ಸೋಮವಾರ, ಮೇ 25, 2020
27 °C

ಎಲ್ಲ ಸಮಸ್ಯೆಗಳಿಗೆ ಭಗವದ್ಗೀತೆ ಪರಿಹಾರ: ಸ್ವರ್ಣವಲ್ಲಿ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ದೇಶದ ಎಲ್ಲ ಜ್ವಲಂತ ಸಮಸ್ಯೆಗಳಿಗೆ ಭಗವದ್ಗೀತೆ ತನ್ನದೇ ರೀತಿಯಲ್ಲಿ ಪರಿಹಾರವನ್ನು ಸೂಚಿಸುತ್ತದೆ’ ಎಂದು ಸೋಂದಾ ಸ್ವರ್ಣವಲ್ಲೆ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಂಗಳವಾರ  ಹೇಳಿದರು.ನಗರದ ಶ್ರೀಚಾಮರಾಜ ಅರಸು ಬೋರ್ಡಿಂಗ್ ಶಾಲೆಯ ಮೈದಾನದಲ್ಲಿ ಮೈಸೂರು ಜಿಲ್ಲೆ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಏರ್ಪಡಿಸಿದ್ದ ‘ಶ್ರೀ ಭಗವದ್ಗೀತಾ ಸಮರ್ಪಣಾ ಸಮಾರಂಭ’ದಲ್ಲಿ ಮಾತನಾಡಿದ ಅವರು ‘ಸಮಾಜದಲ್ಲಿ ಹೆಚ್ಚುತ್ತಿರುವ ಮಾನಸಿಕ ದೌರ್ಬಲ್ಯ, ವಿವಿಧ ರೋಗಗಳು, ಅಪರಾಧ, ಭಯೋತ್ಪಾದನೆ ಮತ್ತು ಮತಾಂತರಗಳಿಗೆಲ್ಲ ಗೀತೆಯಲ್ಲಿ ಶಾಶ್ವತವಾದ ಪರಿಹಾರವಿದೆ’ ಎಂದು ತಿಳಿಸಿದರು.



‘ಭಗವದ್ಗೀತೆವನ್ನು ಮನಃಶಾಸ್ತ್ರಜ್ಞರು ಆಪ್ತಸಮಾಲೋಚನೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಗೀತೆ ಅತ್ಯುತ್ತಮವಾದ ನಿರ್ವಹಣಾ ಶಾಸ್ತ್ರವಾಗಿದೆ. ಗೀತೆ ಮತ್ತು ವಚನ ಪರಸ್ಪರ ಸಂವಾದಿಯಾಗಿ ಒಳ್ಳೆಯ ರೀತಿಯ ಪ್ರಭಾವ ವಲಯವನ್ನು ಸೃಷ್ಟಿಸುತ್ತಾ ಬಂದಿವೆ. ನಮ್ಮಲ್ಲಿ ಜೀವಶಾಸ್ತ್ರವಿದ್ದು, ಇದು ಸಾಕಷ್ಟು ಮುಂದುವರೆದಿದೆ. ಆದರೆ ಜೀವನ ಶಾಸ್ತ್ರವಿಲ್ಲ. ಹೀಗಾಗಿ ನಾವು ಹಿಂದೆ ಉಳಿದಿದ್ದೇವೆ. ಗೀತೆ ಹೇಗೆ ಬದುಕಬೇಕು ಎನ್ನುವುದನ್ನು ಚೆನ್ನಾಗಿ ಕಲಿಸಿಕೊಡುತ್ತದೆ’ ಎಂದರು.



ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಗೀತೆಯಲ್ಲಿರುವ ಸತ್ಯ ಗುಣಗಳನ್ನು ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ. ಭಾರತೀಯರು ಮಾತ್ರವಲ್ಲದೇ ವಿದೇಶಿಯರು ಗೀತೆಯಿಂದ  ಪ್ರಭಾವಿತರಾಗಿದ್ದಾರೆ. ಮಹಾತ್ಮಗಾಂಧಿ ಅವರ ಬದುಕು, ಹೋರಾಟಕ್ಕೆ ಗೀತೆ ಸ್ಫೂರ್ತಿಯಾಗಿದೆ. ಅವರು ಸಾಯುವಾಗಲೂ ತಂದೆ, ತಾಯಿಯನ್ನು ನೆನಪು ಮಾಡಿಕೊಳ್ಳದೇ ರಾಮನನ್ನು ನೆನಪಿಸಿಕೊಂಡರು. ಮಾಜಿ  ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಜನಪ್ರಿಯರಾಗಲು ಗೀತೆ ಪ್ರೇರಣೆ ನೀಡಿದೆ’ ಎಂದು ತಿಳಿಸಿದರು.



ರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥ ಸ್ವಾಮಿ ಮುಕ್ತಿದಾನಂದಜಿ ಮಾತನಾಡಿ, ‘ಗೀತೆಯಲ್ಲಿರುವ ತತ್ವ, ಸಂದೇಶವನ್ನು ಹಳ್ಳಿಗಾಡು, ಗುಡ್ಡಗಾಡು ಹಾಗೂ ಕೊಳಚೆ ಪ್ರದೇಶದಲ್ಲಿ ವಾಸಿಸುವವರಿಗೂ ಮುಟ್ಟಿಸಬೇಕು.  ಇಂತಹ ಕಾರ್ಯ ನಮ್ಮಲ್ಲಿ ಕಡಿಮೆಯಾಗಿದೆ. ಆದರೆ ಅನ್ಯ ಧರ್ಮಗಳು ಇಂತಹ ಕೆಲಸವನ್ನು ಚೆನ್ನಾಗಿ ಮಾಡು ತ್ತಿವೆ. ಆದ್ದರಿಂದ ಇತ್ತ ಹೆಚ್ಚು ಗಮನ ಹರಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.



ಶ್ರೀ ಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಪ್ರಮೋದಾದೇವಿ ಒಡೆಯರ್, ಆರ್ಶ್ಯ ವಿದ್ಯಾಕೇಂದ್ರದ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್,  ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಉದ್ಯಮಿ ಎಚ್.ಎನ್.ರಾಮತೀರ್ಥ, ಗ್ರಾಹಕ ಸಲಹಾ ಮಂಡಳಿ ಅಧ್ಯಕ್ಷ ಜಿ.ರವಿ, ಐಓಬಿ ಸಹಾಯಕ ಪ್ರಧಾನ ಪ್ರಬಂಧಕ ಎನ್.ಜಿ.ಶ್ರೀನಿವಾಸಮೂರ್ತಿ, ಗೋವರ್ದನ್, ಪಾಲಿಕೆ ಸದಸ್ಯ ಮ.ವಿ.ರಾಂಪ್ರಸಾದ್, ಸಮಿತಿ ಹಿರಿಯ ಉಪಾಧ್ಯಕ್ಷ ಎಚ್.ಎಸ್.ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ಎನ್.ಕೃಷ್ಣಮೂರ್ತಿ ಇದ್ದರು.



ಸಮಿತಿ ಕಾರ್ಯಾಧ್ಯಕ್ಷ ಬಿ.ವಿ.ಮಂಜುನಾಥ್ ಸ್ವಾಗತಿಸಿದರು. ಗೌರವಾಧ್ಯಕ್ಷ ಟಿ.ಶಿವಪ್ರಕಾಶ್ ವರದಿಯನ್ನು ವಾಚಿಸಿದರು. ವಿ.ಎಲ್.ಹೆಗಡೆ ವಂದಿಸಿದರು. ಹೇರಂಬ ಆರ್.ಭಟ್ಟ ನಿರೂಪಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.