ಗುರುವಾರ , ಮೇ 26, 2022
22 °C

ಉದಯ್ ಗರುಡಾಚಾರ್ ಅಸಭ್ಯ ವರ್ತನೆ: ಪಾಲಿಕೆ ಸದಸ್ಯರ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಗರುಡಾ ಮಾಲ್ ವಾಣಿಜ್ಯ ಕಟ್ಟಡವನ್ನು ಪರಿಶೀಲಿಸಲು ಹೋದ ಮಾರುಕಟ್ಟೆ ಸ್ಥಾಯಿ ಸಮಿತಿಯವರೊಂದಿಗೆ ಗರುಡಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಬಿ.ಜಿ.ಉದಯ್ ಗರುಡಾಚಾರ್ ಅವರು ಅಸಭ್ಯವಾಗಿ ವರ್ತಿಸಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ ಪಾಲಿಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಪಾಲಿಕೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ಪಕ್ಷಭೇದ ಮರೆತು ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಕಟ್ಟಡದಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು, ಅವುಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೊನೆಗೆ ಮೇಯರ್ ಅವರು ನಗರ ಯೋಜನೆ ಸ್ಥಾಯಿ ಸಮಿತಿ ಹಾಗೂ ಅಧಿಕಾರಿಗಳ ತಂಡದ ವತಿಯಿಂದ ಪರಿಶೀಲನೆ ನಡೆಸುವುದಾಗಿ ಹೇಳಿದರು.ಸಮಿತಿ ಸದಸ್ಯ ಪ್ರಕಾಶ್ ಮಾತನಾಡಿ, ‘ಇತ್ತೀಚೆಗೆ ಮಾರುಕಟ್ಟೆ ಸ್ಥಾಯಿ ಸಮಿತಿ ವತಿಯಿಂದ ಗರುಡಾ ಮಾಲ್ ವಾಣಿಜ್ಯ ಸಂಕೀರ್ಣವನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಉದಯ್ ಗರುಡಾಚಾರ್ ಅವರು ಇಲ್ಲಸಲ್ಲದ ಆರೋಪ ಮಾಡಿದರು.ಮನಬಂದಂತೆ ನಿಂದಿಸಿ ಅವಮಾನ ಮಾಡಿದರು. ಇದರಿಂದ ಮನಸ್ಸಿಗೆ ತೀವ್ರ ನೋವಾಗಿದೆ. ಹಾಗಾಗಿ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದನ್ನು ಅಂಗೀಕರಿಸಬೇಕು’ ಎಂದರು.ನಂತರ ವಿರೋಧ ಪಕ್ಷದ ನಾಯಕ ಎಂ.ನಾಗರಾಜ್ ಮಾತನಾಡಿ, ‘ಗರುಡಾ ಮಾಲ್ ಕಟ್ಟಡ ನಿರ್ಮಾಣದಲ್ಲಿ ಸಾಕಷ್ಟು ಲೋಪವಾಗಿದೆ. ಆ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳನ್ನು ಕೇಳಿದರೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತರಿಗೆ ದಾಖಲೆ ನೀಡಲಾಗಿದೆ. ಅವುಗಳ ಪ್ರತಿ ಲಭ್ಯವಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಪ್ರಮುಖ ಕಟ್ಟಡಕ್ಕೆ ಸಂಬಂಧಪಟ್ಟ ದಾಖಲೆಗಳ ಪ್ರತಿಗಳಿಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರುತ್ತದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಕಾಂಗ್ರೆಸ್‌ನ ಕೆ.ಚಂದ್ರಶೇಖರ್, ‘ಗರುಡಾ ಮಾಲ್‌ಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯ ಬಳಿಯಿರುವ ದಾಖಲೆಗಳಿಗೂ ಕಟ್ಟಡ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟ ದಾಖಲೆಗಳಿಗೂ ಸಂಬಂಧವಿಲ್ಲ. ಅಧಿಕಾರಿಗಳು ಸುಳ್ಳು ಹೇಳಿಕೆ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಹಾಗೂ ಷರತ್ತುಗಳಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ಕೂಡಲೇ ಪಡೆದು ಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.ಇದನ್ನು ಅನುಮೋದಿಸಿದ ಆಯುಕ್ತ ಸಿದ್ದಯ್ಯ, ‘ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಗರುಡಾ ಮಾಲ್ ಕಟ್ಟಡ ನಿರ್ಮಾಣವಾಗಿದೆ. ಇದರಲ್ಲಿ ಶೇ 39.10ರಷ್ಟು ಪ್ರಮಾಣವನ್ನು ಪಾಲಿಕೆ ಹಾಗೂ ಶೇ 60.90 ಪ್ರಮಾಣವನ್ನು ಗರುಡಾ ಸಮೂಹ ಹೊಂದಿದೆ.ವಾಹನ ನಿಲುಗಡೆ ತಾಣದಲ್ಲೂ ಶೇ 66.57ರಷ್ಟು ಪಾಲನ್ನು ಪಾಲಿಕೆ ಹೊಂದಿದೆ. ಈ ನಡುವೆ ಕಟ್ಟಡದಲ್ಲಿ ಶೇ 4.86ರಷ್ಟು ನಿಯಮ ಉಲ್ಲಂಘನೆಯಾಗಿರುವುದಾಗಿ ಮಾಹಿತಿ ಇದೆ’ ಎಂದರು.ಪರಿಶೀಲಿಸಬಹುದು: ಪಾಲಿಕೆಯ ಪಾಲುದಾರಿಕೆ ಇರುವ ಕಾರಣ ಗರುಡಾ ಮಾಲ್ ಕಟ್ಟಡವನ್ನು ಪಾಲಿಕೆಯ ಕೆಲವು ಸ್ಥಾಯಿ ಸಮಿತಿಗಳು ಅಗತ್ಯಬಿದ್ದರೆ ಪರಿಶೀಲಿಸಬಹುದಾಗಿದೆ. ಅಲ್ಲದೇ ಕಟ್ಟಡ ನಕ್ಷೆ, ಇತರೆ ದಾಖಲೆಗಳು ಲೋಕಾಯುಕ್ತ ಸಂಸ್ಥೆಯ ಬಳಿಯಿದ್ದರೂ ಅವರಿಂದ ಪ್ರತಿ ಪಡೆಯಬಹುದಾಗಿದ್ದು, ಈಗಾಗಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ’ ಎಂದು ಹೇಳಿದರು.‘ಈ ಕಟ್ಟಡದಲ್ಲಿ ಮಾಲ್, ಬಹುಮಹಡಿ ವಾಹನ ನಿಲುಗಡೆ ತಾಣ ಹಾಗೂ ಹೋಟೆಲ್ ಇದೆ. ಆದರೆ ಹೋಟೆಲ್ ನಡೆಸಲು ಸ್ವಾಧೀನ ಪತ್ರ (ಒ.ಸಿ.) ನೀಡಿಲ್ಲ. ಮಾಲ್ ಮತ್ತು ವಾಹನ ನಿಲುಗಡೆ ತಾಣಕ್ಕೂ ತಾತ್ಕಾಲಿಕ ಸ್ವಾಧೀನ ಪತ್ರ ನೀಡಲಾಗಿದೆ. ಈ ಸಂಬಂಧ ಕೌನ್ಸಿಲ್ ಕೈಗೊಳ್ಳುವ ನಿರ್ಣಯಗಳನ್ನು ಜಾರಿಗೆ ತರಲಾಗುವುದು’ ಎಂದರು.ಬಳಿಕ ಮಾತನಾಡಿದ ಮೇಯರ್, ‘ಗರುಡಾ ಮಾಲ್ ಪ್ರದೇಶ ಪಾಲಿಕೆಗೆ ಸೇರಿದ್ದು. ಈ ಕಟ್ಟಡ ನಿರ್ಮಾಣದಲ್ಲಿ ನಡೆದಿರುವ ಅಕ್ರಮಗಳ ಕುರಿತು ನಗರ ಯೋಜನೆ ಸ್ಥಾಯಿ ಸಮಿತಿ ವತಿಯಿಂದ ಪರಿಶೀಲನೆ ನಡೆಸಲಾಗುವುದು’ ಎಂದರು.ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರು ತಾಂತ್ರಿಕ ವಿಚಕ್ಷಣ ಸಮಿತಿ (ಟಿವಿಸಿಸಿ) ವತಿಯಿಂದ ಪರಿಶೀಲನೆ ನಡೆಸಲು ಆದೇಶಿಸಬೇಕು ಎಂದು ಒತ್ತಾಯಿಸಿದರು.ಆಗ ಪ್ರತಿಕ್ರಿಯಿಸಿದ ಮೇಯರ್, ‘ಸಮಿತಿಯೊಂದಿಗೆ ಅಧಿಕಾರಿಗಳು ಕೂಡ ಇರುತ್ತಾರೆ. ಟಿವಿಸಿಸಿ ತಂಡವನ್ನು ಸೇರ್ಪಡೆ ಮಾಡುವ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.