ಶನಿವಾರ, ಮೇ 28, 2022
31 °C

ಐದು ಬಿಡಾಡಿ ದನಗಳಿಗೆ ಆಸಿಡ್ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾತ್ರಿ ವೇಳೆ ನಗರದಲ್ಲಿ ಅಡ್ಡಾಡುವ ಬಿಡಾಡಿ ದನಗಳ ಮೇಲೆ ಕಿಡಿಗೇಡಿಗಳು ವ್ಯವಸ್ಥಿತವಾಗಿ ಆಸಿಡ್ ದಾಳಿ ನಡೆಸುತ್ತಿರುವುದು ಸ್ವತಃ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ.10 ದಿನಗಳಿಂದ ಇಲ್ಲಿನ ಘಂಟಿಕೇರಿ ಹಾಗೂ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದು ದನಗಳ ಮೇಲೆ ಆಸಿಡ್ ದಾಳಿ ನಡೆದಿದೆ. ದನಗಳ ಬೆನ್ನು, ಕತ್ತು ಹಾಗೂ ಹಿಂಭಾಗಕ್ಕೆ ಆಸಿಡ್ ಹಾಕಲಾಗಿದ್ದು, ದಾಳಿಗೊಳಗಾದ ದನಗಳ ವೇದನೆ ಅವುಗಳ ಪಾಲಕರನ್ನು ಕಂಗೆಡಿಸಿದೆ.ಘಂಟಿಕೇರಿ ಠಾಣೆ ವ್ಯಾಪ್ತಿಯ ಕಂಚಗಾರ ಗಲ್ಲಿ, ಕಾಳಮ್ಮನ ಅಗಸಿ ಹಾಗೂ ಮೂರು ಸಾವಿರ ಮಠದ ಬಳಿ ನಾಲ್ಕು ದನಗಳ ಮೇಲೆ ಆಸಿಡ್ ಹಾಕಲಾಗಿದೆ. ಎಲ್ಲಾ ದನಗಳು ಅಕ್ಕಿಹೊಂಡದಲ್ಲಿರುವ ಬಾಬಾಜಿ ಮಠದ ಗೋಶಾಲೆಗೆ ಸೇರಿವೆ.`10 ದಿನಗಳ ಹಿಂದೆ ಗೋಶಾಲೆಗೆ ಸೇರಿದ್ದ ಹಸುವೊಂದು ಕಾಳಮ್ಮನ ಅಗಸಿಯ ಬಳಿ ಗಾಯಗೊಂಡು ನರಳುತ್ತಾ ಬಿದ್ದಿತ್ತು. ಅದನ್ನು ಗಾಡಿಯಲ್ಲಿ ಹಾಕಿಕೊಂಡು ಬಂದೆವು. ಮೊದಲಿಗೆ ಅದು ಆಸಿಡ್ ದಾಳಿ ಎಂದು ತಿಳಿದಿರಲಿಲ್ಲ. ಅಪಘಾತ ಇರಬಹುದು ಎಂದು ಭಾವಿಸಿದ್ದೆವು. ನಂತರ ಎರಡು ದಿನಗಳಲ್ಲಿ ಇನ್ನೂ ಮೂರು ಹಸುಗಳಿಗೆ ಅದೇ ಸ್ಥಿತಿಯಾಯಿತು' ಎನ್ನುತ್ತಾರೆ ಮಠದ ಅಧ್ಯಕ್ಷ ರಾಜು ಮಹಾರಾಜ್.ದನಗಳ ಮೇಲೆ ಆಸಿಡ್ ದಾಳಿ ನಡೆದಿರುವ ಬಗ್ಗೆ ರಾಜು ಮಹಾರಾಜ್ ಘಂಟಿಕೇರಿ ಠಾಣೆಗೆ ದೂರು ನೀಡಿದ್ದಾರೆ. `ಪೊಲೀಸರೇ ಪಶು ವೈದ್ಯರನ್ನು ಕರೆತಂದು ಚಿಕಿತ್ಸೆ ಕೊಡಿಸಿದರು. ವೈದ್ಯರು ಬೇವಿನ ಎಣ್ಣೆ, ಮುಲಾಮು ಕೊಟ್ಟಿದ್ದಾರೆ. ದಿನಬಿಟ್ಟು ದಿನ ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ಈಗ ಚೇತರಿಸಿಕೊಳ್ಳುತ್ತಿವೆ. ಮನುಷ್ಯರಾದವರು ಇಷ್ಟೊಂದು ನೀಚ ಕೃತ್ಯಕ್ಕೆ ಇಳಿಯುವುದಿಲ್ಲ' ಎಂದು ರಾಜು ಆಕ್ರೋಶ ವ್ಯಕ್ತಪಡಿಸುತ್ತಾರೆ.ಮೂರು ದಿನಗಳ ಹಿಂದೆ ಜನತಾ ಬಜಾರ್ ಬಳಿ ಮತ್ತೊಂದು ಬಿಡಾಡಿ ಹಸುವಿಗೆ ಆಸಿಡ್ ಹಾಕಲಾಗಿದೆ. ಸುದ್ದಿ ತಿಳಿದು ಉಪನಗರ ಠಾಣೆ ಪೊಲೀಸರು ತಾವೇ ಮುಂದಾಗಿ ಪ್ರಕರಣ ದಾಖಲಿಸಿಕೊಂಡು ಅದನ್ನು ಪಾಳಾ ಗ್ರಾಮದಲ್ಲಿರುವ ಕರುಣಾ ಗೋಶಾಲೆಗೆ ಕಳುಹಿಸಿದ್ದಾರೆ.ವಿಶೇಷ ತಂಡ ರಚನೆ: ದನಗಳ ಮೇಲೆ ಆಸಿಡ್ ದಾಳಿ ನಡೆಸಿದವರನ್ನು ಪತ್ತೆ ಹಚ್ಚಲು ಅಪರಾಧ ವಿಭಾಗದ ಎಸಿಪಿ ಎ.ಆರ್.ಬಡಿಗೇರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿರುವುದಾಗಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಬಿ.ಎ.ಪದ್ಮನಯನ ಹೇಳುತ್ತಾರೆ. `ಇದೊಂದು ಅಮಾನವೀಯ ಕೃತ್ಯ. ದಾಳಿಯ ಹಿಂದಿನ ಕಾರಣ ತಿಳಿದಿಲ್ಲ ಆದರೆ ಮೂಕ ಪ್ರಾಣಿಗಳ ಮೇಲಿನ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ' ಎನ್ನುತ್ತಾರೆ.ಜನತಾ ಬಜಾರ್ ಬಳಿ ಶನಿವಾರ ಗಾಯಗೊಂಡಿದ್ದ ಸ್ಥಿತಿಯಲ್ಲಿದ್ದ ಹಸುವಿನ ಮೇಲೆ ಆಸಿಡ್ ದಾಳಿಯಾಗಿರಲಿಲ್ಲ. ಬದಲಿಗೆ ಫುಟ್‌ಪಾತ್ ದಾಟುವ ಭರದಲ್ಲಿ ಅಲ್ಲಿನ ಕಬ್ಬಿಣದ ಸರಳಿಗೆ ಸಿಲುಕಿ ಗಾಯಗೊಂಡಿತ್ತು' ಎಂದು ಸ್ಪಷ್ಟಪಡಿಸಿದ ಪದ್ಮನಯನ, `ರಾಣಿ ಚೆನ್ನಮ್ಮಾ ವೃತ್ತದ ಬಳಿ ಗಸ್ತಿನಲ್ಲಿದ್ದ ಪೊಲೀಸರು ಬೆಳಿಗ್ಗೆ ಸಾರ್ವಜನಿಕರ ಸಹಾಯದಿಂದ ಅದನ್ನು ಸರಳಿನಿಂದ ಬಿಡಿಸಿದ್ದರು. ಗಾಯಗೊಂಡಿದ್ದ ಹಸು ಅಲ್ಲಿಯೇ ಮಳಿಗೆಯೊಂದರ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದಿತ್ತು' ಎಂದು ಹೇಳಿದರು.ಪಿಂಜರಾಪೋಳಕ್ಕೆ ಬಿಡಿ: `ಆಸಿಡ್ ದಾಳಿಗೆ ಒಳಗಾದ ದನಗಳನ್ನು ನಿರ್ಲಕ್ಷಿಸಬೇಡಿ. ಮಳೆಗಾಲ ಆಗಿರುವುದರಿಂದ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಮಾಹಿತಿ ನೀಡಿದಲ್ಲಿ ನಾವೇ ಪಿಂಜರಾಪೋಳಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತೇವೆ. ಇಲ್ಲದಿದ್ದರೆ ನೀವೇ ತಂದು ಬಿಡಿ ಅಲ್ಲಿನ ವೈದ್ಯರಿಂದ ಚಿಕಿತ್ಸೆ ಕೊಡಿಸಿ ಪೂರ್ಣ ಗುಣಮುಖವಾದ ನಂತರ ಮರಳಿಸುತ್ತೇವೆ' ಎಂದು ಹುಬ್ಬಳ್ಳಿ ಪಿಂಜರಪೋಳ ಸಂಘದ ಅಧ್ಯಕ್ಷ ಮೇಘರಾಜ ಕವಾಡ ದನಗಳ ಮಾಲೀಕರಿಗೆ ಮನವಿ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.