ಶುಕ್ರವಾರ, ಮೇ 14, 2021
32 °C

ಒಟ್ಟುಗೂಡಿಸುವ ಶಕ್ತಿ ಸಾಹಿತ್ಯಕ್ಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ಸಾಹಿತ್ಯ ಸಮ್ಮೇಳನಗಳು ಜನರನ್ನು ಭಾಷೆಯ ಭಾವಕ್ಕೆ ಸಾಮೂಹಿಕವಾಗಿ ಹತ್ತಿರಕ್ಕೆ ತರುವ ಶಕ್ತಿ ಹೊಂದಿವೆ ಎಂದು ನಾಲ್ಕನೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ.ದಯಾನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲ್ಲೂಕು ಮಟ್ಟದ ನಾಲ್ಕನೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಇಲ್ಲಿನ ಜನರ ಹಾಗೂ ಸಂಘದ ಪದಾಧಿಕಾರಿಗಳ ಕತೃತ್ವ ಶಕ್ತಿಗೆ ಸಾಕ್ಷಿಯಾಗಿದೆ. ಕೇಂದ್ರ ಸಾಹಿತ್ಯ ಸಮ್ಮೇಳನಗಳಿಗೂ ತಾಲ್ಲೂಕು ಮಟ್ಟದಲ್ಲಿ ನಡೆಯುವ ಸಮ್ಮೇಳನಕ್ಕೂ ಭಾರಿ ವ್ಯತ್ಯಾಸವಿದ್ದರೂ ಇಲ್ಲಿ ನಡೆಯುವ ಸಾಹಿತ್ಯ ಹಬ್ಬ ಊರಿನ ಹಬ್ಬವಾಗಲಿದೆ ಎಂದರು.ಇಂದು ಸಾಹಿತ್ಯ ಸಮ್ಮೇಳನ ಕೆಲವರಿಗೆ ಅದ್ದೂರಿ ಸಮಾರಂಭ ಎನಿಸಿದರೆ ಕೆಲವರಿಗೆ ಇಲ್ಲಿನ ಸಾಂಸ್ಕೃತಿಕ ರಂಜನೆಯಿಂದ ಸ್ವಲ್ಪ ಜಂಜಾಟದ ಬದುಕಿಗೆ ನೆಮ್ಮದಿ ತಂದರೂ; ಮತ್ತೆ ಹಲವರಿಗೆ ಬದುಕನ್ನು ಕಟ್ಟಿಕೊಡುವಲ್ಲಿ ಸಾಹಿತ್ಯ ಹೆಚ್ಚು  ಪ್ರಭಾವ ಬೀರಲಿದೆ.ಒಬ್ಬ ಉತ್ತಮ ಸಾಹಿತಿಯ ಕೃತಿ, ಕವನ ಅಥವಾ ಲೇಖನ ಬದುಕನ್ನು ಪ್ರೀತಿಸುವ ಹಲವರಿಗೆ  ಸಾಧನೆ ಮಾರ್ಗಕ್ಕೆ ದಾರಿದೀಪವಾದ ಉದಾಹರಣೆ ಸಾಕಷ್ಟಿದೆ. ತಾಲ್ಲೂಕು ಕೇಂದ್ರದಲ್ಲಿ ನಡೆಯುವ ಸಮ್ಮೇಳನದಲ್ಲಿ ಇಲ್ಲಿನ ಜನರ ಬದುಕಿನ ಹಾಗೂ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚೆಯಾದಾಗ  ಸಮ್ಮೇಳನಕ್ಕೆ ಹೆಚ್ಚು ಅರ್ಥ ಬರಲಿದೆ ಎಂದು ಹೇಳಿದರು.ಯುವ ವರ್ಗವನ್ನು ಸಾಹಿತ್ಯದೆಡೆ ಆಕರ್ಷಿಸುವಲ್ಲಿ ಸಮ್ಮೇಳನಗಳು ಇಂತಹ ಕೇಂದ್ರದಲ್ಲಿ ಹೆಚ್ಚು ಹೆಚ್ಚು ನಡೆಯಬೇಕಿದೆ. ಕನ್ನಡ ವಿವಿಧ ಪ್ರಾಕಾರಗಳ ಬಗ್ಗೆ ಗೋಷ್ಠಿಗಳಲ್ಲಿ ವಿಚಾರ ಮಂಥನವಾದಾಗ ಸಾಹಿತ್ಯ ಜನರನ್ನು ಆಕರ್ಷಿಸಲಿದೆ ಎಂದು ಅಭಿಪ್ರಾಯಪಟ್ಟರು.ಈ ತಾಲ್ಲೂಕಿನ ಸಾಹಿತ್ಯ ಶ್ರಿಮಂತಿಕೆಗೆ ಕಾರಣಿಭೂತರಾದ ಆಚಾರ್ಯ ತೀನಂಶ್ರೀ ಭವನ ಬೇಗ ಆಗಬೇಕಿದೆ. ಸಾಹಿತ್ಯ ಭವನವಾಗಬೇಕು, ಅಲ್ಲಿ ನಿರಂತರ ಸಾಹಿತ್ಯ ಚಟುವಟಿಕೆ ನಡೆಯುತ್ತಿರಬೇಕು. ಇದಕ್ಕಾಗಿ ಸರ್ಕಾರ  ಹೆಚ್ಚು ಆಸಕ್ತಿ ವಹಿಸಿದಾಗ ತಾಲ್ಲೂಕು ಮಟ್ಟದಲ್ಲಿ ಕನ್ನಡದ ಕೆಲಸ ಮಾಡುವ ಕತೃತ್ವ ಶಕ್ತಿಗಳಿಗೆ ಹೆಚ್ಚಿನ ಬಲ ಬರಲಿದೆ ಎಂದರು.ಸಮ್ಮೇಳನಕ್ಕೆ ಸರ್ವ ಸಜ್ಜು

ಸೆ.17ರ ಶನಿವಾರ ನಡೆಯಲಿರುವ ನಾಲ್ಕನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರ ಸಂಪೂರ್ಣ ಸಜ್ಜುಗೊಂಡಿದೆ ಎಂದು ತಾಲ್ಲೂಕು ಕಸಾಪದ ಅಧ್ಯಕ್ಷ ಎಂ.ವಿ.ನಾಗರಾಜರಾವ್ ತಿಳಿಸಿದರು.ಪಟ್ಟಣದ ಪ್ರೌಢಶಾಲಾ ಮೈದಾನದ ಬಯಲು ರಂಗಮಂದಿರಲ್ಲಿ ಶನಿವಾರ ನಡೆಯಲಿರುವ ಸಮ್ಮೇಳನಕ್ಕೆ ಪರಿಷತ್ತು ಸಕಲ ಸಿದ್ದತೆ ನಡೆಸಿದೆ. ಮೆರವಣಿಗೆ ಹಾದು ಬರುವ ಊರಿನ ಮುಖ್ಯರಸ್ತೆಯಲ್ಲಿ ತೋರಣ, ಸ್ವಾಗತ ಕಮಾನು ಹಾಗೂ ಬ್ಯಾನರ್ ಕಟ್ಟಲಾಗಿದೆ.ಬಯಲು ರಂಗಮಂದಿರಲ್ಲಿ ಸುಮಾರು 2000 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದರಿಗೆ ಬೆಳಿಗ್ಗೆ ತಿಂಡಿ ವ್ಯವಸ್ಥೆ ಹಾಗೂ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ.ಸಂಜೆ ವಿಶೇಷ ಆಹ್ವಾನಿತರಿಗೆ ಹೋಳಿಗೆ ಭೋಜನಕ್ಕೆ ಅಚ್ಚುಕಟ್ಟಾಗಿ ಅಣಿ ಮಾಡಲಾಗಿದೆ ಎಂದರು. ಸಮ್ಮೇಳನಕ್ಕೆ ಆಗಮಿಸುವ ಎಲ್ಲ ಶಿಕ್ಷಕರಿಗೂ ಒಒಡಿ ಸೌಲಭ್ಯವಿರುವುದರಿಂದ ತಪ್ಪದೆ ಎಲ್ಲ ಶಿಕ್ಷಕರೂ ಒಂದು ದಿನದ ಸಮ್ಮೇಳನದ ಎಲ್ಲ ಕಲಾಪಗಳಿಗೂ ಭಾಗವಹಿಸಬೇಕು ಎಂದು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.