ಎನ್ಎಬಿ ಅಧಿಕಾರಿಗಳ ವಿರುದ್ಧ ಅಂಧರ ಪ್ರತಿಭಟನೆ

ಬೆಂಗಳೂರು: ‘ಜೀವನ್ ಬಿಮಾನಗರದ ರಾಷ್ಟ್ರೀಯ ಅಂಧರ ಸಂಸ್ಥೆಯ (ಎನ್ಎಬಿ) ಆಡಳಿತ ಮಂಡಳಿಯು ಅಂಧರ ಹಿತ ಕಾಪಾಡಲು ವಿಫಲವಾಗಿದ್ದು, ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಅಂಧ ಕಾರ್ಮಿಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಜೀವನ್ ಬಿಮಾನಗರದಲ್ಲಿರುವ ಸಂಸ್ಥೆ ಆವರಣದಿಂದ ಪ್ರತಿಭಟನೆ ಆರಂಭಿಸಿದ ಅಂಧರು, ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ಬಸ್ ಹತ್ತಿದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಹಲಸೂರು ಮೆಟ್ರೊ ನಿಲ್ದಾಣ ಸಮೀಪ ಬಸ್ ತಡೆದು ಪ್ರತಿಭಟನಾಕಾರರನ್ನು ಕೆಳಗಿಳಿಸಿದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಭವನದ ಬಳಿ ಜಾಥಾ ನಡೆಸುವಂತಿಲ್ಲ ಎಂದು ಹೇಳಿದರು.
‘ಅಂಧರ ಹಿತರಕ್ಷಣೆಗಾಗಿಯೇ ಎನ್ಎಬಿಯನ್ನು ಸ್ಥಾಪಿಸಲಾಗಿದೆ. ಆದರೆ, ಸಂಸ್ಥೆಯಲ್ಲಿ ಅಂಧರಿಗೆ ಸೂಕ್ತ ಸ್ಥಾನ ಮಾನ ಸಿಗುತ್ತಿಲ್ಲ. ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಹಾಗೂ ಕಾರ್ಯದರ್ಶಿ ನಮ್ಮನ್ನು ಸಂಸ್ಥೆಯಿಂದ ಹೊರದೂಡಲು ಪ್ರಯತ್ನಿಸುತ್ತಿದ್ದಾರೆ. ಈ ಅನ್ಯಾಯವನ್ನು ಖಂಡಿಸಿ ಕಳೆದ ಡಿಸೆಂಬರ್ 16 ರಂದು ಪ್ರತಿಭಟನೆ ನಡೆಸಿದಾಗ ಮೂರು ತಿಂಗಳೊಳಗೆ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಸರ್ಕಾರ ನೀಡಿದ್ದ ಗಡುವು ಮುಗಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಅಂಧ ಕಾರ್ಮಿಕ ರೆಹಮತ್ ಉಲ್ಲಾ ಆರೋಪಿಸಿದರು.
ಮತ್ತೊಬ್ಬ ಕಾರ್ಮಿಕ ದೊರೈ ಮಾತನಾಡಿ, ‘ಕುರ್ಚಿಗಳಿಗೆ ವೈರ್ ಹೆಣೆಯುವುದು ನಮ್ಮ ಕೆಲಸ. ಸಂಸ್ಥೆಯ ಮೂಲಕವೇ ನಮಗೆ ನಗರದ ವಿವಿಧೆಡೆ ಕೆಲಸ ಸಿಗುತ್ತಿತ್ತು. ಆದರೆ, ಇತ್ತೀಚೆಗೆ ಸಿಇಒ ಹಾಗೂ ಕಾರ್ಯದರ್ಶಿಗಳ ಸಂಚಿನಿಂದಾಗಿ ಕೆಲಸ ಇಲ್ಲದಂತಾಗಿದೆ. ಕುರ್ಚಿಗಳಿಗೆ ವೈರ್ ಹೆಣೆಸಲು ಹಲವು ಸಂಸ್ಥೆಗಳು ಮುಂದೆ ಬಂದರೂ ಅಂತಹ ಬೇಡಿಕೆಗಳನ್ನು ತಿರಸ್ಕರಿಸಿ, ನಮಗೆ ಉದ್ಯೋಗ ಇಲ್ಲದಂತೆ ಮಾಡಲಾಗುತ್ತಿದೆ. ವೇತನವೇ ಇಲ್ಲದೆ ನಾವು ಸಂಸಾರ ಸಾಗಿಸುವುದು ಹೇಗೆ’ ಎಂದು ಪ್ರಶ್ನಿಸಿದರು.
‘ಅಂಧರಾದ ನಮಗೆ ಬ್ಯಾಂಕ್ಗೆ ಹೋಗಿ ಹಣ ತರುವುದು ಕಷ್ಟ. ಹೀಗಾಗಿ ವೇತನವನ್ನು ನಗದು ರೂಪದಲ್ಲಿ ನೀಡುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೆ, ಅಧಿಕಾರಿಗಳು ಚೆಕ್ ರೂಪದಲ್ಲೇ ವೇತನ ನೀಡುವ ಮೂಲಕ ನಮ್ಮನ್ನು ಸತಾಯಿಸುತ್ತಿದ್ದಾರೆ’ ಎಂದು ದೂರಿದರು.
ಹಲಸೂರು ಮೆಟ್ರೊ ನಿಲ್ದಾಣದ ಬಳಿ ಬಂದು ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದ ಅಂಗವಿಕಲರ ಅಧಿನಿಯಮದ ಆಯುಕ್ತ ಕೆ.ಎಸ್.ರಾಜಣ್ಣ, ‘ಇನ್ನು 15 ದಿನಗಳೊಳಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಈ ಬಗ್ಗೆ ಸಂಸ್ಥೆಯ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.