ಮಂಗಳವಾರ, ಮೇ 11, 2021
27 °C

ಉತ್ತರ ಕೊರಿಯಾ: ಸಂಭ್ರಮದ ಶತಮಾನೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯೋಂಗ್‌ಯಾಂಗ್ (ಉತ್ತರ ಕೊರಿಯಾ) (ಎಪಿ): ಪಶ್ಚಿಮದ ದೇಶಗಳ ಎಚ್ಚರಿಕೆಗಳಿಗೆ ಸೆಡ್ಡು ಹೊಡೆದು ನಡೆಸಿದ ತನ್ನ ದಶಕಗಳ ಕನಸಾದ ಬಹು ನಿರೀಕ್ಷಿತ ರಾಕೆಟ್ ಉಡಾವಣೆ ವಿಫಲಗೊಂಡ ಎರಡು ದಿನಗಳ ಬಳಿಕ ಉತ್ತರ ಕೊರಿಯಾ, ತನ್ನ ಸಂಸ್ಥಾಪಕ ಕಿಮ್ ಸುಂಗ್ ಅವರ ನೂರನೇ ಜನ್ಮದಿನವನ್ನು ಭಾನುವಾರ ಸಂಭ್ರಮದಿಂದ ಆಚರಿಸಿತು.ಈ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ದೇಶದ ಯುವ ಮುಖಂಡ ಹಾಗೂ ಸುಂಗ್ ಅವರ ಮೊಮ್ಮಗ ಕಿಮ್ ಜಾಂಗ್ ಉನ್, ತಾವೊಬ್ಬ ದೃಢ ನಿಲುವು ಹೊಂದಿದ, ಅಂತೆಯೇ ಯಾವುದೇ ವಿದೇಶಿ ಶಕ್ತಿಗಳಿಗೆ ಹೆದರದ ಸೇನಾ ಮುಖ್ಯಸ್ಥ ಎಂದು ತಮ್ಮನ್ನು ಬಿಂಬಿಸಿಕೊಂಡರು.ಇಲ್ಲಿನ ಮುಖ್ಯ ಚೌಕದಲ್ಲಿ, ಗಾಢ ವರ್ಣದ ಮಾವೊ ಸೂಟ್ ಧರಿಸಿದ್ದ ಯುವ ನಾಯಕನ ಮಾತುಗಳಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ಅವರ ಮಾತುಗಳಲ್ಲಿ ಎಂದಿನ ಹೇಳಿಕೆಗಳೇ ಪ್ರತಿಫಲಿಸಿದರೂ ಸುಮಾರು 20 ವರ್ಷದ  ನಾಯಕ ಮಾತಿನ ಮಧ್ಯೆ ನಗುತ್ತಿದ್ದರು. ಅಲ್ಲದೆ, ಸಾವಿರಾರು ಸೈನಿಕರನ್ನು ಒಳಗೊಂಡ ಸೇನಾ ಪಡೆ ಪಥಸಂಚಲನ ನಡೆಸುತ್ತಿದ್ದಂತೆಯೇ, ಹಿರಿಯ ಸೇನಾ ನಾಯಕರುಗಳೊಂದಿಗೆ ಬಿಗುಮಾನವಿಲ್ಲದೆ ಮಾತನಾಡುತ್ತಿದ್ದುದು ಕಂಡುಬಂತು.ತಮ್ಮ ತಂದೆ ಎರಡನೇ ಕಿಮ್ ಜಾಂಗ್ ಅವರ ಆಳ್ವಿಕೆಯಲ್ಲಿ ಇದ್ದಂತೆ ತಮ್ಮ ಆಳ್ವಿಕೆಯಲ್ಲೂ ದೇಶವನ್ನು ಮುನ್ನಡೆಸುವಲ್ಲಿ ಸೇನೆ ಪ್ರಧಾನ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.

 ಕ್ಷಿಪಣಿ ತಂದ ಆತಂಕತನ್ನ ಸೇನೆ ಹೊಂದಿರುವ ಕ್ಷಿಪಣಿಗಳನ್ನು ಈ ಹಿಂದೆ ಅನೇಕ ಬಾರಿ ಪೆರೇಡ್‌ಗಳ ಮೂಲಕ ಪ್ರದರ್ಶಿಸಿದ ರೀತಿಯಲ್ಲಿಯೇ ಉತ್ತರ ಕೊರಿಯಾ ಈ ಬಾರಿಯೂ ಸಂಸ್ಥಾಪಕ ಕಿಮ್ ಸುಂಗ್ ಅವರ ಶತಮಾನೋತ್ಸವದ ಭಾಗವಾಗಿ ಹೊಸ ಕ್ಷಿಪಣಿಯನ್ನು ಭಾನುವಾರ ಪ್ರದರ್ಶಿಸಿತು.ದೇಶ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿರುವುದು ಅಂತರ ರಾಷ್ಟ್ರೀಯ ಕಳವಳಕ್ಕೆ ಕಾರಣವಾಗಿರುವ ಈ ಸಂದರ್ಭದಲ್ಲಿ, ಇದೀಗ ಈ ಹೊಸ ಕ್ಷಿಪಣಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಮಾತ್ರವಲ್ಲ, ಹಿಂದೆ ಅನಾವರಣಗೊಳಿಸಿದ ಕ್ಷಿಪಣಿಗೆ ಹೋಲಿಸಿದಲ್ಲಿ ಇದು ಹೊಸತು ಹಾಗೂ ದೊಡ್ಡದಾಗಿದೆ ಎಂದು ಜಪಾನ್ ಹಾಗೂ ದಕ್ಷಿಣ ಕೊರಿಯಾದ ಸೇನಾ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದು ಖಂಡಾಂತರ ಕ್ಷಿಪಣಿಯೇ ಎಂದು ದೃಢಪಡಿಸಲು ಪರಿಶೀಲನೆ ಅಗತ್ಯ ಎಂದಿದ್ದಾರೆ.ಶುಕ್ರವಾರ ಸಾಗರಕ್ಕೆ ಅಪ್ಪಳಿಸಿದ ಉನ್ಹಾ- 3 ರಾಕೆಟ್‌ಗಿಂತಲೂ ಬಲವಾದ ಹಾಗೂ ದೊಡ್ಡದಾದ ಕ್ಷಿಪಣಿಯನ್ನು ಉತ್ತರ ಕೊರಿಯಾ ಅಭಿವೃದ್ಧಿಪಡಿಸುತ್ತಿರಬಹುದು ಎಂದು ವಿಶ್ಲೇಷಕರು ಹಲವು ತಿಂಗಳುಗಳ ಹಿಂದೆಯೇ ಅಂದಾಜಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.