ಶುಕ್ರವಾರ, ಮೇ 27, 2022
22 °C

ಐಎಎಸ್ ಅಧಿಕಾರಿಗಳಿಂದ ಕನ್ನಡ ಆಡಳಿತ ಭಾಷೆಯಾಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘ಐಎಎಸ್ ಅಧಿಕಾರಿಗಳಿಂದಾಗಿಯೇ ಕನ್ನಡ ಆಡಳಿತ ಭಾಷೆಯಾಗದೇ ಉಳಿದಿದೆ. ಇದಕ್ಕೆ ಬೇರೆಯವನ್ನು ದೂಷಿಸಿ ಪ್ರಯೋಜನವಿಲ್ಲ. ಮೊದಲು ರಾಜಕಾರಣಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಆಡಳಿತದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ದಿ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕಾಲದಿಂದ ಇಲ್ಲಿಯವರೆಗೆ ನೂರಾರು ಆದೇಶಗಳು ಆಗಿವೆ. ಆದರೆ ಆದೇಶ ಪಾಲಿಸದ ಒಬ್ಬರ ವಿರುದ್ಧವೂ ಕ್ರಮಕೈಗೊಂಡ ಉದಾಹರಣೆ ಇಲ್ಲ ಎಂದು ವಿಷಾದಿಸಿದರು.

‘ಐಎಎಸ್ ಅಧಿಕಾರಿಗಳು 5ನೇ ತರಗತಿ ಮಟ್ಟದ ಕನ್ನಡವನ್ನಾದರೂ ಕಲಿಯಬೇಕು ಎಂದಿದೆ. ಆದರೆ ಅವರಿಗೆ ಎರಡನೇ ತರಗತಿ ಕನ್ನಡವೂ ಬರುವುದಿಲ್ಲ. ಇಂದಿಗೂ ಕಡತಗಳಲ್ಲಿ ಆಂಗ್ಲಭಾಷೆಯಲ್ಲಿಯೇ ಟಿಪ್ಪಣಿ ಬರೆಯಲಾಗುತ್ತಿದೆ. ಸಚಿವರಿಗೆ ಇಂಗ್ಲಿಷ್ ಬಾರದೆ ಇದ್ದರೂ, ಐಎಎಸ್ ಅಧಿಕಾರಿಗಳು ಕೀಳಾಗಿ ನೋಡುತ್ತಾರೆ ಎಂದು ಭಾವಿಸಿ, ತಪ್ಪಾದರೂ ಇಂಗ್ಲಿಷ್‌ನಲ್ಲಿಯೇ ಬರೆಯುತ್ತಾರೆ’ ಎಂಬ ವಾಸ್ತವಾಂಶ ಬಿಚ್ಚಿಟ್ಟರು.

‘ಭ್ರಷ್ಟಾಚಾರಕ್ಕೆ ಆ ಪಕ್ಷ, ಈ ಪಕ್ಷ ಎಂಬುದಿಲ್ಲ. ಇದಕ್ಕೆ ಯಾರು ಹೊಣೆಗಾರರಾಗಿದ್ದಾರೊ ಅವರೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮ್ಮೇಳನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸಾಂದರ್ಭಿಕವಾಗಿ ಪ್ರಸ್ತಾಪಿಸುತ್ತಾ ಎಚ್ಚರಿಕೆ ನೀಡಿದ್ದಾರೆ. ಪರಸ್ಪರ ಅಪನಂಬಿಕೆ ಬಂದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ’ ಎಂದು ನುಡಿದರು.

‘ಕನಿಷ್ಠ 10 ವರ್ಷಕ್ಕೊಮ್ಮೆಯಾದರೂ ರಾಜಧಾನಿಯಲ್ಲಿ ಸಮ್ಮೇಳನ ನಡೆಯಬೇಕು. ಕನ್ನಡದ ಅನಿವಾರ್ಯತೆ ನಿರ್ಮಾಣವಾಗದೆ ಇದ್ದರೆ ಕರ್ನಾಟಕಕ್ಕೆ ಬರುವ ಬೇರೆ ಭಾಷೆಯ ಜನರು ಕನ್ನಡ ಕಲಿಯದೆ ಬದುಕುತ್ತಾರೆ. ಆಗ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಾರೆ. ಇದನ್ನು ಅರಿತು ಸರ್ಕಾರ ಮತ್ತು ರಾಜಕಾರಣಿಗಳು ಭಾಷೆಯ ಅಭಿವೃದ್ಧಿಗೆ ಪ್ರಯತ್ನ ಮಾಡಬೇಕು’ ಎಂಬುದಾಗಿ ಹೇಳಿದರು.

‘ಇಂತಹ ಸಮ್ಮೇಳನವನ್ನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಅತ್ಯಂತ ಅಚ್ಚುಕಟ್ಟಾಗಿ 77ನೇ ಸಾಹಿತ್ಯ ಸಮ್ಮೇಳನ ನಡೆದಿದೆ. ಪುಸ್ತಕ ಮಾರಾಟದಿಂದಲೇ ಸುಮಾರು ಐದು ಕೋಟಿ ರೂಪಾಯಿ ವಹಿವಾಟು ನಡೆದಿದೆ’ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಹರ್ಷ ವ್ಯಕ್ತಪಡಿಸಿದರು.

ಆರ್ಥಿಕ ವಿಕಾಸ: ‘ಕನ್ನಡಿಗರ ಆರ್ಥಿಕ ವಿಕಾಸವಾದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ. ರಬ್ಬರ್, ಪೆನ್ಸಿಲ್, ಬೆಂಕಿಪೊಟ್ಟಣ ಇತ್ಯಾದಿಗಳನ್ನು ಹೊರಗಿನಿಂದ ತರಿಸಿಕೊಳ್ಳುವ ಬದಲು ಇಲ್ಲಿಯೇ ತಯಾರಿಸುವಂತಾಗಬೇಕು. ಆ ರೀತಿಯ ಉತ್ಪನ್ನಗಳನ್ನು ನಮ್ಮವನ್ನಾಗಿ ಮಾಡಿಕೊಂಡರೆ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ’ ಎಂದು ಸಮಾರೋಪ ಭಾಷಣ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ತಾಯಿ ಭುವನೇಶ್ವರಿ ಪ್ರತಿಮೆಗೆ 25 ಕೋಟಿ ರೂಪಾಯಿ ನೀಡುವುದು ಸಂತೋಷ. ಆದರೆ ಕೋಟಿ, ಕೋಟಿ ವಿಚಾರಗಳನ್ನು ಅರ್ಥಪೂರ್ಣವನ್ನಾಗಿ ಮಾಡಿದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಬೇಂದ್ರೆ ಅವರ ಮೂಲ ಕೃತಿಗಳು ನಮಗೆ ಸಿಗುತ್ತಿಲ್ಲ. ಮೂಲ ಪ್ರತಿಗಳ ಮುದ್ರಣಕ್ಕೆ ಇರುವ ಅಡ್ಡಯಾದರೂ ಏನು? ಸಮಸ್ಯೆ ಇದ್ದರೆ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ ಅವರ ಎಲ್ಲ ಕೃತಿಗಳ ಹಕ್ಕುಗಳನ್ನು ಸರ್ಕಾರವೇ ಪಡೆಯಬೇಕು.

ಈ ವಿಚಾರದಲ್ಲಿ ನಾವು ತಮಿಳುನಾಡಿನಿಂದ ಪಾಠ ಕಲಿಯಬೇಕು. ಬೇರೆ ರಾಜ್ಯಗಳಲ್ಲಿನ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಂಡು ಕರ್ನಾಟಕವನ್ನು ವಿಕಾಸಗೊಳಿಸಬೇಕು. ಕನ್ನಡಿಗರು ಮಹಾರಾಷ್ಟ್ರದ ಶಿವಸೇನೆ ಹಾಗೆ ಆಗದೆ, ಕಷ್ಟ ಸಹಿಷ್ಣುಗಳಾಗಿ, ಉದಾರಿಗಳಾಗುವುದರಲ್ಲಿಯೇ ಹೆಚ್ಚುಗಾರಿಕೆ ಇದೆ ಎಂದು ಮಾರ್ಮಿಕವಾಗಿ ಹೇಳಿದರು.

ರಾಜಧಾನಿಯಲ್ಲಿ ವಿದೇಶಿಯರ ಆಹಾರ ಪದ್ಧತಿ, ವೇಷಭೂಷಣಗಳನ್ನು ನೋಡಿ ಕನ್ನಡಿಗರಲ್ಲಿ ಎದೆ ನಡುಕ ಉಂಟಾಗಿದ್ದು ನಿಜ. ಆದರೆ ಸಮ್ಮೇಳನದಿಂದ ಹೊಸ ಜಾಗೃತಿ, ಪುನರುತ್ಥಾನವಾಗಿದೆ. ಮೂರು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ಸಮ್ಮೇಳನ ನಡೆಸಬೇಕು ಎಂದು ಮನವಿ ಮಾಡಿದರು.

ಗಡಿ ಭಾಗದ ಕನ್ನಡಿಗರು ಹತ್ತಾರು ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ. ಹೊರ ರಾಜ್ಯಗಳ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಮೊದಲು ರಾಜ್ಯದ ಗಡಿಯನ್ನು ಭದ್ರಪಡಿಸಬೇಕು. ಆಗ ಮಾತ್ರ ರಾಜ್ಯ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಸಾನಿಧ್ಯ ವಹಿಸಿದ್ದ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು ನುಡಿದರು.

ನ್ಯಾಯವಾದಿ ಹೇಮಲತಾ ಮಹಿಷಿ ಮಾತನಾಡಿ, ಭಾಷಾ ಮಾಧ್ಯಮದ ವಿವಾದ ಬೇರೆ ರಾಜ್ಯಗಳಲ್ಲೂ ಇದೆ. ಇತರ ರಾಜ್ಯಗಳ ಪ್ರಕರಣಗಳೂ ಸುಪ್ರೀಂ ಕೋರ್ಟ್‌ನಲ್ಲಿವೆ. ಆದ್ದರಿಂದ ಈ ವಿಚಾರದಲ್ಲಿ ರಾಷ್ಟ್ರೀಯ ನೀತಿಯಾಗಬೇಕು. ಇತರ ರಾಜ್ಯದವರನ್ನೂ ಸಂಘಟಿಸಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಪ್ರದೇಶದ ಬಹುತೇಕ ಕಡೆ ಮೂವರು ಶಿಕ್ಷಕರಿದ್ದರೆ, ಇಬ್ಬರು ವಿದ್ಯಾರ್ಥಿಗಳಿದ್ದಾರೆ. ಇಂಗ್ಲಿಷ್ ಹಾವಳಿಯಿಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹಳ್ಳಿಗಳನ್ನು ಆವರಿಸಿರುವ ಕಾನ್ವೆಂಟ್ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಶಾಸಕ ಸಿ.ಎಸ್.ಪುಟ್ಟೇಗೌಡ ಸಲಹೆ ಮಾಡಿದರು.

ಬೃಹತ್ ಬೆಂಗಳೂರು 800 ಚದರ ಕಿ.ಮೀ.ವಿಸ್ತೀರ್ಣವನ್ನು ಹೊಂದಿದೆ. ಹೀಗಾಗಿ ಕೇಂದ್ರಾಡಳಿತ ಪ್ರದೇಶವಾಗಲು, ಪರಕೀಯರ ಪಾಲಾಗಲು ಸಾಧ್ಯವೇ ಇಲ್ಲ ಎಂದು ಸಚಿವರೂ ಆದ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಆರ್.ಅಶೋಕ ನುಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಪ್ರಭುದೇವ್, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ನಾರಾಯಣ ಗೌಡ, ಲಂಡನ್‌ನ ಲ್ಯಾಂಬೆತ್ ಮೇಯರ್ ಆಗಿರುವ ಕನ್ನಡಿಗ ನೀರಜ್ ಪಾಟೀಲ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.