ಶನಿವಾರ, ಸೆಪ್ಟೆಂಬರ್ 26, 2020
22 °C

ಉತ್ಸಾಹದ ರಂಗು

ಡಿ.ಗರುಡ Updated:

ಅಕ್ಷರ ಗಾತ್ರ : | |

ದೇಶ, ಭಾಷೆ, ವರ್ಣಗಳ ಎಲ್ಲೆಯ ಮೀರಿ ದೆಹಲಿಯಲ್ಲಿ ಒಂದಾಗಿದ್ದಾರೆ ಹಲವಾರು ದೇಶದವರು. ಸ್ಪರ್ಧಿಸುವ ಉತ್ಸಾಹ ಹಾಗೂ ಗೆಲ್ಲುವ ಛಲ ಮಾತ್ರ ಇವರೆಲ್ಲರ ಹೃದಯ ಮಿಡಿತ. ಎಲ್ಲರ ಕಣ್ಣುಗಳಲ್ಲಿ ಆಸೆಯ ಮಿಂಚು. ತಾನೂ ವಿಜಯ ವೇದಿಕೆ ಏರಿ ನಿಲ್ಲಬೇಕು ಹಾಗೂ ತನ್ನ ಕೊರಳಲ್ಲಿಯೂ ಪದಕ ಹೊಳೆಯಬೇಕು! ಇದರ ಹೊರತು ಬೇರೆ ಧ್ಯಾನವೇ ಇಲ್ಲ.

ಅಂದೊಂದು ಕಾಲದಲ್ಲಿ ಬ್ರಿಟಿಷ್ ಆಡಳಿತ ಬಂಧಿಯಾಗಿದ್ದ ದೇಶಗಳ ಎಲ್ಲರೂ ದೆಹಲಿಯಲ್ಲಿ ಒಂದಾಗಿರುವುದನ್ನು ನೋಡುವುದೇ ಕಣ್ಣಿಗೆ ಸೊಬಗು. ಅದರಲ್ಲಿಯೂ ಸ್ಪರ್ಧಾ ಕ್ಷೇತ್ರದಲ್ಲಿ ಪರಸ್ಪರ ಎದುರಾಗಲಿದ್ದರೂ, ಕ್ರೀಡಾ ಗ್ರಾಮದಲ್ಲಿ ಎದುರಿಗೆ ಕಂಡರೆ ಕೈಕುಲುಕಿ ಮಂದಹಾಸ ಬೀರುವ ಕ್ರೀಡಾಪಟುಗಳು ಸಾರುವ ಏಕತೆಯ ಸಂದೇಶ ಎದೆಯ ಕದವನ್ನು ತಟ್ಟದಿರದು.

ಎಪ್ಪತ್ತೊಂದು ದೇಶಗಳಿಂದ ಬಂದಿದ್ದರೂ ಎಲ್ಲರಲ್ಲಿ ಒಂದಾಗಿ ನಿಂತಾಗ ಬಣ್ಣ ಹಾಗೂ ರೂಪಗಳೆಲ್ಲಾ ಚೆಂದದ ಚಿತ್ತಾರ ಆಗಿರುವುದು ಸಹಜ. ಆದ್ದರಿಂದಲೇ ಹೇಳಿದ್ದು ಇಂಥದೊಂದು ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಸೋಲಿನ ನಿರಾಸೆ ಹಾಗೂ ಗೆಲುವಿನ ಸಂಭ್ರಮ ಪಡೆಯಬಹುದು. ಆದರೆ ಅಂತಿಮವಾಗಿ ವಿಜಯ ಸಿಗುವುದು ಹಲವು ದೇಶಗಳ ಒಗ್ಗಟ್ಟಿಗೆ ಹಾಗೂ ಶಾಂತಿಯ ಸಂದೇಶಕ್ಕೆ.

ಅಂಥದೊಂದು ಸಂದೇಶವನ್ನು ಸಾರುವ ಆಶಯದೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಪು ದೇಶದ ರಾಜಧಾನಿಯಲ್ಲಿ ಹರಡಿದೆ. ಸುಮಾರು ಎರಡು ವಾರಗಳ ಈ ಕ್ರೀಡಾ ಉತ್ಸವದಲ್ಲಿ ಭಾರತದ ಪಾಲಿಗೆ ಎಷ್ಟು ಪದಕ ಸಿಗುತ್ತವೆ ಎನ್ನುವುದು ಆತಿಥೇಯ ರಾಷ್ಟ್ರದ ಕ್ರೀಡಾ ಪ್ರೇಮಿಗಳ ಆಸಕ್ತಿ. ಕಾಮನ್‌ವೆಲ್ತ್‌ನಲ್ಲಿ ಕಳೆದ ಎರಡು ಬಾರಿ ನಾಲ್ಕನೇ ಸ್ಥಾನದಲ್ಲಿ ನಿಂತ ಭಾರತವು ಎರಡನೇ ಸ್ಥಾನಕ್ಕೆ ಏರಬೇಕು ಇದೇ ಮಹತ್ವಾಕಾಂಕ್ಷೆಯ ಗುರಿ.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಬಲಾಢ್ಯವಾಗಿರುವ ತಂಡಗಳು. ಆದರೂ ಆತಿಥೇಯ ದೇಶವಾದ ಭಾರತಕ್ಕೆ ಹೆಚ್ಚು ಪದಕ ಬರಬೇಕು ಎಂದು ದೇಶದ ಕ್ರೀಡಾ ಪ್ರೇಮಿಗಳು ನಿರೀಕ್ಷಿಸುತ್ತಿರುವುದು ತಪ್ಪೇನಲ್ಲ. ಹಾಗೆಂದು ಸಾಧ್ಯವಲ್ಲದ ಗುರಿಯನ್ನು ಹೊಂದುವುದಕ್ಕೂ ಆಗದು. ಒಟ್ಟಾರೆಯಾಗಿ ಪದಕ ಪಟ್ಟಿಯಲ್ಲಿ ಎರಡು ಇಲ್ಲವೆ ಮೂರನೇ ಸ್ಥಾನದಲ್ಲಿ ನಿಂತರೆ ಅದೊಂದು ಮಹತ್ವದ ಸಾಧನೆಯೇ ಸರಿ. ಆತಿಥೇಯ ದೇಶವಾಗಿ ಮೊದಲ ಮೂರರಲ್ಲಿ ಒಂದು ಸ್ಥಾನದಲ್ಲಿ ಕಾಣಿಸಿಕೊಂಡರೆನೇ ಗೌರವ!

ಈ ನಿಟ್ಟಿನಲ್ಲಿ ಭಾರತವು ಯಶಸ್ವಿ ಆಗುತ್ತದೆಂದು ಆಶಿಸಲು ಕಾರಣವೂ ಇದೆ. ಶೂಟಿಂಗ್ ವಿಭಾಗದಲ್ಲಿ ಪದಕ ಗೆಲ್ಲಲು ಸಮರ್ಥರಾದವರಿದ್ದಾರೆ. ಬಾಕ್ಸಿಂಗ್ ಹಾಗೂ ಕುಸ್ತಿಯಲ್ಲಿಯೂ ಒಂದು ಕೈಯಲ್ಲಿ ಲೆಕ್ಕ ಮಾಡುವಷ್ಟು ಪದಕಗಳು ಸಿಗುವ ಸಾಧ್ಯತೆಯಂತೂ ಖಂಡಿತ. ವೇಟ್‌ಲಿಫ್ಟಿಂಗ್‌ನಲ್ಲಿ ಇಂಥದೇ ನಿರೀಕ್ಷೆ ಇದ್ದರೂ ಅನುಮಾನಗಳು ಬೆನ್ನು ಬಿಡುವುದಿಲ್ಲ. ಆದರೂ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದವರು ಪೈಪೋಟಿ ನೀಡುವ ಮಟ್ಟದ ಸಾಮರ್ಥ್ಯವನ್ನಂತೂ ಹೊಂದಿದ್ದಾರೆ. ಈಜು ವಿಭಾಗದಲ್ಲಿ ಆಸ್ಟ್ರೇಲಿಯಾದವರನ್ನು ಮೀರಿ ನಿಲ್ಲವುದು ದೊಡ್ಡ ಸವಾಲು. ಹೆಚ್ಚಿನ ಸ್ವರ್ಣ ಪದಕಗಳು ಕಾಂಗ

ರೂಗಳ ನಾಡಿನವರ ಪಾಲಿಗೆ ಸೇರುತ್ತವೆಂದು ಈಗಲೇ ಲೆಕ್ಕಾಚಾರ ಮಾಡಬಹುದು. ಆದ್ದರಿಂದ ಈಜು ಸ್ಪರ್ಧೆಯಲ್ಲಿ ಅಷ್ಟಾಗಿ ಬಲಾಢ್ಯವಲ್ಲದ ಭಾರತದ ಪಾಲಿಗೆ ಸೇರುವ ಪದಕಗಳ ಸಂಖ್ಯೆಯೂ ತೀರ ಅಲ್ಪ ಎನ್ನುವುದು ಖಚಿತ. ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಟೆನಿಸ್ ಹಾಗೂ ಸ್ಕ್ವಾಷ್‌ನಲ್ಲಿ ಆತಿಥೇಯರಿಗೆ ಅವಕಾಶಗಳು ಅಧಿಕ.

ಯಾವುದೇ ಕ್ರೀಡಾಕೂಟದ ಮಹತ್ವದ ಅಂಗವೇ ಅಥ್ಲೆಟಿಕ್ಸ್. ಈ ಬಾರಿ ಕಾಮನ್‌ವೆಲ್ತ್ ಕೂಟದಲ್ಲಿ ಅನೇಕ ಪ್ರಮುಖ ಅಥ್ಲೀಟ್‌ಗಳು ಕಾಣಿಸಿಕೊಳ್ಳುತ್ತಿಲ್ಲ. ಆದ್ದರಿಂದ ಪೈಪೋಟಿಯ ಮಟ್ಟ ಕಡಿಮೆ ಇರಬಹುದು. ಇಂಥ ಪರಿಸ್ಥಿತಿಯಲ್ಲಿಯೂ ಭಾರತದ ಅಥ್ಲೀಟ್‌ಗಳಲ್ಲಿ ಪದಕ ಗೆದ್ದುಕೊಡುವಂಥ ಬಲಾಢ್ಯರು ಎದ್ದು ಕಾಣುವುದು ಕಡಿಮೆ. ಆದ್ದರಿಂದ ಅಥ್ಲೆಟಿಕ್ಸ್‌ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಆಫ್ರಿಕಾದ ಕೆಲವು ರಾಷ್ಟ್ರಗಳು ಪ್ರಾಬಲ್ಯ ಮೆರೆಯುವುದು ನಿಶ್ಚಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.