ಶನಿವಾರ, ಏಪ್ರಿಲ್ 17, 2021
27 °C

ಒಡೆದ ಉಪಕಾಲುವೆ: ನೀರು ಪೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಡೆದ ಉಪಕಾಲುವೆ: ನೀರು ಪೋಲು

ಕೆಂಭಾವಿ: ಶಹಾಪುರ ಶಾಖಾ ಕಾಲುವೆಯ ಎರಡನೇ ಉಪಕಾಲುವೆ ಒಡೆದು ರಾತ್ರಿ ಪೂರ್ತಿ ನೀರು ಪೋಲಾದ ಘಟನೆ ಪಟ್ಟಣದ ಸಮೀಪ ನಡೆದಿದೆ.ಶಹಾಪುರ ಶಾಖಾಕಾಲುವೆಯ ಎರಡನೇ ಉಪಕಾಲುವೆ 2ನೇ ಕಿ.ಮೀ. ನಲ್ಲಿ ನೀರಿನ ರಭಸಕ್ಕೆ ಒಡೆದು ಹೋಗಿದ್ದು, ರೈತರು ನೀರಿಲ್ಲದೇ ಪರದಾಡುವಂತಾಗಿದೆ. ಮಂಗಳವಾರ ರಾತ್ರಿ ಉಪ ಕಾಲುವೆ ಒಡೆದಿದ್ದರೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಕಾಲುವೆ ನೀರನ್ನು ಸ್ಥಗಿತಗೊಳಿಸಿ ತಾತ್ಕಾಲಿಕ ವ್ಯವಸ್ಥೆಯನ್ನೂ ಮಾಡದೇ ನಿರ್ಲಕ್ಷ ತೋರಿದ್ದಾರೆ ಎಂದು ದಲಿತ ಮುಖಂಡ ವಿರುಪಾಕ್ಷಿ ಕರಡಕಲ್ ಆರೋಪಿಸಿದ್ದಾರೆ.ಈ ಕಾಲುವೆಯು ಪರಸನಹಳ್ಳಿ, ಕರಡಕಲ್, ಕೂಡಲಗಿ, ಬಾಚಿಮಟ್ಟಿ ಸೇರಿದಂತೆ ಇನ್ನು ಅನೇಕ ಪ್ರದೇಶಗಳಿಗೆ ನೀರು ಒದಗಿಸುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಪರದಾಡಬೇಕಾಯಿತು. ಅಲ್ಲದೇ ರೈತರೇ ಉಸುಕಿನ ಚೀಲ ಹಚ್ಚಿ ಕಾಲುವೆಯಲ್ಲಿ ನೀರು ಹರಿಯುವಂತೆ ಮಾಡಿದರು ಎಂದು ತಿಳಿಸಿದ್ದಾರೆ.ಕಾಲುವೆ ಉತ್ತಮವಾಗಿದ್ದಲ್ಲಿ ವಾರ್ಷಿಕ ನಿರ್ವಹಣಾ ಕಾಮಗಾರಿಗಳನ್ನು ಮಾಡಿ, ಹದಗೆಟ್ಟ ಕಾಲುವೆಯನ್ನು ದುರಸ್ತಿ ಮಾಡದೇ ಅಧಿಕಾರಿಗಳು ಹಣ ಎತ್ತಿ ಹಾಕಿದ್ದಾರೆ. ಇದರಿಂದಾಗಿ ಕಾಲುವೆಯ ಕೊನೆಯ ಭಾಗದ ಬಾಚಿಮಟ್ಟಿ ರೈತರಿಗೆ ನೀರು ತಲುಪುತ್ತಿಲ್ಲ.

 

ಉಪಕಾಲುವೆ ಸಂಪೂರ್ಣ ಹದಗೆಟ್ಟಿದ್ದು, ನಿಗಮದ ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಉಪಕಾಲುವೆ ಒಡೆದಿದ್ದರೂ ಈ ಬಗ್ಗೆ ಗಮನ ಹರಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.ಶಹಾಪುರ ಶಾಖಾ ಕಾಲುವೆಯ ಬಹುತೇಕ ಉಪಕಾಲುವೆಗಳು ಹದಗೆಟ್ಟು ಹೋಗಿದ್ದು, ನೀರು ಸಂಪೂರ್ಣ ಪೋಲಾಗುತ್ತದೆ. ಹೀಗಾಗಿ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ಸಿಗದೇ ಪರಿತಪಿಸುವಂತಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಂಗಪ್ಪ ವಡ್ಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರ್ಕಾರ ಕೇವಲ ನಾರಾಯಣಪುರ ಎಡದಂಡೆ ಕಾಲುವೆ ನವೀಕರಣಕ್ಕೆ ಒತ್ತು ನೀಡುತ್ತಿದೆ. ಇದರಿಂದ ಕಾಲುವೆಯ ಕೊನೆಯ ಭಾಗಕ್ಕೆ ನೀರು ತಲುಪುವುದಿಲ್ಲ. ಉಪಕಾಲುವೆಗಳು ದುರಸ್ತಿಯಾಗಿ ನೀರು ಪೋಲಾಗುವುದನ್ನು ತಡೆದಾಗ ಮಾತ್ರ ಕಾಲುವೆಯ ಕೊನೆಯ ಭಾಗಕ್ಕೆ ನೀರು ಮುಟ್ಟುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ವಾರ್ಷಿಕ ನಿರ್ವಹಣೆ ಕಾಮಗಾರಿ ಕಾಟಾಚಾರಕ್ಕೆ ಮಾಡಲಾಗಿದ್ದು ಅಧಿಕಾರಿಗಳು ಗುತ್ತಿಗೆದಾರರು ಸೇರಿ ರೈತರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.