ಶುಕ್ರವಾರ, ಫೆಬ್ರವರಿ 26, 2021
20 °C
ಅಂಕುರ-109

ಎಂಡೋಮೀಟ್ರಿಯಾಸಿಸ್‌ಗೆ ಹಲವು ಚಿಕಿತ್ಸೆಗಳು

ಡಾ. ಬೀನಾ ವಾಸನ್ Updated:

ಅಕ್ಷರ ಗಾತ್ರ : | |

ಎಂಡೋಮೀಟ್ರಿಯಾಸಿಸ್‌ಗೆ ಹಲವು ಚಿಕಿತ್ಸೆಗಳು

ಎಂಡೋಮೀಟ್ರಿಯಾಸಿಸ್‌ನ ನೋವಿನಿಂದ ಶೀಘ್ರ ಗುಣಮುಖರಾಗಬೇಕೆಂದು ರೋಗಿಗಳಿಗೆ ಅನಿಸುವುದು ಸಹಜ. ಏಕೆಂದರೆ ನಿತ್ಯಜೀವನದ ಆಗುಹೋಗುಗಳನ್ನು ಎಂಡೋಮೀಟ್ರಿಯಾಸಿಸ್‌ ತೊಂದರೆಗೆ ಒಡ್ಡುತ್ತದೆ.ಎಂಡೋಮೀಟ್ರಿಯಾಸಿಸ್‌ಗೆ ಶಾಶ್ವತ ಪರಿಹಾರ ಇಲ್ಲ. ಔಷಧಗಳಾಗಲೀ ಅಥವಾ ಶಸ್ತ್ರಚಿಕಿತ್ಸೆಯಾಗಲೀ ಅದನ್ನು ನಿಯಂತ್ರಣದಲ್ಲಿಡಬಹುದು; ಸದ್ಯದ ತೊಂದರೆಗಳನ್ನು ಕಡಿಮೆಮಾಡಬಹುದಷ್ಟೆ. ಸಾಂಪ್ರದಾಯಿಕ ಚಿಕಿತ್ಸಾಕ್ರಮಗಳು ಫಲ ಕೊಡುತ್ತಿಲ್ಲವೆಂದಾದಾಗ ವೈದ್ಯರು ಶಸ್ತ್ರಚಿಕಿತ್ಸೆಯ ಸಲಹೆ ಕೊಡಬಹುದು. ಔಷಧಗಳಿಗಾಗಲೀ ಶಸ್ತ್ರಚಿಕಿತ್ಸೆಗೆಗಾಗಲೀ ಎಲ್ಲ ರೋಗಿಗಳೂ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎನ್ನುವಂತಿಲ್ಲ. ಆಯಾ ವ್ಯಕ್ತಿಯ ಸ್ಥಿತಿಗೆ ತಕ್ಕಂತೆ ವೈದ್ಯರು ಚಿಕಿತ್ಸೆಯನ್ನು ಸೂಚಿಸುತ್ತಾರೆ.ಸಾಮಾನ್ಯವಾಗಿರುವ ಚಿಕಿತ್ಸೆಗಳೆಂದರೆ

ಔಷಧಗಳು:


ನೋವಿನ ಶಮನಕ್ಕಾಗಿ ಕೆಲವೊಂದು ನೋವು ನಿವಾರಕ ಔಷಧಗಳನ್ನು ವೈದ್ಯರು ಸೂಚಿಸುವುದುಂಟು. ಆದರೆ ಎಲ್ಲ ಸಂದರ್ಭದಲ್ಲೂ ಇದು ಪ್ರಯೋಜನಕ್ಕೆ ಬರುತ್ತದೆ ಎನ್ನಲಾಗದು. ಋತುಚಕ್ರವನ್ನು ನಿಲ್ಲಿಸಬಲ್ಲಂಥ ಕೆಲವು ಔಷಧಗಳನ್ನೂ ವೈದ್ಯರು ನೀಡಬಹುದು. ಇಂಥ ಔಷಧಗಳಿಂದ ನೋವು, ಮುಖದ ಮೇಲೆ ಕೂದಲು ಬೆಳೆಯುವುದು ಮುಂತಾದ ಅಡ್ಡಪರಿಣಾಮಗಳ ಸಾಧ್ಯತೆಯಿದೆ.ಕೆಲವೊಂದು ಇಂಜೆಕ್ಷನ್‌ಗಳು ಕೂಡ ಋತುಚಕ್ರವನ್ನು ನಿಲ್ಲಿಸುವಲ್ಲಿ ಸಹಾಯಕ್ಕೆ ಒದಗಬಹುದು. ಆದರೆ ಇಂಥ ಇಂಜೆಕ್ಷನ್‌ಗಳ ಬಳಕೆಯು ದೇಹದ ತೂಕವನ್ನು ಕಡಿಮೆ ಮಾಡಬಹುದು; ಕೆಲವರಲ್ಲಿ ಮಾನಸಿಕ ಖಿನ್ನತೆಗೂ ಕಾಣಿಸಿಕೊಳ್ಳಬಹುದು.ಹಾರ್ಮೋನ್‌ ಚಿಕಿತ್ಸೆ: ಹಾರ್ಮೋನ್‌ಗಳನ್ನು ಶರೀರಕ್ಕೆ ಪೂರಕವಾಗಿ ತೆಗೆದುಕೊಳ್ಳುವುದರಿಂದ ಕೆಲವೊಮ್ಮೆ ನೋವಿನಿಂದ ಬಿಡುಗಡೆ ಸಿಗಬಹುದು. ಪ್ರತಿ ತಿಂಗಳು ನಡೆಯುವ ಹಾರ್ಮೋನ್‌ಗಳ ಬದಲಾವಣೆಯನ್ನು ನಿಯಂತ್ರಿಸಲು ಈ ಚಿಕಿತ್ಸೆ ಸಹಕಾರಿಯಾಗುತ್ತದೆ.ಹಾರ್ಮೋನ್‌ ಗರ್ಭನಿರೋಧಕಗಳು ಮಾಸಿಕ ಬದಲಾವಣೆ ಮತ್ತು ಎಂಡೋಮೀಟ್ರಿಯಲ್‌ ಅಂಗಾಂಶಗಳ ಶೇಖರಣೆಯನ್ನು ತಡೆಗಟ್ಟುವ ಮೂಲಕ ಗರ್ಭಧಾರಣೆಯ ಸಾಧ್ಯತೆಯನ್ನು ತಗ್ಗಿಸುತ್ತವೆ.ಗರ್ಭನಿರೋಧಕ ಮಾತ್ರೆಗಳು, ಯೋನಿರಿಂಗ್‌ ಮುಂತಾದವು ಎಂಡೋಮೀಟ್ರಿಯಾಸಿಸ್‌ನ ತೊಂದರೆ ಕಡಿಮೆಯಿದ್ದಾಗ ನೋವನ್ನು ಪೂರ್ಣವಾಗಿ ದೂರಮಾಡಬಹುದು.ಸ್ತ್ರೀಯರ ಲೈಂಗಿಕ ಚಟುವಟಿಕೆಗೆ ಪ್ರಮುಖ ಕಾರಣವಾಗಿರುವುದೇ ಎಸ್ಟ್ರೋಜಿನ್ ಹಾರ್ಮೋನ್‌. ಇದು ಋತುಚಕ್ರವನ್ನು ತಡೆಹಿಡಿದು ಕೃತಕವಾಗಿ ಋತುಚಕ್ರವನ್ನು ನಿಲ್ಲಿಸುತ್ತದೆ.  ಹಾರ್ಮೋನ್‌ ಚಿಕಿತ್ಸೆಯ ಮೂಲಕ ಈ ಸಮಸ್ಯೆಯಿಂದ ಪಾರಾಗಲು ಸಾಧ್ಯವಿದೆ. ಆದರೆ ಈ ಚಿಕಿತ್ಸೆಯಿಂದ ಕೆಲವೊಂದು ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು.ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ:

ಗರ್ಭಕೊಶದ ಯಾವುದೇ ಭಾಗಕ್ಕೂ ತೊಂದರೆಯಾಗದಂತೆ ಎಂಡೋಮೀಟ್ರಿಯಲ್‌ ಬೆಳವಣಿಗೆಯನ್ನು ತೆಗೆದುಹಾಕುವುದು ಅಥವಾ ನಾಶಗೊಳಿಸುವುದು ಈ ಶಸ್ತ್ರಚಿಕಿತ್ಸೆಯ ಉದ್ದೇಶ.  ಗರ್ಭಧರಿಸಬೇಕೆಂಬ ಇಚ್ಛೆಯುಳ್ಳ ಮಹಿಳೆಯರಿಗೆ ಈ ವಿಧಾನ ಸೂಕ್ತ. ಸಾಂಪ್ರದಾಯಿಕ ರೀತಿಯಲ್ಲಿ ಅಗಲವಾದ ಛೇದನದಿಂದ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು. ಕಡಿಮೆ ತೀವ್ರತೆಯ ಲ್ಯಾಪರೋಸ್ಕೋಪಿಯನ್ನು ಕೆಲವೊಮ್ಮೆ ವೈದ್ಯರು ಆಯ್ದುಕೊಳ್ಳುವುದುಂಟು.ಗರ್ಭಾಶಯದ ಛೇದನ:

ಯಾವುದೇ ಚಿಕಿತ್ಸೆಗಳು ಫಲಕಾರಿಯಾಗದಿದ್ದಾಗ ವೈದ್ಯರು ಗರ್ಭಾಶಯವನ್ನೇ ತೆಗೆದುಹಾಕಲು ಸೂಚಿಸಬಹುದು. ಗರ್ಭಕೋಶ, ಅಂಡಾಶಯಗಳನ್ನು ತೆಗೆದುಹಾಕಬೇಕಾಗಬಹುದು. ಈ ಶಸ್ತ್ರಚಿಕಿತ್ಸೆಯನ್ನು ಮಾಡಿದ ಬಳಿಕ ಗರ್ಭಧಾರಣೆ ಸಾಧ್ಯವಾಗದು. ಗರ್ಭಾಶಯದ ಛೇದನಕ್ಕೆ ಒಪ್ಪುವ ಮೊದಲು ತಜ್ಞರ ಸಲಹೆಯನ್ನು ಮತ್ತೊಮ್ಮೆ ಪಡೆಯುವುದು ಒಳ್ಳೆಯದು.ಆತಂಕ ಬೇಡ:

ಎಂಡೋಮೀಟ್ರಿಯಾಸಿಸ್‌ ಒಂದು ಗಂಭೀರ ಸಮಸ್ಯೆ; ಹೀಗೆಂದು ಇದರಿಂದ ಆತಂಕಿತರಾಗಬೇಕಿಲ್ಲ. ನಿಮ್ಮ ನಿತ್ಯದ ಬದುಕನ್ನು ಇದಕ್ಕೆ ಬಲಿ ಮಾಡಬೇಕಿಲ್ಲ. ಔಷಧಗಳು, ಶಸ್ತ್ರಚಿಕಿತ್ಸೆ, ಹಾರ್ಮೋನ್‌ ಚಿಕಿತ್ಸೆಗಳಂಥ ಹಲವು ವಿಧಾನಗಳಿಂದ ತೊಂದರೆಯ ಪ್ರಮಾಣವನ್ನು ತಗ್ಗಿಸಿಕೊಳ್ಳಬಹುದಾಗಿದೆ. ಋತುಚಕ್ರ ನಿಂತಮೇಲೆ ಸಾಮಾನ್ಯವಾಗಿ ಎಂಡೋಮೀಟ್ರಿಯಾಸಿಸ್‌ನ ಸಮಸ್ಯೆ ಕಡಿಮೆಯಾಗುತ್ತದೆ. ಎಂಡೋಮೀಟ್ರಿಯಾಸಿಸ್‌ನ ಸಮಸ್ಯೆಯ ಲಕ್ಷಣಗಳು ಕಂಡ ಕೂಡಲೇ ವೈದ್ಯರನ್ನು ಕಾಣಬೇಕು.ಯುಕ್ತ ಜೀವನಶೈಲಿಯನ್ನು ಮತ್ತು ಆಹಾರಕ್ರಮವನ್ನು ಅಳವಡಿಸಿಕೊಳ್ಳುವುದರಿಂದ ಎಂಡೋಮೀಟ್ರಿಯಾಸಿಸ್‌ನನ್ನು ತಡೆಗಟ್ಟಬಹುದು ಅಥವಾ ನಿಯಂತ್ರಿಸಬಹುದು. ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸುವವರಲ್ಲಿ ಎಂಡೋಮೀಟ್ರಿಯಾಸಿಸ್‌ನ ಸಾಧ್ಯತೆ ಕಡಿಮೆ ಎಂದು ಅಂಕಿಅಂಶಗಳು ಹೇಳುತ್ತವೆ.ಕೆಂಪುಮಾಂಸವನ್ನು ತಿನ್ನುವವರಲ್ಲಿ ಸಾಧ್ಯತೆ ಹೆಚ್ಚು. ಎಂಡೋಮೀಟ್ರಿಯಾಸಿಸ್‌ನ ತೊಂದರೆಗೆ ಒಳಗಾದವರಲ್ಲಿ ಅಂಡಾಶಯಕ್ಕೆ ಸಂಬಂಧಿಸಿದ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಕೆಲವೊಂದು ಅಧ್ಯಯನಗಳಲ್ಲಿ ಕಂಡುಬಂದಿದೆ. ಆದರೆ ಯಾವುದಕ್ಕೂ ಆತಂಕ ಪಡಬೇಕಿಲ್ಲ. ಸಮಸ್ಯೆಯ ಸುಳಿವು ಸಿಕ್ಕ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು; ಆಲಸ್ಯ ಸಲ್ಲದು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.