ಮಂಗಳವಾರ, ಏಪ್ರಿಲ್ 13, 2021
22 °C

ಉರ್ದು ಟಿಟಿಐ: ಬಗೆಹರಿಯದ ಸಮಸ್ಯೆ

ಪ್ರಜಾವಾಣಿ ವಾರ್ತೆ ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ವಿಜಾಪುರ: ಸ್ಥಳೀಯ ಸರ್ಕಾರಿ ಉರ್ದು ಶಿಕ್ಷಕರ ತರಬೇತಿ ಸಂಸ್ಥೆ (ಟಿ.ಟಿ.ಐ) ಅಭಿವೃದ್ಧಿಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಉನ್ನತೀಕರಣದ ವಿಷಯವನ್ನು ವಿವಾದವಾಗಿಸಿದ್ದೇ ಇದಕ್ಕೆ ಕಾರಣ.ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಹಿಂದೆ ಅವಿಭಜಿತ ವಿಜಾಪುರ ಜಿಲ್ಲೆಯ ಇಳಕಲ್‌ನಲ್ಲಿತ್ತು. ಜಿಲ್ಲೆಯನ್ನು ವಿಭಜಿಸಿದ ನಂತರ ಅದು ಬಾಗಲಕೋಟೆ ಜಿಲ್ಲೆಯಲ್ಲಿ ಉಳಿಯಿತು. ಇಲ್ಲಿಯ ಸರ್ಕಾರಿ ಉರ್ದು ಶಿಕ್ಷಕರ ತರಬೇತಿ ಸಂಸ್ಥೆಯನ್ನೇ ಸರ್ಕಾರ ಡಯಟ್ ಆಗಿ ಉನ್ನತೀಕರಿಸಿತು.ಆದರೆ, ‘ಉರ್ದು ಶಿಕ್ಷಕರ ತರಬೇತಿ ಸಂಸ್ಥೆಯನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳಬೇಕು. ಅದನ್ನು ಡಯಟ್‌ನಲ್ಲಿ ವಿಲೀನಗೊಳಿಸುವುದು ಅಥವಾ ಡಯಟ್ ಆಗಿ ಉನ್ನತೀಕರಿಸುವುದು ಬೇಡ’ ಎಂದು ಜಿಲ್ಲೆಯ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಭಿವೃದ್ಧಿಗೂ ಇದು ಅಡ್ಡಿಯಾಯಿತು. ಮುಖಂಡರ ವಿರೋಧ ಹಾಗೂ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳ ಮನವಿಯ ಮೇರೆಗೆ ಸರ್ಕಾರ ಇಲ್ಲಿಯ ನವರಸಪುರದಲ್ಲಿ 4.25 ಎಕರೆ ನಿವೇಶನದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಕಟ್ಟಡ ನಿರ್ಮಿಸಿತು.‘ಇಲ್ಲಿಯ ಸರ್ಕಾರಿ ಉರ್ದು ಶಿಕ್ಷಕರ ತರಬೇತಿ ಸಂಸ್ಥೆಯ ಉನ್ನತೀಕರಣ ಆದೇಶವನ್ನು ರದ್ದು ಪಡಿಸಿ ರಾಜ್ಯ ಸರ್ಕಾರ ಜನವರಿ 6, 2007ರಲ್ಲಿಯೇ ಆದೇಶ ಹೊರಡಿಸಿದೆ. ಆದರೂ ಈ ಸಂಸ್ಥೆ ಡಯಟ್‌ನಿಂದ ಇನ್ನೂ ಪ್ರತ್ಯೇಕಗೊಂಡಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಮುಖಂಡ ಬಡೇಪೀರ್ ಜುನೇದಿ, ಸಿಂದಗಿಯ ಮಾಜಿ ಶಾಸಕ ಎಂ.ಎಚ್. ಬೆಕಿನಾಳಕರ, ಕರ್ನಾಟಕ ಮುಸ್ಲಿಂ ಕೌನ್ಸಿಲ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮುಲ್ಲಾ, ವಕೀಲ ಎಂ.ಕೆ. ಕೆಂಭಾವಿ ಇತರರು ಹೇಳುತ್ತಿದ್ದಾರೆ.‘ಉರ್ದು ಮಾಧ್ಯಮದ ತರಬೇತಿ ಸಂಸ್ಥೆಯನ್ನು ಬೇರೆ ಮಾಧ್ಯಮ ಅಥವಾ ಸಾಮಾನ್ಯ ಮಾಧ್ಯಮದ ಡಯಟ್ ಸಂಸ್ಥೆಗೆ ಉನ್ನತೀಕರಣ ಮಾಡುವುದರಿಂದ ತರಬೇತಿ ಸಂಸ್ಥೆಯ ಪ್ರತ್ಯೇಕ ಅಸ್ತಿತ್ವ ಹಾಗೂ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ’ ಎಂದೂ ಅವರು ಹೇಳುತ್ತಿದ್ದಾರೆ.‘ಡಯಟ್ ಸಂಸ್ಥೆ ಪ್ರತ್ಯೇಕವಾಗಿ 2008ರಿಂದ ನವರಸಪುರದ ಹೊಸ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದೆ. ಉರ್ದು ಶಿಕ್ಷಕರ ತರಬೇತಿ ಸಂಸ್ಥೆ ಮೂಲ ಸ್ಥಳದಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೂ, ಉರ್ದು ಶಿಕ್ಷಕರ ತರಬೇತಿ ಸಂಸ್ಥೆಯ ಆಡಳಿತ ವ್ಯಾಪ್ತಿಯನ್ನು ಡಯಟ್‌ನಿಂದ ಪ್ರತ್ಯೇಕಿಸಿಲ್ಲ. ಸ್ವತಂತ್ರ ಕಾರ್ಯ ನಿರ್ವಹಣೆಗೆ ಅವಕಾಶ ನೀಡಿಲ್ಲ’ ಎಂಬುದು ಅವರ ಆರೋಪ.ಈ ಆರೋಪ ಬಗ್ಗೆ ಅಪಸ್ವರವೂ ಕೇಳಿ ಬರುತ್ತಿದೆ. ‘ಯಾವುದೇ ಸಂಸ್ಥೆಯನ್ನು ಉನ್ನತೀಕರಿಸಿ ಮೇಲ್ದರ್ಜೆಗೆ ಏರಿಸಿದರೆ ಸಂತಸ ಪಡಬೇಕು. ಅದರಿಂದ ಸಂಸ್ಥೆ ಅಭಿವೃದ್ಧಿ ಹೊಂದುತ್ತದೆ. ನಮ್ಮ ಮಕ್ಕಳಿಗೂ ಅನುಕೂಲವಾಗುತ್ತದೆ. ಕೆಲವೇ ಕೆಲವರ ಹಿತಾಸಕ್ತಿಯನ್ನು ಕಾಪಾಡಲು ಉನ್ನತೀಕರಣಕ್ಕೆ ವಿರೋಧ ವ್ಯಕ್ತಪಡಿಸುವುದು ಎಷ್ಟು ಸರಿ?’ ಎಂದು ಶಿಕ್ಷಣ ತಜ್ಞರು ಹಾಗೂ ಕೆಲ ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ‘ಈ ಆರೋಪಗಳೆಲ್ಲ ನಿರಾಧಾರ. ಎಲ್ಲ ಬಗೆಯ ಪರಿಶೀಲನೆಯೂ ನಡೆದಿದೆ. ಎಲ್ಲರಿಗೂ ವಾಸ್ತವಾಂಶದ ಅರಿವಾಗಿದೆ. ಸರ್ಕಾರಿ ಉರ್ದು ಶಿಕ್ಷಕರ ತರಬೇತಿ ಸಂಸ್ಥೆಯನ್ನು ಡಯಟ್‌ನಿಂದ ಪ್ರತ್ಯೇಕಿಸುವುದು ಸರ್ಕಾರ ಮಟ್ಟದಲ್ಲಿ ಆಗಬೇಕಿರುವ ನಿರ್ಧಾರ. ಅದಕ್ಕಾಗಿ ನಾವೂ ಪ್ರಸ್ತಾವನೆ ಸಲ್ಲಿಸಿದ್ದೇವೆ’ ಎಂಬುದು ಡಯಟ್‌ನ ಪ್ರಾಚಾರ್ಯ ಸಿ.ವಿ. ಹಿರೇಮಠ ಅವರ ವಿವರಣೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.