದಶಕದ ತನಕ ಚೀನಾದೊಡನೆ ಹೊಂದಿಕೊಂಡು ಇರುವ ಅನಿವಾರ್ಯ ಇತ್ತು. ಏಕೆಂದರೆ ತಮ್ಮ ದೇಶದ ಗಡಿಭಾಗದಲ್ಲಿದ್ದಿದ್ದೂ ಕಮ್ಯುನಿಸ್ಟ್ ಸೋವಿಯತ್‌ ಒಕ್ಕೂಟ.ಇಂದು ಪರಿಸ್ಥಿತಿ ಬದಲಾಗಿದೆ. ಅಲ್ಲದೇ ದೇಶ ವಿದೇಶಗಳಲ್ಲಿಯ ಇಸ್ಲಾಂ ಸಂಘಟನೆಗಳ ಸಹಾಯ ಅವರಿಗಿದೆ. ಸೋವಿಯತ್‌ ಒಕ್ಕೂಟದಂತೆಯೇ ಚೀನಾ ಹೋಳಾಗುವ ಕಾಲಕ್ಕೆ ಅಮೆರಿಕವಂತೂ ಕಾಯುತ್ತಿದೆ. ಟಿಬೆಟ್‌ನ ಸ್ವಾತಂತ್ರ್ಯ ಹೋರಾಟ ಹಳೆಯದ್ದು ಮತ್ತು ಹಿಂಸಾ ಮಾರ್ಗವನ್ನು ಅದು ಬಳಸಲಿಲ್ಲ. ಟಿಬೆಟ್ ಮೇಲೆ ಹಿಡಿತ ಸಾಧಿಸುವುದು ಕಷ್ಟವಾದರೂ, ಅಲ್ಲಿಯ ಆಡಳಿತ ತಕ್ಕಮಟ್ಟಿಗೆ ಸುಸೂತ್ರವಾಗಿಯೇ ನಡೆಯುತ್ತಿದೆ. ಈಗ ಚೀನಾಕ್ಕೆ ಭಯ ಇರುವುದು ಈ ಶಿನ್ ಜಿಯಾಂಗ್ ಪ್ರದೇಶದ ಮೇಲೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.