ಗುರುವಾರ , ಅಕ್ಟೋಬರ್ 1, 2020
27 °C

ಊಟದ ವ್ಯಥೆ ಪಿಜಿ ಅಡುಗೆ ಕಥೆ

ಸವಿತಾ ಎಸ್. Updated:

ಅಕ್ಷರ ಗಾತ್ರ : | |

ಊಟದ ವ್ಯಥೆ ಪಿಜಿ ಅಡುಗೆ ಕಥೆ

ಉತ್ತರಕನ್ನಡದ ಕುಮಟಾ ಮೂಲದ ವಿದ್ಯಾ ಕಳೆದ ಆರು ತಿಂಗಳಿನಲ್ಲಿ ಮೂರು ಪಿಜಿ (ಪೇಯಿಂಗ್ ಗೆಸ್ಟ್ ವ್ಯವಸ್ಥೆ) ಬದಲಾಯಿಸಿದ್ದಾಳೆ. ಕಾರಣ ಕೇಳಿದರೆ `ಊಟ ಹಿಡಿಸುತ್ತಿಲ್ಲ~, `ಬೆಳಗಿನ ತಿಂಡಿ ಎಣ್ಣೆಯಲ್ಲಿ ಮುಳುಗಿರುತ್ತದೆ~, `ರಾತ್ರಿಯ ಊಟ ತುಂಬಾ ಖಾರ~, `ಮಜ್ಜಿಗೆಯೋ ಹುಳಿ ಹುಳಿ~ ಎಂದು ದೂರಿನ ಪಟ್ಟಿ ಹೇಳುತ್ತಾಳೆ. ಇದೀಗ ನಾಲ್ಕನೇ ಪಿಜಿ ಹುಡುಕುತ್ತಿದ್ದಾಳೆ. ಈ ಬಾರಿ ಆಕೆಯ ಆಯ್ಕೆ `ಊಟ ನೀಡದ ಅತಿಥಿಗೃಹ~.

ಈವರೆಗೆ ಏಳು ಬಾರಿ ಪಿಜಿ ಬದಲಾಯಿಸಿದ ಮಂಗಳೂರಿನ ಸ್ಮಿತಾ, ಗೋವಾದ ಸುನಂದಾ ಅನುಭವವೂ ಇದಕ್ಕಿಂತ ಭಿನ್ನವಿಲ್ಲ. ಎರಡು ಹೊತ್ತು ಊಟ-ತಿಂಡಿ ನೀಡುವ ಹಾಸ್ಟೆಲ್‌ನಿಂದ ಹೊರಬಂದು ಸ್ವತಃ ಅಡುಗೆ ತಯಾರಿಸಿಕೊಂಡು ತಿನ್ನುವ ಅತಿಥಿ ಗೃಹಗಳತ್ತ ಹೆಚ್ಚಿನ ಮಂದಿ ಒಲವು ತೋರುತ್ತಿದ್ದಾರೆ.

ಏನಿದು ಸ್ವ ತಯಾರಿಕೆ?

ಕಳೆದೆರಡು ವರ್ಷಗಳಿಂದ ನಗರದಲ್ಲಿ ಪ್ರಸಿದ್ಧಿ ಹೊಂದುತ್ತಿರುವ ಸ್ವ-ತಯಾರಿಕಾ ಅತಿಥಿಗೃಹಗಳು (ಸೆಲ್ಫ್ ಫುಡ್ ಪ್ರಿಪೇರಿಂಗ್) ತಮಗಿಷ್ಟ ಬಂದ ಆಹಾರ ತಯಾರಿಸಿಕೊಳ್ಳಲು ಅವಕಾಶ ನೀಡುತ್ತವೆ. ಹೊರರಾಜ್ಯಗಳಿಂದ ಉದ್ಯೋಗ ಅರಸಿ ಬಂದ ಹೆಚ್ಚಿನ ಮಂದಿ ಇಲ್ಲಿನ ಚಪಾತಿ, ತಿಳಿಸಾರು ಊಟಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಅವರಿಗೆ ನೆರವಾಗಲೆಂದು ಹುಟ್ಟಿದ್ದೇ ಸ್ವ-ತಯಾರಿಕಾ ಪಿಜಿಗಳು. ಪ್ರತ್ಯೇಕ ರೂಮ್ ಮಾಡಿ ಗ್ಯಾಸ್ ಸಂಪರ್ಕಕ್ಕೆ ಕಾಯುವ ತಲೆನೋವು ಇಲ್ಲಿಲ್ಲ. ಪಿಜಿಗೊಬ್ಬ ಕಾಯುವ ಗುಮಾಸ್ತನಿರುವುದರಿಂದ ರೂಮ್‌ಗಳಲ್ಲಿ ಕಾಡುವ ಅಭದ್ರತೆಯೂ ಇಲ್ಲಿರುವುದಿಲ್ಲ. ಉದ್ಯೋಗಕ್ಕೆ ತೆರಳುವ ಮಹಿಳೆಯರು ಹೆಚ್ಚಾಗಿ ಇಷ್ಟಪಡುವ ಪಿಜಿಗಳಲ್ಲಿ ಗ್ಯಾಸ್ ಸಂಪರ್ಕ ನೀಡುವ ಜವಾಬ್ದಾರಿ ಮಾಲೀಕರದ್ದು. ಅಡುಗೆ ತಯಾರಿಸಲು, ಪಾತ್ರೆ ತೊಳೆಯಲು ಒಬ್ಬ ಆಳನ್ನೂ ಒದಗಿಸುತ್ತಾರೆ. ಮಾಡಿಟ್ಟ ಆಹಾರ ಕೆಡದಂತಿಡಲು ಫ್ರಿಡ್ಜ್ ಸೌಲಭ್ಯವನ್ನೂ ನೀಡಲಾಗುತ್ತದೆ. ತಮ್ಮಿಷ್ಟದ ಆಹಾರ ಪದಾರ್ಥ ತಯಾರಿಸಿಕೊಳ್ಳಬಹುದು.

`ಎಂಟು ವರ್ಷಗಳ ಹಿಂದೆ ನಾನು ಪಿಜಿ ಆರಂಭಿಸಿದಾಗ 18 ಮಂದಿಗೆ ಆಹಾರ ತಯಾರಿಸಿ ಕೊಡುತ್ತಿದ್ದೆ. ಪ್ರತಿನಿತ್ಯ ಹತ್ತಾರು ಸಮಸ್ಯೆಗಳು, ಸಾರು, ಪಲ್ಯ, ಸಾಂಬಾರು, ಏನೇ ಮಾಡಿದರೂ ಇಲ್ಲದ ತಕರಾರು. ತಟ್ಟೆಗೆ ಹಾಕಿಕೊಂಡ ಅನ್ನ ಚೆಲ್ಲುತ್ತಿದ್ದರು. ಮತ್ತಷ್ಟು ಮಂದಿ ನನಗೆ ತಿಳಿಸದೇ ಹೊರಗೆ ತಿಂದು ಬರುತ್ತಿದ್ದರು. ಮಾಡಿದ ಅಡುಗೆಯಲ್ಲಿ ಅರ್ಧಕ್ಕೂ ಹೆಚ್ಚು ಮಿಕ್ಕಿರುತ್ತಿತ್ತು. ಪ್ರತಿನಿತ್ಯ ವ್ಯರ್ಥವಾಗುತ್ತಿದ್ದ ಆಹಾರ ನೋಡಿ ಬೇಸತ್ತುಹೋಗಿದ್ದೆ. ಒಂದೇ ತಿಂಗಳಲ್ಲಿ ಅದೇ ಪಿಜಿಯನ್ನು ಊಟ ಕೊಡದ ಹಾಸ್ಟೆಲನ್ನಾಗಿ ಬದಲಾಯಿಸಿದೆ. ಅವರಿಗಿಷ್ಟ ಬಂದ ಆಹಾರ ಪದಾರ್ಥಗಳನ್ನು ಅವರೇ ತಯಾರಿಸಿಕೊಳ್ಳಲಿ ಎಂಬ ಕಾರಣಕ್ಕೆ ಅಡುಗೆಮನೆಯನ್ನೂ ಅವರಿಗೇ ಬಿಟ್ಟುಕೊಟ್ಟೆ. ಮೂರು ಹೊತ್ತು ಆಹಾರ ನೀಡುವುದರೊಂದಿಗೆ ತಿಂಗಳಿಗೆ ಮೂರು ಮೂರೂವರೆ ಸಾವಿರ ರೂಪಾಯಿ ಪಡೆಯುವ ಪಿಜಿಗಳು ಉತ್ತಮ ಗುಣಮಟ್ಟದ ಆಹಾರ ನೀಡಲು ಸಾಧ್ಯವೇ ಇಲ್ಲ. ಆ ದುಡ್ಡಿಗೆ ಏರುತ್ತಿರುವ ಆಹಾರ ಪದಾರ್ಥಗಳ ಬೆಲೆ ಮಧ್ಯೆ ಈ ದುಡ್ಡಿಗೆ ನ್ಯಾಯಯುತ ಆಹಾರ ನೀಡುವುದು ಕನಸಿನ ಮಾತು~ ಎಂದರು ಸಿಎಂಎಚ್ ರಸ್ತೆಯ ಶಹನಾಜ್.

`ಈಗ ನನ್ನ ಪಿಜಿಯಲ್ಲಿ 15 ಮಂದಿ ಇದ್ದಾರೆ. ಎರಡು ಅಡುಗೆಮನೆಗಳಿವೆ. ಅವರಿಗಿಷ್ಟದ ಆಹಾರ ತಯಾರಿಸಲು ಅನುಮತಿ ಇದೆ. ಗ್ಯಾಸ್ ಮುಗಿಯುತ್ತಿದ್ದಂತೆ ಹೊಸ ಸಿಲಿಂಡರ್ ನೀಡುತ್ತೇನೆ. ಕುಕ್ಕರ್, ಪಾತ್ರೆಗಳನ್ನೂ ಒದಗಿಸಿದ್ದೇನೆ. ಹಾಸ್ಟೆಲ್ ಸ್ವಚ್ಛಗೊಳಿಸಲು ಬರುವ ನಾನಿ ಈ ಪಾತ್ರೆಗಳನ್ನೂ ತೊಳೆದಿಟ್ಟು ಹೋಗುತ್ತಾರೆ. ಉದ್ಯೋಗಕ್ಕೆ ತೆರಳುವವರಿಗೆ ಇಲ್ಲವೇ ವಿದ್ಯಾರ್ಥಿಗಳಿಗೆ ಪಿಜಿ ಹೊರೆಯಾಗದಂತೆ ನೋಡಿಕೊಳ್ಳುತ್ತಿದ್ದೇನೆ~ ಎಂದರು ಗುಜರಾತ್ ಮೂಲದ ಶಹನಾಜ್.

`ಹಾಸ್ಟೆಲ್ ಇನ್‌ಮೇಟ್‌ಗಳಿಗೆ ಊಟ ತಯಾರಿಸಿಕೊಡುವುದೆಂದರೆ ತಲೆನೋವಿನ ಕೆಲಸವೇ. ಒಬ್ಬೊಬ್ಬರದೂ ಒಂದೊಂದು ಅಭಿರುಚಿ. ಒಬ್ಬರಿಗೆ ಇಷ್ಟವಾಗುವ ತಿಂಡಿ ಉಳಿದ ಒಂಬತ್ತು ಮಂದಿಗೆ ಇಷ್ಟವಾಗದಿರಬಹುದು. ಅಕಸ್ಮಾತ್ ಆರೋಗ್ಯ ಕೈಕೊಟ್ಟಿತೆಂದರೂ ನಮ್ಮನ್ನೇ ಹೊಣೆ ಮಾಡುತ್ತಾರೆ. ಇಷ್ಟೆಲ್ಲಾ ರಿಸ್ಕ್ ಯಾಕೆ ಎಂಬ ಕಾರಣಕ್ಕೆ ನಾನು ಸ್ವ-ಆಹಾರ ತಯಾರಿಕಾ ಪಿಜಿ ಆರಂಭಿಸಿದ್ದೇನೆ~ ಎನ್ನುತ್ತಾರೆ ವಿಭಾ.

ಆಹಾರದ್ದೇ ಸಮಸ್ಯೆ

`ಅವರೇ ತಯಾರಿಸಿಕೊಡುವ ಆಹಾರ ಫ್ರೆಶ್ ಆಗಿರುವುದಿಲ್ಲ. ಎರಡು ದಿನ ಹಳೆಯದಾದ ಅಥವಾ ಹಳಸಿದ ಪದಾರ್ಥ ಜತೆ ಸೇರಿಸಿ ಕೊಡುತ್ತಾರೆ. ಪೌಷ್ಠಿಕ ಆಹಾರವಂತೂ ಕನಸಿನ ಮಾತು. ಸ್ವಲ್ಪ ತಡವಾಗಿ ಬಂದರೂ ಕಿರಿಕಿರಿ ಹುಟ್ಟಿಸುವ ಮಾತುಗಳು. ಇವೆಲ್ಲ ಬೇಡ ಎಂಬ ಕಾರಣಕ್ಕೆ ಊಟ ನೀಡದ, ನಾವೇ ತಯಾರಿಸುವ ಪಿಜಿ ಹುಡುಕಿದ್ದೇನೆ.

- ರೇಖಾ, ಉದ್ಯೋಗಿ

ತಡವಾದರೆ ಉಪವಾಸವೇ ಗತಿ

`ಅವರು ಕೊಡುವ ಊಟವೋ ಹಾರಿಬಲ್! ಇನ್ನು ಅವರು ಹೇಳಿದ ಟೈಮ್‌ಗೆ ನಾವು ಹಾಸ್ಟೆಲ್ ತಲುಪದಿದ್ದರೆ ಉಪವಾಸ. ನಗರದ ಈ ಟ್ರಾಫಿಕ್ ಸಮಸ್ಯೆಯ ಮಧ್ಯೆ ತಲುಪುವುದು ಅರ್ಧ ಗಂಟೆ ತಡವಾದರೂ ಮಾಲೀಕರು ಅಡುಗೆಮನೆಯ ಕದ ಮುಚ್ಚಿರುತ್ತಾರೆ. ನಾವೇ ಮಾಡಿಕೊಳ್ಳುವ ಪಿಜಿಯಾದರೆ ಇಷ್ಟವಾದ ಐಟಂ ತಯಾರಿಸಿಕೊಳ್ಳಬಹುದು. ಅಲ್ಲಿ ಆ ಸ್ವಾತಂತ್ರ್ಯ ಇಲ್ಲವಲ್ಲ~

- ಸುನಂದಾ

ಇಲ್ಲೂ ಸಮಸ್ಯೆ ಇದೆ...

ಊಟ ತಿಂಡಿ ನಾವೇ ತಯಾರಿಸಿಕೊಳ್ಳುವುದಾದರೂ ಹತ್ತಾರು ಸಮಸ್ಯೆಗಳಿವೆ. ಸಂಜೆ ಕೆಲಸ ಮುಗಿಸಿ ಬರುವ ಹೊತ್ತಿಗೆ ಎರಡು ಅಡುಗೆಮನೆಗಳ ನಾಲ್ಕು ಗ್ಯಾಸ್‌ಗಳಲ್ಲೂ ಜನ ತುಂಬಿರುತ್ತಾರೆ. ಕನಿಷ್ಠವೆಂದರೆ ಎರಡು ಗಂಟೆ ಕಾಯಬೇಕು. ಅಲ್ಲೂ ಇತರರೊಂದಿಗೆ ಜಗಳ ಕಾಯಬೇಕು. ಮಾಡಿದ ಅಡುಗೆ ಫ್ರಿಡ್ಜ್‌ನಲ್ಲಿಟ್ಟರೆ ಮರುದಿನ ಮಾಯವಾಗಿರುತ್ತದೆ. ಗ್ಯಾಸ್ ಮುಗಿದರೆ ಎರಡು ದಿನ ಕಾಯಬೇಕು, ಇವರನ್ನು ನಂಬಿ ಉಪವಾಸ ಮಲಗಿದ್ದೂ ಉಂಟು ಎಂದು ಅಸಮಾಧಾನ ತೋಡಿಕೊಳ್ಳುತ್ತಾರೆ.

- ಚೈತ್ರಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.