ಸೋಮವಾರ, ಮಾರ್ಚ್ 8, 2021
30 °C
ರಾಜ್ಯದಲ್ಲಿ ಮ್ಯಾಗಿ ತಯಾರಿಕೆ, ಮಾರಾಟಕ್ಕೆ ತಾತ್ಕಾಲಿಕ ತಡೆ

ಎನರ್ಜಿ ಪೇಯ ಮೇಲೂ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎನರ್ಜಿ ಪೇಯ ಮೇಲೂ ನಿಗಾ

ಬೆಂಗಳೂರು: ರಾಜ್ಯದಲ್ಲಿ ಮ್ಯಾಗಿ ನೂಡಲ್ಸ್‌ ತಯಾರಿಕೆ ಮತ್ತು ಮಾರಾಟದ ಮೇಲೆ ತಾತ್ಕಾಲಿಕ ನಿಷೇಧ ಹೇರಿರುವ ಆರೋಗ್ಯ ಇಲಾಖೆ, ಇತರ ಕಂಪೆನಿಗಳ ನೂಡಲ್ಸ್‌  ಉತ್ಪನ್ನಗಳನ್ನೂ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ.ಇದರ ಜೊತೆಗೆ ಶಕ್ತಿವರ್ಧಕ ಪೇಯಗಳ (ಎನರ್ಜಿ ಡ್ರಿಂಕ್ಸ್‌) ಮೇಲೂ ನಿಗಾ ಇಡಲು ನಿರ್ಧರಿಸಿದೆ. ಮಾವಿನ ಕಾಯಿಯನ್ನು ಕೃತಕವಾಗಿ ಹಣ್ಣು ಮಾಡಲು ರಾಸಾಯನಿಕ ಬಳಸುವುದರ ವಿರುದ್ಧ ಕ್ರಮ ಕೈಗೊಳ್ಳಲೂ ಚಿಂತನೆ ನಡೆಸಿದೆ.ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು ಈ ವಿಷಯವನ್ನು ಶನಿವಾರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುನ್ನಚ್ಚರಿಕೆ ಕ್ರಮವಾಗಿ ಟಾಪ್‌ ರಾಮನ್‌, ನೋರ್‌, ಸನ್‌ಫೀಸ್ಟ್‌ ಸೇರಿದಂತೆ ಇತರ ಎಂಟು ನೂಡಲ್ಸ್‌ ಉತ್ಪನ್ನಗಳನ್ನು ಕೂಡ ಪರೀಕ್ಷೆಗಾಗಿ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.ಶಕ್ತಿವರ್ಧಕ ಪೇಯ ‘ರೆಡ್‌ ಬುಲ್‌’ ಮತ್ತು ಪ್ರೊಟೀನ್‌ ಪುಡಿ ಉತ್ಪನ್ನಗಳಲ್ಲಿ ಕಲಬೆರಕೆ ನಡೆಯುತ್ತದೆಯೇ ಎಂಬುದನ್ನೂ ಇಲಾಖೆ ಪರೀಕ್ಷಿಸಲಿದೆ ಎಂದು ಅವರು ಹೇಳಿದರು.‘ಶಕ್ತಿವರ್ಧಕ ಉತ್ಪನ್ನಗಳ ತಯಾರಿಕಾ ಕಂಪೆನಿಗಳು ಗ್ರಾಹಕರ ದಾರಿ ತಪ್ಪಿಸುತ್ತಿವೆ.  ಮ್ಯಾಗಿ ಪ್ರಕರಣ ಈ ಕಂಪೆನಿಗಳಿಗೆ ಎಚ್ಚರಿಕೆ ಗಂಟೆಯಾಗಬೇಕು. ಒಂದು ವೇಳೆ ಈ ಉತ್ಪನ್ನಗಳಲ್ಲಿ ಕಲಬೆರಕೆಯಾಗಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು‘ ಎಂದರು.‘ಮಾವನ್ನು ಕೃತಕವಾಗಿ ಹಣ್ಣು ಮಾಡುವವರ ವಿರುದ್ಧವೂ ಕ್ರಮ  ಕೈಗೊಳ್ಳಲಾಗುವುದು. ಈಗಾಗಲೇ ಇಲಾಖೆಯು ಮೈಸೂರಿನ ಒಂಬತ್ತು ಘಟಕಗಳ ಮೇಲೆ ದಾಳಿ ನಡೆಸಿ, ಮಾವುಗಳನ್ನು ನಾಶ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

ಮ್ಯಾಗಿ ತಾತ್ಕಾಲಿಕ ನಿಷೇಧ:  ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಮ್ಯಾಗಿ ನೂಡಲ್ಸ್‌  ತಯಾರಿಕೆ ಮತ್ತು ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.‘ನೆಸ್ಲೆ ಕಂಪೆನಿಯು ಎಲ್ಲ ಮಳಿಗೆ ಮತ್ತು ಸೂಪರ್‌ ಮಾರ್ಕೆಟ್‌ಗಳಿಂದ ಮ್ಯಾಗಿಯನ್ನು ತಕ್ಷಣ ವಾಪಸ್‌ ಪಡೆಯಬೇಕು. ಒಂದು ವೇಳೆ ಆದೇಶದ ನಂತರವೂ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಮಾರಾಟಗಾರರ ವಿರುದ್ಧ  ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.ಆದರೆ, ಮ್ಯಾಗಿ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರುವ ಬಗ್ಗೆ  ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವುದಿಲ್ಲ. ಕೋಲ್ಕತ್ತದ ಕೇಂದ್ರ ಆಹಾರ ಪ್ರಯೋಗಾಲಯದ ವರದಿ ಬಂದ ನಂತರ  ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು  ಹೇಳಿದರು.*ಮ್ಯಾಗಿ: ಮಿತಿಗಿಂತ ಕಡಿಮೆ ಸೀಸ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.