ಸೋಮವಾರ, ಮೇ 23, 2022
30 °C

ಎಲ್ಲೆಲ್ಲೂ ದುರ್ನಾತ, ರೋಗ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಗಲವಾದ ಗುಂಡಿಗಳು ನಿರ್ಮಾಣವಾಗಿ ಮಳೆ ನೀರು ತುಂಬಿಕೊಂಡು ಕೆಸರುಮಯವಾಗಿವೆ. ರಸ್ತೆಯ ಮಗ್ಗುಲು ಶೌಚಾಲಯವಾಗಿದೆ.ಸೊಳ್ಳೆಗಳ ಕಾಟದಿಂದಾಗಿ  ನಾಗರಿಕರನ್ನು ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ. ಪಟ್ಟಣದ ಪಾಪವ್ವನಗರ, ಜೋಶಿನಗರ, ಭೀಮನಗರ, ಜನತಾ ಕಾಲೋನಿ, ಹಳೆಯ ಅಗಸಿ ಬಡಾವಣೆ, ಚಾವಡಿ, ಕೋಟೆ, ಬಸ್‌ನಿಲ್ದಾಣ, ಹಳೆಯ ಸರ್ವಿಸ್ ಸ್ಟ್ಯಾಂಡ್, ಅಂಚೆ ಕಚೇರಿ ಬಡಾವಣೆ, ದಾದರಾ, ದೇವಿನಗರ ಬಡಾವಣೆ ಮುಂತಾದೆಡೆ ಕಂಡುಬರುವ ದೃಶ್ಯವಾಗಿದೆ.ಸ್ವಚ್ಛತೆಗೆ ಒತ್ತು ನೀಡದ ಸ್ಥಳೀಯ ಆಡಳಿತದ ವಿರುದ್ಧ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಶಾಸಕರೂ ಕೂಡಾ ಇದನ್ನು ಗಮನಿಸದೇ ಇರುವುದು ಬೇಸರದ ಸಂಗತಿ. ಮಾದರಿ ಕ್ಷೇತ್ರದ ಭರವಸೆ ನೀಡಿದ್ದ ಶಾಸಕರು ಈ  ಅವ್ಯವಸ್ಥೆ ಸರಿಪಡಿಸಲು ಮಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಚರಂಡಿಗಳು ತುಂಬಿ ಹೊಲಸು ನೀರು ರಸ್ತೆಗೆ ಬರುತ್ತಿದೆ.ಕೆಲವೆಡೆ ಚರಂಡಿಗಳೇ ಇಲ್ಲ. ರಸ್ತೆಗಳಲ್ಲೇ ಹೊಲಸು ಹರಿದು ದುರ್ನಾತ ಮೂಡಿಸುತ್ತಿದೆ ಎಂಬುದು ಆರೋಪ.

ಚರಂಡಿ ತೆರವುಗೊಳಿಸಿ ರಸ್ತೆಗೆ ಚೆಲ್ಲಿದ ಕಸವನ್ನು ವಾರದವರೆಗೆ ಸಾಗಿಸದೇ ಇರುವುದರಿಂದ ಹಂದಿಗಳು ಹೊಲಸನ್ನು ಹರವುತ್ತಿವೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ.ಚರಂಡಿಗಳ ಸ್ವಚ್ಛತೆ ಕಾಪಾಡಬೇಕು. ಸಕಾಲಕ್ಕೆ ಕಸ ವಿಲೇವಾರಿ ಮಾಡಬೇಕು. ಪಟ್ಟಣದ ಅನೇಕ ಕಡೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳು ತೆರೆಯಬೇಕು ಎಂದು ವ್ಯಾಪಾರಿ ಮುಖಂಡ ರಾಚಪ್ಪ ಗೋರ್ಟೆ, ಎಬಿವಿಪಿ ಅಧ್ಯಕ್ಷ ಶಿವಕುಮಾರ ಕಾಮ್‌ಜೋಳಗೆ ಆಗ್ರಹಿಸಿದ್ದಾರೆ.ಪುರಸಭೆಯ ಸದಸ್ಯರ ಆಯ್ಕೆಯಾಗಿ ತಿಂಗಳುಗಳೇ ಕಳೆದರೂ ಇನ್ನೂ ಅಧ್ಯಕ್ಷ, ಉಪಾಧ್ಯಕ್ಷರ ನೇಮಕವಾಗಿಲ್ಲ. ಇದರಿಂದಾಗಿ ಸಾಕಷ್ಟು ಬಡಾವಣೆಗಳಲ್ಲಿ ಕೆಲಸಗಳು ಕುಂಠಿತಗೊಂಡಿವೆ ಎಂದು ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ ದೂರಿದ್ದಾರೆ.ಶುದ್ಧ ಕುಡಿಯುವ ನೀರು ಪೂರೈಸುವ ಪೈಪುಗಳು ಸಹ ಅನೇಕ ಕಡೆ ಒಡೆದು ಹೋಗಿವೆ ಅವುಗಳ ದುರಸ್ತಿ ಕಾರ್ಯ ಕೈಗೊಳ್ಳುವ ಅಗತ್ಯವೂ ತುರ್ತಾಗಿ ಆಗಬೇಕಿದೆ ಎನ್ನುತ್ತಾರೆ ಬಿಜೆಪಿ ಅಧ್ಯಕ್ಷ ಅಶೋಕ ಮಡ್ಡೆ. ಶಾಸಕರು, ಸ್ಥಳೀಯ ಆಡಳಿತ ಇತ್ತ ಗಮನಹರಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.