ಗುರುವಾರ , ಜನವರಿ 23, 2020
27 °C

ಐಸಿಯು ಗೆ ಇಲಿ ದಾಳಿ, ವೃದ್ದನಿಗೆ ಗಾಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಧಪುರ (ಐಎಎನ್‌ಎಸ್): ಅರೆ ಇದೇನಿದು? ಹೀಗೂ ಉಂಟೆ ? ಎಂದು ಹುಬ್ಬೇರಿಸಬೇಡಿ. `ಬೊಮ್ಮನಹಳ್ಳಿಯ ಕಿಂದರಿಜೋಗಿ~ ಪದ್ಯದಂತೆ ಇಲಿಗಳ ದಾಳಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆ ಜರ್ಝರಿತವಾಗಿದೆ.ಕಳೆದ ರಾತ್ರಿ ಇಲ್ಲಿನ ಐಸಿಯು ಘಟಕದ ವೈದ್ಯರೂ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಎಂದಿನಂತೆ ರಾತ್ರಿ 11ಕ್ಕೆ ನಿದ್ರೆಗೆ ಜಾರಿದಾಗ, ಅಲ್ಲಿ ಮಲಗಿದ್ದ ಪಾರ್ಶ್ವವಾಯು ಪೀಡಿತ ರೋಗಿಯ ಮೇಲೆ ಮೂಷಿಕ ಸೇನೆ ದಾಳಿ ನಡೆಸಿ, ರೋಗಿಯ ಮೂಗು, ಕಿವಿ, ತುಟಿ ಹಾಗೂ ಕೆನ್ನೆಗಳನ್ನು ಕಚ್ಚಿ ಹಾಕಿದೆ. 

 

ಐಸಿಯು ಘಟಕದಲ್ಲಿ ಮಲಗಿದ್ದ 70 ವರ್ಷದ ಈ ವೃದ್ದನಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಪಾರ್ಶ್ವವಾಯು ಪೀಡಿತ ಅವರಿಗೆ ಅಲುಗಾಡಲೂ ಸಾಧ್ಯವಾಗುತ್ತಿರಲಿಲ್ಲ. ಮಂಗಳವಾರ ಬೆಳಿಗ್ಗೆ ಎದ್ದು ನೋಡಿದರೆ ಕೃತಕ ಉಸಿರಾಟದ ಕೊಳವೆಯನ್ನೂ ಮೂಷಿಕ ಸೇನೆ ಕತ್ತರಿಸಿದ್ದು ಕಂಡು ಬಂತು.ಸದ್ಯಕ್ಕೆ ಘಟನೆಯ ತನಿಖೆಯನ್ನು ಮೂವರು ಸದಸ್ಯರ ತಂಡಕ್ಕೆ ವಹಿಸಿ, ಗುರುವಾರ ಬೆಳಿಗ್ಗೆ ಕೂಲಕಂಷ ವರದಿ ಸಲ್ಲಿಸಬೇಕೆಂದು ಆಸ್ಪತ್ರೆಯ ಮುಖ್ಯಸ್ಥರು ಸೂಚಿಸಿದ್ದಾರೆ.ಇದೀಗ ನಿದ್ದೆಯಿಂದ ಎದ್ದಿರುವ ಸಿಬ್ಬಂದಿ ಮೂಷಿಕ ಸೇನೆಯ ದಾಳಿಗೆ ಕಾರಣವಾಗಿದ್ದ ಐಸಿಯು ಕೊಠಡಿಗಳಿಗೆ ಇಲಿಗಳಿಗೆ ಮುಕ್ತ ಪ್ರವೇಶ ಕಲ್ಪಿಸುತ್ತಿದ್ದ ಕಿಂಡಿಯನ್ನು ಈಗ ಮುಚ್ಚಿದ್ದು, ಇಲಿ ಪಾಷಣವನ್ನು ಇಟ್ಟು ಇಲಿಗಳ ಬೇಟೆಗೆ ಹೊಂಚು ಹಾಕಿದ್ದಾರೆಂದು ವರದಿಯಾಗಿದೆ.

ಜೋಧಪುರದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಷಿಕಗಳ ಹಾವಳಿ ಹೊಸದೇನಲ್ಲ. 2009ರಲ್ಲಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಹಸುಗೂಸಿನ ಮೇಲೆಯೂ ಇಲಿಗಳು ತಮ್ಮ ಪ್ರತಾಪ ತೋರಿದ್ದವು.

ಪ್ರತಿಕ್ರಿಯಿಸಿ (+)