ಶನಿವಾರ, ಜೂಲೈ 11, 2020
25 °C

ಎಲ್‌ಪಿಜಿ: ಎಸ್‌ಎಂಎಸ್ ಮೂಲಕವೂ ಬುಕ್ಕಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್‌ಪಿಜಿ: ಎಸ್‌ಎಂಎಸ್ ಮೂಲಕವೂ ಬುಕ್ಕಿಂಗ್

ಬೆಂಗಳೂರು: ಎಚ್‌ಪಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಸಿಲಿಂಡರ್ ಪಡೆಯಲು ಇನ್ನು ಮುಂದೆ ವಿತರಕರ ಬಳಿ ಹೋಗಿ ಬುಕ್ ಮಾಡುವ ಅವಶ್ಯಕತೆ ಇಲ್ಲ. ನೇರವಾಗಿ ಮೊಬೈಲ್ ಸಂಖ್ಯೆ 99640 23456ಗೆ ಕರೆ ಮಾಡಬಹುದು ಇಲ್ಲವೇ ಎಸ್‌ಎಂಎಸ್ ಕಳುಹಿಸಿದರೆ ಸಾಕು. ಸಿಲಿಂಡರ್ ಮನೆ ಬಾಗಿಲಿಗೆ ತಲುಪುತ್ತದೆ. ಎಚ್‌ಪಿ ಹಾಗೂ ಮೊಬೈಲ್ ಕಂಪೆನಿ ಐಡಿಯಾ ಸೆಲ್ಯುಲರ್ ಜೊತೆಗೂಡಿ ಈ ಸೇವೆಯನ್ನು ಆರಂಭಿಸಿವೆ.ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತ ಡಾ.ಎನ್.ವಿ. ಪ್ರಸಾದ್ ಅವರು ‘ಎಚ್‌ಪಿ ಎನಿಟೈಮ್’ ಸೇವೆಗೆ ಚಾಲನೆ ನೀಡಿದರು. ಎಷ್ಟೋ ಸಂದರ್ಭಗಳಲ್ಲಿ ವಿತರಕರ ದೂರವಾಣಿ ಬ್ಯುಸಿಯಾಗಿರುತ್ತದೆ. ಬುಕ್ಕಿಂಗ್ ಮಾಡಬೇಕಾದರೆ ಗ್ರಾಹಕರು ಹಲವು ಮೈಲುಗಳ ದೂರ ಇರುವ ವಿತರಕರ ಕಚೇರಿಗೆ ಹೋಗಬೇಕಾದ ಪ್ರಮೇಯ ಬರುತ್ತದೆ. ಈ ತೊಂದರೆಗಳನ್ನು ಕೊನೆಗಾಣಿಸಲು ಎಚ್‌ಪಿ ಕಂಪೆನಿಯು ‘ಎನಿಟೈಮ್’ ಸೇವೆ ಆರಂಭಿಸಿರುವುದು ಪ್ರಶಂಸನೀಯ. ಎಲ್‌ಪಿಜಿ ಸಿಲಿಂಡರ್ ಪೂರೈಸುವ ಇತರ ಕಂಪೆನಿಗಳು ಸಹ ಈ ಮಾರ್ಗವನ್ನು ಅನುಸರಿಸಿದರೆ ಗ್ರಾಹಕರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.ಎಚ್‌ಪಿ ಎಲ್‌ಪಿಜಿ ಪ್ರಾದೇಶಿಕ ಮ್ಯಾನೇಜರ್ ರಾಧಾಕೃಷ್ಣ ಮಾತನಾಡಿ, ‘ವಾರದ ಎಲ್ಲ ದಿನಗಳಲ್ಲೂ ಹಗಲಿರುಳು ಈ ಕೇಂದ್ರ ಕಾರ್ಯನಿರ್ವಹಿಸುತ್ತದೆ. ಸದ್ಯಕ್ಕೆ ಇದು ಬೆಂಗಳೂರಿಗೆ ಅಷ್ಟೇ ಸೀಮಿತವಾಗಿದ್ದು, ಇಲ್ಲಿರುವ 5 ಲಕ್ಷ ಗ್ರಾಹಕರಿಗೆ ಸೇವೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಾಜ್ಯದಾದ್ಯಂತ ವಿಸ್ತರಣೆ ಮಾಡಲಾಗುವುದು’ ಎಂದು ಹೇಳಿದರು.‘ಈ ಸೇವೆಯನ್ನು ಕೇರಳದಲ್ಲಿ ಪ್ರಾಯೋಗಿಕವಾಗಿ 2009ರಲ್ಲಿ ಆರಂಭವಾಗಿದ್ದು. ನಿರೀಕ್ಷೆಗೂ ಯಶಸ್ವಿಯಾಗಿದೆ. ಸುಮಾರು 7 ಲಕ್ಷ ಗ್ರಾಹಕರಿಗೆ ಈ ಸೇವೆಯು ದೊರೆಯುತ್ತಿದೆ’ ಎಂದರು. ಐಡಿಯಾ ಸೆಲ್ಯುಲರ್ ಕಂಪೆನಿಯ ಕರ್ನಾಟಕ ವೃತ್ತದ ಮುಖ್ಯಸ್ಥ ರಾಜೇಶ್ ಉಪಸ್ಥಿತರಿದ್ದರು.ಕಾರ್ಯ ವಿಧಾನ

ಮೊಬೈಲ್ (ಯಾವುದೇ ಕಂಪೆನಿಯ ನೆಟ್‌ವರ್ಕ್) ಅಥವಾ ಸ್ಥಿರ ದೂರವಾಣಿಯಿಂದ 99640 23456ಗೆ ಕರೆ ಮಾಡಿ ಎಚ್‌ಪಿ ಗ್ಯಾಸ್ ಡಿಸ್ಟ್ರಿಬ್ಯೂಟರ್ ಅವರ ಸ್ಥಿರ ದೂರವಾಣಿ ಸಂಖ್ಯೆ ಹಾಗೂ ಗ್ರಾಹಕರ ಸಂಖ್ಯೆ ನೀಡಬೇಕು. ಇಷ್ಟು ನೀಡಿದರೆ ಸಿಲಿಂಡರ್ ಬುಕ್ ಮಾಡಿದಂತೆ. ಇದರ ಬಗ್ಗೆ ನಿಮಗೆ ಬುಕ್ಕಿಂಗ್ ನಂಬರ್ ನೀಡಲಾಗುತ್ತದೆ.ಎಸ್‌ಎಂಎಸ್ ಮೂಲಕವೂ ಬುಕ್ಕಿಂಗ್ ಮಾಡಬಹುದು. HP<space> <tele phone number of the distributor with STD code> <space> <consu mer number>  ಟೈಪ್ ಮಾಡಿ   99640 23456ಗೆ ಕಳುಹಿಸಬೇಕು. ತಕ್ಷಣ ನಿಮಗೆ ಬುಕ್ಕಿಂಗ್ ಸಂಖ್ಯೆ (ಎಸ್‌ಎಂಎಸ್) ಬರುತ್ತದೆ. ನಂತರ ವಿತರಕರು ನಗದು ಪಾವತಿ (ಬಿಲ್) ಮಾಡಿರುವ ಬಗ್ಗೆ ಎಸ್‌ಎಂಎಸ್ ತಲುಪುತ್ತದೆ. ಸಿಲಿಂಡರನ್ನು ನಿಮ್ಮ ಮನೆಗೆ ತಲುಪಿಸಿರುವ ಬಗ್ಗೆಯೂ ಎಸ್‌ಎಂಎಸ್ ಬರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.