ಗುರುವಾರ , ಮೇ 26, 2022
31 °C

ಉತ್ತಮ ಪ್ರಯೋಗಾಲಯ, ಗ್ರಂಥಾಲಯ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯ ಖಾಸಗಿ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ, ನಿಗದಿತ ಶುಲ್ಕ ಕುರಿತು ಸ್ಪಷ್ಟ ಮಾಹಿತಿ ಬಾರದಿರುವ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಪ್ರವೇಶಾತಿ ಚುರುಕುಗೊಂಡಿಲ್ಲ.ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಎಲ್ಲ ಕಾಲೇಜುಗಳಲ್ಲಿ ಈಗಾಗಲೇ ಪ್ರವೇಶಾತಿ ಅರ್ಜಿ ವಿತರಿಸಲಾಗಿದೆ. ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿ ಅತ್ಯುತ್ತಮ ವಿಜ್ಞಾನ ಪ್ರಯೋಗಾಲಯ ಹೊಂದಿರುವ ಶ್ರೀಮಹದೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹನೂರಿನ ಜಿ.ವಿ. ಗೌಡ ಸ್ಮಾರಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಾತ್ರವೇ ಬಿಎಸ್ಸಿ ಪದವಿ ಓದಲು ಅವಕಾಶವಿದೆ.ಜಿ.ವಿ. ಗೌಡ ಸ್ಮಾರಕ ಸರ್ಕಾರಿ ಪ್ರಥಮದರ್ಜೆ ಕಾಲೇಜು:

ಭವ್ಯವಾದ ಕಟ್ಟಡ, ಸುಂದರ ಆವರಣ ಹೊಂದಿರುವ ಈ ಕಾಲೇಜು ಹನೂರು ವ್ಯಾಪ್ತಿಯ ಗುಡ್ಡಗಾಡು ಪ್ರದೇಶದ ಗ್ರಾಮೀಣ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ವರದಾನವಾಗಿದೆ. ಇಲ್ಲಿ ನುರಿತ ಉಪನ್ಯಾಸಕರ ತಂಡವಿದೆ. ಕಲಾ ವಿಭಾಗದಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದೆ. ಪ್ರಸಕ್ತ ವರ್ಷದಿಂದ ಕಾಲೇಜಿನಲ್ಲಿ ಬಿಎಸ್ಸಿ ಪದವಿ(ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ) ವಿಭಾಗ ಹಾಗೂ ಕಲಾ ವಿಭಾಗದಲ್ಲಿ ಮನಃಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ ವಿಭಾಗ ಕೂಡ ಕಾರ್ಯಾರಂಭವಾಗಲಿದೆ.`ಗ್ರಾಮೀಣ ವಿದ್ಯಾರ್ಥಿಗಳು ಈ ಕಾಲೇಜಿಗೆ ಪ್ರವೇಶ ಬಯಸುವುದು ಹೆಚ್ಚು. ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಇದೆ. ನುರಿತ ಹಿರಿಯ ಪ್ರಾಧ್ಯಾಪಕರಿದ್ದಾರೆ. ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಪೋಷಕರು ಈ ಕಾಲೇಜಿಗೆ ಮಕ್ಕಳನ್ನು ಸೇರಿಸಿ ಸರ್ಕಾರದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು~ ಎಂಬುದು ಪ್ರಾಂಶುಪಾಲ ಎಚ್.ಆರ್. ಸತ್ಯನಾರಾಯಣ ಅವರ ಮನವಿ.ಜೆಎಸ್‌ಎಸ್ ಮಹಿಳಾ ಕಾಲೇಜು:

ಉತ್ತಮ ಪರಿಸರ ಹೊಂದಿರುವ ಈ ಕಾಲೇಜಿನಲ್ಲಿ ವಿದ್ಯಾಥಿನಿಯರಿಗೆ ಮಾತ್ರ ಪ್ರವೇಶಾವಕಾಶವಿದೆ. ಬಿಎ, ಬಿಕಾಂ ಹಾಗೂ ಬಿಬಿಎಂ ಪದವಿ ಅಧ್ಯಯನಕ್ಕೆ ಅವಕಾಶವಿದೆ. ಪದವಿಯೊಂದಿಗೆ ಯುಜಿಸಿ ಪ್ರಾಯೋಜಕತ್ವದಡಿ ಬಿಕಾಂ, ಬಿಬಿಎಂ ವಿದ್ಯಾರ್ಥಿಗಳಿಗೆ ಸೆಕ್ರೆಟ್ರಿಯಲ್ ಪ್ಯಾಕ್ಟೀಸ್ ವಿಷಯ ಮತ್ತು ಇನ್ಸೂರೆನ್ಸ್ ಮ್ಯಾನೇಜ್‌ಮೆಂಟ್ ವಿಷಯದ ಕೋರ್ಸ್ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ವರ್ಷದಿಂದ ವಿದ್ಯಾರ್ಥಿನಿಯರಿಗೆ ಈ ಅವಕಾಶ ಲಭಿಸಲಿದೆ. ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವನ್ನು ಕೂಡ ಕಾಲೇಜಿನಲ್ಲಿ ಪ್ರಾರಂಭಿಸಿದ್ದು, ಅಂಬೇಡ್ಕರ್ ಅವರ ವಿಚಾರಧಾರೆ ಕುರಿತ ವಿಶೇಷ ಉಪನ್ಯಾಸ, ವಿಚಾರ ಸಂಕಿರಣ ನಡೆಯಲಿವೆ.

`ಕಾಲೇಜು ಆವರಣದಲ್ಲಿಯೇ 210 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆಯಿದೆ. ಸುಸಜ್ಜಿತ ಸಭಾಂಗಣ, ಗ್ರಂಥಾಲಯ, ಕ್ರೀಡಾಂಗಣ, ಕಂಪ್ಯೂಟರ್ ಲ್ಯಾಬ್ ಸೌಲಭ್ಯವಿದೆ. ಜತೆಗೆ, ಎಂಕಾಂ ಸ್ನಾತಕೋತ್ತರ ಪದವಿ ಓದಲು ಅವಕಾಶವಿದೆ~ ಎನ್ನುತ್ತಾರೆ ಪ್ರಾಂಶುಪಾಲ ಪ್ರೊ.ನಟರಾಜು.ಮಾನಸ ಪ್ರಥಮದರ್ಜೆ ಕಾಲೇಜು

ಈ ಕಾಲೇಜಿನಲ್ಲಿ ಬಿಎ, ಬಿಕಾಂ ಪದವಿ ಅಧ್ಯಯನಕ್ಕೆ ಅವಕಾಶವಿದೆ. ಉತ್ತಮ ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯುತ್ತಿರುವುದು ಈ ಕಾಲೇಜಿನ ಹೆಗ್ಗಳಿಕೆ.ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್:

ಈ ಕಾಲೇಜಿನಲ್ಲಿ ಬಿಬಿಎಂ ಮತ್ತು ಬಿಕಾಂ ಪದವಿ ಅಧ್ಯಯನಕ್ಕೆ ಅವಕಾಶವಿದೆ.

`ಗುಣಮಟ್ಟದ ಬೋಧನೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ನುರಿತ ಪ್ರಾಧ್ಯಾಪಕ ವೃಂದವಿದೆ. ಸುಸಜ್ಜಿತ ಗ್ರಂಥಾಲಯವಿದೆ. ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಂತಹ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ~ ಎಂಬುದು ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್‌ಕುಮಾರ್ ಅವರ ವಿವರಣೆ.ಶ್ರೀಮಹದೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜು:

ಸುಂದರ ವಾತಾವರಣ, ಭವ್ಯ ಪರಂಪರೆ ಹೊಂದಿರುವ ಈ ಕಾಲೇಜಿನಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ ಪದವಿ ಅಧ್ಯಯನಕ್ಕೆ ಅವಕಾಶವಿದೆ. ನ್ಯಾಕ್ ಮಾನ್ಯತೆಗೆ ಒಳಪಡುತ್ತಿರುವ ಈ ಕಾಲೇಜಿನಲ್ಲಿ ಜಿಲ್ಲೆಯಲ್ಲಿಯೇ ಅತ್ಯುತ್ತಮವಾದ ಬೃಹತ್ ಗ್ರಂಥಾಲಯವಿದೆ. ಉತ್ತಮ ವಿಜ್ಞಾನ ಪ್ರಯೋಗಾಲಯವೂ ಇದೆ.ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಚಿತ ಉಪಹಾರ ಯೋಜನೆ ಅನುಷ್ಠಾನಗೊಂಡಿದೆ. ಬೃಹತ್ ಕ್ರೀಡಾಂಗಣವಿದೆ. ತಾಲ್ಲೂಕಿನ ಗ್ರಾಮೀಣ ಪ್ರದೇಶದ ಬಡಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳು ಈ ಕಾಲೇಜಿಗೆ ಪ್ರವೇಶ ಬಯಸುವುದು ಹೆಚ್ಚು.`ಕಲಾ ವಿಭಾಗದಲ್ಲಿ ಐಚ್ಛಿಕ ಇಂಗ್ಲಿಷ್ ಓದಲು ಕಾಲೇಜಿನಲ್ಲಿ ಅವಕಾಶವಿದೆ. ಪ್ರಸಕ್ತ ವರ್ಷದಿಂದ ಕನ್ನಡ ಸ್ನಾತಕೋತ್ತರ ಪದವಿ ಓದಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ~ ಎನ್ನುತ್ತಾರೆ ಪ್ರಾಂಶುಪಾಲ ಪ್ರೊ.ಜಿ. ಮಹಾದೇವ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.