ಶುಕ್ರವಾರ, ಫೆಬ್ರವರಿ 26, 2021
28 °C
ವಿದೇಶ ವಿದ್ಯಮಾನ

ಐಎಸ್‌ ಎಂಬ ‘ಮರಣ ಶಿಬಿರ’

ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಐಎಸ್‌ ಎಂಬ ‘ಮರಣ ಶಿಬಿರ’

ಇಸ್ಲಾಮಿಕ್ ಸ್ಟೇಟ್‌ (ಐಎಸ್) ಉಗ್ರರು ಸಿರಿಯಾದಲ್ಲಿ ಶನಿವಾರ ಮತ್ತೆ ನೂರಾರು ಮಂದಿಯ ಮಾರಣಹೋಮ ನಡೆಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಐಎಸ್‌ ಅಥವಾ ದಾಯೆಶ್‌  ಎಂದು ಕರೆಸಿಕೊಳ್ಳುವ ಈ ಸಂಘಟನೆ ತಾನು ವಿಧಿಸಿರುವ ಕಟ್ಟುಪಾಡುಗಳನ್ನು ಉಲ್ಲಂಘಿಸುವ ಮಹಿಳೆಯರು ಮತ್ತು  ಅವರ ನಿಷ್ಪಾಪಿ ಮಕ್ಕಳನ್ನೂ ಅಮಾನವೀಯವಾಗಿ ಹತ್ಯೆ ಮಾಡುತ್ತಿದೆ.ಈ ಮೂಲಕ ಇರಾಕ್‌ ಮತ್ತು ಸಿರಿಯಾದಲ್ಲಿ ಐಎಸ್‌ ವಶದಲ್ಲಿರುವ ಪ್ರದೇಶದಲ್ಲಿ ಜನ ಮನೆಯಿಂದ ಹೊರಗಡಿಯಿಡಲೂ ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಿದೆ.ಈ ಹಿಂದೆ ಅಡಾಲ್ಫ್‌ ಹಿಟ್ಲರ್‌ನ ನಾಜಿ ಸೈನಿಕರು ನಡೆಸಿದ್ದ ಬರ್ಬರ ಹಿಂಸಾಕೃತ್ಯಗಳು ಮತ್ತು ಉಗಾಂಡದ ಸರ್ವಾಧಿಕಾರಿ ಈದಿ ಅಮೀನ್‌ನ ಕ್ರೌರ್ಯದ ಕತೆ ಕೇಳಿ  ಜಗತ್ತು ಬೆಚ್ಚಿಬಿದ್ದಿತ್ತು. ಐಎಸ್‌ ಉಗ್ರರು ನಡೆಸುತ್ತಿರುವ  ಹಿಂಸಾಕೃತ್ಯಗಳು ಮತ್ತಷ್ಟು ಭೀಕರವಾಗಿವೆ.

ತಾವು ಶಿರಚ್ಛೇದ ಮಾಡಿದವರ ರುಂಡಗಳನ್ನು ಪಾರಿತೋಷಕದಂತೆ ಎತ್ತಿಕೊಂಡು ಊರೆಲ್ಲಾ ಮೆರೆಯುವುದು, ಚೂಪಾದ ಚಾಕುವಿನಿಂದ ಒತ್ತೆಯಾಳುಗಳ ರುಂಡ ಕತ್ತರಿಸುವ ದೃಶ್ಯವನ್ನು ಯಥಾವತ್‌ ವಿಡಿಯೊ ಶೂಟಿಂಗ್‌ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಯಬಿಡುವುದು...ಇವೆಲ್ಲ ಐಎಸ್ ಕ್ರೌರ್ಯದ ಮಾದರಿಗಳು.ಐಎಸ್‌ ಉಗ್ರರು ಯಾವುದೇ ಪ್ರಮಾಣದ  ಹಿಂಸಾಚಾರ ನಡೆಸಿದರೂ ಅವರು ಪ್ರಶ್ನಾತೀತರು. ಅಲ್ಲಿ ಉನ್ನತ ನಾಯಕರ ಮಾತುಗಳೇ ಸುಗ್ರೀವಾಜ್ಞೆ.ತನ್ನ ವಿರುದ್ಧ ಹೋರಾಡುತ್ತಿರುವ ಇರಾಕ್‌, ಸಿರಿಯಾ ಪಡೆಗಳ ಸೈನಿಕರು, ತನ್ನ ವ್ಯಾಪ್ತಿಯ ಪ್ರದೇಶದೊಳಗೆ ಕಾಲಿಡುವ ವಿದೇಶಿ ಪತ್ರಕರ್ತರು, ಮಾನವ ಹಕ್ಕು ಸಂಘಟನೆಗಳ ಕಾರ್ಯಕರ್ತರನ್ನು ಮಾತ್ರ ಐಎಸ್‌ ಕೊಲ್ಲುತ್ತಿಲ್ಲ.ತಮಗೆ ಬೇಡ ಎನಿಸಿದಾಗ ತಮ್ಮದೇ ಸೈನಿಕರನ್ನೇ ಕೊಲ್ಲಲು ಸಹ ಐಎಸ್‌ ನಾಯಕರು ಆದೇಶ ನೀಡುತ್ತಿದ್ದಾರೆ. ಇರಾಕ್‌ ಪಡೆಗಳ ಕೈಯಲ್ಲಿ ಸೋತು ರಮದಿಯನ್ನು ಕಳೆದುಕೊಂಡ ಆಕ್ರೋಶಕ್ಕೆ ಕಳೆದ ವಾರ ಐಎಸ್‌ ಹೋರಾಟಗಾರರನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ. ಕಳೆದ ವರ್ಷ ಇರಾಕ್‌ನ ಟಿಕ್ರಿತ್‌ ಪಟ್ಟಣ ಕೈತಪ್ಪಿಹೋದಾಗಲೂ ಐಎಸ್‌ ಸೈನಿಕರನ್ನು ಕೊಲ್ಲಲಾಗಿತ್ತು.

ಸೇನಾಪಡೆಗಳು ದಾಳಿ ಮಾಡಿದಾಗ ಭಾರತ, ಪಾಕ್‌, ಬಾಂಗ್ಲಾ ಮೂಲದ ಮುಸ್ಲಿಮರನ್ನು ಐಎಸ್‌ ಮಾನವ ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂಬುದೂ ವರದಿಯಾಗಿದೆ.ಮಿತಿಮೀರುತ್ತಿರುವ ಹಿಂಸೆ: ಎರಡು ವರ್ಷಗಳ ಹಿಂದೆ ಸಿರಿಯಾ ಮತ್ತು ಇರಾಕ್‌ ಗಡಿಯಲ್ಲಿ ಐಎಸ್‌ ಉಗ್ರರ ಉಪಟಳ ಆರಂಭವಾದಾಗ ಅದು ಅಲ್‌ಕೈದಾ, ತಾಲಿಬಾನ್‌ ಮಾದರಿಯ ಮತ್ತೊಂದು ಉಗ್ರ ಸಂಘಟನೆ ಎಂದು ಭಾವಿಸಲಾಗಿತ್ತು.ಅಲ್‌ಕೈದಾಕ್ಕೆ ಅಮೆರಿಕ ಮೊದಲ ವೈರಿಯಾಗಿತ್ತು. ಅಮೆರಿಕದ ಮಿತ್ರದೇಶಗಳಾದ ಬ್ರಿಟನ್‌, ಫ್ರಾನ್ಸ್‌ , ಜರ್ಮನಿ ಇತ್ಯಾದಿ ಐರೋಪ್ಯ ದೇಶಗಳ ವಿರುದ್ಧವೂ ಅದು ಹೋರಾಟ ನಡೆಸುತ್ತಿತ್ತು. ಒಸಾಮ ಬಿನ್‌ ಲಾಡೆನ್‌ ಹತ್ಯೆಯ ನಂತರ ಅದು ಶಕ್ತಿ ಕುಂದುತ್ತ ಬಂತು.

ಆಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಸೀಮಿತವಾಗಿರುವ ತಾಲಿಬಾನ್‌ ಉಗ್ರರು ತಮ್ಮ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಮಹಿಳೆಯರ ಶಿಕ್ಷಣ, ಕ್ರೀಡೆ, ಮನರಂಜನೆ ಸೇರಿದಂತೆ ಆಧುನಿಕ ಜೀವನಶೈಲಿಯನ್ನು ವಿರೋಧಿಸುತ್ತಿದ್ದಾರೆ.ಆದರೆ, ಇಸ್ಲಾಮಿಕ್‌ ಸ್ಟೇಟ್‌ ಇಡೀ ಜಗತ್ತಿನಲ್ಲಿ ಇಸ್ಲಾಮಿಕ್‌ ಸಾಮ್ರಾಜ್ಯ ಸ್ಥಾಪಿಸಬೇಕು ಎಂಬ ಮಹದಾಸೆ ಹೊಂದಿದೆ. ಅರಬ್‌ ದೇಶಗಳು ಸೇರಿದಂತೆ ಜಗತ್ತಿನ ಇತರ ದೇಶಗಳಲ್ಲಿರುವ ಮುಸ್ಲಿಮರ ಜೀವನಶೈಲಿ ಮೂಲ ಇಸ್ಲಾಂಗೆ ಅನುಗುಣವಾಗಿಲ್ಲ ಎಂದು ಹೇಳುತ್ತಿದೆ. ಹಿಂಸೆ  ಮೂಲಕ ಇಸ್ಲಾಮಿಕ್‌ ಸಾಮ್ರಾಜ್ಯ ಸ್ಥಾಪಿಸುವ ಕನಸು ಕಾಣುತ್ತಿದೆ. ಐಎಸ್‌ನ ಈ ಸಿದ್ಧಾಂತಕ್ಕೆ ಮರುಳಾಗಿ ಬ್ರಿಟನ್‌, ಆಸ್ಟ್ರೇಲಿಯಾ, ಫ್ರಾನ್ಸ್‌ ಇತ್ಯಾದಿ ದೇಶಗಳ ವಿದ್ಯಾವಂತ ಮುಸ್ಲಿಮರು ಸಹ ಸಿರಿಯಾಗೆ ಹೋಗಲು ಕಾತರರಾಗಿದ್ದಾರೆ ಎಂಬುದು ಹೆಚ್ಚು ಆತಂಕಕಾರಿ.ಮೃತ್ಯುಕೂಪವಾಗಿರುವ ಸಿರಿಯಾ: ಬಸರ್‌ ಅಲ್‌ ಅಸಾದ್‌ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಬಂಡುಕೋರರು ಹಾಗೂ ಸಿರಿಯಾ ಸೇನೆ ನಡುವಣ ಸಂಘರ್ಷದಿಂದಾಗಿ ಸಿರಿಯಾದಲ್ಲಿ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ.ಸೇನೆಯಿಂದ ದಿಗ್ಬಂಧನ ಹಾಗೂ ಉಗ್ರರ ನಡುವೆ ಜನರು ತಮ್ಮದೇ ಮನೆಯಲ್ಲಿ ಕೈದಿಗಳಾಗಿದ್ದಾರೆ. ದಿನಕ್ಕೊಂದು ಊಟಕ್ಕೂ ತತ್ವಾರ. ಹುಲ್ಲು ಬೇಯಿಸಿ, ಹಲ್ಲಿ, ಹಾವು, ಬೆಕ್ಕುಗಳನ್ನೂ ತಿಂದು ಹಸಿವು ನೀಗಿಕೊಳ್ಳುತ್ತಿದ್ದಾರೆ.ಮಡಾಯದಲ್ಲಿ ಡಿಸೆಂಬರ್‌ನಿಂದ ಈಚೆಗೆ 23 ಮಂದಿ ಹಸಿವಿನಿಂದ ಸತ್ತಿದ್ದಾರೆ. ಆರು ತಿಂಗಳಿನಿಂದ ಆಹಾರ ಪೂರೈಕೆಯಾಗಿಲ್ಲ. ಶಾಂತಿ ಮಾತುಕತೆ ನಡೆಸಲು ಸೂಚಿಸಿರುವ ವಿಶ್ವಸಂಸ್ಥೆಯ ಮಾತಿಗೂ ಸಿರಿಯಾ ಸರ್ಕಾರ ಮನ್ನಣೆ ನೀಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.