ಐಐಐಟಿಗೆ 50 ಎಕರೆ; ಚಿಗುರಿದ ಕನಸು
ಧಾರವಾಡ: ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಕರ್ನಾಟಕ ವಿಶ್ವವಿದ್ಯಾಲಯವು ತನ್ನ ಆವರಣದ 50 ಎಕರೆ ಜಮೀನನ್ನು ಹಸ್ತಾಂತರಿಸುವ ಮೂಲಕ `ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ'ಯು (ಐಐಐಟಿ) ಇಲ್ಲಿ ನೆಲೆಯೂರಲು ವೇದಿಕೆ ಸಜ್ಜುಗೊಂಡಿದೆ. ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಓದಲು ಇದು ಸಹಕಾರಿಯಾಗಲಿದೆ ಎಂದು ರಾಜ್ಯ ಸರ್ಕಾರ ನಿರೀಕ್ಷಿಸಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಐಐಐಟಿ ಸ್ಥಾಪನೆಗಾಗಿ 50 ಎಕರೆ ಜಮೀನು ನೀಡಲು ಒಪ್ಪಿಗೆ ನೀಡಿತು. ಐಐಐಟಿ ಸ್ಥಾಪನೆಗಾಗಿ ಜಾಗ ನೀಡುವಂತೆ ರಾಜ್ಯ ಸರ್ಕಾರ ವರ್ಷದ ಹಿಂದೆಯೇ ಪತ್ರ ಬರೆದು ಸೂಚನೆ ನೀಡಿತ್ತು. ಅದರಂತೆ ಕುಲಪತಿ ಡಾ.ಎಚ್.ಬಿ.ವಾಲೀಕಾರ ಅವರ ನೇತೃತ್ವದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ, ಸಂಸ್ಥೆಗೆ ಜಾಗ ನೀಡುವುದರಿಂದ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಎಂಬುದನ್ನು ಸದಸ್ಯರ ಗಮನಕ್ಕೆ ತಂದು ಒಪ್ಪಿಗೆ ಪಡೆಯಲಾಗಿತ್ತು.
ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸರ್ಕಾರ ಐಐಐಟಿ ಆರಂಭಿಸುವ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿತು.
ಈಗಾಗಲೇ ರಾಜ್ಯದ ಬೆಂಗಳೂರು, ಆಂಧ್ರಪ್ರದೇಶದ ಹೈದರಾಬಾದ್, ಉತ್ತರ ಪ್ರದೇಶದ ಅಲಹಾಬಾದ್, ಮಧ್ಯಪ್ರದೇಶದ ಇಂಧೋರ್ನಲ್ಲಿ ಐಐಐಟಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.
ಕರ್ನಾಟಕ ವಿ.ವಿ.ಯಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆ ಆರಂಭವಾಗುವ ಬಗ್ಗೆ `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಕುಲಪತಿ ಡಾ.ಎಚ್.ಬಿ.ವಾಲೀಕಾರ, `ಸಾಮಾಜಿಕ ಹಿತಾಸಕ್ತಿ ಇರುವುದರಿಂದ ಈ ಸಂಸ್ಥೆಗೆ ಜಾಗ ನೀಡಲು ನಾವು ಒಪ್ಪಿಗೆ ಸೂಚಿಸಿದ್ದೇವೆ. ಬರುವ ಶೈಕ್ಷಣಿಕ ವರ್ಷದಿಂದ ಐಐಐಟಿ ತರಗತಿಗಳು ಆರಂಭವಾಗಬಹುದು. ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಪ್ರಾಧ್ಯಾಪಕರ ಆಯ್ಕೆಯೂ ಅಖಿಲ ಭಾರತ ಮಟ್ಟದಲ್ಲಿ ನಡೆಯಲಿದೆ. ಆದರೆ, ಈ ಸಂಸ್ಥೆ ಆರಂಭವಾಗುವುದರಿಂದಾಗಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿದೆ ಎಂಬುದೇ ಸಮಾಧಾನ' ಎಂದರು.
ವಿ.ವಿ.ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಬಳಿ ಇರುವ ಪ್ರದೇಶದಲ್ಲಿಯೇ ಐಐಐಟಿ ಕಟ್ಟಡ ಬರಲಿದ್ದು, ಈ ಬಗ್ಗೆ ಕೇಂದ್ರದ ತಂಡ ಆಗಮಿಸಿ ಅಧ್ಯಯನ ನಡೆಸಲಿದೆ.
ಧಾರವಾಡ ಐಐಐಟಿಯಲ್ಲಿ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ಎಷ್ಟು ಇರಬೇಕು ಎಂಬುದರ ಬಗ್ಗೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ವಿ.ವಿ. ಈ ಹಿಂದೆಯೂ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಜಾಗವನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.