ಬುಧವಾರ, ಮೇ 12, 2021
22 °C
ನರೇಂದ್ರ ಮೋದಿ ವಿರುದ್ಧ ನಿತೀಶ್‌ಕುಮಾರ್ ಪರೋಕ್ಷ ವಾಗ್ದಾಳಿ

ಎಲ್ಲರನ್ನೂ ಒಗ್ಗೂಡಿಸುವ ನಾಯಕ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಪಟ್ನಾ(ಪಿಟಿಐ):  ಎಲ್ಲರನ್ನೂ ಒಗ್ಗೂಡಿಸುವ ನಾಯಕ ದೇಶಕ್ಕೆ ಬೇಕು, ವಿಭಾಗಿಸುವವರು ಅಗತ್ಯ ಇಲ್ಲ ಎಂದು ಜೆಡಿಯು ಮುಖಂಡ ನಿತೀಶ್‌ಕುಮಾರ್ ಅವರು ಮೋದಿ ವಿರುದ್ಧ ಅವರ ಹೆಸರನ್ನು ಪ್ರಸ್ತಾಪಿಸದೆಯೇ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿಕೂಟ ಬಲಪಡಿಸುವ ಸಾಮರ್ಥ್ಯವಿಲ್ಲದವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಬಾರದು ಎಂದು ಬಿಜೆಪಿಗೆ ಜೆಡಿಯು ಸ್ಪಷ್ಟವಾಗಿ ತಿಳಿಸಿತ್ತು ಎಂದು ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಬಿಹಾರದಲ್ಲಿ ಬಾಹ್ಯಶಕ್ತಿಗೆ  ಅವಕಾಶ  ನೀಡಬಾರದು ಎಂದೂ ಮೊದಲೇ ತಿಳಿಸಲಾಗಿತ್ತು ಎಂದು ನಿತೀಶ್ ಸ್ಪಷ್ಟಪಡಿಸಿದ್ದಾರೆ. ಪ್ರಮುಖ ಹುದ್ದೆಗೆ ಒಬ್ಬರನ್ನು ಆಯ್ಕೆ ಮಾಡಿದ ಸಂದರ್ಭವು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ, ದೇಶವನ್ನು ಒಗ್ಗೂಡಿಸುವ ವ್ಯಕ್ತಿಯ ನೇತೃತ್ವ ಅಗತ್ಯವಿದೆ ವಿನಾಃ ಮನಸ್ಸನ್ನು ಒಡೆಯುವ ವ್ಯಕ್ತಿಯ ಮುಖಂಡತ್ವ ಬೇಡ ಎಂದು ಅವರು ಮೋದಿ ಅವರ ಹೆಸರನ್ನು ಹೇಳದೆ ಬಿಜೆಪಿ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ಮೋದಿ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಿತ್ರಪಕ್ಷಗಳ ಜತೆ ಸಮಾಲೋಚಿಸದೆ ಪ್ರಮುಖ ಹುದ್ದೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಬೇಡ ಎಂದು ಬಿಜೆಪಿಗೆ ತಿಳಿಸಲಾಗಿತ್ತು. ಆದರೆ ಈಗ ನೇಮಕಗೊಂಡಿರುವ ವ್ಯಕ್ತಿ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸಲು ಅಸಮರ್ಥ ಎಂದು ಪರೋಕ್ಷವಾಗಿ ಮೋದಿ ಆಯ್ಕೆಯನ್ನು ಟೀಕಿಸಿದ್ದಾರೆ.

ವಿಶ್ವಾಸದ್ರೋಹ ಮತ್ತು ಅವಕಾಶವಾದಿ ರಾಜಕಾರಣ ಮಾಡಲಾಗಿದೆ ಎಂಬ ಬಿಜೆಪಿ ಆಪಾದನೆಯನ್ನು ತಳ್ಳಿಹಾಕಿದ ಅವರು, ವಿವಾದಾತ್ಮಕ ವಿಚಾರಗಳ ಬಗ್ಗೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಬಾರದು ಹಾಗೂ ಮೈತ್ರಿಕೂಟ ಬಲಪಡಿಸುವ ಸಾಮರ್ಥ್ಯ ಹೊಂದದವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಬಾರದು ಎಂಬ ವಿಚಾರದಲ್ಲಿ ಬಿಜೆಪಿ ಮುಖಂಡರು ಎಡವಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

`ನಾವು ಬಿಜೆಪಿಗೆ ದ್ರೋಹ ಬಗೆದಿಲ್ಲ, ನಾನು ಅವಕಾಶವಾದಿ ರಾಜಕಾರಣಿ ಎಂಬ ಆಪಾದನೆ ಆಧಾರರಹಿತ' ಎಂದು ತಿಳಿಸಿರುವ ನಿತೀಶ್, `ರಾಮಮಂದಿರ ನಿರ್ಮಾಣ, ಸಂವಿಧಾನ ಕಲಂ 370 ಜಾರಿ ವಿಚಾರ, ಸಮಾನ ನಾಗರಿಕ ಸಂಹಿತೆಯಂತಹ ವಿವಾದಾತ್ಮಕ ವಿಷಯಗಳ ಜಾರಿಗೆ ಒತ್ತಾಯಿಸಬಾರದು ಎಂಬ ಒಪ್ಪಂದದ ಮೇಲೆ ಎನ್‌ಡಿಎಗೆ ಸೇರಲಾಗಿತ್ತು' ಎಂದಿದ್ದಾರೆ.

ಗುಜರಾತ್ ಅಭಿವೃದ್ಧಿಯನ್ನು ಇಡೀ ಭಾರತಕ್ಕೆ ಮಾದರಿ ಎಂದು ಪರಿಗಣಿಸಲಾಗದು. ಬೇರೆಬೇರೆ ರಾಜ್ಯಗಳಿಗೆ ವಿಭಿನ್ನ ಅಭಿವೃದ್ಧಿ ಮಾದರಿಗಳಿರುತ್ತವೆ. ಹಿಂದುಳಿದಿದ್ದ ಬಿಹಾರ ರಾಜ್ಯವನ್ನು ನಾವು ಅಭಿವೃದ್ಧಿ ಪಥದತ್ತ ಸಾಗಿಸಿದ್ದೇವೆ. ಅಭಿವೃದ್ಧಿ ಎಂದರೆ ಕಾರ್ಪೊರೇಟ್ ವಲಯದ ಅಭಿವೃದ್ಧಿಯಲ್ಲ, ಬದಲಿಗೆ ಕಡು ಬಡವರ ಪರಿಸ್ಥಿತಿಯಲ್ಲಿ ಸುಧಾರಣೆ ತರುವುದು ಎಂದು ನಿತೀಶ್ ಅಭಿವೃದ್ಧಿಯ ವ್ಯಾಖ್ಯಾನ ಮಾಡುವ ಮೂಲಕ ಮೋದಿ ಅವರ ಕಾರ್ಯಶೈಲಿಯನ್ನು ವ್ಯಂಗ್ಯವಾಡಿದ್ದಾರೆ.

ಜೆಡಿಯು ಯಾವತ್ತೂ ಹಿಂದೂತ್ವವನ್ನು ವಿರೋಧಿಸುತ್ತ ಬಂದಿದೆ ಎಂದ ಅವರು, ತಾವು ಪ್ರಧಾನಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

`ಇದು ಮೈತ್ರಿ ಯುಗ, ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಹೊಸ ಹೊಂದಾಣಿಕೆಗಳು ಆಗಬಹುದು' ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.