ಗುರುವಾರ , ಜೂನ್ 17, 2021
22 °C

ಎಂಜಿನಿಯರ್ ಕಂಡ ದೇವಾಲಯ

ಟಿ.ಆರ್. ಅನಂತರಾಮು Updated:

ಅಕ್ಷರ ಗಾತ್ರ : | |

ದೇವಾಲಯಗಳು ಎಂದಿನ ಪಾವಿತ್ರ್ಯವನ್ನು ಈ ದಿನಗಳಲ್ಲೂ ಉಳಿಸಿಕೊಂಡಿವೆಯೋ ಅಥವಾ ಭಕ್ತಿಯ ವಹಿವಾಟು ನಡೆಸುವ ವ್ಯಾಪಾರ ಕೇಂದ್ರಗಳಾಗಿವೆಯೋ ಎಂಬ ಜಿಜ್ಞಾಸೆಗೆ ಎಡೆಮಾಡಿಕೊಟ್ಟಿರುವ ಕಾಲವಿದು.ತಿರುಪತಿ ತಿಮ್ಮಪ್ಪ ಧರೆಗೆ ದೊಡ್ಡವನೋ, ತಿರುವನಂತಪುರದ ಅನಂತಪದ್ಮನಾಭನೋ ಎಂದು ಸಂಪತ್ತಿನಿಂದ ಅಳೆಯುವವರಿಗೆ ಪದ್ಮನಾಭನದೇ ಒಂದು ಕೈ ಮೇಲು ಎಂಬುದು ದಿಟ. ಒಂದೂಕಾಲು ಲಕ್ಷ ಕೋಟಿ ರೂಪಾಯಿಯ ಸಂಪತ್ತಿನ ಒಡೆಯ ಅನಂತಪದ್ಮನಾಭ ಸದ್ಯಕ್ಕೆ ಧರೆಗೆ ದೊಡ್ಡವನು. ಸಂಪತ್ತಿನ ಮೌಲ್ಯಮಾಪನವಾದ ನಂತರ ಈಗ ಭಕ್ತರೂ ತಣ್ಣಗಾಗಿದ್ದಾರೆ.ಇಂಥ ಯಾವ ಲೆಕ್ಕಾಚಾರಗಳನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ ಈ ದೇವಾಲಯವನ್ನು ಹೊಕ್ಕ ರಾಕೆಟ್ ಎಂಜಿನಿಯರ್ ಸಿ.ಆರ್. ಸತ್ಯ, ತಿರುವನಂತಪುರದಲ್ಲಿ ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡಿದವರು. ಮೊದಲ ಬಾರಿಗೆ ಅನಂತಪದ್ಮನಾಭ ದೇವಾಲಯವನ್ನು ನೋಡಿದಾಗ ಅವರಿಗೆ ‘ಜ್ಞಾನೋದಯ’ವಾದದ್ದು ಅನಂತಪದ್ಮನಾಭನ ಶಯನಸ್ಥಿತಿಯಲ್ಲಿರುವ ಭಾರಿ ವಿಗ್ರಹವೂ ಅಲ್ಲ ಅಥವಾ ಶಯನವಾಗಿರುವ ಸರ್ಪದ ಧ್ಯಾನಮುದ್ರೆಯೂ ಅಲ್ಲ. ಥಟ್ಟನೆ ಕಣ್ಣಿಗೆ ರಾಚುವ ಮಹಾದೇಗುಲದ ಸೈಜುಗಲ್ಲುಗಳು!ಗರ್ಭಗುಡಿಯ ಮುಂದೆ ಪ್ರತಿಷ್ಠಾಪಿಸಿರುವ ಏಳು ಮೀಟರ್ ಉದ್ದ, ಅಷ್ಟೇ ಅಗಲ, ಒಂದು ಮೀಟರ್ ದಪ್ಪದ ಏಕಶಿಲೆ ಒತ್ತಕ್ಕಲ್. ಇದರ ಮೂಲವನ್ನು ಅರಸಲು ತೊಡಗಿ ಇಡೀ ಕೇರಳದ ಚರಿತ್ರೆಯ ಪುಟಗಳನ್ನು ಬಚ್ಚಿಟ್ಟುಕೊಂಡಿರುವ ತಾಳೆಗರಿಯ ಅಧ್ಯಯನಕ್ಕೆ ಸತ್ಯ ತೊಡಗುತ್ತಾರೆ. ಕಲ್ಲಿನ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಪಡೆಯಲು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗುತ್ತಾರೆ. ಕೇರಳದ ಪತ್ರಾಗಾರದ ಒಳಹೊಕ್ಕು ಕಟ್ಟುಗಳನ್ನು ಬಿಚ್ಚುತ್ತಾರೆ. ಈಗಲೂ ಈ ದೇವಾಲಯ ರಾಜಸಂತತಿಯ ಸುಪರ್ದಿನಲ್ಲಿದೆ.ಆ ವಂಶದಲ್ಲೂ ಆಳವಾಗಿ ಅಧ್ಯಯನ ಮಾಡಿದ ರಾಜಸಂತತಿ ಇದೆ. ಹಲವರ ಶಿಫಾರಸು ಪಡೆದು ಅರಮನೆಯನ್ನೂ ಎಡತಾಕುತ್ತಾರೆ. ತಿರುವನಂತಪುರದ ಮಹಾಪಂಡಿತರೆನ್ನಿಸಿಕೊಂಡಿದ್ದ ಸೂರ್ನಾಡೆ ಕುಂಜನ್ ಪಿಳ್ಳೆ ಕೋಪಿಷ್ಠರಾದರೂ, ಸತ್ಯ ಅವರ ಸತ್ಯನಿಷ್ಠೆಯನ್ನು ಮೆಚ್ಚಿ, ತಮ್ಮಲ್ಲಿರುವ ಮಾಹಿತಿಗಳೆಲ್ಲವನ್ನೂ ನೀಡುತ್ತ ಸಂಶೋಧನೆಯ ಪ್ರಗತಿಯನ್ನು ಮೆಚ್ಚುತ್ತಾರೆ. ಕಾಲಕಾಲಕ್ಕೆ ಈ ದೇವಾಲಯ ಜೀರ್ಣೋದ್ಧಾರವಾದ ಬಗ್ಗೆ ಅವರಿಂದಲೇ ಮಾಹಿತಿ ಪಡೆದು ಮತ್ತಷ್ಟು ಶೋಧನೆಗೆ ಇಳಿಯುತ್ತಾರೆ.ಅನಂತಪದ್ಮನಾಭ ದೇವಾಲಯದ ಎಂಟು ಕಿಲೋ ಮೀಟರು ಪೂರ್ವಕ್ಕಿರುವ ತಿರುಮಲೈ ಗಣಿಯ ಬಗ್ಗೆ ಯಾರೋ ಸುಳಿವು ಕೊಡುತ್ತಾರೆ. ಅಲ್ಲಿ ಗಣಿಮಾಡಿದ ಕಲ್ಲಿಗೂ, ದೇವಾಲಯದ ಕಲ್ಲಿಗೂ ಹೋಲಿಸುವ ಹಂತದಲ್ಲಿ ಕಲ್ಲು ಕುಟುಕರು ಬಳಸಿದ್ದ ಉಳಿಗಳು ಸಿಕ್ಕಿ ಅವನ್ನು ರಾಸಾಯನಿಕ ವಿಶ್ಲೇಷಣೆ ಮಾಡಿಸಿ, ಅವು ಸೇಲಂ ಮೂಲದಿಂದ ಬಂದವು ಎಂಬುದನ್ನು ಖಚಿತಪಡಿಸಿಕೊಳ್ಳುತ್ತ ಲೋಹವಿಜ್ಞಾನದ ಬಗ್ಗೆ ಹೊಸಬೆಳಕು ಚೆಲ್ಲುತ್ತಾರೆ.ಇಷ್ಟೆಲ್ಲ ಅವರು ಮಾಡಬೇಕಾಗಿ ಬಂದದ್ದು ‘ಅನಂತಪದ್ಮನಾಭ ದೇವಾಲಯದ ಕಲ್ಲುಗಳನ್ನು ಕುರಿತು ಡಾಕ್ಯುಮೆಂಟರಿ ಫಿಲಂ ಮಾಡಿ’ ಎನ್ನುವ ಸೂಚನೆಯೊಂದರ ಅನುಷ್ಠಾನಕ್ಕೆ ಮುಂದಾದಾಗ.

ಅಂದಹಾಗೆ, ಎಷ್ಟು ಕಲ್ಲನ್ನು ಈ ಮಹಾಮಂದಿರದ ನಿರ್ಮಾಣಕ್ಕೆ ಬಳಸಿರಬಹುದು? ಇಲ್ಲೇ ಸತ್ಯ ಅವರ ಕುತೂಹಲ ಮತ್ತು ವಿದ್ವತ್ತು ಏಕಕಾಲಕ್ಕೆ ಪರೀಕ್ಷೆಗೊಳಗಾಗುವುದು.ದೇವಾಲಯದ ಒಳಗೆ ಅಳತೆ ಮಾಡುವಂತಿಲ್ಲ. ಅದು ನಿಷಿದ್ಧ. ಇನ್ನು ಇಲ್ಲಿನ ಕಲ್ಲಿನ ಚೂರನ್ನು ಒಡೆದು ಪರೀಕ್ಷೆಗೂ ಕಳಿಸುವಂತಿಲ್ಲ, ಅದೂ ನಿಷಿದ್ಧ. ಅದಕ್ಕಾಗಿ ಗಣಿಗೆ ಹೋಗುವುದು, ಕಲ್ಲನ್ನು ತರುವುದು, ಹೋಲಿಸುವುದು– ಅದೇ ಒಂದು ದೊಡ್ಡ ತಾರಾಟವಾಗುತ್ತದೆ. ತಮ್ಮ ಎಂಜಿನಿಯರ್ ಜ್ಞಾನದಿಂದ ಫಲಿತವಾದ ಎಲ್ಲ ತಂತ್ರಗಳನ್ನೂ ಬಳಸಿ ಇಲ್ಲಿಗೆ ಕಲ್ಲುಗಳನ್ನು ಸಾಗಿಸಲು ಬೇಕಾದ ಮಾನವ ಬಲ ಲೆಕ್ಕಹಾಕುತ್ತಾರೆ. ಕಲ್ಲುಗಳನ್ನು ಸಾಗಿಸಬೇಕಾದಾಗ ಬಳಸಿದ ತಂತ್ರಗಳ ಚಿತ್ರ ಬಿಡಿಸುತ್ತಾರೆ. ಅಂತಿಮವಾಗಿ ರೋಚಕ ಅಂಕಿಅಂಶಗಳನ್ನು ಮುಂದಿಡುತ್ತಾರೆ.ಆಗಿನ ಕಾಲದ ಲೆಕ್ಕದಲ್ಲಿ ಇಷ್ಟು ಕಲ್ಲು ಸಾಗಿಸಲು ಐದು ಲಕ್ಷ ಮಾನವ ಗಂಟೆಗಳು ಖರ್ಚಾಗಿವೆ. ೫೫,೦೦ ಎತ್ತಿನ ಬಂಡಿ ಅಥವಾ ಈಗಿನ ಲೆಕ್ಕದಲ್ಲಿ, ೧೯,೦೦೦ ಲಾರಿ ಭರ್ತಿ ಕಲ್ಲುಗಳನ್ನು ಈ ದೇವಾಲಯಕ್ಕೆ ಬಳಸಲಾಗಿದೆ. ತೂಕ: ೧,೬೫,೦೦೦ ಟನ್ನು. ಇವೆಲ್ಲವನ್ನೂ ಒಂದೇ ಕಡೆ ಸೇರಿಸಿದರೆ ೩೦ ಮೀಟರ್ ಎತ್ತರದ, ಬುಡದಲ್ಲಿ ೪೫ ಮೀಟರ್ ಅಗಲದ, ತುದಿಯಲ್ಲಿ ೧೫ ಮೀಟರ್ ವಿಸ್ತಾರದ ಕಾಲು ಕಿಲೋಮೀಟರ್ ಉದ್ದದ ಬೆಟ್ಟವಾಗುತ್ತದೆ.ಮಹಾರಾಜ ಮಾರ್ತಾಂಡವರ್ಮನ ಆಡಳಿತ ಕಾಲದಲ್ಲಿ (ಕ್ರಿ.ಶ. ೧೭೨೯-೧೭೫೮), ಅವನ ಉಸ್ತುವಾರಿಯಲ್ಲೇ ನಿರ್ಮಾಣದ ಬಹುಪಾಲು ಪೂರ್ಣವಾದದ್ದು. ಹೊರ ಪಡಸಾಲೆ ನಿರ್ಮಾಣವಾಗುತ್ತಿದ್ದಾಗ ೪,೦೦೦ ಕುಶಲ ಕೆಲಸಗಾರರು, ೬೦೦೦ ಸಹಾಯಕ ಸಿಬ್ಬಂದಿಗಳು, ೧೦೦ ಆನೆಗಳು ಸತತವಾಗಿ ಹಗಲೂ ಇರುಳು ಏಳು ತಿಂಗಳು ಕೆಲಸ ಮಾಡಿದ ದಾಖಲೆಗಳನ್ನು ಮುಂದಿಡುತ್ತಾರೆ.ನಮ್ಮಲ್ಲಿ ಎಲ್ಲವನ್ನೂ ವೇದಕಾಲಕ್ಕೆ ಕೊಂಡೊಯ್ಯುವ ಪರಿಪಾಠವಿದೆ. ಆದರೆ ಪ್ರಾಚೀನತೆಯ ಬಗ್ಗೆ ನಿಖರವಾಗಿ ತಿಳಿಯಲು ಅನುಸರಿಸಬೇಕಾದ ವೈಜ್ಞಾನಿಕ ತರ್ಕವೇ ಬೇರೆ. ಸಿ.ಆರ್. ಸತ್ಯ ಅವರ ಗಮನ ಇತ್ತ ಕಡೆ. ‘ಚೆಲ್ಲಾಪಿಲ್ಲಿಯಾಗಿ ಹರಿದು ಹಂಚಿ ಹೋಗಿ ಯಾವುದ್ಯಾವುದೇ ಇಲಾಖೆಯಲ್ಲಿ, ಯಾರೋ ಸಂತರಲ್ಲಿ, ಯಾವುದೋ ತಾಳೆಗರಿಯಲ್ಲಿ, ಯಾರದೋ ಬಾಯಿಯಲ್ಲಿ ಇದ್ದ ಮಾಹಿತಿಯನ್ನು ಅವರು ಅಚ್ಚುಕಟ್ಟಾಗಿ ಕಾಲಕ್ರಮದಲ್ಲಿ ಜೋಡಿಸಿ, ‘ಅಳಿವಿಲ್ಲದ ಸ್ಥಾವರ’ ಕೃತಿಯಲ್ಲಿ ಇತಿಹಾಸ, ಶಿಲ್ಪಶಾಸ್ತ್ರ, ಭೂಗೋಳ, ಭೂವಿಜ್ಞಾನ, ಲೋಹವಿಜ್ಞಾನ ಎಲ್ಲವನ್ನೂ ಒಂದೇ ತೋರಣದಲ್ಲಿ ಕಟ್ಟಿ ಅಪರೂಪದ ಸಾಹಿತ್ಯ ಪ್ರಕಾರವೊಂದನ್ನು ನೀಡಿದ್ದಾರೆ.ವಿಜ್ಞಾನ ತಂತ್ರಜ್ಞಾನಗಳು ಇತಿಹಾಸಕ್ಕೆ ಹೇಗೆ ಊರೆಗೋಲುಗಳಾಗಿ ಒದಗಿಬರುತ್ತವೆಂಬುದನ್ನು ಪತ್ತೇದಾರಿ ಕಾದಂಬರಿಯಂತೆ ರಚಿಸಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಬಗೆಯ ಸಾಹಿತ್ಯ. ವಸ್ತುವೂ ಭಿನ್ನ, ನಿರೂಪಣೆಯೂ ಚೇತೋಹಾರಿ. ‘ಅಪರಂಜಿ’ ಪತ್ರಿಕೆಯಲ್ಲಿ ಹಾಸ್ಯಲೇಖನಗಳಿಗೆ ಹೆಸರುವಾಸಿಯಾದ ಸತ್ಯ ಇಲ್ಲಿ ಗಂಭೀರ ವಿಷಯನ್ನು ಕೈಗೆತ್ತಿಕೊಂಡು ನಿಭಾಯಿಸಿರುವ ಪರಿ ಅನುಕರಣೀಯ.ಅಳಿವಿಲ್ಲದ ಸ್ಥಾವರ

ಲೇ: ಸಿ.ಆರ್. ಸತ್ಯ

ಪು: 144; ಬೆ: ರೂ. 80

ಪ್ರ: ಹೇಮಂತ ಸಾಹಿತ್ಯ

972 ಸಿ, 4ನೇ ‘ಇ’ ವಿಭಾಗ,

10 ‘ಎ’ ಮುಖ್ಯರಸ್ತೆ, ರಾಜಾಜಿನಗರ

ಬೆಂಗಳೂರು - 560010

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.