ಮಂಗಳವಾರ, ಮೇ 17, 2022
24 °C

ಐಟಿಎಫ್ ಟೆನಿಸ್: ಕರಣ್‌ಗೆ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಡೆವಿಸ್ ಕಪ್ ಆಟಗಾರ ಕರಣ್ ರಸ್ತೋಗಿ  ಮಂಗಳವಾರ ಮಧ್ಯಾಹ್ನ ಮೈಸೂರು ಟೆನಿಸ್ ಕ್ಲಬ್‌ನಲ್ಲಿ ಜಯದ ನಗೆ ಬೀರಿದರೆ,  ಅನಾರೋಗ್ಯದಿಂದ ಬಳಲಿದ `ಸ್ಥಳೀಯ ಹುಡುಗ~ ಸೂರಜ್ ಪ್ರಬೋಧ್ ಸೋಲಿನ ಕಹಿ ಉಂಡರು.ಇಲ್ಲಿ ನಡೆಯುತ್ತಿರುವ ಹತ್ತು ಸಾವಿರ ಡಾಲರ್ ಮೊತ್ತದ ಪ್ರಶಸ್ತಿಯ ಜುವಾರಿ ಗಾರ್ಡನ್ ಸಿಟಿ ಐಟಿಎಫ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಐದನೇ ಶ್ರೇಯಾಂಕದ  ಕರಣ್ ರಸ್ತೋಗಿ 6-4, 6-4ರಿಂದ ಥಾಯ್ಲೆಂಡಿನ ವಾರಿಟ್ ಸಾರ್‌ಬಟನಾರ್ಕ್ ಅವರ ಸವಾಲನ್ನು ಮೆಟ್ಟಿ ನಿಂತರು.ಆರಂಭದಲ್ಲಿ ಚುರುಕಾದ ಆಟ ಪ್ರದರ್ಶಿಸಿದ ಥಾಯ್ ಆಟಗಾರ ಸವಾಲುಗಳಿಗೆ ಫೋರ್‌ಹ್ಯಾಂಡ್ ಮತ್ತು ಆಕರ್ಷಕ ಬ್ಯಾಕ್‌ಹ್ಯಾಂಡ್‌ಗಳ ಉತ್ತರ ಕೊಟ್ಟ ಕರಣ್, ಎರಡು ನೇರ ಸೆಟ್‌ಗಳ ಜಯ ಸಾಧಿಸಿದರು.ಮೈಸೂರಿನ ಸೂರಜ್ ಪ್ರಬೋಧ್ ಜ್ವರ ಮತ್ತು ಸ್ನಾಯುಸೆಳೆತದಿಂದ ತಮ್ಮ ಎಂದಿನ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. ಉತ್ತಮವಾಗಿ ಆಡಿದ ಎದುರಾಳಿ ಬೆಂಗಳೂರಿನ ವಿನೋದಗೌಡ  6-2, 6-2ರಿಂದ ಸೂರಜ್ ಅವರನ್ನು ಸೋಲಿಸಿದರು. ಜ್ವರದಿಂದ ಬಳಲಿ ಸುಸ್ತಾಗಿದ್ದ ಸೂರಜ್ ಪಂದ್ಯದ ಮಧ್ಯದಲ್ಲಿ ತೊಡೆಯ ಸ್ನಾಯುಸೆಳೆತಕ್ಕೊಳಗಾಗಿ ಫಿಜಿಯೋ ತಂಡದಿಂದ ಚಿಕಿತ್ಸೆ ಪಡೆದು ಆಟ ಮುಂದುವರೆಸಿದರು. ಟಿಚೇನ್, ಸಾಕೇತ್‌ಗೆ ಭರ್ಜರಿ ಗೆಲುವು: ಟೂರ್ನಿಯ ಅಗ್ರಶ್ರೇಯಾಂಕದ ಆಟಗಾರ ತೈಪೆಯಿಯ ಟಿ ಚೇನ್ 6-2, 6-2ರಿಂದ ಭಾರತದ ಶಾಬಾಜ್ ಖಾನ್ ವಿರುದ್ಧ ಸುಲಭವಾಗಿ ಗೆದ್ದರು.ಕಳೆದ ವಾರ ಮಂಡ್ಯದಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಶ್ರೇಯಾಂಕರಹಿತ ಆಟಗಾರ ಸಾಕೇತ್ ಮೈನೆನಿ ಮೈಸೂರಿನಲ್ಲಿ ತಮ್ಮ ಗೆಲುವಿನ ಓಟ ಆರಂಭಿಸಿದರು. ಹೈದರಾಬಾದಿನ ಸಾಕೇತ್ 6-3, 6-4ರಿಂದ ಆರನೇ ಶ್ರೇಯಾಂಕದ ಭಾರತದ ಆಟಗಾರ ರಂಜೀತ್ ವಿರಾಲಿ ಮುರುಗೇಶನ್ ವಿರುದ್ಧ ಸುಲಭ ಗೆಲುವು ಸಾಧಿಸಿದರು.ಮಂಡ್ಯದ ಟೂರ್ನಿಯ ಸೆಮಿಫೈನಲ್‌ನಲ್ಲಿಯೂ ಸಾಕೇತ್ ಅವರು ರಂಜೀತ್ ಅವರನ್ನು ಸೋಲಿಸಿದ್ದರು.

ಇನ್ನೊಂದು ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಭಾರತದ ಆಟಗಾರ ವೈಜಯಂತ್ ಮಲೀಕ್ 6-3, 6-2ರಿಂದ ಫ್ರಾನ್ಸ್‌ನ ಸಬಾಸ್ಟಿಯನ್ ಬೋಲ್ಟ್ಸ್  ಅವರನ್ನು ಪರಾಭವಗೊಳಿಸಿದರು.ಇನ್ನುಳಿದ ಪಂದ್ಯಗಳಲ್ಲಿ  ನಾಲ್ಕನೇ ಶ್ರೇಯಾಂಕದ ಜೀವನ್ ನೆಡುಚೆಳಿಯನ್ 6-0, 6-2ರಿಂದ ಭಾರತದ ವೆಂಕಟ್ ಅಯ್ಯರ್ ವಿರುದ್ಧ;  ಆಸ್ಟ್ರೇಲಿಯಾದ ಜ್ಯಾಕ್ ಇಜೆಸ್ಟಿಯನ್ 6-3, 6-3ರಿಂದ ಭಾರತದ ಸಾಗರ್ ಮಂಜಣ್ಣ  ವಿರುದ್ಧ; ಆಸ್ಟ್ರೇಲಿಯಾದ ಗಾವಿನ್ ವ್ಯಾನ್ ಪೆಪರ್‌ಜೀಲ್ 6-1, 6-2ರಿಂದ ಭಾರತದ ಖಾಜಾ ವಿನಾಯಕ ಶರ್ಮಾ ವಿರುದ್ಧ; ಥಾಯ್ಲೆಂಡ್‌ನ ಕಿಟ್ಟಿಪಾಂಗ್ ವಾಚಿರ್‌ಮನೋವಾಂಗ್ -3, 6-3ರಿಂದ ಭಾರತದ ಅಶ್ವಿನ್ ವಿಜಯರಾಘವನ್ ವಿರುದ್ಧ, ಅಜಯ್ ಸೆಲ್ವರಾಜ್ 6-4, 7-6 (3) ರಿಂದ ಸೌರಭ್ ಸಿಂಗ್ ವಿರುದ್ಧ, ಚೀನಾದ ಬೊವೆನ್ ಓಯುಂಗ್ 6-3, 7-6(3)ರಿಂದ ಆಸ್ಟ್ರೇಲಿಯಾದ ಸ್ಕಾಟ್ ಪುಡ್ಜಿಯನಸ್ ವಿರುದ್ಧ ಜಯಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.