ಭಾನುವಾರ, ಜೂನ್ 13, 2021
25 °C
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪ್ರಾಥಮಿಕ ಚುನಾವಣೆ

ಎಂಟು ನಾಮಪತ್ರದಲ್ಲಿ ಮೂರು ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಗೆ ನಡೆಯುತ್ತಿರುವ ಪ್ರಾಥಮಿಕ ಚುನಾವಣೆಗೆ ಎಂಟು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್, ಎಐಸಿಸಿ ವಕ್ತಾರ ಎಂ.ವಿ.ರಾಜೀವ್‌ ಗೌಡ ಮತ್ತು ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಅವರ ನಾಮಪತ್ರಗಳು ಸ್ವೀಕೃತವಾಗಿವೆ.ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ಸಿ.ರಾಮಮೂರ್ತಿ, ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಮೊಮ್ಮಗ ಕೆಂಗಲ್‌ ಶ್ರೀಪಾದರೇಣು ಮತ್ತು ನೀಹಾ ಶಂಕರಗೌಡ ಪಾಟೀಲ್‌ ಎಂಬುವರ ನಾಮಪತ್ರಗಳನ್ನು ತಾಂತ್ರಿಕ ಕಾರಣಗಳ ಆಧಾರದಲ್ಲಿ ತಿರಸ್ಕರಿಸಲಾಗಿದೆ. ವಿದೇಶಾಂಗ ಸಚಿವಾಲಯದ ಮಾಜಿ ಅಧಿಕಾರಿ ಆರತಿ ಕೃಷ್ಣ ಅವರ ನಾಮಪತ್ರವನ್ನು ಬಾಕಿ ಇರಿಸಿದ್ದು, ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆ ಕೋರಿ ಎಐಸಿಸಿಗೆ ಕಳುಹಿಸಲಾಗಿದೆ.ಇದೇ 13ರಂದು ನಡೆಯುವ ಪ್ರಾಥಮಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಸಂಜೆ 4 ಗಂಟೆಯವರೆಗೂ ಅವಕಾಶ ಇತ್ತು. ಚುನಾವಣಾಧಿಕಾರಿಗಳಾದ ಜಸ್‌ಪ್ರೀತ್‌ ಸಿಂಗ್‌ ಮತ್ತು ನಿತಿನ್‌ ಕುಂಭಾಲ್ಕರ್‌ ನಾಮಪತ್ರಗಳನ್ನು ಪರಿಶೀಲಿಸಿದರು.ನಾರಾಯಣಸ್ವಾಮಿ, ಚಂದ್ರಶೇಖರ್‌, ರಾಜೀವ್‌ ಗೌಡ ಮತ್ತು ನರೇಂದ್ರಬಾಬು ಪಕ್ಷದ ಪದಾಧಿಕಾರಿಗಳ ಕೋಟಾದಡಿ ನಾಮಪತ್ರ ಸಲ್ಲಿಸಿದ್ದಾರೆ. ಈ ಎಲ್ಲ ನಾಮಪತ್ರಗಳನ್ನೂ ಚುನಾವಣಾಧಿಕಾರಿಗಳು ಅಂಗೀಕರಿಸಿದ್ದಾರೆ. ಕೆ.ಸಿ.ರಾಮಮೂರ್ತಿ, ಶ್ರೀಪಾದರೇಣು ಮತ್ತು ನೀಹಾ ಅವರು ನಾಮಪತ್ರದಲ್ಲಿ ಉಲ್ಲೇಖಿಸಿರುವ ವರ್ಗ ಹಾಗೂ ಲಗತ್ತಿಸಿರುವ ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿದೆ. ಈ ತಾಂತ್ರಿಕ ಕಾರಣವನ್ನು ಆಧರಿಸಿ ಮೂವರ ನಾಮಪತ್ರಗಳನ್ನೂ ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಆರತಿ ಕೃಷ್ಣ ಅವರು ‘ಸಾರ್ವಜನಿಕ ಸೇವೆ’ ವಿಭಾಗದಲ್ಲಿ ಸ್ಪರ್ಧೆಗೆ ಅವಕಾಶ ಕೋರಿದ್ದಾರೆ. ಈ ವಿಭಾಗದಲ್ಲಿ ಸ್ಪರ್ಧೆಗೆ ಅವರು ಅರ್ಹತೆ ಪಡೆದಿದ್ದಾರೆಯೇ ಎಂಬುದನ್ನು ಎಐಸಿಸಿಯಿಂದಲೇ ಖಚಿತಪಡಿಸಿಕೊಳ್ಳಲು ಚುನಾವಣಾಧಿಕಾರಿಗಳು ಮುಂದಾಗಿದ್ದಾರೆ. ಈ ಕಾರಣಕ್ಕಾಗಿಯೇ ಆರತಿ ಅವರ ನಾಮಪತ್ರವನ್ನು ಎಐಸಿಸಿಗೆ ಕಳುಹಿಸಲಾಗಿದೆ. ಶನಿವಾರ ಎಐಸಿಸಿಯಿಂದ ಸ್ಪಷ್ಟನೆ ದೊರೆಯುವ ಸಾಧ್ಯತೆ ಇದೆ. ಆ ಬಳಿಕವೇ ಚುನಾವಣಾಧಿಕಾರಿಗಳು ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ.ಸ್ಪರ್ಧೆಯಿಂದ ದೂರ:

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರನ್ನೇ ಕಣಕ್ಕಿಳಿಸುವ ಬಗ್ಗೆ ಪಕ್ಷದ ಮುಖಂಡರು ಈ ಹಿಂದೆ ಚರ್ಚೆ ನಡೆಸಿದ್ದರು. ಅದರಂತೆ ಕೃಷ್ಣ ಬೈರೇಗೌಡ ಅವರು ಪ್ರಾಥಮಿಕ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಲೋಕಸಭಾ ಚುನಾವಣಾ ಕಣಕ್ಕಿಳಿಯುವುದನ್ನು ನಿರಾಕರಿಸಿದ ಸಚಿವರು, ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದಿದ್ದಾರೆ.ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌.ಶಂಕರ್‌ ಕೂಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಪ್ರಾಥಮಿಕ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಪ್ರಾಥಮಿಕ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮ­ಪತ್ರ­ಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಶನಿವಾರ ಮಧ್ಯಾಹ್ನ 1 ಗಂಟೆಯವರೆಗೂ ಅವಕಾಶವಿದೆ ಎಂದು ಜಸ್‌ಪ್ರೀತ್‌ ಸಿಂಗ್‌ ಮತ್ತು ನಿತಿನ್‌ ಕುಂಭಾಲ್ಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‘ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿದ ಬಳಿಕ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗುವುದು. ಮಾ.13ರಂದು ಮತದಾರರ ಸಮಾವೇಶ, ಮತದಾನ ನಡೆಯಲಿದೆ. ಮತದಾನ ಮುಗಿದ ತಕ್ಷಣ ಅಲ್ಲಿಯೇ ಮತ ಎಣಿಕೆ ನಡೆಯಲಿದ್ದು, ಬಹಿರಂಗವಾಗಿ ಫಲಿತಾಂಶ ಪ್ರಕಟಿಸಲಾಗುವುದು. ಅಂತಿಮ­ವಾಗಿ ಎಐಸಿಸಿ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಿದೆ’ ಎಂದರು.ಮತದಾರರ ಪಟ್ಟಿಯಲ್ಲಿ ಯಾರಿದ್ದಾರೆ?

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಗೆ ನಡೆಯುವ ಪ್ರಾಥ­ಮಿಕ ಚುನಾವಣೆಯಲ್ಲಿ ಅಂದಾಜು 476 ಮಂದಿ ಮತ ಚಲಾಯಿಸಲಿದ್ದಾರೆ. ಇದೇ 9­ರಂದು ಮತದಾರರ ಪಟ್ಟಿ ಅಂತಿಮ­ಗೊಳ್ಳಲಿದೆ.ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುವ ಹಾಲಿ  ಶಾಸಕರು, ಸಂಸದರು, ಮಾಜಿ ಶಾಸಕರು ಮತ್ತು ಮಾಜಿ ಸಂಸದರು, ಮಾಜಿ ಮೇಯರ್‌ಗಳು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರು, ಜಿ.ಪಂ. ಅಧ್ಯಕ್ಷರು, ಎಐ­ಸಿಸಿ ಮತ್ತು ಕೆಪಿಸಿಸಿ ಸದಸ್ಯರು, ಎಐಸಿಸಿಯ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಇದ್ದಾರೆ.ಎನ್‌ಎಸ್‌ಯುಐ, ಮಹಿಳಾ ಕಾಂಗ್ರೆಸ್‌ ಪದಾ­­ಧಿಕಾರಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗ­ಡಗಳು, ಹಿಂದುಳಿದ ವರ್ಗಗಳು, ಅಲ್ಪ­ಸಂಖ್ಯಾತ ವಿಭಾಗಗಳ ಜಿಲ್ಲಾ ಹಾಗೂ ಬ್ಲಾಕ್‌ ಮಟ್ಟದ ಅಧ್ಯಕ್ಷರು, ಸಹಕಾರ ಸಂಸ್ಥೆಗಳ ಅಧ್ಯ­ಕ್ಷರು ಅಥವಾ ಪದಾಧಿಕಾರಿಗಳಾಗಿರುವ ಪಕ್ಷದ ಕಾರ್ಯಕರ್ತರು, ಪಕ್ಷದ ವೈದ್ಯರು, ವಕೀಲರು ಮತ್ತಿತರ ಘಟಕಗಳ ಪದಾಧಿಕಾರಿಗಳಿಗೆ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.