ಶುಕ್ರವಾರ, ಏಪ್ರಿಲ್ 23, 2021
31 °C

ಎಲೆಕ್ಟ್ರಿಕ್ ಸೈಕಲ್‌ನ ಸವಾರಿ ಮೋಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲೆಕ್ಟ್ರಿಕ್ ಸೈಕಲ್‌ನ ಸವಾರಿ ಮೋಜು

ಸೈಕಲ್ ತುಳಿಯುವ ಮೋಜು ಈಗ ಕೇವಲ ಪೆಡಲ್, ಚೈನ್‌ನಲ್ಲಿ ಮಾತ್ರ ಉಳಿದಿಲ್ಲ. ಸೈಕ್ಲಿಂಗ್ ಈಗ ವಿಶ್ವದಾದ್ಯಂತ ಮತ್ತೆ ಹೆಸರು ಮಾಡುತ್ತಿದೆ. ಪ್ರಸಿದ್ಧಿ ಪಡೆಯುತ್ತಿದೆ.ಮೋಟಾರ್ ಬೈಕ್, ಕಾರ್‌ಗಳನ್ನು ಓಡಿಸಿ ಬೇಜಾರಾದ ಜನತೆ ಮತ್ತೆ ಸೈಕಲ್ ಕಡೆಗೆ ತಮ್ಮ ಅಚ್ಚರಿಯ ದೃಷ್ಟಿ ಹರಿಸಿದ್ದಾರೆ. ದಶಕಗಳಿಂದ ಸೈಕಲ್ ತುಳಿಯುತ್ತ ಮಾದರಿಯಾಗಿದ್ದ ಚೈನಾ ಜನತೆ ಈಗ ವಿಶ್ವದ ಅನೇಕ ಜನರಿಂದ ಪಾಲಿಸಲ್ಪಡುತ್ತಿದ್ದಾರೆ.ಅಚ್ಚರಿ ಎಂಬಂತೆ ಭಾರತದಲ್ಲಿ ಈಗ ಸೈಕ್ಲಿಂಗ್ ಸಾಕಷ್ಟು ಬಳಕೆಯಲ್ಲಿದೆ. ಇಂದು ಭಾರತದ ಅನೇಕ ಪ್ರಮುಖ ನಗರಗಳಲ್ಲಿ ಸೈಕ್ಲಿಂಗ್ ಕ್ಲಬ್‌ಗಳಿವೆ. ಅಷ್ಟೇ ಏಕೆ. ವಿಶ್ವದಾದ್ಯಂತ ತನ್ನ ಶಾಖೆಗಳನ್ನು ಹೊಂದಿರುವ ಯೂತ್ ಕ್ಲಬ್ ಆಫ್ ಇಂಡಿಯಾ ಭಾರತದ ಬಹುತೇಕ ಎಲ್ಲ ನಗರಗಳಲ್ಲೂ ಸೈಕ್ಲಿಂಗ್ ಹಬ್ಬಗಳನ್ನೂ, ಯಾತ್ರೆಗಳನ್ನೂ ಆಯೋಜಿಸುತ್ತ ಸೈಕಲ್ ಅನ್ನು ಪ್ರಸಿದ್ಧಗೊಳಿಸಲು ತುದಿಗಾಲಲ್ಲಿ ನಿಂತಿದೆ.ಇವೆಲ್ಲ ಪ್ರಯತ್ನಗಳು ಎಷ್ಟೇ ನಡೆದರೂ ಅಷ್ಟೇ, ಸೈಕಲ್ ಬಳಸುವ ಬಯಕೆ ಮನದಾಳದಿಂದ ಬರಲೇಬೇಕು. ಅದರಲ್ಲೂ ಯುವಕರು ಸೈಕಲ್ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು.

 

ಇದು ಈಗ ಭಾರತದಲ್ಲಿ ಮತ್ತೆ ಆರಂಭವಾಗಿದೆ. ಅದಕ್ಕೇ ಎಂಬಂತೆ ಕೆಲವೇ ದಿನಗಳ ಹಿಂದಷ್ಟೇ ಭಾರತದಲ್ಲಿ ಮತ್ತೆ ಬ್ರಿಟನ್ ಮೂಲಕ ರ‌್ಯಾಲಿ ಸೈಕಲ್ ಮತ್ತೆ ಪ್ರವೇಶ ಮಾಡಿದೆ. ಸೈಕಲ್ ಕ್ಷೇತ್ರದ ರಾಜ ಎಂದೇ ಪ್ರಸಿದ್ಧವಾಗಿದ್ದ ರ‌್ಯಾಲಿ ಈಗ ಮತ್ತೆ ತನ್ನ ಚಕ್ರವನ್ನು ಭಾರತದಲ್ಲಿ ಉರುಳಿಸುವ ಮೂಲಕ ಸದ್ದು ಮಾಡಿದೆ.ಆದರೆ ನಿಜವಾದ ಸದ್ದು ಇದಲ್ಲ. ಭಾರತದಲ್ಲಿ ಅನೇಕ ವರ್ಷಗಳಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುದ್ದಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವಾಗ ವಿದ್ಯುತ್ ಚಾಲಿತ ವಾಹನ ಬಳಸುವುದು ಸವಾರರಿಗೆ ಮೈ ನವಿರೇಳಿಸುವ ಅನುಭವವೇ ಆಗಿತ್ತು.ರೋಮಾಂಚನದ ಜತೆಗೆ ಹಣ ಉಳಿಯುವ ಭಾಗ್ಯ ಬೇರೆ! ಈ ಸುದ್ದಿ ಕೇಳಿದ ಸೈಕಲ್ ಪ್ರಿಯರಿಗೆ ತಮ್ಮ ಸೈಕಲ್‌ಗಳಲ್ಲೂ ಏಕೆ ವಿದ್ಯುತ್ ಚಾಲಿತ ವ್ಯವಸ್ಥೆ ಇರಬಾರದು ಎಂಬ ಆಸೆ ಮೂಡಿದ್ದು ಸಹಜ. ಈ ಬೇಡಿಕೆ ಸೈಕಲ್ ತಯಾರಕರ ಕಿವಿಗೆ ಬಿದ್ದಿರಲಿಲ್ಲ ಎಂದೇನೂ ಇಲ್ಲ.ವಾಸ್ತವದಲ್ಲಿ ಸುಮಾರು 20 ವರ್ಷಗಳ ಹಿಂದೆಯೇ ಸೈಕಲ್‌ಗೆ ವಿದ್ಯುತ್ ಮೋಟಾರ್ ಕೂರಿಸುವ ಪ್ರಯತ್ನಗಳು ಭಾರತದಲ್ಲಿ ನಡೆಸಿದ್ದವು. ಅದರಲ್ಲಿ ಯಶಸ್ಸನ್ನು ಸಹ ಪಡೆದಿದ್ದರು. ಆದರೆ ದೊಡ್ಡ ಪ್ರಮಾಣದಲ್ಲಿ ಶೋರೂಂನಲ್ಲಿ ಕೊಳ್ಳುವ ಅವಕಾಶ ಮಾತ್ರ ಸೈಕಲ್ ಪ್ರಿಯನಿಗೆ ಸಿಕ್ಕೇ ಇರಲಿಲ್ಲ.ವಿದ್ಯುತ್ ಸೈಕಲ್ ಪರ್ವ ಆರಂಭ

ವಿದ್ಯುತ್ ಸೈಕಲ್ ಎಂದರೆ ತೀರಾ ಅಚ್ಚರಿಯಿಂದ ನೋಡುವ ಅಗತ್ಯವಿಲ್ಲ. ಏಕೆಂದರೆ ಇದು ಸಾಧಾರಣ ಸೈಕಲ್ಲೇ. ಇದರಲ್ಲೂ ಪೆಡಲ್, ಚೈನ್, ಹ್ಯಾಂಡಲ್ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಹೊಸ, ಪುಟ್ಟ, ಆದರೆ ವಿನೂತನವಾದ ಕ್ರಾಂತಿಕಾರಿ ತಂತ್ರಜ್ಞಾನದ ಸೇರ್ಪಡೆಯಾಗಿದೆ. ಸೈಕಲ್‌ನಲ್ಲಿ ವಿದ್ಯುತ್ ಮೋಟಾರ್ ಅಳವಡಿಸುವ ತಂತ್ರಜ್ಞಾನವಿದು.ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರದಲ್ಲಿ ಯೂರೋಪ್ ಹಾಗೂ ಅಮೆರಿಕ ಮುಂದಿದ್ದರೂ, ಆ ಸಂಶೋಧಿತ ತಂತ್ರಜ್ಞಾನದ ಅಳವಡಿಕೆ ಹಾಗೂ ಅಭಿವೃದ್ಧಿಯಲ್ಲಿ ಚೈನಾ ಎಂದೆಂದೂ ಮುಂದೆ. ಹಾಗಾಗೇ ಇಂದು ನಮಗೆ ಸಿಗುವ ಬಹುತೇಕ ಎಲೆಕ್ಟ್ರಾನಿಕ್ ಸಾಮಗ್ರಿಗಳು ಮೇಡ್ ಇನ್ ಚೈನಾ ಎಂಬ ಹಣೆಪಟ್ಟಿ ಹೊಂದಿರುತ್ತವೆ.ಇದರಂತೆ ಕೊರಿಯಾ, ಜಪಾನ್ ಸಹ ಮುಂದಿವೆ. ಅದರಂತೆ ವಿದ್ಯುತ್ ಚಾಲಿತ ಸೈಕಲ್‌ಗಳಿಗೂ ಚೈನಾ ತವರು ಮನೆ ಎಂದೇ ಕರೆಯಬಹುದು. ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿದ ಚೈನಾ, ಮೊಟ್ಟ ಮೊದಲ ಬಾರಿಗೆ ಹಬ್ ಮೋಟಾರ್‌ಗಳನ್ನು ಪರಿಚಯಿಸಿತು.ಹಬ್ ಮೋಟಾರ್ ಎಂದರೆ ಮೋಟಾರೇ ಚಕ್ರವಾಗಿ ತಿರುಗುವುದು. ಯುರೋಪ್ ಹಾಗೂ ಅಮೆರಿಕದ ಸ್ಕೂಟರ್‌ಗಳಲ್ಲಿ ಮೋಟಾರ್ ಪ್ರತ್ಯೇಕವಾಗಿದ್ದು, ಚೈನ್ ಮೂಲಕ ಚಕ್ರಕ್ಕೆ ಚಲನೆ ಸಿಗುವಂತೆ ಮಾಡಲಾಗಿರುತ್ತದೆ.ಆದರೆ ಚೈನಾ ತನ್ನ ಹಬ್ ಮೋಟಾರ್‌ಗಳನ್ನು ಸೈಕಲ್‌ನಲ್ಲಿ ಅಳವಡಿಸಿದ್ದು ಇದೇ ಕಾರಣಕ್ಕಾಗಿ. ಏಕೆಂದರೆ ಸೈಕಲ್ ವಾಸ್ತವದಲ್ಲಿ ಅತ್ಯಂತ ಹಗುರವಾದ ಸಣ್ಣ ವಾಹನ. ಇದರಲ್ಲಿ ಎಂಜಿನ್ ಕೂರಿಸಲು ಜಾಗವೇ ಇರುವುದಿಲ್ಲ. ಹಾಗಾಗಿ ಹಬ್ ಮೋಟಾರ್ ಚಕ್ರದೊಳಗೆ ಸುಲಭವಾಗಿ ಕೂರುತ್ತದೆ. ಸೈಕಲ್ ಹಿಂದಿನ ಕ್ಯಾರಿಯರ್‌ನಲ್ಲಿ ಬ್ಯಾಟರಿ ಕೂರಿಸಿದರೆ ಆಯಿತು. ವಿದ್ಯುತ್ ಸೈಕಲ್ ರೆಡಿ!ಈ ಮೂಲ ತಂತ್ರಜ್ಞಾನವನ್ನೇ ಅಭಿವೃದ್ಧಿಪಡಿಸಿ ಈಗ ಅನೇಕ ವಿದ್ಯುಚ್ಚಾಲಿತ ಸೈಕಲ್‌ಗಳು ಮಾರುಕಟ್ಟೆಗೆ ಬಂದಿವೆ. ನೋಡಲು ಅಂದವಾಗಿಯೂ ಇದ್ದು, ಸೈಕಲ್‌ನ ಎಲ್ಲ ಲಕ್ಷಣಗಳನ್ನೂ ಹೊತ್ತು ಬಂದಿವೆ.

 

ಹಿಂದಿನ ದಿನಗಳಲ್ಲಿ ಬ್ಯಾಟರಿ ತುಂಬಾ ಭಾರ ಇರುತ್ತಿದ್ದವು. ಅದಕ್ಕೆ ಕಾರಣ ಅವುಗಳಲ್ಲಿ ಬಳಕೆಯಾಗುತ್ತಿದ್ದ ಕಚ್ಚಾ ವಸ್ತುಗಳು, ರಾಸಾಯನಿಕಗಳು. ಈಗ ನಿಕ್ಕಲ್ ಕ್ಯಾಡ್‌ಮಿಯಂ ಬದಲಿಗೆ, ಲೆಡ್ ಆಸಿಡ್, ಆಸಿಡ್ ಪೇಸ್ಟ್ ನಂತಹ ರಾಸಾಯನಿಕ ಬಳಕೆಯಾಗುತ್ತದೆ.ಹಾಗಾಗಿ ಕೊಂಚ ಭಾರ ಕಡಿಮೆ. ನಿರ್ಲಕ್ಷಿಸಬಹುದಾದಷ್ಟು ಹಗುರವಾರ ಲಿಥಿಯಂ ಅಯಾನ್ ಬ್ಯಾಟರಿಗಳೂ ಇವೆ. ಆದರೆ ಬೆಲೆ ಮುಟ್ಟಲಾಗದಷ್ಟು ಹೆಚ್ಚು. ಕೇವಲ ಒಂದು ನೀರಿನ ಬಾಟಲ್‌ನಷ್ಟು ಗಾತ್ರದ, ಭಾರದ ಬ್ಯಾಟರಿ ಇಡೀ ಸೈಕಲ್ ಅಥವಾ ವಾಹನವನ್ನು ಗಂಟೆಗಟ್ಟಲೇ ಎಳೆಯುವಷ್ಟು ತೂಕವನ್ನು ಹೊಂದಿರುತ್ತದೆ ಎಂದರೆ ಅದರ ಶಕ್ತಿ ಸಾಮರ್ಥ್ಯವನ್ನು ಅಂದಾಜು ಮಾಡಬಹುದು.

 

ಅದೇ ರೀತಿ ಭಾರತದಲ್ಲಿ ಈಗ ಸುಮಾರು ಮೂರು ಮುಖ್ಯ ಕಂಪೆನಿಗಳು ವಿದ್ಯುಚ್ಚಾಲಿತ ಸೈಕಲ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಅದರಲ್ಲಿ ಪ್ರಮುಖವಾದದ್ದೇ ಹರ್ಕ್ಯುಲೆಸ್ ಸಿಎಂಎಕ್ ಸೈಕಲ್, ಆಂಪೆರ್ ಸೈಕಲ್ ಹಾಗೂ ಹೀರೋ ಸೈಕಲ್‌ಗಳು.ಹರ್ಕ್ಯುಲೆಸ್ ಸಿಎಂಎಕ್ಸ್

ಬಿಎಸ್‌ಎ ಹರ್ಕ್ಯುಲೆಸ್ ಸೈಕಲ್‌ಗಳು ಭಾರತದಲ್ಲಿ ಪ್ರಸಿದ್ಧ. ಸುಮಾರು 50ಕ್ಕೂ ಹೆಚ್ಚು ಸೈಕಲ್ ಮಾದರಿ, ಆಯ್ಕೆಗಳನ್ನು ನೀಡುವ ವಿಶ್ವಾಸಾರ್ಹ ಸೈಕಲ್‌ಗಳನ್ನು ಉತ್ಪಾದಿರುವ ಸೈಕಲ್ ಸಂಸ್ಥೆಯಿದು.

 

ವಿದ್ಯುಚ್ಚಾಲಿತ ಸೈಕಲ್‌ಗಳನ್ನು ಮೊದಲು ಭಾರತದಲ್ಲಿ ಹೊರಬಿಟ್ಟಿದ್ದೂ ಹರ್ಕ್ಯುಲೆಸ್ ಸೈಕಲ್ ಕಂಪೆನಿಯೇ. ತನ್ನ ಸಿಎಂಎಕ್ಸ್ ವಿದ್ಯುಚ್ಚಾಲಿತ ಸೈಕಲ್ ಮೂಲಕ ಈ ಪ್ರಯತ್ನ ಮಾಡಿದೆ. ತಾನು ಒಟ್ಟು 3 ಸೈಕಲ್‌ಗಳನ್ನು ಪರಿಚಯಿಸಿದೆ. ಬಿಎಸ್‌ಎ ಸಿಎಂಎಕ್ಸ್ ಎಲೆಕ್ಟ್ರಾ (ಯುವತಿಯರಿಗೆ), ಸಿಎಂಎಕ್ಸ್ ಹೈವೋಲ್ಟ್, ಸಿಎಂಎಕ್ಸ್ ಥಂಡರ್‌ಬೋಲ್ಟ್ ಸೈಕಲ್‌ಗಳನ್ನು ಹೊರಬಿಟ್ಟಿದ್ದು, ಒಂದೊಂದು ಸೈಕಲ್‌ಗಳೂ ಉತ್ತಮ ಎನ್ನುವಷ್ಟು ಗುಣಮಟ್ಟ ಹೊಂದಿವೆ.ಅದರಲ್ಲೂ ಸಿಎಂಎಕ್ಸ್ ಥಂಡರ್‌ಬೋಲ್ಟ್ ಬಯಲುಸೀಮೆ ಪ್ರದೇಶಗಳಿಗೆ ಹೇಳಿ ಮಾಡಿಸಿದಂಥ ವಿದ್ಯುಚ್ಚಾಲಿತ ಸೈಕಲ್ ಆಗಿದೆ. 20500 ಸಾವಿರ ರೂಪಾಯಿಯ ಈ ಸೈಕಲ್, 250 ವ್ಯಾಟ್ ಶಕ್ತಿಯ ಹಬ್ ಮೋಟಾರ್ ಹೊಂದಿದೆ. ಲೆಟ್ ಆಸಿಡ್ ಸೀಲ್ಡ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸುಮಾರು 20000 ಕಿಲೋಮೀಟರ್ ಬಾಳಿಕೆ ಬರುತ್ತದೆ.ಒಮ್ಮೆ ಚಾರ್ಜ್ ಮಾಡಲು 3 ರೂಪಾಯಿ ಖರ್ಚಾಗಲಿದ್ದು, ಒಮ್ಮೆಗೆ 23 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಬ್ಯಾಟರಿ ಮುಗಿದು ಹೋದರೂ ಚಿಂತೆಯಿಲ್ಲ. ಸೈಕಲ್‌ನ ಪೆಡೆಲ್, ಚೈನ್ ಮೂಲಕ ಮಾಮೂಲಿ ಸೈಕಲ್‌ನಂತೆ ತುಳಿಯುವ ಸಾಂಪ್ರದಾಯಿಕ ಸೌಲಭ್ಯವೂ ಇದೆ.ಸಿಎಂಎಕ್ಸ್ ಎಲೆಕ್ಟ್ರಾ ಯುವತಿಯರಿಗೆ ಹೇಳಿ ಮಾಡಿಸಿದ ಸೈಕಲ್. ವೇಲ್ ಅಥವಾ ಸ್ಯಾರಿ ಗಾರ್ಡ್ ಇದೆ. ಮುಂದೆ ಬುಟ್ಟಿ ಇದ್ದು, ಸಣ್ಣಪುಟ್ಟ ಸಾಮಗ್ರಿ ಕೊಂಡೊಯ್ಯಲು ಅನುಕೂಲಕರವಾಗಿದೆ.

 

ಥಂಡರ್‌ಬೋಲ್ಟ್‌ನಂತೆಯೇ 250 ವ್ಯಾಟ್ ಶಕ್ತಿಯ ಹಬ್ ಮೋಟಾರ್ ಹೊಂದಿದೆ. ಲೆಟ್ ಆಸಿಡ್ ಸೀಲ್ಡ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸುಮಾರು 20000 ಕಿಲೋಮೀಟರ್ ಬಾಳಿಕೆ ಬರುತ್ತದೆ. ಇದಕ್ಕೆ ಥಂಡರ್‌ಬೋಲ್ಟ್‌ಗಿಂತಲೂ ಕಡಿಮೆ ಬೆಲೆ. 18 ಸಾವಿರ ರೂಪಾಯಿಗೆ ಲಭ್ಯ. ಇವೆರಡಕ್ಕೂ ಭಿನ್ನವಾದ ಕೊಂಚ ಕಡಿಮೆ ಗುಣಮಟ್ಟದ ವಿದ್ಯುತ್ ಸೈಕಲ್ ಸಿಎಂಎಕ್ಸ್ ಹೈವೋಲ್ಟ್ ಬೆಲೆ 14500 ರೂಪಾಯಿ.

ಆಂಪೆರ್ ಸೈಕಲ್

ಕೊಯಮತ್ತೂರು ಮೂಲದ ಆಂಪೆರ್ ಏಂಜೆಲ್ ವಿದ್ಯುಚ್ಚಾಲಿತ ಸೈಕಲ್ ಸಹ ಉತ್ತಮ ಆಯ್ಕೆ. ಇದು ಕೊಂಚ ದೊಡ್ಡ ವಾಹನವೇ. 250 ವ್ಯಾಟ್ ಸಾಮರ್ಥ್ಯದ ಮೋಟಾರ್ ಇದೆ.ಸುಮಾರು 40 ಕಿಲೋ ಮೀಟರ್ ಹೆಚ್ಚುವರಿ ದೂರ ಕ್ರಮಿಸುವ ಶಕ್ತಿ ಹೊಂದಿದೆ. ಇದರ ಬೆಲೆ 18000 ರೂಪಾಯಿ. ವೇಗ ಗಂಟೆಗೆ 25 ಕಿಲೋಮೀಟರ್ ಹೋಗುತ್ತದೆ. ಪೆಡಲ್ ಹಾಗೂ ಚೈನ್‌ನ ಸಾಂಪ್ರದಾಯಿಕ ಅನುಕೂಲವೂ ಇದರಲ್ಲಿದೆ. ನಿರ್ವಹಣಾ ರಹಿತ ಹಬ್ ಮೋಟಾರ್ ಇದ್ದು, ಭಾರತದ ಎಲ್ಲ ಪ್ರಮುಖ ನಗರಗಳಲ್ಲಿ ತನ್ನ ಸರ್ವಿಸ್ ಸ್ಟೇಷನ್ ಹೊಂದಿರುವುದು ವಿಶೇಷ.ಆದರೆ ಪಕ್ಕಾ ಸೈಕಲ್ ಪ್ರೇಮಿಗಳಿಗೆ ಸೈಕಲ್ ತಯಾರಿಸುವ ಸೈಕಲ್ ಕಂಪೆನಿಗಳ ಸೈಕಲ್ ಕೊಂಡರೇ ಒಳ್ಳೆಯದು. ಆಂಪೆರ್ ಉತ್ತಮ ಕಂಪೆನಿಯೇ ಆಗಿದ್ದರೂ, ಸೈಕಲ್ ತಯಾರಿಯಲ್ಲಿ ಅನುಭವ ಕಡಿಮೆ. ಹರ್ಕ್ಯುಲೆಸ್ ಸೈಕಲ್ ಅನ್ನೇ ಉಸಿರಾಡಿದ ಕಂಪೆನಿ. ಜತೆಗೆ ಉತ್ತಮ ಅನುಕೂಲಗಳೂ ವಿದ್ಯುಚ್ಚಾಲಿತ ಸೈಕಲ್‌ನಲ್ಲಿ ಇವೆ.

ಸರಿಹೊಂದುವಕಿಟ್ ಬಳಸಿ

ನಿಮ್ಮ ಬಳಿ ಆಗಲೇ ಒಂದು ಸಾಧಾರಣ ಸಾಂಪ್ರದಾಯಿಕ ಸೈಕಲ್ ಇದ್ದು, ಅದನ್ನು ತುಳಿಯುವುದು ಬೋರಿಂಗ್ ಆಗಿದ್ದಲ್ಲಿ ಸುಲಭ ರೀತಿಯಲ್ಲಿ ಅದನ್ನು ವಿದ್ಯುತ್ ಸೈಕಲ್ ಆಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ. ಇದು ವಿದ್ಯುತ್ ಸೈಕಲ್ ಕಿಟ್ ಬಳಕೆಯಿಂದ ಸಾಧ್ಯ.

ವಿದ್ಯುತ್ ಸೈಕಲ್‌ನ ಮುಖ್ಯ ಲಕ್ಷಣವೆಂದರೆ ಅದು ಸ್ವತಂತ್ರ ವಿದ್ಯುಚ್ಚಾಲಿತ ವಾಹನ ಅಲ್ಲ.ಇದೊಂದು ರೀತಿ ಹೈಬ್ರಿಡ್ ವಾಹನ. ಎರಡು ಪ್ರತ್ಯೇಕ ಶಕ್ತಿಗಳು ಒಂದೆಡೆ ಸೇರಿ ಸೈಕಲ್‌ಗೆ ಚಾಲನೆ ನೀಡುವ ವ್ಯವಸ್ಥೆಯಿದು. ಇಲ್ಲಿ ಸ್ನಾಯು ಶಕ್ತಿ ಹಾಗೂ ವಿದ್ಯುತ್ ಶಕ್ತಿಗಳೆರಡೂ ಏಕಕಾಲದಲ್ಲಿ ಕೆಲಸ ಮಾಡುತ್ತವೆ. ಸಾಮಾನ್ಯ ಗುಣಮಟ್ಟದ ಒಂದು ಸೈಕಲ್ ಇದ್ದು, ಅದರಲ್ಲಿ ಆಧುನಿಕ ಗಿಯರ್ ಸಿಸ್ಟಂ ಇಲ್ಲದಿದ್ದರೂ ಪರವಾಗಿಲ್ಲ. ಅದನ್ನು ಅತ್ಯಂತ ಸುಲಭವಾಗಿ ವಿದ್ಯುತ್ ಸೈಕಲ್ ಆಗಿ ಪರಿವರ್ತಿಸಿಕೊಳ್ಳಬಹುದು. ಅಂತರ್ಜಾಲದಲ್ಲಿ ಸಾಕಷ್ಟು ಕಿಟ್‌ಗಳು ಲಭ್ಯವಿವೆ. ಇವೆಲ್ಲವೂ ಬಹುತೇಕ ಚೈನಾ ಹಾಗೂ ಅಮೆರಿಕನ್ ಮೂಲದ ಸೈಕಲ್‌ಗಳು. ಆದರೆ ಇವೆಲ್ಲದರ ಬೆಲೆ ಎಷ್ಟಿರುತ್ತದೆ ಎಂದರೆ ಒಂದು ಅಂತರರಾಷ್ಟ್ರೀಯ ಗುಣಮಟ್ಟದ ಸೈಕಲ್ ಅನ್ನೇ ಕೊಳ್ಳುವಷ್ಟು.ಆದರೆ ಭಾರತ ಮೂಲದ, ಹಾಗೂ ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಕಿಟ್ ಆಮದು ಮಾಡಿಕೊಳ್ಳುವ ಕಂಪೆನಿಗಳು ಈಗ ಲಭ್ಯವಿವೆ. ಇಲ್ಲಿ ಸುಮಾರು 9 ಸಾವಿರ ರೂಪಾಯಿಯಿಂದ 15 ಸಾವಿರ ರೂಪಾಯಿವರೆಗಿನ ಅಂತರದಲ್ಲಿ ಕಿಟ್‌ಗಳನ್ನು ಕೊಳ್ಳುವ ಅನುಕೂಲವಿದೆ. ಈ ಕಿಟ್ ತಯಾರಿ ಹಾಗೂ ಆಮದು ಮಾಡಿಕೊಳ್ಳುವ ಅತಿ ಮುಖ್ಯವಾದ ಕಂಪೆನಿಯೇ ಇ-ವಿ ಫ್ಯೂಚರ್. ಇದನ್ನು ನೇರವಾಗಿ www.shop.evfuture.comನಿಂದ ನೇರವಾಗಿ ಕೊಳ್ಳಬಹುದು.ಇಲ್ಲಿ ಮೂರು ಮುಖ್ಯ ವಿಭಜನೆಗಳಿವೆ. 250 ವ್ಯಾಟ್, 350 ವ್ಯಾಟ್ ಹಾಗೂ ಸಂಪೂರ್ಣ ಕಿಟ್ ಎಂಬ ವಿಧಗಳು. 250 ವ್ಯಾಟ್ ವಿಧದಲ್ಲಿ 250 ವ್ಯಾಟ್ ಹಬ್ ವಿದ್ಯುತ್ ಮೋಟಾರ್ ಇದ್ದು, ಸಾಮಾನ್ಯ ಬಯಲುಸೀಮೆ ರಸ್ತೆಗಳಿಗೆ ಸಾಕು. 350 ವ್ಯಾಟ್ ಮೋಟಾರ್ ಮಲೆನಾಡು ಪ್ರದೇಶದಲ್ಲೂ ಕೆಲಸಕ್ಕೆ ಬರುತ್ತದೆ. ಮತ್ತೊಂದು ಸಂಪೂರ್ಣ ಕಿಟ್. ಇದರಲ್ಲಿ ಮೋಟಾರ್ ಜೋಡಿತ ಒಂದು ಚಕ್ರ, ಟಯರ್, ಮೋಟಾರ್, ಬ್ಯಾಟರಿ, ಮೋಟಾರ್ ಕಂಟ್ರೋಲರ್ ಇರುತ್ತದೆ. ಇದನ್ನು ಕೊಂಡು ನಿಮ್ಮ ಸೈಕಲ್‌ನಲ್ಲಿ ಜೋಡಿಸಿಕೊಂಡರೆ ಸಾಕು.ಮಿಕ್ಕೆರಡು ವಿಧಗಳೂ ಸುಲಭವೇ. ಸೈಕಲ್‌ನ ಚಕ್ರದ ಮಧ್ಯದ ಹಬ್‌ನ್ನು ತೆಗೆದು, ಅದರ ಜಾಗಕ್ಕೆ ಹಬ್ ಮೋಟಾರ್ ಕೂರಿಕೊಳ್ಳಬೇಕು. ಹಬ್ ಮೋಟಾರ್ ಸ್ಪೋಕ್‌ಗಳ ಮೂಲಕ ರಮ್‌ಗೆ ಕೂರುತ್ತದೆ. ಸೈಕಲ್‌ನ ಕ್ಯಾರಿಯರ್ ಅಥವಾ ಡೈಮಂಡ್ ಫ್ರೇಂ ಜಾಗದಲ್ಲಿ ಬ್ಯಾಟರಿ ಕೂರಿಸಿಕೊಳ್ಳಬಹುದು. ಕಂಟ್ರೋಲರ್ ಸೀಟ್‌ನ ಹಿಂದೆ ಒಂದು ಪುಟ್ಟ ಬ್ಯಾಗ್‌ನಲ್ಲಿ ಕೂರುತ್ತದೆ. ಎಲ್ಲ ಸ್ಕೂಟರ್, ಬೈಕ್‌ಗಳಲ್ಲಿ ಇದ್ದಂತೆ ಒಂದು ಎಕ್ಸಿಲರೇಟರ್ ಸಹ ಇರುತ್ತದೆ. ಇಷ್ಟು ಮಾಡಿಕೊಂಡರೆ ವಿದ್ಯುತ್ ಸೈಕಲ್ ರೆಡಿ.250 ವ್ಯಾಟ್ ಕಿಟ್‌ನ ಬೆಲೆ 9,102 ರೂಪಾಯಿ. 350 ವ್ಯಾಟ್ ಕಿಟ್‌ನ ಬೆಲೆ 9737. ಎಲ್ಲ ಎಕ್ಸಸರಿಗಳಾದ ಕಂಟ್ರೋಲರ್, ಎಕ್ಸಿಲರೇಟರ್, ಬ್ಯಾಟರಿ ಸಹಿತ ಕೊಳ್ಳುವುದಾದರೆ 13500 ರೂಪಾಯಿಗಳಾಗುತ್ತವೆ. ಇವನ್ನು ನೇರವಾಗಿ ವೆಬ್ ಸೈಟ್ ಮೂಲಕವೇ ಕೊಳ್ಳಬಹುದು. ಇ-ಬೇ, ಫ್ಲಿಪ್ ಕಾರ್ಟ್‌ನಂತೆ ಸುರಕ್ಷಿತ ವ್ಯಾಪಾರ ಇಲ್ಲಿ ಸಾಧ್ಯವಿದೆ.ಇದಿಷ್ಟೇ ಅಲ್ಲದೇ, ಬಿಎಸ್‌ಎ ಹರ್ಕ್ಯುಲಸ್‌ನ ಮೋಟಾರ್, ಬ್ಯಾಟರಿ, ಕಂಟ್ರೋಲರ್ ಸಹ ಕೊಳ್ಳಬಹುದು. ಇದು ಸುಮಾರು 9000 ರೂಪಾಯಿಗಳಾಗುತ್ತವೆ. ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲಿ ಬಿಎಸ್‌ಎ ಹರ್ಕ್ಯುಲೆಸ್ ಸೈಕಲ್ ಶಾಪ್ ಇರುತ್ತದೆ. ಅಲ್ಲಿ ಈ ಕಿಟ್ ಕೊಂಡು ಸೈಕಲ್‌ಗೆ ಅವರದೇ ಶಾಪ್‌ನಲ್ಲಿ ಜೋಡಿಸಿಕೊಳ್ಳಲೂಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.