ಮಂಗಳವಾರ, ಮಾರ್ಚ್ 2, 2021
23 °C

ಎಲ್ಲರಿಗೂ ಪ್ರಿಯರಾದ ಎಂ ಎಲ್ ಎ

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಎಲ್ಲರಿಗೂ ಪ್ರಿಯರಾದ ಎಂ ಎಲ್ ಎ

ಮುಖ್ಯಮಂತ್ರಿ ಬದಲಾಗಿ ಗದ್ದಲವಾಗುತ್ತಿದ್ದಂತೆ ಎಲ್ಲರೂ ರಾಜಕಾರಣಿಗಳನ್ನ ಅವಿವೇಕಿಗಳೆಂದೂ, ಸ್ವಾರ್ಥಿಗಳೆಂದೂ ಶಾಪ ಹಾಕುವುದು ಸರ್ವೇ ಸಾಮಾನ್ಯ. ಇದು ಕರ್ನಾಟಕ ಸದನದ ಅರವತ್ತನೆಯ ವರ್ಷ.

 

ಹಾಗಾದರೆ ಮರ್ಯಾದಸ್ಥ, ದಿಟ್ಟ ರಾಜಕಾರಣಿಗಳನ್ನು ಹುಡುಕಿ ಹೊರಟರೆ ನಮ್ಮ ಕಣ್ಣಿಗೆ ಯಾರು ಬೀಳುತ್ತಾರೆ? ಈ ಆರು ದಶಕಗಳಲ್ಲಿ ಅತಿ ವರ್ಚಸ್ಸಿನ ಎಂ ಎಲ್ ಎ ಯಾರಿರಬಹುದೆಂಬ ಕುತೂಹಲದಿಂದ ಕೆಲವರನ್ನು ವಿಚಾರಿಸ ಹೊರೆಟೆವು. ರಾಜಕೀಯ ವೀಕ್ಷಕರೂ, ರಾಜಕಾರಣಿಗಳೂ ಹೇಳಿದ ಹೆಸರು: ಶಾಂತವೇರಿ ಗೋಪಾಲ ಗೌಡ.ಗೋಪಾಲ ಗೌಡರ ಹೆಸರಿನಲ್ಲಿ ಒಂದು ಸರ್ಕಲ್ ಇರುವುದು ಕೆಲವರಿಗೆ ಗೊತ್ತು. ಅದು ಬಿಟ್ಟರೆ ಅವರ ಹೆಸರಲ್ಲಿ ಬೆಂಗಳೂರಿನಲ್ಲಂತೂ ದೊಡ್ಡ ಕಾಲೇಜು, ಪಾರ್ಕು, ಆಸ್ಪತ್ರೆ, ಸಾರ್ವಜನಿಕ ಸೌಕರ್ಯವಿಲ್ಲ. ಆದರೂ ಖರ್ಗೆಯವರಂಥ ಕಾಂಗ್ರೆಸಿಗರೂ, ಈಶ್ವರಪ್ಪನವರಂಥ ಬಿ ಜೆ ಪಿ ನಾಯಕರೂ ಮೆಚ್ಚಿಕೊಳ್ಳುವುದು ಗೋಪಾಲ ಗೌಡರನ್ನೇ.

 

ಹಾಗೆ ನೋಡಿದರೆ ಅವರು ಕಾಂಗ್ರೆಸ್ ಅನ್ನು ತೀವ್ರವಾಗಿ ಟೀಕಿಸಿದ ನಾಯಕರಲ್ಲಿ ಅಗ್ರರು. ಅವರಿದ್ದ ಕಾಲದಲ್ಲಿ ಬಿ ಜೆ ಪಿ ಇರಲಿಲ್ಲ, ಆದರೆ ಅವರಿಗೆ ಆ ಪಕ್ಷದ ಸಿದ್ಧಾಂತದಲ್ಲಿ ಒಂದು ಚೂರೂ ನಂಬಿಕೆಯಿರಲಿಲ್ಲ.

 

ಗೋಪಾಲ ಗೌಡರು ಸೋಷಲಿಸ್ಟರು. ಅಂದರೆ ಅವರ ಸಿದ್ಧಾಂತ ರಾಮ್ ಮನೋಹರ್ ಲೋಹಿಯಾ ಅವರ ಚಿಂತನೆಗೆ ಹತ್ತಿರವಾದದ್ದು. ಗೋಪಾಲ ಗೌಡರು (1923-72) ಬಡತನದಲ್ಲಿ ಬದುಕಿದವರು. ಸಾಹಿತ್ಯಾಸಕ್ತರು.ಹಲವರ ಕಣ್ಣಿಗೆ ತುಂಬ ಸಿಟ್ಟಿನ ಮನುಷ್ಯ. ಸದನದಲ್ಲಿ ಅವರನ್ನು ಏಕೆ ಸ್ಮರಿಸಿಕೊಳ್ಳುತ್ತಾರೆ? ಗೋಪಾಲ ಗೌಡರು ಭಾಷಣ ಮಾಡಿದರೆ ಅದು ವಿದ್ವತ್ಪೂರ್ಣವಾಗಿರುತ್ತಿತ್ತು. ಬಜೆಟ್ ಸಮಯದಲ್ಲಿ ಅವರು ಮಾಡಿದ ಟೀಕೆ ಹೇಗಿರುತ್ತಿತ್ತೆಂದರೆ ಸರ್ಕಾರ ಆಯವ್ಯಯ ಪತ್ರವನ್ನೇ ತಿದ್ದಿಕೊಳ್ಳುತ್ತಿತ್ತು.ಕಾಗೋಡಿನಲ್ಲಿ ರೈತರು ಚಳವಳಿಗೆ ಇಳಿದಾಗ ಗೋಪಾಲ ಗೌಡರೂ ಅಲ್ಲಿ ಹೋಗಿ ಬೆಂಬಲ ಕೊಟ್ಟರು. ಜೈಲು, ಹಿಂಸೆಯ ಭಯವಿದ್ದರೂ ತಮ್ಮ ಕೆಚ್ಚನ್ನು, ಸತ್ಯನಿಷ್ಠೆಯನ್ನು ಬಿಡದ ಗೋಪಾಲ ಗೌಡರನ್ನು ಎಲ್ಲ ಪಕ್ಷದವರೂ ಗೌರವದಿಂದ ನೆನೆಸಿಕೊಂಡದ್ದು ಸ್ವಲ್ಪ ಆಶ್ಚರ್ಯದ, ಹಾಗೆ ಸ್ವಲ್ಪ ಆಶಾವಾದದ, ವಿಷಯ.ನಮ್ಮ ಸ್ಕೂಲ್ ಪುಸ್ತಕಗಳಲ್ಲಿ ನೆಹರು ಸಿದ್ಧಾಂತವನ್ನು ವೈಭವೀಕರಿಸಿ, ಅಂಬೇಡ್ಕರ್ ಮತ್ತು ಲೋಹಿಯಾರ ಸಿದ್ಧಾಂತಗಳನ್ನು ಕಡೆಗಣಿಸಿರುವುದನ್ನು ಕಾಲೇಜು ದಾಟಿ, ಮುಕ್ತ ಓದಿಗೆ ಮನ ಬಿಚ್ಚಿದವರಿಗೆ ಅರಿವಾಗಿರುತ್ತದೆ. ಗೋಪಾಲ ಗೌಡರ ಬಗ್ಗೆ ಎಲ್ಲರಿಗೂ ಪ್ರೀತಿಯಿದ್ದರೂ ಅವರ ಬಗ್ಗೆ ನಮಗೆ ಇಷ್ಟು ಕಡಿಮೆ ಗೊತ್ತಿರುವುದು ಏಕೆ ಎಂದು ಇದು ವಿವರಿಸಬಹುದೇ?ಜನ ಗಣ ಮನ

ಮೊನ್ನೆ ಜೆನೆವಾದಲ್ಲಿ ನಡೆದ ಪ್ರಯೋಗ ಎಲ್ಲ ಪತ್ರಿಕೆಗಳಲ್ಲೂ ವರದಿಯಾಗಿದೆ. ಅಲ್ಲಿ ಕಂಡು ಹಿಡಿಯ ಹೊರಟ ವಸ್ತುವನ್ನು ಇಂಗ್ಲಿಷ್‌ನಲ್ಲಿ `ಗಾಡ್ ಪಾರ್ಟಿಕಲ್~ ಎಂದು ಕರೆಯುತ್ತಿದ್ದಾರೆ.

 

ವಿಶ್ವದ ಉದ್ಭವ ಹೇಗಾಯಿತು ಎಂದು ಶೋಧಿಸುವ ಈ ಪ್ರಯೋಗದಲ್ಲಿ ಸುಮಾರು 10,000 ವಿಜ್ಞಾನಿಗಳು ಪಾಲ್ಗೊಂಡಿದ್ದಾರೆ. ಫ್ರಾನ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಗಡಿಯಲ್ಲಿರುವ ಸರ್ನ್ ಎಂಬ ಸಂಸ್ಥೆ ಈ  ಪ್ರಯೋಗವನ್ನು ನಡೆಸುತ್ತಿದೆ.ಗಾಡ್ ಪಾರ್ಟಿಕಲ್ ಅನ್ನುವುದನ್ನು ಕನ್ನಡದಲ್ಲಿ `ದೇವ ಕಣ~ ಎಂದು ಅನುವಾದ ಮಾಡಿಕೊಂಡಿದ್ದೇವೆ. ಮಲಯಾಳಂನಲ್ಲೂ ಸುಮಾರು ಪತ್ರಿಕೆಗಳು ದೇವಕಣವೆಂದೇ ಬರೆಯುತ್ತಿವೆ. ಆದರೆ ಭಾಷೆ, ಸಿದ್ಧಾಂತ, ನಂಬಿಕೆ, ವಿಜ್ಞಾನ ಹೇಗೆ ಬೆಸೆದುಕೊಂಡಿರುತ್ತವೆ, ಮತ್ತು ಸೆಣೆಸಾಡುತ್ತಿರುತ್ತವೆ ಅನ್ನುವುದಕ್ಕೆ ನೋಡಿ.ಎಡ ಪಂಥೀಯರು ನಾಸ್ತಿಕರಾದದ್ದರಿಂದ ಅವರ ಪತ್ರಿಕೆಗಳು `ದೇವ ಕಣ~ ಅನ್ನುವ ಬದಲು `ಆದಿ ಕಣ~ ಎಂದು ಬರೆಯುತ್ತಿವೆ. ಎರಡೂ ಪದ `ಗಾಡ್ ಪಾರ್ಟಿಕಲ್~ ಅನ್ನುವುದಕ್ಕೆ ಎಷ್ಟು ಚೆನ್ನಾದ ಅನುವಾದವಲ್ಲವೇ? ಮತ್ತು ಒಂದೇ ವಸ್ತು ನಮ್ಮ ದೃಷ್ಟಿಗನುಗುಣ ಬಗೆ ಬಗೆಯಾಗಿ ಕಾಣುವ ಸತ್ಯವನ್ನು ಇದು ಹೇಗೆ ಮನದಟ್ಟುಮಾಡುತ್ತದೆ ನೋಡಿ. ಬೆಂಗಳೂರಿನ ಪತ್ರಕರ್ತ-ಸ್ನೇಹಿತ ಜಿ.ಎನ್.ಪ್ರಶಾಂತ್ ಜೆನೆವಾಗೆ ಹೋಗಿ ಬಂದಿದ್ದಾರೆ. ಅಲ್ಲಿನ ವಿಜ್ಞಾನಿಗಳನ್ನು ಮಾತಾಡಿಸಿಕೊಂಡು ಅವರ ಉತ್ಸಾಹ ಉಮೇದು ಕಂಡು ಉತ್ತೇಜಿತರಾಗಿದ್ದಾರೆ. ಅವರ ಗಮನ ಸೆಳೆದಿದ್ದು ಅಲ್ಲಿದ್ದ ಎರಡು ಭಾರತೀಯ ಅಂಶ: ಸರ್ನ್ ಊಟದ ಮನೆಯಲ್ಲಿನ ತಿಂಡಿ ತಿನಿಸು, ಮತ್ತು ಕಾಂಪೌಂಡ್‌ನಲ್ಲಿ ಇದ್ದ ನಟರಾಜನ ವಿಗ್ರಹ.

 

ಸಂಸ್ಥೆಯಲ್ಲಿ ಹಲವು ಭಾರತೀಯ ವಿಜ್ಞಾನಿಗಳು ಇರುವುದರಿಂದ ಇಲ್ಲಿನ ಭಕ್ಷ್ಯಗಳನ್ನು ಅಲ್ಲಿ ಸೇರಿಸಿದ್ದಾರೆ. ಸರ್ನ್‌ನಲ್ಲಿ ಬಳಸಿರುವ ಹಲವು ಆಯಸ್ಕಾಂತಗಳು ಬೆಂಗಳೂರಿನಲ್ಲಿ ತಯಾರಿಸಿದವಂತೆ. ನಟರಾಜನ ವಿಗ್ರಹವನ್ನು 2004ರಲ್ಲಿ ಭಾರತ ಸರ್ಕಾರ ಸರ್ನ್‌ಗೆ ಉಡುಗೊರೆಯಾಗಿ ಕೊಟ್ಟಿತು.ನಟರಾಜ ಶಿವನ ನೃತ್ಯದ ಅವತಾರ. ತಮಿಳುನಾಡಿನ ಚಿದಂಬರಂನಲ್ಲಿ ಪ್ರತಿಷ್ಠಾಪನೆಯಾಗಿರುವ ಹನ್ನೆರಡನೆ ಶತಮಾನದ ನಟರಾಜ ಹಲವು ವಿಜ್ಞಾನಿಗಳಿಗೆ ಸ್ಪೂರ್ತಿ. ನಟರಾಜನ ನೃತ್ಯದಲ್ಲಿ ಕಣದ ಚಲನೆಯನ್ನು ಕಂಡಿದ್ದಾರೆ. ಹಾಗಾಗಿ ಈ ವಿಗ್ರಹದ ಪ್ರತಿಕೃತಿ ಜೆನೆವಾದಲ್ಲಿ ಇರುವುದು ಉಚಿತ.ನಟರಾಜನ ವಿಗ್ರಹ ಆನಂದ ಕುಮಾರಸ್ವಾಮಿಯವರಂಥ ಮಹಾನ್ ತತ್ವಜ್ಞಾನಿಗಳು ಮತ್ತು ಫ್ರಿತ್ಜೋಫ್ ಕಾಪ್ರನಂಥ ವಿಜ್ಞಾನಿಗಳನ್ನು ವಿಸ್ಮಯಗೊಳಿಸಿದೆ. ಜಗತ್ತಿನ ಹುಟ್ಟಿಗೆ (ಮತ್ತು ವಿನಾಶಕ್ಕೆ) ಕಾರಣವೆಂದು ನಂಬಲಾದ ಮಹಾನ್ ಸ್ಫೋಟವನ್ನು ಶಿವನ ತಾಂಡವದಲ್ಲಿ ಕಾಣುವ, ಸೆರೆ ಹಿಡಿಯುವ ನಮ್ಮ ಪ್ರಾಚೀನರ ಕಾವ್ಯ ಹೃದಯ ಪಶ್ಚಿಮದ ವಿದ್ವಾಂಸರನ್ನು ಬೆರಗು ಗೊಳಿಸಿದೆ. “ಆಧುನಿಕ ಭೌತಶಾಸ್ತ್ರಜ್ಞರಿಗೆ ಶಿವನ ನೃತ್ಯ ಕಣದ ನೃತ್ಯವೇ~ ಎಂದು ಕಾಪ್ರ ಹೇಳುತ್ತಾರೆ.  ಮೋಸದ ಹೊಸ ತಂತ್ರ


ಇದು ನನಗೆ ತಿಳಿದ ಮೂವರ ಅನುಭವ. ಆಟೊ ಹತ್ತಿ ಇಂಥ ಜಾಗಕ್ಕೆ ಹೋಗಬೇಕು ಎಂದು ಹೇಳಿದ ಕೂಡಲೇ ಡ್ರೈವರ್ ಅವರನ್ನು ಮಾತಿಗೆಳೆಯುತ್ತಾನೆ. ಸ್ವಲ್ಪ ಸ್ನೇಹದಿಂದ ಮಾತು ಮುಂದುವರಿದಂತೆ ಆತ ಹೇಳುವುದು ಹೀಗೆ:`ನಾನು ಪದವೀಧರ. ಒಳ್ಳೆಯ ಕೆಲಸದಲ್ಲಿದ್ದೇನೆ. ನಮ್ಮ ಅಮ್ಮನಿಗೆ ತುಂಬಾ ಹುಷಾರಿಲ್ಲ. (ಅಮ್ಮ ಅನ್ನುವ ಜಾಗದಲ್ಲಿ ಅಪ್ಪ, ಮಗಳು ಹೀಗೆ ಯಾರಾದರೂ ಆಗಬಹುದು) ಆಸ್ಪತ್ರೆಯಲ್ಲಿದ್ದಾರೆ. ಅವರ ಉಪಚಾರಕ್ಕೆ ದುಡ್ಡು ಹೊಂದಿಸಲು ನಿತ್ಯದ ಕೆಲಸ ಮುಗಿಸಿ ಹೀಗೆ ಆಟೊ  ಓಡಿಸುತ್ತಿದ್ದೇನೆ. ನಿಮಗೆ ಸಾಧ್ಯವಾದರೆ ಎಲ್ಲಾದರೂ ಸ್ವಲ್ಪ ಸಾಲ ಕೊಡಿಸಿ.ಅಥವಾ ನೀವೇ ಒಂದಷ್ಟು ದುಡ್ಡು ಕೊಟ್ಟರೆ ಬೇಗ ಹಿಂದಿರುಗಿಸಿಬಿಡುತ್ತೇನೆ.~ ಕಥೆಯನ್ನು ನಂಬಿ ಮೂವರೂ ದುಡ್ಡು ಕೊಟ್ಟಿದ್ದಾರೆ. ಇದು ಟೋಪಿ ಹಾಕುವ ಹೊಸ ತಂತ್ರ ಎಂದು ಅವರೆಲ್ಲ ಒಂದೇ ಕಡೆ ಭೇಟಿಯಾದಾಗ ಜ್ಞಾನೋದಯವಾಯಿತಂತೆ.ವಯಸ್ಸಾದವರನ್ನು ನೋಡಿದ ಕೂಡಲೇ ವಾಹನ ನಿಲ್ಲಿಸಿ ಹತ್ತಿಸಿಕೊಳ್ಳುವ ಆಟೊ ಡ್ರೈವರ್‌ಗಳ ಬಗ್ಗೆ ನಮ್ಮ ಎಂಬತ್ತು ದಾಟಿದ ಚಿಕ್ಕಮ್ಮ ಎಷ್ಟೋ ಸರ್ತಿ ಹೇಳುತ್ತಿರುತ್ತಾರೆ.ಇನ್ನೊಂದು ಕಡೆ ಆಟೊ ಡ್ರೈವರ್‌ಗಳನ್ನು ರಾಕ್ಷಸರು ಎಂದು ಬಣ್ಣಿಸಿ ಅವರ ವಿರುದ್ಧ ವೀಕೆಂಡ್‌ನಲ್ಲಿ ಚಳವಳಿ ಮಾಡುವ ಬೆಂಗಳೂರಿನ ನಾಗರಿಕರು, ಟೆಕ್ಕಿಗಳನ್ನೂ ನೀವು ನೋಡಿರಬಹುದು. ಒಳ್ಳೆಯವರ ಬಗ್ಗೆ ಅನುಮಾನ ಪಡದೆ ಇಂಥ ಸುಳ್ಳಿನ ಬಗ್ಗೆ ಆಟೊ ಪ್ರಯಾಣಿಕರು ಎಚ್ಚರದಿಂದ ಇರಬೇಕು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.