ಸೋಮವಾರ, ಮಾರ್ಚ್ 8, 2021
19 °C
ವಾರದ ಸಂದರ್ಶನ

ಒತ್ತಡಕ್ಕೆ ಮಣಿದಿಲ್ಲ, ಮಣಿಯುವುದೂ ಇಲ್ಲ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಒತ್ತಡಕ್ಕೆ ಮಣಿದಿಲ್ಲ, ಮಣಿಯುವುದೂ ಇಲ್ಲ!

‘ವೈದ್ಯಕೀಯ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿಯ ವಿಷಯದಲ್ಲಿ ಯಾವುದೇ ಒತ್ತಡಕ್ಕೂ ನಮ್ಮ ಸರ್ಕಾರ ಮಣಿದಿಲ್ಲ, ಮಣಿಯುವುದೂ ಇಲ್ಲ. ಆದರೆ ಸುಪ್ರೀಂಕೋರ್ಟ್ ಆದೇಶದಂತೆ ನಡೆದುಕೊಳ್ಳುವುದು ನಮಗೆ ಅನಿವಾರ್ಯವಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹೇಳುತ್ತಾರೆ. ವೃತ್ತಿ ಶಿಕ್ಷಣ ಕೋರ್ಸ್‌ಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯಲ್ಲಿ ಸರ್ಕಾರ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದಿದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಸಿಇಟಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ ಎಂಬ ಆರೋಪ ಕೇಳಿ ಬರುತ್ತಿರುವುದರಿಂದ ಸಚಿವರನ್ನು ಈ ಬಗ್ಗೆ ಮಾತನಾಡಿಸಿದಾಗ, ಅವರು ಎಲ್ಲದಕ್ಕೂ ಸುಪ್ರೀಂಕೋರ್ಟ್ ತೀರ್ಪು ಕಾರಣ, ಸುಪ್ರೀಂಕೋರ್ಟ್ ತೀರ್ಪನ್ನು ಬದಿಗೊತ್ತಲು ಕೇಂದ್ರ ಸರ್ಕಾರವೇ ಕಾಯ್ದೆ ರೂಪಿಸಬೇಕು ಎನ್ನುತ್ತಾರೆ. ಅವರ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

* ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಖಾಸಗಿ ವೃತ್ತಿ ಶಿಕ್ಷಣ ಮಂಡಳಿಗಳ ಒತ್ತಡಕ್ಕೆ ಮಣಿಯುವುದು ಯಾಕೆ?

ನಾವು ಯಾವುದೇ ಒತ್ತಡಕ್ಕೆ ಮಣಿದಿಲ್ಲ. ನಾವು ಒತ್ತಡಕ್ಕೆ ಮಣಿದಿದ್ದರೆ ಕಾಯ್ದೆ ಜಾರಿಗೆ ಪ್ರಯತ್ನ ಮಾಡುತ್ತಿರಲಿಲ್ಲ. ಏಕರೂಪದ ವ್ಯವಸ್ಥೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನೂ ಹೇರುತ್ತಿರಲಿಲ್ಲ.* ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಶುಲ್ಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆ ಪರಿಪೂರ್ಣವಾಗಿದೆಯೇ?

ಪರಿಪೂರ್ಣ ಅಂತಲ್ಲ. ನಮ್ಮ ವ್ಯಾಪ್ತಿಯಲ್ಲಿ ನಾವು ಏನು ಮಾಡಬಹುದೋ ಅದನ್ನು ಮಾಡಿದ್ದೇವೆ. 2006ರ ಕಾಯ್ದೆಗೆ ಕೆಲವೊಂದು ತಿದ್ದುಪಡಿಯನ್ನು ತಂದಿದ್ದೇವೆ. ಮುಂದಿನ ವರ್ಷದಿಂದ ಅದನ್ನು ಜಾರಿಗೆ ಮಾಡಲು ಉದ್ದೇಶಿಸಿದ್ದೇವೆ.* ಈಗ ನೀವು ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಯಲ್ಲಿಯೂ ಶುಲ್ಕ ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಆಡಳಿತ ಮಂಡಳಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಬೇಕು ಎಂಬ ಅಂಶ ಇದೆಯಲ್ಲ. ಹೀಗೆ ಮಾಡುವುದಾದರೆ ಅದಕ್ಕೊಂದು ಕಾಯ್ದೆ ಬೇಕಾ?

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಖಾಸಗಿ ಆಡಳಿತ ಮಂಡಳಿಗಳು ಪ್ರತ್ಯೇಕ ಪ್ರವೇಶ ಪರೀಕ್ಷೆ ಮಾಡಿಕೊಳ್ಳಬಹುದು. ಅಲ್ಲದೆ ಒಂದೇ ಕಾಲೇಜಿನಲ್ಲಿ ಎರಡು ರೀತಿಯ ಶುಲ್ಕ ಇರಬಾರದು. ನ್ಯಾಯಾಲಯ ಒಂದೇ ಕಾಲೇಜಿನಲ್ಲಿ ಎರಡು ರೀತಿಯ ಶುಲ್ಕ ಇರಬಾರದು ಎಂದು ಹೇಳಿದ ಮೇಲೆ ನಾವು ಸರ್ಕಾರಿ ಸೀಟಿಗೆ ಕಡಿಮೆ ಶುಲ್ಕ ಪಡೆಯಿರಿ ಎಂದು ಹೇಳುವುದು ಹೇಗೆ? ಅದಕ್ಕಾಗಿಯೇ ಸರ್ಕಾರ ಕಾಯ್ದೆ ತಂದಿದ್ದರೂ ಇಷ್ಟು ದಿನ ಅದನ್ನು ಜಾರಿ ಮಾಡಿರಲಿಲ್ಲ. ವಿರೋಧ ಪಕ್ಷಗಳಿಗೆ ಕೂಡ ಕಾಯ್ದೆ ಜಾರಿಗೆ ಬರುವುದು ಇಷ್ಟವಿಲ್ಲ. ಈಗಿರುವ ಹಾಗೆಯೇ ಒಪ್ಪಂದ ಮಾಡಿಕೊಂಡು ಮುಂದುವರಿಯುವುದೇ ಸೂಕ್ತ ಎಂದು ಅವು ಹೇಳುತ್ತವೆ. ಈ ಎಲ್ಲ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಜಾರಿಗೊಳಿಸಲು ಯತ್ನಿಸಲಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶ ನಮ್ಮ ಕೈ ಕಟ್ಟಿ ಹಾಕಿದೆ.* ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿತ್ತಲ್ಲವೇ?

ಈಗ ಒಂದು ವ್ಯವಸ್ಥೆ ಇದೆ. ಅದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿಲ್ಲ. ಅಲ್ಲದೆ ಸುಪ್ರೀಂಕೋರ್ಟ್ ಆದೇಶವನ್ನು ಬದಿಗೆ ಒತ್ತುವಂತಹ ಕಾಯ್ದೆಯನ್ನು ಕೇಂದ್ರ ಸರ್ಕಾರವೇ ಮಾಡಬೇಕು. ಈ ಸಂಬಂಧ ಪ್ರಧಾನಿ ಹಾಗೂ ಕೇಂದ್ರ ಆರೋಗ್ಯ ಸಚಿವರನ್ನು ನಾವು ಒತ್ತಾಯಿಸಿದ್ದೇವೆ. ದೇಶದಾದ್ಯಂತ ಒಂದೇ ಪ್ರವೇಶ ಪರೀಕ್ಷೆ ಇರಬೇಕು. ಒಂದೇ ರೀತಿಯ ಶುಲ್ಕ ನಿಗದಿ ಮಾಡಬೇಕು ಹಾಗೂ ಸೀಟು ನಿಗದಿಯ ಬಗ್ಗೆಯೂ ಸ್ಪಷ್ಟತೆ ಇರಬೇಕು ಎಂದು ಕೇಳಿಕೊಂಡಿದ್ದೇವೆ.* ಸರ್ಕಾರವೇ ಶುಲ್ಕ ನಿಗದಿ ಮಾಡಲು ಸಾಧ್ಯವಿಲ್ಲವೇ?

ಇಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಶುಲ್ಕ ನಿಗದಿಗೆ ಒಂದು ಸಮಿತಿ ಇರುತ್ತದೆ. ಆ ಸಮಿತಿ ನಿರ್ಧಾರ ಮಾಡಿದ ಶುಲ್ಕವನ್ನು ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಿಸಬೇಕು.* ಯಾವ ಪ್ರದೇಶದಲ್ಲಿ ಕಾಲೇಜುಗಳು ಇವೆ ಎಂಬ ಆಧಾರದಲ್ಲಿ ಶುಲ್ಕ ನಿಗದಿ ಮಾಡುವುದು ಸರಿಯೇ?

ಯಾವ ಪ್ರದೇಶದಲ್ಲಿ ಕಾಲೇಜುಗಳು ಇವೆ ಎನ್ನುವ ಆಧಾರದಲ್ಲಿ ಶುಲ್ಕ ನಿಗದಿ ಮಾಡುತ್ತಿಲ್ಲ. ಕಾಲೇಜಿನ ಮೂಲಭೂತ ಸೌಲಭ್ಯಗಳ ಆಧಾರದಲ್ಲಿ ಶುಲ್ಕ ನಿಗದಿ ಮಾಡಲಾಗುತ್ತಿದೆ. ಯಾವ ಆಧಾರದಲ್ಲಿ ಶುಲ್ಕ ನಿಗದಿ ಮಾಡಬೇಕು ಎನ್ನುವುದನ್ನೂ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಅದರ ಆಧಾರದಲ್ಲಿಯೇ ಶುಲ್ಕ ನಿಗದಿ ಮಾಡಲಾಗಿದೆ.* ಎಂಸಿಐ ಅಥವಾ ಅಖಿಲ ಭಾರತ ತಾಂತ್ರಿಕ ನಿರ್ದೇಶನಾಲಯದ ನಿಯಮಾವಳಿಯಂತೆ ಎಲ್ಲ ವೃತ್ತಿ ಶಿಕ್ಷಣ ಸಂಸ್ಥೆಗಳೂ ಮೂಲಭೂತ ಸೌಲಭ್ಯ ಒದಗಿಸಬೇಕು. ಇಲ್ಲವಾದರೆ ಕಾಲೇಜಿಗೆ ಅನುಮತಿಯನ್ನೇ ನೀಡಲಾಗುವುದಿಲ್ಲ. ಆಗ ಮೂಲಭೂತ ಸೌಲಭ್ಯದ ಆಧಾರದಲ್ಲಿ ಶುಲ್ಕ ನಿಗದಿ ಮಾಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲವಲ್ಲ?

ಏನ್‌ ಮಾಡೋದು? ಸುಪ್ರೀಂಕೋರ್ಟ್ ವಿಭಾಗೀಯ ಪೀಠದ ಆದೇಶ ಪಾಲಿಸಲೇ ಬೇಕಲ್ಲ.* ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡೇ ಕಾಯ್ದೆ ಮಾಡಬಹುದಲ್ಲ?

ಕಾಯ್ದೆ ಮಾಡಿದರೂ ಸುಪ್ರೀಂಕೋರ್ಟ್ ಆದೇಶದಂತೆಯೇ ನಡೆದುಕೊಳ್ಳಬೇಕು ಎಂದು ಕಾನೂನು ಇಲಾಖೆ ಅಭಿಪ್ರಾಯ ಪಡುತ್ತದೆ. ಸೀಟು ಹಂಚಿಕೆ ಬಗ್ಗೆ ಕಾಯ್ದೆ ಮಾಡಬಹುದು. ಆದರೆ ಶುಲ್ಕ ನಿಗದಿಯ ಬಗ್ಗೆ ಕಾಯ್ದೆ ಮಾಡಲು ಸಾಧ್ಯವಿಲ್ಲ.* ಅಂದರೆ ರಾಜ್ಯ ಸರ್ಕಾರ ಅಷ್ಟೊಂದು ದುರ್ಬಲ ಆಗಿದೆಯಾ?

ಇದರಲ್ಲಿ ದುರ್ಬಲ, ಸಬಲದ ಪ್ರಶ್ನೆಯೇ ಬರುವುದಿಲ್ಲ. ರಾಜ್ಯ ಸರ್ಕಾರ ಕಾಯ್ದೆ ಮಾಡಿದರೆ ಅದು ಪರಿಪೂರ್ಣವಾಗುವುದಿಲ್ಲ. ಅದಕ್ಕೇ ಕೇಂದ್ರ ಸರ್ಕಾರವೇ ಕಾಯ್ದೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ.* ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳು ನಡೆಸುವ ಪರೀಕ್ಷೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಲವರನ್ನು ಬಂಧಿಸಲಾಗಿದೆ. ಅಲ್ಲದೆ ಸಿಐಡಿ ತನಿಖೆಯೂ ನಡೆಯುತ್ತಿದೆ. ಅಂಥವರ ಜೊತೆ ಸರ್ಕಾರ ಮಾತುಕತೆ ನಡೆಸುವುದು ಹಾಗೂ ಹೀಗೆ ಮಾತುಕತೆ ನಡೆಸಲು ಅನುಕೂಲವಾಗುವಂತೆ ಕಾಯ್ದೆಯನ್ನೂ ರೂಪಿಸುವುದು ಸರಿಯೇ?

ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳು ನಡೆಸಿದ ಪರೀಕ್ಷೆಗಳಲ್ಲಿ ಅಕ್ರಮ ನಡೆದಿಲ್ಲ. ಅವು  ಸೀಟ್‌ ಬ್ಲಾಕ್‌ ಮಾಡುತ್ತವೆ ಎಂಬ ಆರೋಪ ಕೇಳಿ ಬಂದಿತ್ತು. ಆ ಬಗ್ಗೆ ತನಿಖೆ ನಡೆಯುತ್ತಿದೆ. ಪರೀಕ್ಷಾ ಪ್ರಕ್ರಿಯೆಯೇ ಸರಿ ಇಲ್ಲ ಎಂದರೆ ಸರ್ಕಾರ ಕ್ರಮ ಕೈಗೊಳ್ಳಬಹುದು.* ಸರ್ಕಾರವೇ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಮಾಡಿದರೆ ಸಮಸ್ಯೆ ಬಗೆಹರಿಯಬಹುದಲ್ಲವೇ?

ಈಗಾಗಲೇ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಈ ವರ್ಷ 3 ಕಾಲೇಜುಗಳು ಆರಂಭವಾಗುತ್ತಿವೆ. ಮುಂದಿನ ವರ್ಷ 3 ಕಾಲೇಜುಗಳು ಆರಂಭವಾಗುತ್ತವೆ. ಅದಕ್ಕೂ ಮುಂದಿನ ವರ್ಷ ಇನ್ನೂ 6 ಕಾಲೇಜುಗಳನ್ನು ತೆರೆಯುವ ಉದ್ದೇಶ ಇದೆ. ಒಂದು ವೈದ್ಯಕೀಯ ಕಾಲೇಜು ತೆರೆಯಲು ₹ 450 ಕೋಟಿ ಬೇಕು. ಜಿಲ್ಲಾ ಆಸ್ಪತ್ರೆಗಳನ್ನೇ ನಾವು ಬಳಸಿಕೊಳ್ಳುತ್ತಿರುವುದರಿಂದ ₨ 150 ಕೋಟಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತಿದ್ದೇವೆ. ಇದು ಹಂತ ಹಂತವಾಗಿ ಮಾಡುವ ಕೆಲಸ.* ಇದೇ ರೀತಿ ಸರ್ಕಾರವೇ ಎಂಜಿನಿಯರಿಂಗ್‌ ಕಾಲೇಜುಗಳನ್ನು ತೆರೆಯಬಹುದಲ್ಲವೇ?

ತೆರೆಯಬಹುದು. ಆದರೆ ಈಗಾಗಲೇ ರಾಜ್ಯದಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ. ಸೀಟುಗಳು ಪ್ರತಿ ವರ್ಷ ಹಾಗೆಯೇ ಉಳಿಯುತ್ತವೆ.* ಸೀಟುಗಳು ಉಳಿಯುತ್ತವೆ ಎಂದ ಮೇಲೆ ಪ್ರವೇಶ ಪರೀಕ್ಷೆ ನಡೆಸುವುದು ಯಾಕೆ?

ಪ್ರವೇಶ ಪರೀಕ್ಷೆ ನಡೆಸುವುದು ಕೇವಲ ಸೀಟು ಹಂಚಿಕೆಗೆ ಅಲ್ಲ. ಯಾವ ಕಾಲೇಜಿಗೆ ಯಾವ ವಿದ್ಯಾರ್ಥಿ ಸೇರಬೇಕು ಎನ್ನುವುದಕ್ಕಾಗಿ ಪ್ರವೇಶ ಪರೀಕ್ಷೆ ನಡೆಯುತ್ತದೆ. ಅಲ್ಲದೆ ಸರ್ಕಾರದ ಪಾಲಿನ ಯಾವುದೇ ಸೀಟು ಖಾಲಿ ಉಳಿಯುತ್ತಿಲ್ಲ. ಕಾಮೆಡ್‌–ಕೆ ಅವರು ತಮ್ಮ ಪಾಲಿನ ಸೀಟುಗಳನ್ನೂ ನಮಗೇ ನೀಡುತ್ತಿದ್ದಾರೆ.* ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಹೌದೋ ಅಲ್ಲವೋ?

ಹೌದು, ಇದು ರಾಜ್ಯ ಸರ್ಕಾರದ ಜವಾಬ್ದಾರಿ. ಅದಕ್ಕಾಗಿ ಏನು ಮಾಡಬೇಕು ಎಂಬ ಚರ್ಚೆ ಗಂಭೀರವಾಗಿಯೇ ನಡೆಯುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ.* ಈ ಬಾರಿ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯಲ್ಲಿ ಅನ್ಯಾಯವಾಗಿಲ್ಲವೇ? ಶುಲ್ಕ ಹೆಚ್ಚಾಯಿತು ಎಂದು ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ?

ಮೂರು ವರ್ಷಗಳಿಂದ ನಾವು ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಕಳೆದ ವರ್ಷವೇ ಶುಲ್ಕ ಹೆಚ್ಚಳಕ್ಕೆ ಒತ್ತಡ ಇತ್ತು. ಆದರೂ ನಾವು ಹೆಚ್ಚಳ ಮಾಡಿರಲಿಲ್ಲ. ಬಿಜೆಪಿ ಸರ್ಕಾರ ಕೂಡ 3 ವರ್ಷಕ್ಕೆ ಒಮ್ಮೆ ಶುಲ್ಕ ಹೆಚ್ಚಳ ಮಾಡಿತ್ತು. ಸರ್ಕಾರಿ ವೈದ್ಯಕೀಯ ಸೀಟು ಪಡೆದುಕೊಂಡವರು ವರ್ಷಕ್ಕೆ ₹ 55 ಸಾವಿರ ಶುಲ್ಕ ನೀಡಬೇಕು. ಇದು ಹೆಚ್ಚಲ್ಲ. ಯಾವುದೇ ಶುಲ್ಕ ಹೆಚ್ಚಳವಾದಾಗ ಪ್ರತಿಭಟನೆ ಬರುವುದು ಮಾಮೂಲು.* ದೇಶದ ಇತರ ರಾಜ್ಯಗಳಲ್ಲಿ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಹೇಗಿದೆ?

ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಇದೆ. ಇಡೀ ದೇಶದಲ್ಲಿ ಏಕರೂಪದ ಶುಲ್ಕ ಬರಬೇಕು ಎನ್ನುವುದು ನಮ್ಮ ಆಶಯ. ಗುಜರಾತ್‌ನಲ್ಲಿ ಶೇ 75 ಮತ್ತು ಶೇ 25ರ ಮಾದರಿಯಲ್ಲಿ ಸೀಟು ಹಂಚಿಕೆಯಾಗುತ್ತದೆ. ಆದರೆ ಅಲ್ಲಿ ಶುಲ್ಕ ಹೆಚ್ಚಾಗಿದೆ. ಅದೇ ರೀತಿ ತೆಲಂಗಾಣ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಹೀಗೆ ಬೇರೆ ಬೇರೆ ಕಡೆ ಒಂದೊಂದು ರೀತಿ ಇದೆ.* ರಾಜ್ಯ ಸರ್ಕಾರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಇರುವ ತೊಂದರೆ ಏನು?

ನಾವು ಒತ್ತಡ ಪೂರ್ವಕವಾಗಿ ಕಾಯ್ದೆಯನ್ನು ಜಾರಿ ಮಾಡಬಹುದು. ಆದರೆ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳು ಸೀಟು ಕೊಡಲ್ಲ ಎನ್ನಬಹುದು. ಕಡಿಮೆ ಶುಲ್ಕಕ್ಕೆ ಒಪ್ಪಿಕೊಳ್ಳದೇ ಇರಬಹುದು. ಅದಕ್ಕೇ ದೇಶದಾದ್ಯಂತ ಏಕ ರೂಪದ ವ್ಯವಸ್ಥೆ ಜಾರಿಗೆ ಬರಬೇಕು. ಅಂದಾಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ.* ಕಳೆದ 10 ವರ್ಷಗಳಿಂದಲೂ ಸರ್ಕಾರಿ ಸೀಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಮುಕ್ತಿ ಇಲ್ಲವೇ?

ಈಗ ಒಂದು ವ್ಯವಸ್ಥೆ ಇದೆ. ಅದು ಯಾವಾಗ ಮುರಿದು ಬೀಳುತ್ತದೆ ಎನ್ನುವುದು ಗೊತ್ತಿಲ್ಲ. ಅಷ್ಟರೊಳಗೆ ಏನಾದರೂ ಮಾಡಬೇಕು ಎಂಬ ಆಲೋಚನೆಯಲ್ಲಿ ಸರ್ಕಾರ ಇದೆ. ಅದಕ್ಕೊಂದು ಸ್ಪಷ್ಟ ರೂಪ ಇನ್ನೂ ಸಿಕ್ಕಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.