ಶನಿವಾರ, ಏಪ್ರಿಲ್ 17, 2021
22 °C

ಉದಯ ಸೂರ್ಯನ ನಾಡಲ್ಲಿ ನಡುಹಗಲೇ ಅಸ್ತಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಎಎಫ್‌ಪಿ): ‘ನಾನಿದ್ದ  ಡಿಪಾರ್ಟ್‌ಮೆಂಟ್ ಸ್ಟೋರ್ಸ್‌ನ ಸುತ್ತಲಿನ ಗೋಡೆಗಳು, ಅದರ ಸಿಮೆಂಟ್ ಹೊದಿಕೆ ಪುಡಿಯಾಗಿ ನೆಲಕಚ್ಚಿದುವು...’ ಎಂದು ಅಲ್ಲಿ ನೌಕರಿಲ್ಲಿದ್ದ ಯುವತಿ ತನ್ನ ಅನುಭವ ವಿವರಿಸಿದಳು. ‘ಇನ್ನು ನಾನು ಮನೆಗೆ ಹೇಗೆ ತಲಪುತ್ತೇನೊ ಗೊತ್ತಿಲ್ಲ’ ಆಕೆ ಆತಂಕ ವ್ಯಕ್ತಪಡಿಸಿದಳು.ಭೂಕಂಪದಿಂದಾಗಿ ‘ಉದಯ ಸೂರ್ಯನ ನಾಡು’ ಜಪಾನ್‌ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡ ಸಂದರ್ಭದಲ್ಲಿ ದಿನಸಿ ಅಂಗಡಿಯಲ್ಲಿ  ನೌಕರಿ ಮಾಡುತ್ತಿದ್ದ ಯುವತಿಯ ಆತಂಕದ ಮಾತುಗಳು ಇವು.ಸ್ಥಗಿತಗೊಂಡ ಸಾರಿಗೆ, ರೈಲು, ಹೆದ್ದಾರಿ ಸಂಚಾರ, ಕರೆಗಳ ಒತ್ತಡದಿಂದ ನಿಷ್ಕ್ರಿಯವಾದ ದೂರವಾಣಿ ಸಂಪರ್ಕ... ಇತ್ಯಾದಿ ಅಡಚಣೆಗಳಿಂದಾಗಿ ಜನರು ಎಲ್ಲೆಲ್ಲಿ ಇದ್ದರೊ ಅಲ್ಲೇ ಉಳಿಯುವಂತಾಯಿತು.ಇದೇ ಸಂದರ್ಭದಲ್ಲಿ ದೇಶದ ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳು ನಿರಂತರ ಮುನ್ನೆಚ್ಚರಿಕೆ ನೀಡತೊಡಗಿದವು. ‘ಕಾರ್ಖಾನೆ, ಕಚೇರಿಗಳಿಂದ ಹೊರಬರಬೇಡಿ.. ನೀವೆಲ್ಲ ಇದ್ದಲ್ಲೇ ಇರಿ. ಮನೆಗಳಿಗೆ ತೆರಳುವ ದುಸ್ಸಾಹಸ ಮಾಡಬೇಡಿ... ಸಾರಿಗೆ ಸಂಚಾರ, ರೈಲು ಸ್ಥಗಿತವಾಗಿದೆ’. ‘ರಾತ್ರಿ ಭೀಕರವಾಗಿರುತ್ತದೆ...  ಪಾದಚಾರಿಗಳು ನಡೆದು ಮನೆ ತಲುಪಲು ಪ್ರಯತ್ನಿಸದಿರಿ. ಹೆಚ್ಚಿನ ಅವಘಡ ಸಂಭವಿಸಬಹುದು...’ ಎಂದು ಎಲ್ಲ ವಿಭಾಗದ ಜನರಿಗೂ ಮುನ್ನೆಚ್ಚರಿಕೆ ನೀಡಲಾಯಿತು.ಯೊಕೊಹಾಮಾ ಹಾಗೂ ಕಂಟೊ ಸುತ್ತಮುತ್ತಲ ಪ್ರದೇಶಗಳು ವಿಶ್ವದ ಅತಿ ಜನ ನಿಬಿಡ ನಗರಗಳಾಗಿದ್ದು, ಇಲ್ಲಿ ಪ್ರತಿದಿನ 30 ದಶಲಕ್ಷದಷ್ಟು ಜನರು ಗಂಟೆಗಳ ಕಾಲ ನಡೆದು ಮನೆ-ಕೆಲಸದ ಜಾಗ ತಲುಪುತ್ತಾರೆ. ಇದರಿಂದಾಗಿ ಸರ್ಕಾರ ಈ ಮುನ್ನೆಚ್ಚರಿಕೆ ನೀಡಿತ್ತು.ಬಿಕೊ: ಈ ಎಲ್ಲಾ ಕಾರಣಗಳಿಂದ ಪ್ರತಿನಿತ್ಯ ಜನ, ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಭೂಗತ ರಸ್ತೆಗಳು, ಸಂಚಾರ ಮಾರ್ಗಗಳು ಭೂಕಂಪ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಬಿಕೊ ಅನ್ನುತ್ತಿದ್ದುವು. ರಾಜಧಾನಿಯಾದ್ಯಂತ ಸೈರನ್‌ಗಳು ಮೊಳಗುವಿಕೆ, ಟಿ.ವಿ. ಹೆಲಿಕಾಪ್ಟರ್‌ಗಳ ಹಾರಾಟಗಳು ಜನರಿಗೆ ಮತ್ತಷ್ಟು ಎಚ್ಚರದಿಂದಿರಲು ಸೂಚನೆ ನೀಡಿದುವು. ಇದೇ ಸಂದರ್ಭದಲ್ಲಿ ಜನರು ದಿನಸಿ ಮಳಿಗೆ- ಮಾಲ್‌ಗಳಿಗೆ ನುಗ್ಗಿ ಆಹಾರ ಸಾಮಗ್ರಿಗಳನ್ನು ಮನಬಂದಂತೆ ಖರೀದಿಸಿದರು.ಸ್ಯಾಂಡ್‌ವಿಚ್, ನೂಡಲ್ ಮುಂತಾದ ಸಿದ್ಧ ಆಹಾರ ಪೊಟ್ಟಣಗಳನ್ನು ಮನಬಂದಂತೆ ಖಾಲಿಮಾಡಿದರು. ದಾಸ್ತಾನಿಗಾಗಿ ಹೊತ್ತೊಯ್ದರು. ಈ ಮಧ್ಯೆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು. ಥರಗುಟ್ಟುವ ಕಟ್ಟಡಗಳಿಂದ ಸಹಸ್ರಾರು ಮಂದಿ ಹೊರಗೆ ಓಡಿದರು. ಮತ್ತೆ ಕೆಲವರು ಕಚೇರಿಗಳ ಒಳಗೆಯೇ ಉಳಿಯುವಂತಾಯಿತು. ಮನೆಯಿಂದ ದೂರ ಇರುವರು ಮನೆಮಂದಿಯೊಂದಿಗೆ ಮಾತನಾಡಲು ಪ್ರಯತ್ನಿಸಿದರೆ ದೂರವಾಣಿ ಕರೆಗಳ ಒತ್ತಡದಿಂದಾಗಿ ಸ್ಥಗಿತವಾಗಿತ್ತು.ಭೀಕರ ಭೂಕಂಪ ಹಾಗೂ ಸುನಾಮಿಯ ದೈತ್ಯ ಅಲೆಗಳು ಜಪಾನ್ ಭೂ ಭಾಗದಲ್ಲಿ ತಲ್ಲಣವನ್ನು ಉಂಟು ಮಾಡಿದ್ದವು. ಭಾರಿ ಪ್ರಮಾಣದ ಹಾನಿ ಇಲ್ಲಿ ಸಂಭವಿಸಿದೆ. ಮೂರು ಭೂಖಂಡಗಳು ಜತೆಗೂಡುವ ಸಂಧಿ ಪ್ರದೇಶದ ‘ಸೂಕ್ಷ್ಮ ಪ್ರದೇಶ’ದಲ್ಲಿ ಜಪಾನ್ ನೆಲೆಗೊಂಡಿದೆ. ಈ ಕಾರಣದಿಂದ ಜ್ವಾಲಾಮುಖಿ, ಭೂಕಂಪ ಇತ್ಯಾದಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.