ಮಂಗಳವಾರ, ಜನವರಿ 28, 2020
17 °C

ಏರೋಲೈಟ್ ಬಳಕೆಗೆ ಅನುಮತಿ: ಹೈಕೋರ್ಟ್‌ಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಇಳಕಲ್ ಸುತ್ತಮುತ್ತಲಿನ ಗ್ರಾನೈಟ್ ಕಟಿಂಗ್ ಮತ್ತು ಪಾಲಿಶಿಂಗ್ ಘಟಕಗಳಲ್ಲಿ ಏರೋಲೈಟ್ (ಸರ್ವೊ ಕಟ್ ಜಿಆರ್) ರಾಸಾಯನಿಕ ದ್ರವ್ಯ ಬಳಸಲು ಸಮ್ಮತಿ ನೀಡುವ ಕುರಿತು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ವಿವಾದಾತ್ಮಕ ಆದೇಶವನ್ನು ಪ್ರಶ್ನಿಸಿರುವ ಮಧ್ಯಂತರ ತಿದ್ದುಪಡಿ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಪುರಸ್ಕರಿಸಿ ವಿಚಾರಣೆಗೆ ಅಂಗೀಕರಿಸಿದೆ. ಇಳಕಲ್‌ನ ನಾಗರಾಜ್ ಹೊಂಗಲ್ ಮತ್ತು ಅಣ್ಣಾಜಿರಾವ್ ಕೋರೆನವರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಂಜೀತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಎಲ್ಲ ಆಕ್ಷೇಪಣೆಗಳಿಗೆ ಪ್ರತಿವಾದಿಗಳ ಪರ ವಕೀಲರು  ಮೂರು ವಾರಗಳೊಳಗಾಗಿ ಉತ್ತರವನ್ನು ನೀಡುವಂತೆ ಆದೇಶಿಸಿತು.  ಕಳೆದ ಡಿಸೆಂಬರ್ 13ರಂದು ಹೈಕೋರ್ಟ್ ಮೂಲ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನಂತರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸದಾಶಿವಯ್ಯ ಅವರು 2012ರ ಡಿಸೆಂಬರ್ 22 ರಂದು ತರಾತುರಿಯಲ್ಲಿ ಜ್ಞಾಪನವನ್ನು ಹೊರಡಿಸಿ ಆ ಪತ್ರವನ್ನು ಧಾರವಾಡದ ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಕಳುಹಿಸಿದ್ದಾರೆ. ಈ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಕಳೆದ ನಾಲ್ಕೈದು ವರ್ಷಗಳಿಂದ ಅಕ್ರಮವಾಗಿ ಏರೊಲೈಟ್ (ಸರ್ವೊಕಟ್ ಜಿಆರ್) ಬಳಕೆ ಮಾಡುತ್ತಿದ್ದ ಗ್ರಾನೈಟ್ ಕಟಿಂಗ್ ಮತ್ತು ಪಾಲಿಶಿಂಗ್ ಘಟಕಗಳ ಮಾಲೀಕರಗೆ ಕಾನೂನು ಬಾಹೀರವಾಗಿ ನೆರವು ಮಾಡಿದ್ದಾರೆ ಎಂದು ಹೇಳಿ ಅರ್ಜಿದಾರರು ಮಧ್ಯಂತರ ತಿದ್ದುಪಡಿ ಅರ್ಜಿಯನ್ನು ಸಲ್ಲಿಸಿದ್ದರು. ಅಷ್ಟೇಅಲ್ಲ ಸರ್ವೊ ಕಟ್ ಜಿಆರ್ ಬಳಕೆಗೆ ಅವಕಾಶ ನೀಡುವ ವಿವಾದಾತ್ಮಕ ಜ್ಞಾಪನವನ್ನು (ಮೆಮೊ) ವಜಾಗೊಳಿಸಬೇಕು. ಅಲ್ಲಿಯವರೆಗೆ ಸರ್ವೊ ಕಟ್ ಜಿಆರ್ ಕಟ್ ಬಳಕೆ ಮಾಡುವ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.ಇಳಕಲ್ ಸುತ್ತಮುತ್ತಲಿನ ಗ್ರಾನೈಟ್ ಫ್ಯಾಕ್ಟರಿಗಳು ಅಕ್ರಮವಾಗಿ ಎರೊಲೈಟ್ ಬಳಸುತ್ತಿದ್ದು ಅವುಗಳನ್ನು ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಮಾಡಿತ್ತು. ಈ ಆದೇಶವನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಅರ್ಜಿದಾರರು ಮೂಲ ಅರ್ಜಿಯಲ್ಲಿ ಕೇಳಿಕೊಂಡಿದ್ದರು. ಅರ್ಜಿದಾರರ ಪರವಾಗಿ ವಕೀಲ ಶಂಕರ್ ಭಟ್ ವಕಾಲತ್ತು ವಹಿಸಿದ್ದರೆ, ಎದುರುದಾರ ಗ್ರಾನೈಟ್ ಕಂಪೆನಿಗಳ ಪರ ಎನ್. ಎಸ್. ಸಂಜಯಗೌಡ ಅವರು ವಾದ ಮಂಡಿಸಿದರು. 

ಪ್ರತಿಕ್ರಿಯಿಸಿ (+)