ಶುಕ್ರವಾರ, ಜೂನ್ 18, 2021
24 °C

ಏ. 15ರೊಳಗೆ ಉಪವಾಸ ಸತ್ಯಾಗ್ರಹ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ 108 ಪ್ರಶ್ನೆಗಳ ಉತ್ತರಕ್ಕೆ ಇದೇ 13 ಮತ್ತು 14ರಂದು ಗದಗನಲ್ಲಿ ಎರಡು ದಿನ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಏಪ್ರಿಲ್ 15ರೊಳಗೆ ರಾಯಚೂರಿನಲ್ಲಿ ಎರಡು ದಿನ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಗದಗ ನಗರದಲ್ಲಿ ನಡೆಯಲಿರುವ ಸತ್ಯಾಗ್ರಹದಲ್ಲಿ ಸಾವಿರಾರು ಜನ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಬಿ.ಶ್ರೀರಾಮುಲು ಹೇಳಿದರು.ಸೋಮವಾರ ನಗರಕ್ಕೆ ಆಗಮಿಸಿದ್ದ ಅವರು, ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ, ಡಾ.ಡಿ.ಎಂ ನಂಜುಂಡಪ್ಪ ವರದಿ ಅನುಷ್ಠಾನ ಸೇರಿದಂತೆ ಹಲವಾರು ಬೇಡಿಕೆ ಈಡೇರಿಲ್ಲ. ಜ್ವಲಂತ ಸಮಸ್ಯೆಗಳು ಪರಿಹಾರ ಕಂಡಿಲ್ಲ. ಹೀಗಾಗಿ ಈ ಉಪವಾಸ ಸತ್ಯಾಗ್ರಹ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಹೇಳಿದರು.2012-13ನೇ ಸಾಲಿನ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ ನಡೆಸಿದ್ದಾರೆ. ಒಂದು ಲಕ್ಷ ಕೋಟಿ ಬಜೆಟ್ ಮಂಡನೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಕಳೆದ ವರ್ಷದ  ಬಜೆಟ್‌ನಲ್ಲಿ ಘೋಷಣೆಯಾದ ಹಣದಲ್ಲಿ ಎಷ್ಟು ಬಳಕೆ ಆಗಿದೆ. ಎಷ್ಟು ಉಳಿದಿದೆ ಎಂಬುದನ್ನು ಜನತೆಗೆ ಮುಖ್ಯಮಂತ್ರಿ ಸದಾನಂದಗೌಡ ಅವರು ತಿಳಿಸಬೇಕು. ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟಿದ್ದ, ಡಾ.ಡಿ.ಎಂ ನಂಜುಂಡಪ್ಪ  ವರದಿ ಅನುಷ್ಠಾನಕ್ಕೆ ಇಟ್ಟಿದ್ದ ಅನುದಾನ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಘೋಷಣೆ ಮಾಡಿದ್ದ ಅನುದಾನ ಬಹಳಷ್ಟು ಕರ್ಚು ಆಗದೇ ಹಾಗೆ ಉಳಿದಿದೆ. ಇದನ್ನು ಜನತೆಗೆ ತಿಳಿಸದೇ ಮತ್ತೆ 1 ಲಕ್ಷ ಕೋಟಿ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ ನಡೆಸಿರುವುದು ಸರಿಯಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಬರಪರಸ್ಥಿತಿಗೆ ಜನತೆ ತೊಂದರೆ ಪಡುತ್ತಿದ್ದಾರೆ. ಗುಳೆ ಹೋಗುತ್ತಿದ್ದಾರೆ. ನೀರಿನ ಸಮಸ್ಯೆ ವ್ಯಾಪಕವಾಗಿದೆ. ಆದರೆ, ಸರ್ಕಾರ ಇವುಗಳನ್ನು ಸಮರ್ಥ ರೀತಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.ಮಾಧ್ಯಮದವರ ಮೇಲಿನ ಹಲ್ಲೆಗೆ ಖಂಡನೆ: ಬೆಂಗಳೂರಿನಲ್ಲಿ ಮಾಧ್ಯಮದವರ ಮೇಲೆ ಕೆಲ ವಕೀಲರು ನಡೆಸಿದ ಹಲ್ಲೆ ಘಟನೆ ಖಂಡನೀಯ. ಮಾಧ್ಯಮದವರು ಮತ್ತು ವಕೀಲರನ್ನು ಸೇರಿಸಿ ಬಿಕ್ಕಟ್ಟು ಪರಿಹರಿಸಬೇಕಾದ ಮುಖ್ಯಮಂತ್ರಿಗಳು ಗಮನಹರಿಸಿಲ್ಲ ಎಂದು ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.