ಬುಧವಾರ, ಆಗಸ್ಟ್ 4, 2021
27 °C

ಉನ್ನತ ಮಟ್ಟಕ್ಕೆ ದ್ವಿಪಕ್ಷೀಯ ಬಾಂಧವ್ಯ: ವೆನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತವನ್ನು ‘ಪ್ರಮುಖ ನೆರೆಯ ರಾಷ್ಟ್ರ’ವೆಂದು ಬಣ್ಣಿಸಿರುವ ಚೀನಾ ಪ್ರಧಾನಿ ವೆನ್ ಜಿಯಾಬೊ, ತಮ್ಮ ಭೇಟಿಯಿಂದ ಉಭಯ ದೇಶಗಳು ‘ಮಹತ್ವಪೂರ್ಣ ತಂತ್ರಕೌಶಲ್ಯಗಳ ಬಗ್ಗೆ ಒಮ್ಮತಾಭಿಪ್ರಾಯ’ಕ್ಕೆ ಬರುವ ಮತ್ತು ದ್ವಿಪಕ್ಷೀಯ ಬಾಂಧವ್ಯ ಉನ್ನತ ಮಟ್ಟವನ್ನು ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಗುರುವಾರ ರಾಷ್ಟ್ರಪತಿ ಭವನದ ಆವರಣದಲ್ಲಿ ಭವ್ಯ ಸ್ವಾಗತ ಸ್ವೀಕರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹೊಸ ಶತಮಾನದಲ್ಲಿ ಉಭಯತ್ರರ ನಡುವೆ ವಿಸ್ತೃತ ವಲಯದ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಮತ್ತು ಸ್ನೇಹಸಂಬಂಧವನ್ನು ಇನ್ನಷ್ಟೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಈ ಭೇಟಿ ನೆರವಾಗುವುದು’ ಎಂಬ ಭರವಸೆ ತಮಗಿದೆ ಎಂದು ಹೇಳಿದರು.ತಮ್ಮ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರ ಜಂಟಿ ಪ್ರಯತ್ನಗಳಿಂದ ಮಹತ್ವದ ತಂತ್ರಕೌಶಲ್ಯ ಒಮ್ಮತಾಭಿಪ್ರಾಯವನ್ನು ತಲುಪಲು ಸಾಧ್ಯವಾಗುವುದು ಮತ್ತು ಪ್ರಮುಖ ಫಲಿತಾಂಶ ಹೊರಹೊಮ್ಮುವುದು ಎಂಬ ವಿಶ್ವಾಸ ತಮಗಿರುವುದಾಗಿ ಅವರು ನುಡಿದರು. ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ ಎರಡನೇ ಭೇಟಿ ನೀಡಿದ 68 ವರ್ಷದ ಜಿಯಾಬೊ ಚೀನಾದ ಸಮಸ್ತ ಜನರ  ಶುಭಾಶಯಗಳನ್ನು ಭಾರತೀಯರಿಗೆ ತಿಳಿಸುತ್ತಿರುವುದಾಗಿಯೂ ಹೇಳಿದರು.ಹೊಸ ಶತಮಾನಕ್ಕೆ ಕಾಲಿಟ್ಟಿರುವ ಎರಡೂ ದೇಶಗಳು, ಶಾಂತಿ ಮತ್ತು ಏಳಿಗೆಗಾಗಿ ಹಲವು ಕ್ಷೇತ್ರಗಳಲ್ಲಿ ಸಹಕಾರದ ಪಾಲುದಾರಿಕೆ ಸಾಧಿಸಿರುವುದಾಗಿ ಹೇಳಿದರು.ಚೀನಾ-ಭಾರತ  ರಾಜತಾಂತ್ರಿಕ ಬಾಂಧವ್ಯಗಳನ್ನು ಸ್ಥಾಪಿಸಿಕೊಂಡು 60ನೇ ವರ್ಷದಲ್ಲಿರುವ ಈ ಸಂದರ್ಭದಲ್ಲಿ ಸಹಕಾರ ವಿಸ್ತರಣೆ ಮತ್ತು ಸಮಾನ ಅಭಿವೃದ್ಧಿ ಉತ್ತೇಜಿಸಲು ಒಳ್ಳೆಯ ಅವಕಾಶಗಳಿವೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.